ಆತಂಕದ ಮನಸ್ಸಿನಲ್ಲಿ ಆತ್ಮಸ್ಥೈರ್ಯ

Update: 2018-01-16 18:42 GMT

ನಮ್ಮ ಕೃಷ್ಣಾಪುರದಿಂದ ಸುರತ್ಕಲ್‌ನಿಂದಾಗಿ ರಾಷ್ಟ್ರೀಯ ಹೆದ್ದಾರಿ 17 (ಅಂದು)ರಲ್ಲಿ ಕಂಕನಾಡಿಗೆ ಹೋಗುವ 53 ನಂಬ್ರದ ಬಸ್ಸು ಚಾಲಕನ ಆತ್ಮಹತ್ಯೆ ನನ್ನ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿತ್ತು. ಇದಕ್ಕೆ ಕಾರಣಗಳು ಹಲವು. ಊರಿನಲ್ಲಿ ಉಂಟಾಗಿದ್ದ ಧರ್ಮ ವೈಷಮ್ಯ ಒಂದಾದರೆ ಆತ ಪದವೀಧರನಾಗಿದ್ದು ಚಾಲಕ ವೃತ್ತಿಯಲ್ಲಿದ್ದುದೂ ಯೋಚನೆಗೆ ಹಚ್ಚಿತ್ತು. ಗ್ರಾಮೀಣ ಪ್ರದೇಶದ ಆತ ಅದೆಷ್ಟು ಕನಸುಗಳೊಂದಿಗೆ ಪದವೀಧರನಾಗಿದ್ದನೋ ಏನೋ? ಅವನಿಗೆ ಯಾಕೆ ಒಂದು ಒಳ್ಳೆಯ ಸರಕಾರಿ ನೌಕರಿಯ ಅವಕಾಶ ದೊರೆಯಲಿಲ್ಲ. ಯಾಕೆಂದರೆ ಅನೇಕ ವರ್ಷ ಗಳಿಂದ ರಾಜ್ಯವನ್ನಾಳಿದ ಸರಕಾರವು ಒಂದೇ ರಾಜಕೀಯ ಪಕ್ಷದ್ದಾಗಿದ್ದರೂ ನಿವೃತ್ತ ಹುದ್ದೆಗಳನ್ನು ಆರ್ಥಿಕ ಮಿತಿಯ ಹೆಸರಲ್ಲಿ ತುಂಬುತ್ತಿರಲಿಲ್ಲ. ಆರ್ಥಿಕವಾಗಿ ಬಡವರಾಗಿದ್ದ, ದಲಿತ, ಶೂದ್ರ, ಅಲ್ಪಸಂಖ್ಯಾತರೆನ್ನುವ ಮಕ್ಕಳು ಶಿಕ್ಷಣ ಪಡೆದರೂ ಅವರ ಪಾಲಿಗೆ ಶಿಕ್ಷಣ ಉದ್ಯೋಗಕ್ಕೆ ದಾರಿಯೇ ಹೊರತು ಜ್ಞಾನ ಸಂಪಾದನೆ ಎನ್ನುವುದು ಅರಿವಾಗಲು ಸಾಧ್ಯವಿಲ್ಲದ ವಾಸ್ತವ. ಆದ್ದರಿಂದ ಇಂತಹ ವಿದ್ಯಾರ್ಥಿಗಳು ನಿರುದ್ಯೋಗಿಗಳಾದರೆ ಅಡ್ಡ ದಾರಿ ಹಿಡಿಯುವ ಮೂಲಕ ಮನೆಗೆ ಮಾರಿ ಊರಿಗೂ ಮಾರಿಗಳೇ ಆಗಿ ಸಾಮಾಜಿಕ ಪಿಡುಗುಗಳಿಗೆ ಕಾರಣರಾಗುತ್ತಿದ್ದುದನ್ನು ಯಾರಾದರೂ ಗಮನಿಸಬಹುದಾಗಿತ್ತು.

ಕೆಲವೊಂದು ಸೃಜನಶೀಲ, ಸೂಕ್ಷ್ಮ ಸಂವೇದನೆಯುಳ್ಳ ಕವಿಗಳು, ಕತೆಗಾರರು ಉದ್ಯೋಗವಿಲ್ಲದ ಕಾರಣಗಳಿಂದಲೇ ಮಾನಸಿಕ ಕಾಯಿಲೆಗೆ ತುತ್ತಾದುದನ್ನು ನೋಡಿರುವ ನನಗೆ ಸಾಮಾಜಿಕ ಸ್ವಾಸ್ಥ ಎನ್ನುವುದು ಜನರ ದೈಹಿಕ ಆರೋಗ್ಯದ ಅಂಕಿ ಅಂಶಗಳಿಂದ ಮಾತ್ರ ಅಳೆದರೆ ಸಾಲದು ಎನ್ನುವುದು ಅರಿವಾಗುವುದಕ್ಕೆ ಇವುಗಳೆಲ್ಲಾ ಪೂರಕ ಅಂಶಗಳಾಗಿದ್ದುವು. ಈ ಹಿನ್ನೆಲೆಯಲ್ಲಿ ಪದವೀಧರ ಯುವಕನೊಬ್ಬ ಖಾಸಗಿ ಬಸ್ಸಿನಲ್ಲಿ ಡ್ರೈವರ್ ಆಗಿರುವುದೆಂದರೆ ಆತನ ಹಾಗೂ ಆತನ ಕುಟುಂಬದ ಹಸಿವಿನ ಮುಂದೆ ವಿದ್ಯೆಯ ಪ್ರತಿಷ್ಠೆ, ಅಹಂಕಾರಗಳು ಮರೆಯಾಗಿದ್ದವು. ಆ ದಿನಗಳಲ್ಲಿ ಪದವೀಧರನಾಗುವುದು ಎಂದರೆ ಅದೂ ಅನರಕ್ಷಸ್ಥರ ಕುಟುಂಬಗಳಲ್ಲಿ ಇಂದಿನ ಪಿಎಚ್‌ಡಿ ಸಾಧನೆಗಿಂತಲೂ ದೊಡ್ಡದೆಂದೇ ತಿಳಿಯುತ್ತೇನೆ. ಅಲ್ಲದೆ ಚಾಲಕನಾಗಿದ್ದ ಅತನ ನಡವಳಿಕೆ ಅತ್ಯಂತ ಸಭ್ಯವಾಗಿದ್ದು, ಎಲ್ಲರಿಂದಲೂ ಆತ ಸಜ್ಜನನೆಂದು ಕರೆಸಿಕೊಳ್ಳುವುದರ ಹಿಂದೆ ಆತನ ಪದವೀಧರತ್ವದ ವಿದ್ಯಾವಂತಿಕೆಯೂ ಇತ್ತಲ್ಲವೇ? ಇಂತಹ ಮಗನನ್ನು ಕಳಕೊಂಡ ಹೆತ್ತವರ ಸಂಕಟ ಸಹಜವಾದುದೇ ಆಗಿದ್ದರೂ ಅವನ ಆತ್ಮಹತ್ಯೆಗೆ ನನಗೆ ನನ್ನ ಊರು, ಸಮಾಜ, ನನ್ನ ಸರಕಾರಗಳೆಲ್ಲವೂ ಹೊಣೆಗಾರರೆಂದೇ ಅನ್ನಿಸುವಾಗ ಅದರೊಳಗೆ ನಾನೂ ಪರೋಕ್ಷವಾಗಿ ಸೇರಿ ಹೋಗುವ ವಿಚಿತ್ರ ಮನಸ್ಥಿತಿಯಲ್ಲಿ ಅವನದ್ದು ಆತ್ಮಹತ್ಯೆಯಲ್ಲ. ನಾವೆಲ್ಲರೂ ಸೇರಿ ಮಾಡಿದ ಕೊಲೆಯೇ ಎಂಬ ವಿಕ್ಷಿಪ್ತತೆ ನನ್ನನ್ನು ಕಾಡುತ್ತಿತ್ತು. ಇಂತಹ ದಿನಗಳಲ್ಲೇ ನಡೆದ ಇನ್ನೊಂದು ಘಟನೆ ಹೀಗಿದೆ.

 ಕೃಷ್ಣಾಪುರದ ದಾರಿಯಲ್ಲಿ ಸೂರಿಂಜೆಯಿಂದಾಗಿ ಬರುವ ಸರ್ವಿಸ್ ಬಸ್ಸು ಒಂದು ಬರುತ್ತಿತ್ತು. ನಾನು ತಡವಾದಾಗೆಲ್ಲಾ ಆ ಸರ್ವಿಸ್ ಬಸ್ಸಲ್ಲಿ ಸುರತ್ಕಲ್‌ವರೆಗೆ ಬಂದು ಅಲ್ಲಿಂದ ಮಂಗಳೂರಿಗೆ ಎಕ್ಸಪ್ರೆಸ್‌ನಲ್ಲಿ ಹೋಗುತ್ತಿದ್ದೆ. ಅಂದು ಕೂಡಾ ಕೃಷ್ಣಾಪುರದಿಂದ ಆ ಸರ್ವಿಸ್ ಬಸ್‌ನಲ್ಲಿ ಬಂದು ಸುರತ್ಕಲ್‌ನಲ್ಲಿ ಇಳಿದೆ. ಇಳಿದು ಮುಂದೆ ಹೋಗುತ್ತಿದ್ದಂತೆಯೇ ಬಸ್‌ಸ್ಟಾಂಡ್‌ನಿಂದ ಹೊರಟಿದ್ದ ದುರ್ಗಾಂಬಾ ಎಕ್ಸ್‌ಪ್ರೆಸ್ ಬಸ್ಸನ್ನು ತಡೆದು ನಿಲ್ಲಿಸಿದಾಗ ಆ ಬಸ್ಸು ನನ್ನನ್ನು ಹತ್ತಿಸಿಕೊಂಡಿತು. ಮುಂದೆ ಅದು ಎಲ್ಲೂ ನಿಲ್ಲದೆ ಪಣಂಬೂರಿನಲ್ಲಿ ಮಾತ್ರ ನಿಲ್ಲ್ಲುವಂತಹುದು. ಬಸ್ಸು ಹತ್ತಿದವಳಿಗೆ ಕುಳಿತುಕೊಳ್ಳಲು ಸೀಟು ಇರಲಿಲ್ಲ. ಡ್ರೈವರ್‌ನ ಹಿಂದೆ ಇರುವ ಸೀಟ್‌ನ ನಡುವಿನ ಜಾಗದಲ್ಲಿ ನಿಂತುಕೊಂಡಿದ್ದೆ. ನಾನು ಕೃಷ್ಣಾಪುರದಿಂದ ಬಂದ ಸರ್ವಿಸ್ ಬಸ್ಸು ಸುರತ್ಕಲ್‌ನಲ್ಲಿ ಜನರನ್ನು ಇಳಿಸಿ ಹತ್ತಿಸಿಕೊಂಡು, ಬಳಿಕ ಗೋವಿಂದದಾಸ ಕಾಲೇಜಿನ ಬಳಿಯಲ್ಲಿಯೂ ವಿದ್ಯಾರ್ಥಿಗಳನ್ನು ಇಳಿಸಿ, ಮಂಗಳೂರಿನ ಪ್ರಯಾಣಿಕರನ್ನು ಹತ್ತಿಸಿಕೊಂಡು ವಿದ್ಯಾದಾಯಿನಿಯನ್ನು ದಾಟಿ ಅಲ್ಲೇ ರಸ್ತೆ ತಿರುವಿನಲ್ಲಿದ್ದ ‘ಬೇಡಿಕೆಯ ನಿಲ್ದಾಣ’ದಲ್ಲಿ ಜನರನ್ನು ಹತ್ತಿಸಿಕೊಳ್ಳಲು ರಸ್ತೆಯ ಬದಿಗೆ ನಿಲ್ಲದೆ ರಸ್ತೆಯಲ್ಲೇ ನಿಂತಿತು.

ಹಿಂದಿನಿಂದ ನಾನಿದ್ದ ದುರ್ಗಾಂಬಾ ಬಸ್ಸು ನಿಂತ ಬಸ್ಸನ್ನು ತಿರುವಿನಲ್ಲಿ ಓವರ್ಟೇಕ್ ಮಾಡಬೇಕು ಎನ್ನುವಷ್ಟರಲ್ಲಿ ಎದುರಿನಿಂದ ಬರುತ್ತಿದ್ದ ವಾಹನದ ಹಿಂದಿನಿಂದ ಒಂದು (ರಿಕ್ಷಾವೋ, ಬೈಕೋ ಎನ್ನುವುದು ನೆನಪಿಲ್ಲ) ವಾಹನ ದಿಢೀರಾಗಿ ಓವರ್‌ಟೇಕ್ ಮಾಡುತ್ತಾ ಮುಂದೆ ಬಂದಾಗ ಅಪಘಾತ ತಪ್ಪಿಸಲು ನಾನಿದ್ದ ಬಸ್ಸಿನ ಚಾಲಕ ಬಸ್ಸನ್ನು ಎಡಬದಿಗೆ ಸ್ವಲ್ಪ ಸರಿಸಿದ. ಆಗ ಅದು ನಿಂತಿದ್ದ ಸರ್ವಿಸ್ ಬಸ್ಸಿಗೆ ತಾಗಿ ಸದ್ದಾಯಿತು. ಏನಾಯಿತು ಊಹಿಸುವಷ್ಟರಲ್ಲಿ ಆ ಬಸ್ಸಿನ ಕಂಡಕ್ಟರ್, ಡ್ರೈವರ್ ಮಾತ್ರವಲ್ಲ ಬಸ್ಸಿನ ಬಹುತೇಕ ಜನರು ಇಳಿದು ಹೊಡೆದಾಟಕ್ಕೇ ಎನ್ನುವಂತೆ ಅವಾಚ್ಯ ಶಬ್ದಗಳೊಂದಿಗೆ ನಮ್ಮ ಬಸ್ಸು ಏರಲು ಬರುತ್ತಿದ್ದರು. ಕೆಲವರು ರಸ್ತೆಯ ನಡುವಿಗೆ ಬಂದು ಡ್ರೈವರ್‌ನ ಬಳಿಯ ಕಿಟಕಿಯಿಂದ ಅವನನ್ನು ಎಳೆಯಲು ಪ್ರಯತ್ನಿಸಿದರು. ನನಗೆ ಅದೆಲ್ಲಿಂದ ಆವೇಶ ಬಂತೋ ತಿಳಿಯದು. ನಾನು ನಾನಿದ್ದ ದುರ್ಗಾಂಬಾ ಬಸ್ಸಿನ ಡ್ರೈವರನ್ನು ಕೆಳಗೆ ಇಳಿಯದಂತೆ ಬೇಡಿಕೊಂಡೆ. ಹಾಗೆಯೇ ಕಂಡಕ್ಟರ್‌ನನ್ನು ಕೆಳಗೆ ಇಳಿಯದಂತೆ ಹೇಳಿದೆ. ನನ್ನ ಕಣ್ಣಾರೆ ನಡೆದ ಒಂದು ಕ್ಷಣದ ಅವಾಂತರಕ್ಕೆ ನನ್ನ ಬಸ್ ಚಾಲಕ ಕಾರಣನಾಗಿರಲಿಲ್ಲ. ಎದುರಿಂದ ಓವರ್‌ಟೇಕ್ ಮಾಡಿದ ವಾಹನ ಮುಂದೆ ಹೋಗಿಯಾಗಿತ್ತು. ಅದನ್ನು ಯಾರೂ ಗಮನಿಸಿರಲಿಲ್ಲ. ಸರ್ವಿಸ್ ಬಸ್ಸಿನ ಜನ ನನ್ನ ಬಸ್ಸು ಹತ್ತದಂತೆ ನಾನು ಮೆಟ್ಟಲಲ್ಲಿ ನಿಂತು ತಡೆದೆ. ಹಾಗೆಯೇ ನಡೆದ ವಿಷಯವನ್ನು ವಿವರಿಸಿ ನಮ್ಮ ಡ್ರೈವರ್‌ನದ್ದೂ ಏನೂ ತಪ್ಪಿಲ್ಲ ಎಂದು ವಿವರಿಸಿ ತಿಳಿಸಿದೆ. ಅಲ್ಲದೆ ಎರಡು ಬಸ್ಸುಗಳಲ್ಲಿ ಒಂದು ನಿಂತ ಬಸ್ಸು.

ಇನ್ನೊಂದು ತಿರುವಿನಲ್ಲಿ ನಿಧಾನವಾಗಿ ಓವರ್‌ಟೇಕ್ ಮಾಡುತ್ತಿದ್ದ ಬಸ್ಸು. ಆದ್ದರಿಂದ ಢಿಕ್ಕಿಯಿಂದಾಗಿ ಸದ್ದಾಗಿದೆಯೇ ಹೊರತು ವಾಹನಗಳಿಗೆ ಜಖಂ ಕೂಡಾ ಆಗಿರಲಿಲ್ಲ. ಆದರೆ ಆ ಬಸ್ಸಿನಲ್ಲಿದ್ದ ನನ್ನೂರ ಜನರ ಆಕ್ರೋಶ ಮಾತ್ರ ಮಿತಿ ಮೀರಿದ್ದಾಗಿತ್ತು. ನಾನು ಆ ಬಸ್ಸಿನ ಡ್ರೈವರ್ ಕಂಡಕ್ಟರ್‌ಗಳಲ್ಲಿ ಬಸ್ಸನ್ನು ತಿರುವಿನಲ್ಲಿ ರಸ್ತೆ ಮಧ್ಯೆ ನಿಲ್ಲಿಸಿ ಜನರನ್ನು ಹತ್ತಿಸಿಕೊಳ್ಳುತ್ತಿದ್ದ ಬಗ್ಗೆ ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿದ ಅವರು ತುಳುವಿನಲ್ಲಿ ಬೈದುಕೊಳ್ಳುತ್ತಾ ‘ಈ ಹೆಂಗಸಿಗೆ ಇದೆಲ್ಲಾ ಯಾಕೆ’ ಎನ್ನುತ್ತಿದ್ದಾಗ ನಾನು ನಿಮ್ಮ ಈ ಬಸ್ಸಿನಲ್ಲೇ ಬಂದು ಸುರತ್ಕಲ್‌ನಲ್ಲಿ ಇಳಿದವಳು. ನನ್ನೂರಿನ ಜನರಿಗೆ ತಪ್ಪುಗಳು ಯಾಕೆ ಆಗುತ್ತವೆ ಎನ್ನುವುದನ್ನು ಯೋಚಿಸುವ ತಾಳ್ಮೆ ಇಲ್ಲ ಎನ್ನುವುದು ನನಗೆ ಗೊತ್ತಿದೆ. ಆದ್ದರಿಂದ ಪೊಲೀಸರನ್ನು ಕರೆಯಿಸಿ. ಅವರೇ ಬಂದು ಹೇಳಲಿ ತಪ್ಪು ಯಾರದು ಎಂದಾಗ ಆ ಬಸ್ಸಿನ ಜನರೆಲ್ಲಾ ಒಳಗೆ ಹೋಗಿ ಆ ಬಸ್ಸನ್ನು ಹೊರಡಿಸಲು ಹೇಳಿದರು. ನಾನು ಬಿಡಲಿಲ್ಲ. ಪೊಲೀಸರು ಬಂದ ಮೇಲಷ್ಟೇ ನೀವು ಹೋಗಬೇಕಾಗಿರುವುದು ಎಂದು ದುರ್ಗಾಂಬಾ ಬಸ್ಸಿನ ಕಂಡಕ್ಟರಲ್ಲಿ ಪೊಲೀಸರಿಗೆ ಫೋನು ಮಾಡುವಂತೆ ತಿಳಿಸಿದೆ. ನನ್ನ ಎಕ್ಸ್‌ಪ್ರೆಸ್ ಬಸ್ಸಿನಲ್ಲಿದ್ದ ಗಂಭೀರವಾದ ಸಭ್ಯ ಜನರೂ ‘‘ಮೇಡಂ ನಮಗೆ ಬ್ಯಾಂಕ್‌ಗೆ ತಡವಾಗುತ್ತದೆ, ಕಚೇರಿಗೆ ತಡವಾಗತ್ತದೆ. ನೀವು ಬೇಕಾದರೆ ಇಳಿಯಿರಿ’’ ಎಂದಾಗ ನಾಗರಿಕ ಪ್ರಜ್ಞೆ ಇಲ್ಲದ ಬೇಜವಾಬ್ದಾರಿ ಜನರಿಗೆ ‘‘ನಾನು ತಡವಾದರೆ ರಜೆ ಹಾಕಿಯೇನು. ಆದರೆ ಅನ್ಯಾಯವಾಗಿ ಹೊಡೆದಾಟ ಆಗಲು ಬಿಡುವುದಿಲ್ಲ.

ನಿಮಗೆ ತಡವಾದರೆ ನೀವೇ ಬೇರೆ ಬಸ್ಸುಗಳಲ್ಲಿ ಹೋಗಿ’’ ಎಂದೆ. ಕೆಲವರು ಇಳಿದು ಹೋದರು ಕೂಡಾ. ಇಷ್ಟಾಗುವಾಗ ಅರ್ಧ ಗಂಟೆ ಆಯ್ತು. ಸುರತ್ಕಲ್‌ನಲ್ಲೇ ಪೊಲೀಸ್ ಸ್ಟೇಶನ್ ಇತ್ತು. ಅಂತೂ ಪೊಲೀಸರು ಬಂದರು. ಅವರಿಗೆ ಮುಂದಾಗಿ ನಾನೇ ನಡೆದ ಎಲ್ಲಾ ವಿಷಯಗಳನ್ನು ತಿಳಿಸಿ ಇನ್ನು ನೀವು ತೀರ್ಮಾನಿಸಿ ಎಂದೆ. ಉಳಿದವರನ್ನೂ ವಿಚಾರಿಸಿದ ಪೊಲೀಸರು ಎರಡೂ ಬಸ್ಸುಗಳನ್ನು ಪರಿಶೀಲಿಸಿ ಏನೂ ಜಖಂ ಆಗದಿರುವುದನ್ನು ನೋಡಿ ಎರಡೂ ಬಸ್ಸುಗಳನ್ನು ಹೋಗಗೊಟ್ಟರು. ನನ್ನ ಬಸ್‌ನಲ್ಲಿದ್ದ ಕೆಲವೇ ಕೆಲವರು ‘‘ಒಳ್ಳೆಯದಾಯ್ತು. ಇಲ್ಲವಾದರೆ ನಮ್ಮ ಡ್ರೈವರ್ ಸುಮ್ಮನೆ ಏಟು ತಿನ್ನಬೇಕಾಗುತ್ತಿತ್ತು’’ ಎಂದರು. ನನ್ನ ಮನಸ್ಸಿನೊಳಗೆ ಸುಮ್ಮನೆ ಏಟು ತಿನ್ನುವಷ್ಟಕ್ಕೇ ಯೋಚನೆ ನಿಂತಿರಲಿಲ್ಲ. ಎರಡೂ ಬಸ್ಸುಗಳ ಚಾಲಕರು ಬೇರೆ ಬೇರೆ ಧರ್ಮದವರಾಗಿದ್ದರೆ, ನಾಳೆ ಅದು ಪಡೆದುಕೊಳ್ಳುವ ತಿರುವು ಏನಾಗಬಹುದೋ ಎಂಬ ಭಯ. ಯಾರ ಯಾರ ಜೀವವನ್ನು ಬಲಿ ಪಡೆಯುತ್ತದೋ ಎನ್ನುವ ಆತಂಕ.

ಜೊತೆಗೆ ನನ್ನ ಬಸ್ಸಿನ ಚಾಲಕ ಯುವಕನಾಗಿದ್ದು ಸಣಕಲು ಶರೀರದವನಾಗಿದ್ದ. ನನಗೆ ಅವನಲ್ಲಿ ಕಂಡದ್ದು ನನ್ನ 53 ನಂಬ್ರದ ಭವಾನಿ ಬಸ್ಸಿನ ಚಾಲಕನೇ ಅಂದರೆ ಯಾರು ಏನೂ ಅಂದರೂ ನನಗೆ ಆ ಬಗ್ಗೆ ಚಿಂತೆಯೇ ಇರಲಿಲ್ಲ. ನಾನು ಆ ದಿನ ಕಾಲೇಜಿಗೆ ತಡವಾದ್ದರಿಂದ ಅರ್ಧ ದಿನದ ರಜೆ ಹಾಕಿದ್ದೆ. ಆದರೂ ಕೊನೆಯ 12ರಿಂದ 1 ಗಂಟೆಯವರೆಗಿನ ಪಿರೇಡ್‌ಗೆ ಹೋಗಿ ವಿದ್ಯಾರ್ಥಿಗಳೊಂದಿಗೆ ನಡೆದ ವಿಷಯವನ್ನು ಹಂಚಿಕೊಂಡೆ. ಅದು ಮಕ್ಕಳ ಮನಸ್ಸಲ್ಲಿ ನಾಟಿತ್ತು ಎನ್ನುವುದಕ್ಕೆ ವರ್ಷದ ಕೊನೆಯಲ್ಲಿ ಪರೀಕ್ಷೆಗೆ ಬಂದ ಪ್ರಶ್ನೆಯೊಂದರ ಉತ್ತರ ಸಾಕ್ಷಿ ನೀಡಿತ್ತು. ಪ್ರಶ್ನೆ ಹೀಗಿತ್ತು ‘‘ಧಿಡೀರ್ ಸಮಸ್ಯೆ ಯೊಂದು ಎದುರಾದಾಗ ಹೇಗೆ ಬಗೆಹರಿಸುವಿರಿ?’’ ಎಂದು. ಈ ಪ್ರಶ್ನೆಗೆ ಹೆಚ್ಚಿನ ವಿದ್ಯಾರ್ಥಿಗಳು ನಾನು ಹೇಳಿದ ಘಟನೆಯನ್ನೇ ಬರೆದು ಸಮಸ್ಯೆಗೆ ಉತ್ತರ ಇನ್ನೊಂದು ಸಮಸ್ಯೆಯಲ್ಲ ಎನ್ನುವುದನ್ನು ಸಮರ್ಥಿಸಿ ಬರೆದಿದ್ದರು.

ನಮ್ಮ ಅನುಭವಗಳನ್ನು ಹಂಚಿಕೊಂಡಾಗ ಅವುಗಳು ಕೂಡಾ ಕೆಲವರಿಗೆ ಅವರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನ್ಯಾಯದ, ಸತ್ಯದ ಬೆಳಕನ್ನು ನೀಡಬಹುದಲ್ಲವೇ? ಅದಕ್ಕೇ ತಾನೇ ಸಾಹಿತ್ಯ ಓದುವುದು, ಪಾಠ ಮಾಡುವುದು. ಸಾಹಿತ್ಯಕ್ಕೆ ಅಂತಹ ಮಾನವೀಯ ಅಂತಃಕರಣವಿದೆ ಎನ್ನುವುದರಿಂದಲೇ ಲೇಖಕನಿಗೆ ಗೌರವಿಸುವುದು. ಲೇಖಕ/ಲೇಖಕಿ ಸತ್ತರೂ ಅವರ ವಿಚಾರಗಳು ಮುಂದಿನ ಪೀಳಿಗೆಗೆ ದಾಟುವುದು. ಆದರೆ ಮೂರ್ಖರಿಗೆ ನೂರ್ಕಾಲ ಹೇಳಿದರೂ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ವ್ಯರ್ಥ ಎನ್ನುವುದೂ ಸತ್ಯವೇ. ಆದರೂ ಪ್ರಯತ್ನ ಮುಂದುವರಿಯಲೇಬೇಕು. ಕಲ್ಲಿನಂತಹ ಕಲ್ಲೂ ಕೂಡಾ ಕರಗುತ್ತದೆ. ಕರಗಬೇಕು. ಕರಗುವುದೇ ಇಲ್ಲ ಎಂದಾದರೆ ‘‘ತನು ಕರಗದವರಲ್ಲಿ ಮೃಷ್ಟಾನ್ನವನೊಲ್ಲೆನಯ್ಯಾ, ಮನ ಕರಗದವರಲ್ಲಿ ಮಜ್ಜನವನೊಲ್ಲೆನಯ್ಯಾ’’ ಎಂದು ಅಕ್ಕ ಮಹಾದೇವಿ ಹೇಳಿದಂತೆ ಅಂತಹವರಿಂದ ದೂರ ಇರುವುದು ಲೇಸಿನಲ್ಲಿ ಲೇಸು. ಕೃಷ್ಣಾಪುರ ಕಾಟಿಪಳ್ಳದಲ್ಲಿ ಯಾವಾಗ ಏನಾಗುತ್ತದೋ ಎನ್ನುವ ಆತಂಕದ ಅಭದ್ರತೆಯ ಭಾವ ನಮ್ಮನ್ನು ಹೆಚ್ಚು ಕಾಡುತ್ತಿದ್ದುದೂ ನಿಜ. ಇಂತಹ ಭಾವನೆಗಳು ಅಲ್ಲಿದ್ದ ಉಳಿದವರಿಗೆ ಇರಲಿಲ್ಲವೇ ಅಂದರೆ ಬಹುಶಃ ಪಣಂಬೂರಿನಿಂದ ವಲಸೆ ಬಂದವರಿಗೆ ಬೇರೆ ಆಯ್ಕೆಗೆ ಅವಕಾಶವಿಲ್ಲವಲ್ಲಾ? ಆದರೆ ನಮ್ಮಂತೆ ಈ ಊರಿಗೆ ಸ್ವಂತ ಮನೆಯ ಆಸೆಯಿಂದ ಬಂದವರಿಗೆ ತಮ್ಮ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಪುನಃ ಮಂಗಳೂರಿನ ಆಸೆ ಹೆಚ್ಚುತ್ತಿತ್ತು.

ಮಂಗಳೂರಲ್ಲಿ ಈಗ ಫ್ಲಾಟ್‌ಗಳು ನಿರ್ಮಾಣವಾಗುತ್ತಿದ್ದು, ಅದರ ಆಕರ್ಷಣೆಯೂ ಹೆಚ್ಚುತ್ತಿತ್ತು. ನಿಧಾನವಾಗಿ ಕಾಟಿಪಳ್ಳ, ಕೃಷ್ಣಾಪುರದಲ್ಲಿದ್ದ ಮನೆಯನ್ನು ಬಾಡಿಗೆಗೆ ಕೊಟ್ಟು, ಇನ್ನು ಕೆಲವರು ಮಾರಾಟ ಮಾಡಿಯೇ ಈ ಊರನ್ನು ಬಿಟ್ಟು ಮರಳಿ ಮಂಗಳೂರನ್ನು ಸೇರುತ್ತಿದ್ದರು. ಈ ವಿದ್ಯಮಾನಗಳು ನಮ್ಮಲ್ಲೂ ಮಂಗಳೂರಿಗೆ ಮರಳುವ ಆಸೆಯನ್ನು ಹೆಚ್ಚಿಸುತ್ತಿತ್ತು. ಯಾಕೆಂದರೆ ನಮ್ಮದಲ್ಲದ ನಮ್ಮ ಊರನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿ ನಾವು ಪೂರ್ಣವಾಗಿ ಸಫಲರಾಗಿಲ್ಲ ಎಂದರೆ ಇಲ್ಲಿ ಬೇಸರಿಸುವವರು ಯಾರೂ ಇಲ್ಲ ಎನ್ನುವುದು ನಿಜ. ಸೌಹಾರ್ದದ ವಾತಾವರಣವಂತೂ ಕದಡಿದೆ. ಅದನ್ನು ಸರಿಪಡಿಸುವ ನಮ್ಮ ಪ್ರಯತ್ನ ಇದ್ದರೂ ಸರಿಹೋಗುವಂತಹ ಆಸೆ ಇನ್ನೆಷ್ಟೋ ದೂರವೋ ಎನ್ನುವುದರ ಜೊತೆಗೆ ಇಂತಹ ಸಮಸ್ಯೆಗಳನ್ನು ಪರಿಹರಿಸುವ ಬದಲು ಸಮಸ್ಯೆಗಳನ್ನು ಮತ್ತಷ್ಟು ಬಿಗಿಗೊಳಿಸುವ ರಾಜಕೀಯದ ಹುನ್ನಾರದ ಅರಿವು ನಮ್ಮ ಗ್ರಹಿಕೆಗೆ ದೊರೆಯುವಂತಹುದೇ ಆಗಿತ್ತು. ರಾಜಕೀಯ ಶಕ್ತಿಗಳು ಸಮಾಜದೊಳಗೆ ಅಡಗಿಕೊಂಡೇ ಆಡಿಸುವ ವಿವಿಧ ನೆಲೆಗಳು ಸಾಮಾನ್ಯ ಜನರನ್ನು ಮೋಸ ಮಾಡಿದುವೇ? ಅಥವಾ ನಾವೇ ಮೋಸ ಹೋದೆವೋ ಎಂಬ ಗೊಂದಲದಲ್ಲಿ ರಾತ್ರಿ ಬೆಳಗಾಗುತ್ತಿದ್ದುದು ನಿಜವೇ ಆಗಿತ್ತು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News