ಬಾಲಿವುಡ್‌ನ್ನು ಸುತ್ತಿಕೊಂಡ 'ನಾಗಿಣಿ ಇನ್ನಿಲ್ಲ'

Update: 2018-02-26 06:01 GMT

ಶ್ರೀದೇವಿಯ ಮೂಲಕ ಮಹಿಳಾ ಪ್ರಧಾನ ಪಾತ್ರಗಳು ಮುಂಚೂಣಿಗೆ ಬಂದವು. ಮೂಂನ್ರಾಂ ಪಿರೈ ಚಿತ್ರದ ಮುಗ್ಧ ಹೆಣ್ಣಿನ ಶ್ರೀದೇವಿಯ ಅಭಿನಯ ಚಿತ್ರೋದ್ಯಮದಲ್ಲಿ ಒಂದು ದಾಖಲೆಯೇ ಆಯಿತು.

ಶ್ರೀ ದೇವಿ ನಟಿಸಿದ ಕಟ್ಟ ಕಡೆಯ ಚಿತ್ರ ಮಾಮ್. ಅಂದರೆ ತಾಯಿ. ತನ್ನ ಮಲಮಗಳ ಮೇಲೆ ನಡೆದ ದೌರ್ಜನ್ಯಕ್ಕೆ ಸೇಡು ತೀರಿಸಿಕೊಳ್ಳುವುದಷ್ಟೇ ಅಲ್ಲ, ಮಲ ಮಗಳ ಹೃದಯದಲ್ಲಿ ಆ ಮೂಲಕ ತಾಯ್ತನದ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಪಾತ್ರ ಅದು. ಈ ಚಿತ್ರಕ್ಕೆ ಮೊದಲು ಅವರು ನಟಿಸಿದ ಇಂಗ್ಲಿಷ್ ವಿಂಗ್ಲಿಶ್ ಕೂಡ ಜನಮನಸೂರೆಗೊಂಡಿತು. ಇಲ್ಲಿಯೂ ಈಕೆ ತಾಯಿಯ ಪಾತ್ರವನ್ನೇ ವಹಿಸಿದರು. ಎರಡೂ ಸ್ತ್ರೀ ಪ್ರಧಾನ ಪಾತ್ರಗಳು. ಬಾಲಿವುಡ್‌ನಲ್ಲಿ ಸ್ತ್ರೀ ಪಾತ್ರಗಳು ಪ್ರಧಾನವಾಗಲು ಕಾರಣವಾದ ಶ್ರೀದೇವಿ ಎಂಬ ಸ್ಟಾರ್ ನಟಿ, ತನ್ನ ಇಳಿ ವಯಸ್ಸಿನಲ್ಲೂ ಆ ವರ್ಚಸ್ಸನ್ನು ಕಾಪಿಟ್ಟುಕೊಂಡವರು. ಬಾಲಿವುಡ್‌ನ ಈ ಸೂಪರ್ ಸ್ಟಾರ್ ಕಣ್ಮರೆಯಾಗಿದ್ದಾರೆ. ತಮಿಳುನಾಡಿನ ಶಿವಕಾಶಿಯಲ್ಲಿ 1963ರ ಆಗಸ್ಟ್ 13ರಂದು ಜನಿಸಿದ ಇವರ ಮೂಲ ಹೆಸರು ಶ್ರೀ ಅಮ್ಮಾ ಯಾಂಗೆರ್ ಅಯ್ಯಪ್ಪನ್. ನಾಲ್ಕನೇ ವಯಸ್ಸಿನಲ್ಲೇ ಭಕ್ತಿಪ್ರಧಾನ ಚಿತ್ರ ತುನೈವನ್‌ನಲ್ಲಿ ನಟಿಸುವ ಮೂಲಕ ಶ್ರೀದೇವಿ ಚಿತ್ರರಂಗಕ್ಕೆ ಕಾಲಿಟ್ಟರು. ಆನಂತರ ಬಾಲನಟಿಯಾಗಿ ತಮಿಳು, ತೆಲುಗು, ಕನ್ನಡ ಹಾಗೂ ಮಲೆಯಾಳಂ ಚಿತ್ರಗಳಲ್ಲಿ ನಟಿಸಿದ್ದರು. ಬಳಿಕ ಇದೇ ಭಾಷೆಗಳಲ್ಲಿ ಪ್ರೌಢತಾರೆಯಾಗಿಯೂ ಮಿಂಚಿದರು. ಬಾಲನಟಿಯಾಗಿ ಇವರಿಗೆ ಖ್ಯಾತಿ ತಂದುಕೊಟ್ಟ ಚಿತ್ರಗಳೆಂದರೆ, ಪೂಂಪಟ್ಟಾ (1971) ಮತ್ತು ಕಂದನ್ ಕರುಣೈ (1967). ಹೀಗೆ ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅವರು ಆನಂತರ ಪ್ರಭುದ್ಧ ಪಾತ್ರಗಳಲ್ಲಿ ನಟಿಸಿದರು. ಹಿಂದಿ ಚಿತ್ರದಲ್ಲಿ ಮೊದಲು ಶ್ರೀದೇವಿ ಕಾಣಿಸಿಕೊಂಡಿದ್ದು ಜೂಲಿ (1975)ಯಲ್ಲಿ. ದಕ್ಷಿಣದ ಖ್ಯಾತತಾರೆ ಲಕ್ಷ್ಮಿ ನಾಯಕಿಯಾಗಿದ್ದ ಈ ಚಿತ್ರದಲ್ಲಿ ಜೂಲಿಯ ತಂಗಿ ಐರಿನ್ ಆಗಿ ನಟಿಸಿದ್ದರು. 1976ರಲ್ಲಿ ಕೆ.ಬಾಲಚಂದರ್ ಅವರ ಮೂಂನ್ರು ಮುಡಿಚ್ಚು ಚಿತ್ರದಲ್ಲಿ ಮೊದಲ ಬಾರಿಗೆ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಚಿತ್ರರಂಗದಲ್ಲಿ ಹೊಸ ಶಕೆೆಯನ್ನು ಆರಂಭಿಸಿತು, ನಿರ್ದೇಶಕ, ಸಹ ನಟರಾದ ಕಮಲ್‌ಹಾಸನ್ ಹಾಗೂ ರಜನಿಕಾಂತ್ ಈ ಚಿತ್ರದಲ್ಲಿದ್ದರು. ಈ ಚಿತ್ರದ ಕಥಾವಸ್ತುವೇ ಭಿನ್ನವಾದುದು. ತನ್ನ ಪ್ರಿಯತಮನನ್ನು ಕೊಂದದ್ದಕ್ಕೆ ಪ್ರತೀಕಾರವಾಗಿ, ಕೊಲೆಗಾರನ ತಂದೆಯನ್ನು ವಿವಾಹವಾಗಿ ಸೇಡು ತೀರಿಸಿಕೊಳ್ಳುವ ವಿಭಿನ್ನ ಕತೆ. ಚಿತ್ರದಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್‌ಗಿಂತ ಶ್ರೀದೇವಿಯೇ ಮಿಂಚಿದರು.

  ಶ್ರೀದೇವಿ, ಕಮಲ್‌ಹಾಸನ್ ಮತ್ತು ರಜನಿಕಾಂತ್ ಸಹಭಾಗಿತ್ವ ತಮಿಳು ಚಿತ್ರರಂಗಕ್ಕೆ ಹಲವು ಜನಪ್ರಿಯ ಚಿತ್ರಗಳನ್ನು ನೀಡಿತು. ಇವುಗಳಲ್ಲಿ ಗಾಯತ್ರಿ (1977), ಕವಿಕ್ಕುಯಿಲ್ (1977) ಮತ್ತು ಪ್ರಿಯಾ (1978) ಪ್ರಮುಖ ಚಿತ್ರಗಳು. ಗಾಯತ್ರಿ ಚಿತ್ರದಲ್ಲಿ ರಜನಿಕಾಂತ್, ಸದ್ಗುಣಿ ಪತ್ನಿಯ ಕ್ರೂರ ಪತಿಯಾಗಿ ಅಭಿನಯಿಸಿದ್ದರು. 16 ವಯದಿನಿಲೆ ಮಗದೊಂದು ಪ್ರಮುಖ ಚಿತ್ರ ಹೀಗೆ ಕಮಲ್ ಮತ್ತು ರಜನಿ ಒಂದು ಕಾಲದಲ್ಲಿ, ಶ್ರೀದೇವಿ ಎನ್ನುವ ಗಿಡಕ್ಕೆ ಸುತ್ತಿಕೊಂಡ ಬಳ್ಳಿಗಳಾಗಿದ್ದರು. ಸಿಗಪ್ಪು ರೋಜಾಕಳ್ ಚಿತ್ರದಲ್ಲಿ ಸರಣಿ ಹಂತಕನ ಪಾತ್ರದಲ್ಲಿ ಕಮಲ್ ಅಭಿನಯಿಸಿದ್ದರೆ, ಆತನ ಪತ್ನಿಯಾಗಿ ಶ್ರೀದೇವಿ ನಟಿಸಿದ್ದರು. ಪುರುಷ ಪ್ರಧಾನ ಪಾತ್ರಗಳೇ ಮಿಂಚುತ್ತಿದ್ದ ಕಾಲದಲ್ಲಿ, ಶ್ರೀದೇವಿಯ ಮೂಲಕ ಮಹಿಳಾ ಪ್ರಧಾನ ಪಾತ್ರಗಳು ಮುಂಚೂಣಿಗೆ ಬಂದವು. ಮೂಂನ್ರಾಂ ಪಿರೈ ಚಿತ್ರದ ಮುಗ್ಧ ಹೆಣ್ಣಿನ ಶ್ರೀದೇವಿಯ ಅಭಿನಯ ಚಿತ್ರೋದ್ಯಮದಲ್ಲಿ ಒಂದು ದಾಖಲೆಯೇ ಆಯಿತು.

 ಶ್ರೀದೇವಿಯ ಪಾತ್ರಗಳು ಗಂಡುಬೀರಿ ಎಂಬ ವ್ಯಂಗ್ಯಕ್ಕೂ ಒಳಗಾಯಿತು. ಸೂಪರ್ ಸ್ಟಾರ್‌ಗಳು ಮಾಡುವುದನ್ನೆಲ್ಲ ತಾನೂ ಮಾಡ ಬಲ್ಲೆ ಎಂಬ ಸವಾಲನ್ನು ಬಾಲಿವುಡ್‌ಗೆ ಹಾಕಿದವರು ಶ್ರೀದೇವಿ. ಆಕೆಯ ವರ್ಚಸ್ಸಿನಿಂದಲೇ ಚಿತ್ರಗಳು ಗೆಲ್ಲಲಾರಂಭಿಸಿದವು.

 ಹರ್ಮೇಶ್ ಮಲ್ಹೋತ್ರಾ ಅವರ ಬ್ಲಾಕ್‌ಬಸ್ಟರ್ ನಾಗಿನ್ (1986) ಚಿತ್ರದೊಂದಿಗೆ ಬಾಲಿವುಡ್‌ನ ನಂಬರ್ ವನ್ ತಾರೆ ಪಟ್ಟಕ್ಕೇರಿದರು. ಇಡೀ ಬಾಲಿವುಡ್‌ನ್ನು ಸುತ್ತಿಕೊಂಡ ನಾಗಿನಿಯಾದರು ಶ್ರೀದೇವಿ. ಶೇಖರ್ ಕಪೂರ್ ಅವರ ಮಿಸ್ಟರ್ ಇಂಡಿಯಾ ಚಿತ್ರ ದಾಖಲೆ ಬರೆಯಿತಾದರೂ, ಇಲ್ಲಿ ನಾಯಕಿಯಾಗಿ ನಟಿಸಿದ ಶ್ರೀದೇವಿ ಮಿಸ್ ಇಂಡಿಯಾ ಆಗಿ ಗುರುತಿಸಿಕೊಂಡರು. ನಾಯಕ ಅನಿಲ್ ಕಪೂರ್ ಬದಿಗೆ ಸರಿಯಬೇಕಾಯಿತು. ಈ ಕಾರಣದಿಂದಲೇ ಸೂಪರ್ ಸ್ಟಾರ್‌ಗಳು ಶ್ರೀದೇವಿಯ ಜೊತೆಗೆ ನಟಿಸುವುದಕ್ಕೆ ಅಂಜುವಂತಹ ಸನ್ನಿವೇಶ ನಿರ್ಮಾಣವಾಯಿತು.

1989ರಲ್ಲಿ ಬಂದ ‘ಚಾಂದ್‌ನಿ’ ಶ್ರೀದೇವಿಗೆ ಹೊಸ ವರ್ಚಸ್ಸು ಕೊಟ್ಟ ಚಿತ್ರ. 1989ರಲ್ಲಿ ಶ್ರೀದೇವಿಯ ತಾರಾಪಟ್ಟ ಅತ್ಯುನ್ನತ ಶಿಖರಕ್ಕೇರಿತ್ತು. ಚಾಂದ್‌ನಿ ಮತ್ತು ಗುರು ಚಿತ್ರದಲ್ಲಿ ಮಿಥುನ್ ಚಕ್ರವರ್ತಿ ಜತೆ ನಟಿಸಿದ್ದರು. (ಮಿಥುನ್ ಜತೆ ಶ್ರೀದೇವಿ ರಹಸ್ಯ ವಿವಾಹವಾಗಿದ್ದರು ಎಂಬ ಗುಲ್ಲೆದ್ದಿತ್ತು). ಜತೆಗೆ ಆಕೆಯ ಅತ್ಯುತ್ತಮ ಚಿತ್ರ ಎನಿಸಿದ ಛಾಲ್‌ಬಾಝ್ ಚಿತ್ರವೂ ಆ ವರ್ಷ ತೆರೆಕಂಡಿತು. ಹುಟ್ಟಿನಲ್ಲೇ ಬೇರ್ಪಟ್ಟಿದ್ದ ಅವಳಿಗಳು, ಪ್ರೌಢಾವಸ್ಥೆಯಲ್ಲಿ ವಿನಿಮಯವಾಗುವ ಪಂಕಜ್ ಪರಾಶರ್ ಅವರ ಈ ವಿಭಿನ್ನ ಚಿತ್ರದಲ್ಲಿ ಸನ್ನಿ ಡಿಯೋಲ್ ಹಾಗೂ ರಜನಿಕಾಂತ್ ಇದ್ದರೂ, ಶ್ರೀದೇವಿ ಪ್ರಮುಖ ಆಕರ್ಷಣೆಯಾಗಿದ್ದರು. ಈ ಕತೆ ಬೇರೆ ಬೇರೆ ಭಾಷೆಗಳಲ್ಲಿ ಮರು ರೂಪ ಪಡೆದವು. ಕನ್ನಡದಲ್ಲಿ ಮಾಲಾಶ್ರೀ ನಾಯಕಿಯಾಗಿ ಅಭಿನಯಿಸಿದ ‘ರಾಣಿ ಮಹಾರಾಣಿ’ ಚಿತ್ರವೂ ಇದೇ ಕತೆಯಿಂದ ಸ್ಫೂರ್ತಿ ಪಡೆದಿದೆ.

ಭಾವಿ ಪತಿ ಬೋನಿ ಕಪೂರ್ ನಿರ್ಮಿಸಿದ ರೂಪ್ ಕಿ ರಾಣಿ ಚೋರೋಂ ಕಾ ರಾಜಾ (1993) ಪ್ಲಾಪ್ ಚಿತ್ರ. ಶ್ರೀದೇವಿಯವರ ತಾರಾಪಟ್ಟ ಕೂಡಾ ನಿಷ್ಪ್ರಯೋಜಕವಾಯಿತು. ನೃತ್ಯಶೈಲಿಯಲ್ಲಿ ಶ್ರೀದೇವಿಗೆ ಸರಿಸಾಟಿ ಎನಿಸಿದ ಮಾಧುರಿ ದೀಕ್ಷಿತ್ ತೆರೆಯನ್ನು ಆಕ್ರಮಿಸಿಕೊಂಡರು. ಲಾಡ್ಲಾ (1994) ಮತ್ತು ಜುಡಾಯಿ (1997) ಹಿಟ್ ಚಿತ್ರಗಳಾದರೂ, 1996ರಲ್ಲಿ ಬೋನಿ ಕಪೂರ್ ಅವರನ್ನು ವಿವಾಹವಾದ ಬಳಿಕ, ಮೂರು ದಶಕಗಳ ಕಾಲ ಭಾರತ ಚಿತ್ರರಂಗವನ್ನು ಆಳಿದ ಶ್ರೀದೇವಿ ತೆರೆಯ ಹಿಂದೆ ಸರಿಯುವ ನಿರ್ಧಾರ ಕೈಗೊಂಡರು. (ಮೇರಿ ಬೀವಿ ಕಾ ಜವಾಬ್ ನಹೀ ಚಿತ್ರ 10 ವರ್ಷ ವಿಳಂಬದ ಬಳಿಕ 2004ರಲ್ಲಿ ಬಿಡುಗಡೆಯಾಯಿತು).

2012ರಲ್ಲಿ ಗೌರಿ ಶಿಂಧೆಯವರ ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ಮೂಲಕ ಮತ್ತೆ ಶ್ರೀದೇವಿ ಅದ್ದೂರಿ ಪುನರಾಗಮನವಾಯಿತು. ಶ್ರೀದೇವಿ ಸಂದರ್ಶನ ನೀಡುವುದು ವಿರಳ. ಮಿಥುನ್ ಚಕ್ರವರ್ತಿ ಜತೆಗಿನ ಅಫೆೇರ್ ಬಗ್ಗೆ ಮತ್ತು ಬೋನಿ ಕಪೂರ್ ಜತೆಗಿನ ಸಂಬಂಧದ ಬಗ್ಗೆ ದೀರ್ಘಕಾಲ ಹರಿದಾಡುತ್ತಿದ್ದ ಗಾಸಿಪ್‌ಗಳಿಂದಲೂ ದೂರ ಇದ್ದವರು. ಬೋನಿ ತಮ್ಮ ಪತ್ನಿಯನ್ನು ಬಿಟ್ಟು ಶ್ರೀದೇವಿಯವರನ್ನು ವಿವಾಹವಾಗಿದ್ದರು. ಶ್ರೀದೇವಿ ಆಶು ನಟಿ ಹಾಗೂ ವಿಧೇಯ ನಟಿ ಎಂಬ ಹೆಸರು ಪಡೆದಿದ್ದರು. ಅಪರೂಪಕ್ಕೆ ಎಂಬಂತೆ ಫಿಲಂಫೇರ್‌ಗೆ ನೀಡಿದ್ದ ಸಂದರ್ಶನದಲ್ಲಿ ಚಿತ್ರರಂಗದ ವೃತ್ತಿಗಾಗಿ ಶಿಕ್ಷಣ ಕಳೆದುಕೊಂಡ ಬಗ್ಗೆ ಬೇಸರಿಸಿದ್ದರು. ‘‘ನಾನು ಒಳ್ಳೆಯ ವಿದ್ಯಾರ್ಥಿನಿಯಾಗಿದ್ದೆ. ನನ್ನ ಪೋಷಕರು ನನ್ನನ್ನು ಶಾಲೆ ಮತ್ತು ಚಿತ್ರ ಎರಡರ ನಡುವೆಯೂ ಏಕಕಾಲಕ್ಕೆ ತೊಡಗಿಸಿಕೊಳ್ಳುವಂತೆ ಬೆಳೆಸಿದರು. ಹೊರಾಂಗಣ ಚಿತ್ರೀಕರಣಕ್ಕೆ ಹೋದಾಗ, ಶಿಕ್ಷಕರೂ ಜತೆಗೆ ಬರುತ್ತಿದ್ದರು. ಆದರೆ ಒಂದು ಹಂತದ ಬಳಿಕ ಅದು ಕಾರ್ಯಸಾಧು ಎನಿಸಲಿಲ್ಲ. ಅಧ್ಯಯನ ಹಾಗೂ ಚಿತ್ರಗಳ ನಡುವೆ ನಾನು ಆಯ್ಕೆ ಮಾಡಿಕೊಳ್ಳಲೇಬೇಕಾಯಿತು. ನಾನು ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡೆ’’ ಎಂದು ವಿವರಿಸುತ್ತಾರೆ.

ಶ್ರೀದೇವಿ 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ಗಳಿಸಿದರು. ತಮ್ಮ ವೃತ್ತಿ ಬದುಕಿನಲ್ಲಿ ಅಸಂಖ್ಯಾತ ಪ್ರಶಸ್ತಿ ಪುರಸ್ಕಾರಗಳನ್ನು ಗೆದ್ದ ಅವರ ನೃತ್ಯಗಳಲ್ಲಿ ಬಹುತೇಕ ನೃತ್ಯಗಳನ್ನು ಸರೋಜ್ ಖಾನ್ ಕೊರಿಯೊಗ್ರಫಿ ಮಾಡಿದ್ದಾರೆ. ಇದು 1980ರ ದಶಕದ, ನಿಜ ಅರ್ಥದಲ್ಲಿ ಶ್ರೀದೇವಿ ನಂಬರ್ ವನ್ ತಾರೆಯಾಗಿದ್ದ ಅವಧಿಯ ಸಾಂಸ್ಕೃತಿಕ ಹೆಗ್ಗುರುತುಗಳು ಎನಿಸಿಕೊಂಡಿವೆ.

ಮೀರಾ ನಾಯರ್ ಅವರ ಸಲಾಂ ಬಾಂಬೆ (1988) ಚಿತ್ರದಲ್ಲಿನ ವೇಶ್ಯಾಗೃಹದಲ್ಲಿನ ಪುಟ್ಟ ಬಾಲಕಿಯಾಗಿ ಮಾಡಿದ ನೃತ್ಯದಿಂದ ಹಿಡಿದು, ಮಿಸ್ಟರ್ ಇಂಡಿಯಾದ ಹವಾ ಹವಾಯಿ ವರೆಗೆ ಹಲವಾರು ನೃತ್ಯಗಳು ಚಿತ್ರರಸಿಕರ ಮನಸ್ಸಿನಲ್ಲಿ ಸದಾ ಉಳಿಯುವಂಥವು. ಸಚಿನ್ ಕುಂದಲ್ಕರ್ ಅವರ ಅಯ್ಯಿ (2012), ರಾಣಿ ಮುಖರ್ಜಿಯವರ ಕ್ರೇಝಿ ಕ್ಯಾರೆಕ್ಟರ್ ಚಿತ್ರದಲ್ಲಿನ ಆಕರ್ಷಕ ಕಾಥೆ ನಹಿ ಕಟ್ ತೆ ನೃತ್ಯಗಳು ಮಿಸ್ಟರ್ ಇಂಡಿಯಾ ಚಿತ್ರನೃತ್ಯಗಳು. ತುಮ್ಹಾರಿ ಸುಲು (2017) ನೃತ್ಯ ಶ್ರೀದೇವಿಯವರ ಹವಾ ಹವಾಯಿ ನೃತ್ಯದ ಮರುಸೃಷ್ಟಿಯಾಗಿದ್ದು, ಇವೆಲ್ಲವೂ ಶ್ರೀದೇವಿಯವರ ನಾಟ್ಯಕೌಶಲಕ್ಕೆ ಸಂದ ಗೌರವಗಳು.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News