ಬೆಳ್ತಂಗಡಿ ಕ್ಷೇತ್ರದಲ್ಲಿ ಚುರುಕುಗೊಂಡ ಚುನಾವಣಾ ಬೆಳೆ

Update: 2018-02-15 10:13 GMT

► ಮೂರೂ ಪಕ್ಷಗಳಲ್ಲಿ ಐದು ಬಾರಿ ನೆಲೆಕಂಡ ಬಂಗೇರಗೆ ಪ್ರತಿಸ್ಪರ್ಧಿ ಯಾರು?

► ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಹೆಚ್ಚಿದ ಆಕಾಂಕ್ಷಿಗಳ ಪೈಪೋಟಿ

ಬೆಳ್ತಂಗಡಿ, ಫೆ.14: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು ಎರಡು ರಾಷ್ಟ್ರೀಯ ಪಕ್ಷಗಳು ಈಗಾಗಲೇ ತಯಾರಿಯಲ್ಲಿ ತೊಡಗಿಸಿಕೊಂಡಿವೆ. ಶೋಷಿತ ಸಮುದಾಯಗಳೇ ನಿರ್ಣಾಯಕರಾಗಿರುವ ಈ ಕ್ಷೇತ್ರದಲ್ಲಿ ಪ್ರಾದೇಶಕ ಪಕ್ಷಗಳು ಕೂಡಾ ಮೆಲ್ಲನೆ ಚುರುಕುಗೊಳ್ಳತೊಡಗಿವೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜನವರಿ ವರೆಗೆ ನೋಂದಣಿಯಾದ ಮತದಾರರ ಸಂಖ್ಯೆ 2,12,246. ಇವರಲ್ಲಿ 1,06,518 ಪುರುಷರು ಹಾಗೂ 1,05,728 ಮಹಿಳೆಯರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭಕ್ಕೆ ಹೋಲಿಸಿದರೆ ಸುಮಾರು ಹನ್ನೆರಡು ಸಾವಿರಕ್ಕೂ ಹೆಚ್ಚು ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಅಹಿಂದ ಮತದಾರರದ್ದೇ ಪ್ರಾಬಲ್ಯ ಇರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದ ಸುಮಾರು 50ರಿಂದ 55 ಸಾವಿರದಷ್ಟು ಮತದಾರರು ಇದ್ದು ಮೊದಲ ಸ್ಥಾನದಲ್ಲಿದ್ದಾರೆ. ಅವರಿಗೆ ಸಮಾನವಾಗಿ ಒಕ್ಕಲಿಗ ಸಮುದಾಯದ ಸುಮಾರು 50 ಸಾವಿರ ಮತದಾರರಿದ್ದಾರೆ.

ಇನ್ನು ಪರಿಶಿಷ್ಟ ಜಾತಿ ಪಂಗಡದ ಸುಮಾರು 35 ಸಾವಿರ, ಮುಸ್ಲಿಮ್ ಮತಗಳು ಸುಮಾರು 30 ಸಾವಿರ, ಇತರ ಸುಮಾರು 30 ಸಾವಿರ, ಕ್ರೈಸ್ತ 15 ಸಾವಿರ ಮತದಾರರಿದ್ದಾರೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 13 ಚುನಾವಣೆಗಳಲ್ಲಿ ಕಾಂಗ್ರೆಸ್ 8 ಬಾರಿ, ಬಿಜೆಪಿ 4 ಬಾರಿ, ಜೆಡಿಎಸ್ 1 ಬಾರಿ ಗೆಲುವು ದಾಖಲಿಸಿದೆ. 1983ರಿಂದ ನಡೆದ ಚುನಾವಣೆಗಳಲ್ಲಿ ಪಕ್ಷ ಬದಲಾಯಿಸುತ್ತಾ ಬಂದಿರುವ ಕೆ.ವಸಂತ ಬಂಗೇರ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ 4 ಗೆಲುವುಗಳಲ್ಲಿ ಎರಡು ಬಾರಿ ಕೆ.ವಸಂತ ಬಂಗೇರರದ್ದಾಗಿದೆ. ಜೆಡಿಎಸ್ ಕೂಡಾ ಬಂಗೇರರ ಮೂಲಕವೇ ಇಲ್ಲಿ ಗೆಲುವು ಕಂಡಿದೆ. ಇದೀಗ ಕಾಂಗ್ರೆಸ್‌ನಲ್ಲಿಯೂ ವಸಂತ ಬಂಗೇರ ಎರಡು ಬಾರಿ ಗೆಲುವು ಕಂಡಿದ್ದಾರೆ. ಹೀಗೆ ಮೂರೂ ಪಕ್ಷಗಳಲ್ಲಿ ಅವರು ಗೆಲುವು ಸಾಧಿಸಿದ್ದಾರೆ.

ಧರ್ಮಸ್ಥಳ, ಕಾಜೂರು ಪುಣ್ಯ ಕ್ಷೇತ್ರದ ನಾಡು

ಬೆಳ್ತಂಗಡಿ ತಾಲೂಕಿನ ಎಲ್ಲ 81 ಗ್ರಾಮಗಳನ್ನೂ ತನ್ನ ವ್ಯಾಪ್ತಿಯಲ್ಲಿ ಹೊಂದಿರುವ ವಿಧಾನಸಭಾ ಕ್ಷೇತ್ರ ಅತ್ಯಂತ ವಿಸ್ತಾರವಾದ ಕ್ಷೇತ್ರವಾಗಿದೆ. ಚಿಕ್ಕಮಗಳೂರು, ಹಾಸನ, ಹಾಗೂ ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಬೆಳ್ತಂಗಡಿ ಪಶ್ಚಿಮಘಟದ ದಟ್ಟ ಅರಣ್ಯವೂ ಅದರೊಳಗಿರುವ ಪುಟ್ಟ ಊರುಗಳನ್ನೂ ಒಳಗೊಂಡಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ 48 ಗ್ರಾಮ ಪಂಚಾಯತ್‌ಗಳಿದ್ದು ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ, ಕಾಜೂರು ದರ್ಗಾ, ರಾಜ್ಯದ ಶಿಕ್ಷಣ ಕೇಂದ್ರವಾಗಿ ಬೆಳೆಯುತ್ತಿರುವ ಉಜಿರೆಯೂ ಕ್ಷೇತ್ರದಲ್ಲಿದೆ. ಇನ್ನೂಂದೆಡೆ ರಸ್ತೆ, ವಿದ್ಯುತ್ ತಲುಪದ ಕುತ್ಲೂರಿನ ಅಲಂಬದಂತ ಕುಗ್ರಾಮಗಳೂ ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಪ್ರಾದೇಶಿಕ ಪಕ್ಷಗಳ ನಿಲುವು

ಕಳೆದ ಚುನಾವಣೆಗೆ ಸ್ಪರ್ಧಿಸಿದ್ದ ಸಿಪಿಎಂ ಈ ಬಾರಿ ಚುನಾವಣಾ ಕಣಕ್ಕೆ ಇಳಿಯುವ ಯಾವುದೇ ಪೂರ್ವ ಸಿದ್ಧತೆಯನ್ನು ನಡೆಸಿದಂತೆ ಕಂಡು ಬರುತ್ತಿಲ್ಲ. ಸಿಪಿಎಂ ಈ ಬಾರಿ ಸ್ಪರ್ಧೆಯಿಂದ ದೂರ ಉಳಿಯಲಿದೆ ಎಂಬ ಮಾತೂ ಕೇಳಿ ಬರುತ್ತಿದೆ. ಇನ್ನು ಜೆಡಿಎಸ್ ಮತ್ತು ಬಿಎಸ್ಪಿ ನಡುವಿನ ಹೊಂದಾಣಿಕೆಯ ಹಿನ್ನೆಲೆಯಲ್ಲಿ ಈ ಬಾರಿ ಬೆಳ್ತಂಗಡಿಯಲ್ಲಿ ಜನತಾದಳ ಸ್ಪರ್ಧಿಸಲಿದ್ದು ಪಕ್ಷದ ತಾಲೂಕು ಅಧ್ಯಕ್ಷ ಪ್ರವೀಣ್ ಚಂದ್ರ ಜೈನ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಎಸ್‌ಡಿಪಿಐ ಈ ಬಾರಿ ಚುನಾವಣೆ ಸ್ಪರ್ಧೆಯ ಬಗ್ಗೆ ಚಿಂತನೆ ನಡೆಸುತ್ತಿದ್ದೆನ್ನಲಾಗಿದ್ದು ಇನ್ನಷ್ಟೇ ನಿರ್ಧಾರವನ್ನು ಪ್ರಕಟಿಸಬೇಕಾಗಿದೆ.

Writer - ಶಿಬಿ ಧರ್ಮಸ್ಥಳ

contributor

Editor - ಶಿಬಿ ಧರ್ಮಸ್ಥಳ

contributor

Similar News