‘ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ಕಾರ್ಯಕ್ರಮ’ಕ್ಕೆ ಬಡವರು ನಿಜವಾದ ಫಲಾನುಭವಿಗಳೇ?

Update: 2018-02-09 04:41 GMT

2018ರ ಬಜೆಟ್‌ನ ಅತ್ಯಂತ ದೊಡ್ಡ ಅದೃಷ್ಟ ವಿಜೇತ(ವಿನ್ನರ್), ಆರೋಗ್ಯ ಎಂದು ಹಾಡಿಹೊಗಳಲಾಗುತ್ತಿದೆ ಆದರೆ ಅಂಕಿಸಂಖ್ಯೆಗಳ ಮೇಲೆ ಸುಮ್ಮನೆ ಕಣ್ಣಾಡಿಸಿದರೆ ಸಾಕು, ಆರೋಗ್ಯ ಬಜೆಟ್ ಬಗ್ಗೆ ಸಂಭ್ರಮಿಸಲು ಏನೂ ಇಲ್ಲ ಎಂದು ತಿಳಿದುಬಿಡುತ್ತದೆ. ವಿತ್ತಸಚಿವ ಜೇಟ್ಲಿಯವರ ಭಾಷಣ ಎರಡು ಮುಖ್ಯವಿಷಯಗಳನ್ನು ಪ್ರಸ್ತಾಪಿಸುತ್ತದೆ: ‘‘ಜನರ ಮನೆಗಳಿಗೆ ಆರೋಗ್ಯ ಸೇವೆ ವ್ಯವಸ್ಥೆಯನ್ನು ಇನ್ನಷ್ಟು ಹತ್ತಿರ ತರಲಿರುವ’’ ಆರೋಗ್ಯ ಮತ್ತು ‘ವೆಲ್‌ನೆಸ್’ ಕೇಂದ್ರಗಳು ಮತ್ತು ‘‘ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ ಐದು ಲಕ್ಷ ರೂಪಾಯಿವರೆಗೆ ಹತ್ತುಕೋಟಿಗೂ ಹೆಚ್ಚು ಬಡಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸುವ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ.’’ (‘‘ಸುಮಾರು 50 ಕೋಟಿ ಮಂದಿ ಇದರ ಫಲಾನುಭವಿಗಳಾಗಲಿದ್ದಾರೆ’’ ಎಂದು ಅವರು ಹೇಳಿದ್ದಾರೆ)

50 ಕೋಟಿ ಫಲಾನುಭವಿಗಳು ಎಂಬ ಸುದ್ದಿ, ಯೋಜನೆಯ ಈ ಎರಡನೆಯ ಅಂಶ, ಆರೋಗ್ಯಸೇವೆಯಲ್ಲಿ ‘ಕ್ರಾಂತಿಕಾರಕ’ ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗಿದೆ. ಆದರೆ ಇವೆರಡೂ ಹೊಸ ಯೋಜನೆಗಳೇನೂ ಅಲ್ಲ; ಮತ್ತು ಇವು ಆರೋಗ್ಯಸೇವೆಯ ಲಭ್ಯತೆಯನ್ನು ಸುಧಾರಿಸುವುದೂ ಇಲ್ಲ ಅಥವಾ ಜನರು ತಮ್ಮ ಕಿಸೆಯಿಂದ ಖರ್ಚುಮಾಡುವ ಮೊತ್ತವನ್ನು ಕಡಿಮೆ ಮಾಡುವುದೂ ಇಲ್ಲ.

ಖಾಸಗಿ ರಂಗಕ್ಕೆ ದೊಡ್ಡ ಸವಲತ್ತು, ಭಾರೀ ಲಾಭ 2018-19ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮೀಸಲಿಡಲಾಗಿರುವ ಮೊತ್ತ ರೂಪಾಯಿ 51,550.85 ಕೋಟಿಗಿಂತ ಸುಮಾರು ಶೇ. 2.5 ಹೆಚ್ಚಳ ಅಷ್ಟೆ.

ಆದ್ದರಿಂದ, ನಿಜವಾದ ಲೆಕ್ಕದಲ್ಲಿ ಮತ್ತು ಜಿಡಿಪಿಯ ಒಂದು ಪ್ರತಿಶತವಾಗಿ, ಈ ವರ್ಷ ಆರೋಗ್ಯ ಬಜೆಟ್‌ನಲ್ಲಿ ಇಳಿಕೆಯಾಗಿದೆ.

1.5ಲಕ್ಷ ಆರೋಗ್ಯ ಮತ್ತು ವೆಲ್‌ನೆಸ್ ಕೇಂದ್ರಗಳನ್ನು ಸಾಧಿಸಲು ವಿತ್ತಸಚಿವರು 1,200 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಇದರ ಪ್ರಕಾರ ಪ್ರತೀ ಉಪಕೇಂದ್ರಕ್ಕೆ 80,000 ರೂಪಾಯಿ ಸಿಕ್ಕಂತಾಗುತ್ತದೆ. ಇದು ಏನೇನೂ ಸಾಲದು. ಅಲ್ಲದೆ, ಇದು 2017ರ ಬಜೆಟ್‌ನಲ್ಲಿ ಕೂಡ ಪ್ರಸ್ತಾವನೆಯಾಗಿದ್ದರಿಂದ ಇದೊಂದು ಹೊಸ ಯೋಜನೆ ಏನೂ ಅಲ್ಲ.

ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಗ್ರಾಮೀಣ ಆರೋಗ್ಯ ಅಂಕಿಸಂಖೆಗಳ ಪ್ರಕಾರ, 1,56,231 ಉಪಕೇಂದ್ರಗಳಲ್ಲಿ 17,204 (ಶೇ.11) ಮಾತ್ರ 2017ರ ಮಾರ್ಚ್ 31ರ ವೇಳೆಗೆ ಮಾನದಂಡ ಮಟ್ಟಗಳನ್ನು ತಲುಪಿದ್ದವು. ಶೇ. 20ರಷ್ಟು ಉಪಕೇಂದ್ರಗಳಲ್ಲಿ ನಿಗದಿತವಾಗಿ ನೀರು ಪೂರೈಕೆ ವ್ಯವಸ್ಥೆ ಕೂಡ ಇಲ್ಲ ಮತ್ತು ಶೇ. 23ರಷ್ಟರಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲ. 6,000ಕ್ಕೂ ಹೆಚ್ಚು ಉಪಕೇಂದ್ರಗಳಲ್ಲ್ಲಿ ಒಬ್ಬಳೇ ಒಬ್ಬಳು ಆರೋಗ್ಯ ಸಹಾಯಕಿ ಇಲ್ಲ, ಮತ್ತು ಸುಮಾರು ಒಂದು ಲಕ್ಷ ಕೇಂದ್ರಗಳಲ್ಲಿ ಒಬ್ಬನೇ ಒಬ್ಬ ಆರೋಗ್ಯ ಸಹಾಯಕನಿಲ್ಲ.

ಈಗ, ‘‘ವಿಶ್ವದ ಅತ್ಯಂತ ಬೃಹತ್ತಾದ ಸರಕಾರಿ ಪ್ರಾಯೋಜಿತ ಆರೋಗ್ಯ ಕಾರ್ಯಕ್ರಮ’’ಕ್ಕೆ ಬರುವುದಾದರೆ, ಇಲ್ಲಿ ಕೂಡ 2016ರ ಬಜೆಟ್ ಭಾಷಣದಲ್ಲಿ ಇದೇ ವಿತ್ತ ಸಚಿವರು ಇದೇ ರೀತಿಯ ಹೆಗ್ಗಳಿಕೆಯ ಮಾತನ್ನು ಹೇಳಿದ್ದರು.

ಎರಡು ವರ್ಷಗಳ ಬಳಿಕ, ರಾಷ್ಟ್ರೀಯ ಬಿಮಾ ಯೋಜನೆಯಲ್ಲಿ (ಆರ್‌ಎಸ್‌ಬಿವೈ) ಸದ್ಯ, ವಾರ್ಷಿಕ, ಪ್ರತಿ ವ್ಯಕ್ತಿಗೆ 30,000 ರೂ. ವಿಮೆ ಇದೆ. ಈಗ ಇದನ್ನು 5 ಲಕ್ಷ ರೂಪಾಯಿಗೆ ಏರಿಸುವುದಾಗಿ ಆಶ್ವಾಸನೆ ನೀಡಲಾಗಿದೆ. ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರಿಗೆ ಒಂದು ಲಕ್ಷ ರೂ. ಆರೋಗ್ಯ ವಿಮೆ ನೀಡಲು ಈ ಯೋಜನೆಯಡಿಯಲ್ಲಿ 2016-17ರಲ್ಲಿ ಮೀಸಲಿಟ್ಟ ಮೊತ್ತ ರೂ. 1,500 ಕೋಟಿ.

ಈ ಯೋಜನೆ ಕಾರ್ಯಗತವಾಗಲಿಲ್ಲ ಮತ್ತು ರೂ. 500 ಕೋಟಿಗಿಂತಲೂ ಕಡಿಮೆ ಮೊತ್ತವನ್ನು ಯೋಜನೆಗೆ ವ್ಯಯಿಸಲಾಯಿತು. ಈ ಅಂಕಿ ಸಂಖ್ಯೆಗಳು ಸರಕಾರದ ಬಜೆಟ್ ಘೋಷಣೆಗಳ ವಿಶ್ವಾಸಾರ್ಹತೆಯನ್ನೇ ಅನುಮಾನಿಸುವಂತೆ ಮಾಡುತ್ತವೆ.

ಬಡವರಿಗೆ ಆರೋಗ್ಯ ಸೇವೆಯೋ ಅಥವಾ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭವೋ

ಎಲ್ಲರಿಗೂ ಆರೋಗ್ಯ ಸೇವೆ ಒದಗಿಸಲು ಖಾಸಗಿ ರಂಗವನ್ನು ಅವಲಂಬಿಸಿರುವುದರಿಂದ ಒಟ್ಟು ಆರೋಗ್ಯ ಸೇವೆ ವೆಚ್ಚಗಳು ಗಗನಕ್ಕೇರುತ್ತವೆ, ಹಲವರು ಆರೋಗ್ಯ ಸೇವೆಯಿಂದ ಹೊರಗುಳಿಯುತ್ತಾರೆ ಮತ್ತು ನೈತಿಕ ಆರೋಗ್ಯ ಸೇವೆ ವಿಕೃತಗೊಳ್ಳುತ್ತದೆ ಎಂಬುದನ್ನು ವಿಶ್ವಾದ್ಯಂತ ಖಾಸಗಿ ಆರೋಗ್ಯ ರಂಗದ ಅನುಭವಗಳು ತೋರಿಸಿಕೊಟ್ಟಿವೆ. ಭಾರತದಲ್ಲಿ ಕೂಡ ಸರಕಾರ ಖಾಸಗಿ ರಂಗದ ಮೂಲಕ ಈ ಸೇವೆ ಒದಗಿಸಲು ಹೊರಟಿದೆ. ವಿಮೆ ಆಧಾರಿತ ಯೋಜನೆಯ ಜನರು ಆರೋಗ್ಯ ಸೇವೆಗಾಗಿ ತಮ್ಮ ಕಿಸೆಯಿಂದ ಖರ್ಚು ಮಾಡುವ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂಬುದಕ್ಕೆ ನಮ್ಮ ದೇಶದಲ್ಲೇ ಸಾಕಷ್ಟು ಪುರಾವೆಗಳು ಇವೆ. ಆರ್‌ಎಸ್‌ಬಿವೈ ಕೂಡ ಈ ಸಮಸ್ಯೆಗೆ ಹೊರತಾಗಿಲ್ಲ. ಅಲ್ಲದೆ ರಾಷ್ಟ್ರೀಯ ಮಾದರಿ (ಸ್ಯಾಂಪಲ್) ಸಮೀಕ್ಷೆಯ ದತ್ತಾಂಶಗಳು ಕೂಡ ಜನರು ತಮ್ಮ ಕಿಸೆಯಿಂದ ವ್ಯಯಿಸುವ ಮೊತ್ತ ಹೆಚ್ಚುತ್ತಿರುವುದನ್ನು ಸಾಬೀತುಪಡಿಸಿದೆ. ಸಾರ್ವಜನಿಕ ಸೇವೆಗಳ ಲಭ್ಯತೆಯನ್ನು ಬಲಪಡಿಸುವುದಕ್ಕೆ ಬದಲಾಗಿ ವಿಮೆಯನ್ನು ಅವಲಂಬಿಸುವುದರಿಂದ ಒಂದೆಡೆ ಸರಕಾರ ಕಡಿಮೆ ಮೊತ್ತವನ್ನು ಮೀಸಲಿಟ್ಟು ದೂರ ಸರಿದರೆ, ಇನ್ನೊಂದೆಡೆ ವಿಮೆ-ಕೇಂದ್ರಿತ ಆರೋಗ್ಯ ಸೇವೆಯು ಖಾಸಗಿ ರಂಗಕ್ಕೆ ಬಡವರ ಅನಾರೋಗ್ಯದಿಂದ ಹಣ ಬಾಚಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಭಾರತದಲ್ಲಿ ಜನರು ತಮ್ಮ ಆರೋಗ್ಯ ಸೇವೆಗಳಿಗಾಗಿ ಖರ್ಚುಮಾಡುವುದನ್ನು ಹಲವರು ಒಂದು ಸಮಸ್ಯೆಯೆಂದು ಈಗಾಗಲೇ ಗುರುತಿಸಿದ್ದಾರೆ. ಜನರನ್ನು ಬಡತನಕ್ಕೆ ತಳ್ಳಲು ಒಂದು ಮುಖ್ಯ ಕಾರಣ ಅವರು ಆರೋಗ್ಯಕ್ಕಾಗಿ ಭಾರೀ ಮೊತ್ತದ ಹಣವನ್ನು ಖರ್ಚುಮಾಡುವುದೇ ಆಗಿದೆ ಎಂಬುದನ್ನು ಹಲವು ಅಧ್ಯಯನಗಳು ದೃಢಪಡಿಸಿವೆ. (ಈ ಕಾರಣದಿಂದಾಗಿಯೇ ದೇಶದ ಒಟ್ಟು ಜನಸಂಖ್ಯೆಯ ಶೇ. 70 ಮಂದಿ ಬಡತನ ರೇಖೆಗಿಂತ ಕೆಳಗೆ ಬೀಳುತ್ತಾರೆ. )

ಯಾವುದೇ ಮಾನದಂಡದಿಂದ ಅಳೆದರೂ, ಈ ಹೊಸ ಆರೋಗ್ಯ ಯೋಜನೆ ನಮ್ಮನ್ನು ವಿಶ್ವ ಆರೋಗ್ಯ ಸೇವೆ (ಯುನಿವರ್ಸಲ್ ಹೆಲ್ತ್ ಕೇರ್-ಯುಎಎಚ್‌ಸಿ) ಕಡೆಗೆ ಕರೆದೊಯ್ಯುವುದಿಲ್ಲ. ವ್ಯಾಖ್ಯಾನದ ಪ್ರಕಾರ ಯುಚ್‌ಸಿ ಎಂದರೆ ಎಲ್ಲ ವೈದ್ಯಕೀಯ ವೆಚ್ಚಗಳನ್ನು ಭರಿಸುವ ಒಂದು ವ್ಯವಸ್ಥೆ. ಸರಕಾರ ಹೇಳುವ ವ್ಯವಸ್ಥೆ ಜನಸಂಖ್ಯೆಯ ಒಂದು ಭಾಗವನ್ನು ಮಾತ್ರ ತಲುಪುತ್ತದೆ-(ಹತ್ತು ಕೋಟಿ ಕುಟುಂಬಗಳು ಅಂದರೆ ಜನಸಂಖ್ಯೆಯ ಸುಮಾರು ಶೇ. 40).

ಭಾರತದಲ್ಲಿ ಆರೋಗ್ಯ ಸೇವೆಗಾಗಿ ಸರಕಾರ ಮಾಡುವ ವೆಚ್ಚವನ್ನು ದೇಶದ ಒಟ್ಟು ಜಿಡಿಪಿಯ ಕನಿಷ್ಠ ಶೇ. 2.5-3ರಷ್ಟಾದರೂ ಹೆಚ್ಚಿಸುವ ಅಗತ್ಯವಿದೆ ಎಂದು ಹಲವಾರು ಅಧ್ಯಯನಗಳು ಹೇಳುತ್ತಿವೆ. ಆದರೂ, ವರ್ಷದ ಮೇಲೆ ವರ್ಷ ಉರುಳಿದರೂ, ನಾವು ಮಾತ್ರ ಜಿಡಿಪಿಯ ಶೇ. 1-2ರಷ್ಟನ್ನೇ ವ್ಯಯಿಸುತ್ತಿದ್ದೇವೆ. ಮಾಧ್ಯಮಗಳ ದೊಡ್ಡ ಸುದ್ದಿ ತಪ್ಪಾಗಿದೆ: ಈ ಬಜೆಟ್ ವಿಶ್ವದ ಅತ್ಯಂತ ಬೃಹತ್ತಾದ ಆರೋಗ್ಯ ರಕ್ಷಣಾ ಯೋಜನೆಯ ಬಗ್ಗೆ ಅಲ್ಲ; ಅದು ವಿಶ್ವದಲ್ಲೇ, ಇತರ ಹೆಚ್ಚಿನ ದೇಶಗಳು ಆರೋಗ್ಯಕ್ಕಾಗಿ ಖರ್ಚು ಮಾಡುವುದಕ್ಕಿಂತ ಕಡಿಮೆ ಖರ್ಚು ಮಾಡುವ, ವಿಶ್ವದಲ್ಲೇ ಅತ್ಯಂತ ಹೆಚ್ಚು ಶಿಶು ಹಾಗೂ ಹೆರಿಗೆ ಸಂಬಂಧಿ ಸಾವುಗಳು ಸಂಭವಿಸುವ ದೇಶದ ಬಗ್ಗೆ.

ಕೃಪೆ: thewire.in

Writer - ದೀಪಾ ಸಿನ್ಹಾ

contributor

Editor - ದೀಪಾ ಸಿನ್ಹಾ

contributor

Similar News