ಹೀಗೊಂದು ಕಲಿಕೆ; ಕಲಿತವರು ಯಾರು?

Update: 2018-02-27 18:39 GMT

ಕೃಷ್ಣಾಪುರದ ಮನೆ ಮಾರಾಟವಾದ ಬಳಿಕ ಅಷ್ಟೊಂದು ಮೊತ್ತದ ನಿರ್ವಹಣೆ ತಿಳಿಯದ ನಾವು ಸಾಲ ಇಟ್ಟುಕೊಂಡು ನಿದ್ದೆಗೆಡುವ ಬದಲು ಜೀವವಿಮಾ ನಿಗಮದ ಸಾಲವನ್ನು ತೀರಿಸುವುದೇ ಸೂಕ್ತವೆಂದು ನಿರ್ಧರಿಸಿ ಸಾಲ ತೀರಿಸಿದೆವು. ಆಗ ಸಾಲ ನೀಡಿದ ಅಧಿಕಾರಿಯವರೇ ಇದ್ದುದರಿಂದ ಯಾಕೆ ಇಷ್ಟು ಬೇಗ ಸಾಲ ತೀರಿಸುತ್ತೀರಿ? ನಿಧಾನವಾಗಿ ಕೊಡಬಹುದಲ್ಲವೇ ಎಂದರು. ಹಣದ ಜೊತೆಗಿನ ವ್ಯವಹಾರ ಎಂದರೆ ಹಣದಿಂದ ಹಣವನ್ನು ಹೆಚ್ಚಿಸುವುದು ತಾನೇ? ಈ ರೀತಿಯ ವ್ಯವಹಾರ ಕುಶಲತೆಯನ್ನು ವೈಯಕ್ತಿಕವಾಗಿ ಇಷ್ಟಪಡದಿರುವುದರ ಜೊತೆಗೆ ಸಾಲ ಹಾಗೆ ಉಳಿಸಿಕೊಂಡಾಗ ನಮ್ಮಲ್ಲಿದ್ದ ಹಣ ಇನ್ಯಾರದ್ದೋ ಹಣವೇ ಆಗಿರುತ್ತದೆಯಲ್ಲಾ ಎನ್ನುವುದರೊಂದಿಗೆ ಸಾಲ ಎಂದರೆ ಸಾಲವೇ ಆದ್ದರಿಂದ ಅದನ್ನು ಆದಷ್ಟು ಬೇಗ ತೀರಿಸುವುದರಲ್ಲೇ ಬದುಕಿನ ನೆಮ್ಮದಿ ಎಂದು ತಿಳಿದೆವು. ಹೊಸ ಮನೆಯಲ್ಲಿ ಸಮೀಪದ ಬಂಧುಗಳು ಉಡುಗೊರೆಯಾಗಿ ನೀಡಿದ ಸೋಫಾ ಸೆಟ್, ಫ್ಯಾನ್, ಗೀಸರ್ ಬಿಟ್ಟರೆ ಬೇರೆ ಯಾವ ಆಧುನಿಕ ವಸ್ತುಗಳು ಇಲ್ಲದೆ ಮನೆ ಖಾಲಿಯಾಗಿತ್ತು. ನಮಗೆ ಅಂತಹ ವಸ್ತುಗಳಿಗಿಂತ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಜವಾಬ್ದಾರಿ ಮುಖ್ಯವಾಗಿತ್ತು. ನಮ್ಮ ಮಕ್ಕಳೂ ನಮ್ಮಂತೆಯೇ ಸರಳವಾಗಿ ಬದುಕುವ ಗುಣ ಬೆಳೆಸಿಕೊಂಡಿದ್ದರು. ಆದುದರಿಂದ ಆಧುನಿಕ ಜೀವನ ಶೈಲಿಯ ಆಕರ್ಷಣೆಗೆ ಅವಕಾಶವಿರಲಿಲ್ಲ.

ಈ ಹೊಸ ಬಡಾವಣೆಯಲ್ಲಿ ಮಕ್ಕಳಲ್ಲಿ ಅವರೇ ದೊಡ್ಡವರಾಗಿದ್ದು ಅವರಿಗೆ ಸಮ ವಯಸ್ಸಿನ ಸ್ನೇಹಿತರು ದೊರೆಯುವುದಕ್ಕೆ ಅವಕಾಶವಿರಲಿಲ್ಲ. ಹೀಗೆ ಹೊಸ ಮನೆ ಗೊಲ್ಲಚ್ಚಿಲ್‌ನ 'ದೃಶ್ಯ'ದ ವಾಸ್ತವ್ಯವು ನೆಮ್ಮದಿಯಿಂದ ಕೂಡಿತ್ತು ಎಂಬಷ್ಟರಲ್ಲೇ ಒಂದು ಆದಾಯಕರ ಇಲಾಖೆಯಿಂದ ನಮ್ಮವರಿಗೆ ಕರೆಯೋ ಆದೇಶವೋ ನೆನಪಿಲ್ಲ. ಯಾಕೆಂದರೆ ಅದಕ್ಕೆ ಬರಹದ ಸಾಕ್ಷಿಯಿಲ್ಲದೆ ವೌಖಿಕವಾಗಿತ್ತು. ನಾವಿಬ್ಬರೂ ಜೊತೆಯಾಗಿ ಅಂದೇ ಸಂಜೆ ಕಾಲೇಜು ಬಿಟ್ಟ ಬಳಿಕ (ಆ ಸಮಯವನ್ನು ಆ ಅಧಿಕಾರಿಯೇ ತಿಳಿಸಿದ್ದು) ನಮ್ಮನ್ನು ಕರೆದ ಅಧಿಕಾರಿಯನ್ನು ಭೇಟಿಯಾದೆವು. ಕರೆದ ಅಧಿಕಾರಿಯ ಪೂರ್ಣ ಹೆಸರು ಮರೆತಿದ್ದೇನೆ. ಆದರೆ ಕೊನೆಯ ಉಪನಾಮ 'ಚಾಕೋ' ಎಂದು. ಆತ ನಮ್ಮನ್ನು ಬಹಳ ಗೌರವದಿಂದಲೇ ಕಂಡು ಎದುರಿನಲ್ಲಿದ್ದ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರು.

ನಗುನಗುತ್ತಲೇ ಮಾತನಾಡುವ ಆ ಅಧಿಕಾರಿಯ ಮಾತುಗಳು ಮಾತ್ರ ನಮ್ಮನ್ನು ಭಯಪಡಿಸುತ್ತಿತ್ತು. ನಾವು ಇತ್ತೀಚೆಗೆ ಮನೆ ಕಟ್ಟಿಸಿದ ವಿಷಯ ಕೇಳಿ ತಿಳಿದುಕೊಂಡರು. ''ಬಹಳ ದೊಡ್ಡದಾದ ಮಹಡಿ ಮನೆ. ತುಂಬಾ ಖರ್ಚಾಗಿರಬೇಕಲ್ಲವೇ? ಎಷ್ಟು ಖರ್ಚಾಯ್ತು? ಎಲ್ಲಿಂದ ಹಣ ಹೊಂದಿಸಿಕೊಂಡಿರಿ?'' ಎಂಬ ಬಗ್ಗೆ ಪ್ರಶ್ನೆಗಳಿಗೆ ನಾನೇ ಧೈರ್ಯದಿಂದ ಉತ್ತರಿಸಿದೆ. ಕೃಷ್ಣಾಪುರದ ಮನೆ ಹಿತ್ತಲು ಮಾರಾಟ ಮಾಡಿ ಸಾಲ ತೀರಿಸಿದ್ದನ್ನೂ ತಿಳಿಸಿದೆವು. ಹಣದ ಕೊರತೆ ಇದ್ದುದರಿಂದಲೇ ಮನೆ ಪೂರ್ತಿಯಾಗಲು ಎರಡು ವರ್ಷಗಳ ಅವಧಿ ಬೇಕಾಯ್ತು. ಮೊದಲ ವರ್ಷ ಕೆಳಗಿನ ಭಾಗವನ್ನು ಬಾಡಿಗೆಗೆ ಕೊಟ್ಟದ್ದನ್ನೂ ಹೇಳಿದೆ. ಎಲ್ಲವೂ ಕಾನೂನು ರೀತಿಯಲ್ಲೇ ಇವೆ. ಮನೆಗೆ ಸಂಬಂಧಿಸಿದ ಎಲ್ಲಾ ಬಿಲ್‌ಗಳೂ ನಮ್ಮಲ್ಲಿವೆ. ತಂದು ತೋರಿಸುತ್ತೇವೆ ಎಂದೂ ತಿಳಿಸಿದೆ. ಇಷ್ಟೆಲ್ಲಾ ಮಾತುಕತೆ ಆದರೂ ನಮ್ಮನ್ನು ಹೋಗಗೊಡದೆ ಇದ್ದಾಗ ನಾನೇ ಯಾಕೆ ಕರೆಸಿಕೊಂಡದ್ದು ಎಂದು ನೇರವಾಗಿ ಕೇಳಿದೆ.

ಆಗ ''ಆದಾಯ ಇಲಾಖೆಯವರು ಯಾಕೆ ಕರೆಸಿಕೊಳ್ಳುತ್ತಾರೆ ಎಂದು ತಿಳಿದಿಲ್ಲವೇ?'' ಎಂದು ನಿಜಕ್ಕೂ ತಿಳಿದಿರದ ನಾವು ಯಾಕೆ ಎಂದು ಕೇಳಿದೆವು. ''ನಿಮ್ಮ ಬಗ್ಗೆ ತಳ್ಳಿ ಅರ್ಜಿ ಬಂದಿದೆ'' ಎಂದಾಗ ''ಏನೆಂದು ಬಂದಿದೆ? ನಾವು ಯಾರಿಗೂ ಮೋಸ ಮಾಡಿಲ್ಲ. ನಮ್ಮಲ್ಲಿ ಕಳ್ಳ ಹಣವೂ ಇಲ್ಲ. ಅಲ್ಲದೆ ನಾವು ಆದಾಯ ಕರ ಕಟ್ಟುತ್ತಿದ್ದೇವೆ'' ಎಂದಾಗ, ''ಸರಿ ಸರಿ. ನಾವು ಕರೆಸಿದ ಬಗ್ಗೆ ಯಾರಿಗೂ ಹೇಳಬೇಡಿ. ಇದು ನಿಮಗೆ ಅಪಮಾನ. ನಾವು ನೇರವಾಗಿಯೇ ನಿಮ್ಮ ಮನೆಗೆ ರೈಡ್ ಮಾಡಬಹುದಿತ್ತು. ಆದರೆ ನೀವು ಲೆಕ್ಷರರ್ಸ್‌ ಅಲ್ಲವೇ? ನಿಮಗೆ ಅಪಮಾನ ಮಾಡಬಾರದೆಂದು ಇಲ್ಲಿಗೆ ಕರೆಸಿಕೊಂಡಿದ್ದೇನೆ'' ಎಂದು ಹೇಳಿದಾಗ ನನ್ನ ರಕ್ತ ಬಿಸಿಯೇರುತ್ತಿತ್ತು. ''ಸರಿ, ನಾನು ಹೇಳಿದ ವಿಷಯ ಮರೆಯಬೇಡಿ. ಮತ್ತೆ ಬಂದು ಸರಿ ಮಾಡಿಕೊಳ್ಳಿ'' ಎಂದಾಗ ಏನೂ ಅರ್ಥವಾಗದೆ ಹೊರ ಬಂದ ನಾನು ನಮ್ಮವರಲ್ಲಿ ನಿಮಗೇನಾದರೂ ಅರ್ಥವಾಯಿತೇ? ಎಂದು ಕೇಳಿದೆ. ಅವರು ನನಗಿಂತಲೂ ಗಾಬರಿಯಾಗಿದ್ದರು. ನಾನು ಹೆದರಬೇಕಾದದ್ದೇನೂ ಇಲ್ಲ. ನಾವು ಕೈಕಡಕೊಂಡವರೆಲ್ಲ ಪ್ರಾಮಾಣಿಕರೇ. ಕಳ್ಳದಂಧೆಯವರಲ್ಲ. ಅಗತ್ಯ ಬಿದ್ದರೆ ಅವರನ್ನು ಒಯ್ದು ಸಾಕ್ಷಿ ಹೇಳಿಸಬಹುದು ಎಂದು ಯೋಚಿಸಿದ್ದು ಬಾಲಿಶವಾದದ್ದು ಎಂದು ಮತ್ತೆ ತಿಳಿಯಿತು.

 ಹಾಗೆ ಹೋಗಿ ಬಂದ ನಾವು ವಿಷಯ ಮರೆತಿಲ್ಲವಾದರೂ ನಾವಾಗಿಯೇ ಕಚೇರಿಗೆ ಹೋಗಲಿಲ್ಲ. ಹಾಗೆಯೇ ಈ ಬಗ್ಗೆ ಯಾರ ಬಳಿಯೂ ಚರ್ಚಿಸಲಿಲ್ಲ. ಇದು ಅಪಮಾನದ ವಿಷಯ ಎಂದಿದ್ದಾನಲ್ಲಾ ಯಾಕೆ ಎಂದು ತಿಳಿಯದಾಗಿತ್ತು. ಮತ್ತೆ ಎರಡನೆಯ ಬಾರಿ ಇಲಾಖೆಯ ಇನ್‌ಸ್ಪೆಕ್ಟರ್ ಮತ್ತೆ ನಮ್ಮವರ ಶಾಲೆಗೆ ಹೋಗಿ ವೌಖಿಕವಾಗಿಯೇ ಕಚೇರಿಗೆ ಬರಬೇಕೆಂದು ಹೇಳಿ ಹೋದ. ನನ್ನವರು ಸಂಜೆ ನನ್ನ ಕಾಲೇಜಿಗೆ ಬಂದು ತಿಳಿಸಿದಾಗ ಪುನಃ ಇಬ್ಬರೂ ಜೊತೆಯಾಗಿ ಕಚೇರಿಗೆ ಹೋದೆವು. ಈ ಬಾರಿಯೂ ಅದೇ ''ಪಗೆಲೆ ತೆಲಿಕೆ'' ನಗುತ್ತಾ ಕುಳಿತುಕೊಳ್ಳಲು ಹೇಳಿದಂತೆಯೇ ಆ ಕಡೆಯಿಂದ ಚಹಾ ಬಂತು. ಈ ಬಾರಿ ನಾನು ಮೊದಲೇ ಚಹಾ ಕುಡಿದು ''ನಿಮಗೆ ನಮ್ಮಿಂದ ಏನು ಬೇಕಾಗಿದೆ ಎನ್ನುವುದನ್ನು ನೇರವಾಗಿ ತಿಳಿಸಿ. ಇಲ್ಲವೇ ಬರಹದ ಮೂಲಕವಾದರೂ ತಿಳಿಸಿ. ಯಾರಲ್ಲೂ ಈ ಬಗ್ಗೆ ವಿಚಾರಿಸಬೇಡಿ ಅನ್ನುತ್ತೀರಿ. ಅಂದರೆ ಇದು ಗುಟ್ಟಿನ ವಿಷಯವೇ. ನಮ್ಮಲ್ಲಿ ಏನೂ ಗುಟ್ಟಿನ ವಿಷಯಗಳಿಲ್ಲ. ನಿಮ್ಮ ಇಲಾಖೆಯಲ್ಲಿರುವ ಗುಟ್ಟಿನ ವಿಷಯವಾದರೂ ಏನು?'' ಎಂದು ಖಡಾಖಂಡಿತವಾಗಿ ಕೇಳಿದೆ. ''ಗುಟ್ಟು ಏನೂ ಇಲ್ಲ. ನಿಮ್ಮ ಬಗ್ಗೆ ತಕರಾರು ಬಂದಿದೆಯಲ್ಲಾ. ಅದನ್ನು ಪರೀಕ್ಷಿಸಬೇಕಲ್ಲಾ? ಅದಕ್ಕೆ ಹೇಳುತ್ತಿದ್ದೇವೆ. ನೀವೇ ಅದನ್ನು ಸರಿಪಡಿಸಿ. ನಾವು ಬಂದು ಪರೀಕ್ಷಿಸುವುದು ನಿಮ್ಮ ನೆರೆಯವರಿಗೆ ತಿಳಿದರೆ ಅವಮಾನ ನಿಮಗೆ'' ಎಂದು ಮತ್ತೆ ಮತ್ತೆ ಅದನ್ನೇ ಹೇಳಿದಾಗ ''ನಮ್ಮ ಮನೆಗೆ ನೀವು ಬಂದಾಗ ಯಾರೂ ತಪ್ಪು ತಿಳಿಯುವುದಕ್ಕೆ ಅವಕಾಶವಿಲ್ಲ.

ನಮ್ಮ ಮನೆಗೆ ಬಂದು ಹೋಗುವವರನ್ನು ನಮ್ಮಲ್ಲಿಗೆ ಯಾರಾದರೂ ಯಾಕೆ ಬರುತ್ತಾರೆ ಎಂಬ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿದೆ. ಪೊಲೀಸ್ ಇಲಾಖೆಯವರೇ ಬಂದರೂ ಅವರು ನಮ್ಮ ಸ್ನೇಹಿತರಾಗಿಯೇ ಬಂದಿರುತ್ತಾರೆ ಎಂಬ ವಿಶ್ವಾಸ ಹಾಗೂ ಗೌರವ ಎರಡೂ ನಮ್ಮ ನೆರೆಯವರಲ್ಲಿ ಇದೆ. ಇನ್ನು ನೀವು ತಪಾಸಣೆಗಾಗಿ ಬಂದರೂ ನಾವು ಎಂತಹವರು ಎನ್ನುವುದು ಎಲ್ಲರಿಗೂ ತಿಳಿದಿದೆ. ನೀವು ಖಂಡಿತವಾಗಿಯೂ ಬನ್ನಿ. ಇನ್ನು ನಮ್ಮ ಮನೆಯ ಕಟ್ಟಡ ದೊಡ್ಡದಾಗಿ ಕಾಣಬಹುದು. ಅದರೊಳಗೆ ಯಾವುದೇ ಆಧುನಿಕವಾದ ವಸ್ತುಗಳು ಇಲ್ಲ. ಉದಾಹರಣೆಗೆ ವಾಷಿಂಗ್ ಮೆಶಿನ್, ಫ್ರಿಡ್ಜ್, ಡೈನಿಂಗ್ ಟೇಬಲ್ ಇತ್ಯಾದಿ, ಅಲ್ಲದೆ ನಮ್ಮಲ್ಲಿ ಸ್ಕೂಟರ್, ಕಾರುಗಳೂ ಇಲ್ಲ'' ಎಂದಾಗ ''ಮತ್ಯಾಕೆ ನಿಮ್ಮ ಬಗ್ಗೆ ಹೀಗೆ ಪತ್ರ ಬರೆದಿದ್ದಾರೆ. ನಿಮಗೆ ಆಗದವರು ಯಾರಾದರೂ ಇದ್ದಾರ'' ಎಂದು ಕೇಳಿದಾಗ, ನಮಗೆ ಆಗದವರು ಎಂಬ ವಿಷಯವೇ ಆಶ್ಚರ್ಯವಾದುದು. ಕುಟುಂಬದಲ್ಲೂ ಇಲ್ಲ. ಇನ್ನು ಹೊರಗಿನವರಿಗೆ ನಮ್ಮ ಬಗ್ಗೆ ಯಾಕೆ ದ್ವೇಷ? ಇದುವರೆಗೆ ನಮಗೆ ತೊಂದರೆ ಕೊಟ್ಟವರೂ ಇಲ್ಲ. ಆದ್ದರಿಂದ ನೀವು ನಿಮ್ಮ ಕೆಲಸ ಮಾಡಿ. ನೀವೇ ಸ್ವತಃ ಬಂದು ಪರೀಕ್ಷಿಸಿ ತೀರ್ಮಾನಿಸಿ. ಲೆಕ್ಕ ಪತ್ರಗಳನ್ನೆಲ್ಲಾ ತಂದಿದ್ದೇವೆ ನೋಡಿ'' ಎಂದಾಗ ''ಅಲ್ಲಾ. ನೀವು ಹಾಗೆ ಮಾಡಲಾರಿರಿ ಎಂದು ನಾನು ತಿಳಿಯಬಹುದು. ಆದರೆ ಆ ಪತ್ರಕ್ಕೆ ನಾನು ಉತ್ತರ ರೂಪದಲ್ಲಿ ಷರಾ ಬರೆಯಬೇಕಲ್ಲಾ. ಅದಕ್ಕೆ ಹೇಳುತ್ತಿದ್ದೇವೆ. ನೀವೇ ಇದನ್ನು ಸರಿಪಡಿಸಿ ಎಂದು''. ಮತ್ತೆ ಮತ್ತೆ ಹೇಳಿದ್ದನ್ನೇ ಹೇಳುವ ಕೆಲಸ ಅವನದ್ದೂ ಹಾಗೂ ನಮ್ಮದಾಯಿತು. ಏನೂ ಇತ್ಯರ್ಥವಾಗದೆ ಉಳಿದಾಗ ಅವರ ಮಡದಿ ಅದೇ ಕಚೇರಿಯಲ್ಲಿ ಇನ್ನೊಂದು ವಿಭಾಗದ ಅಧಿಕಾರಿಣಿಯಾದವರು ಅಲ್ಲಿಗೆ ಬಂದಾಗ ನಮಗೆ ಅವರನ್ನು ಪರಿಚಯಿಸಿದರು. ''ಮತ್ತೆ ನೋಡಿ. ಈ ತಕರಾರನ್ನು ಬೇಗ ಮುಗಿಸಬೇಕು. ಸರಿಯಾಗಿ ಯೋಚಿಸಿ'' ಎಂದು ಎದ್ದಾಗ ನಾವೂ ಎದ್ದು ಹೊರಟೆವು.

ನಾವಿಬ್ಬರೂ ಅನವಶ್ಯಕವಾದ ತಲೆನೋವಿನೊಂದಿಗೆ ಮನೆಗೆ ಬರುವಾಗ ಬಡಾವಣೆಯಲ್ಲಿ ನಮ್ಮದೇ ಮೊದಲ ಮಹಡಿ ಮನೆ ಎನ್ನುವುದು ಎದ್ದು ಕಂಡಿತು. ಡಾಕ್ಟರರ ಮಹಡಿ ಮನೆ, ಇನ್ನೆರಡು ಮಹಡಿ ಮನೆಗಳು ನಿರ್ಮಾಣ ಹಂತದಲ್ಲಿದ್ದುವು. ಆದ್ದರಿಂದ ನಾವು ಶ್ರೀಮಂತರೆಂದು ಕಾಣುವುದಕ್ಕೆ ಅವಕಾಶವಿತ್ತು. ಆದರೆ ನಾವು ಶ್ರೀಮಂತರಲ್ಲ ಎನ್ನುವುದು ನಮಗೆ ಗೊತ್ತಿರುವ ಸತ್ಯ. ಆದರೆ ನಮ್ಮ ಬಗ್ಗೆ ಹೀಗೆ ಭಾವಿಸಿ ತಳ್ಳಿ ಅರ್ಜಿ ಹಾಕಿದವರು ಯಾರೆಂಬುದು ಎಚ್ಚರದಲ್ಲೇ ಹೊಳೆಯದ್ದು ಇನ್ನು ಕನಸಿನಲ್ಲಿ ತಿಳಿಯುವುದಾದರೂ ಹೇಗೆ? ಎರಡನೇ ಬಾರಿಗೆ ಹೋಗಿ ಬಂದ ಮೇಲೆ ನಾನು ಈ ವಿಚಾರವನ್ನು ನನ್ನ ಕಾಲೇಜಿನ ಸ್ಟಾಫ್ ರೂಮಲ್ಲಿ ಸಹೋದ್ಯೋಗಿಗಳೊಂದಿಗೆ ತಿಳಿಸಿದೆ. ಅವರಿಗೂ ವಿಷಯ ತಿಳಿದು ಆಶ್ಚರ್ಯವಾಯಿತು. ಚರ್ಚಿಸಿದೆವು. ಎಲ್ಲರೂ ಒಂದೊಂದು ರೀತಿಯ ಸಲಹೆ ನೀಡಿದರು. ಅದರಲ್ಲಿ ಬಹುಮತದ ಸಲಹೆ ಎಂದರೆ ಅವನಿಗೊಂದು 'ಕವರ್' ನೀಡುವುದು.

ಅಂದರೆ ಲಂಚ ನೀಡುವುದು. ಲಂಚಕೋರ ಅನ್ನಿಸಿಕೊಳ್ಳುವುದು ಲಂಚ ನೀಡುವುದರಿಂದಲೇ ಎಂದು ಪ್ರತಿಪಾದಿಸುವ ನಾನು ಲಂಚ ನೀಡಲು ಸಾಧ್ಯವಿಲ್ಲ ಎಂದು ನನ್ನ ಸಹೋದ್ಯೋಗಿಗಳಿಗೆ ಗೊತ್ತಿದ್ದರೂ ಬೇರೆ ದಾರಿಯಿಲ್ಲ ಮೇಡಂ. ಸುಮ್ಮನೆ ರಗಳೆ ಬೇಡ. ನಿಮ್ಮಿಂದಾಗಿ ಉಳಿದವರಿಗೂ ತೊಂದರೆಯಾದೀತು ಎಂದಾಗ ಮಾತು ಬರದವಳಂತೆ ಸುಮ್ಮನಾದೆ ಹಾಗೂ ಯೋಚಿಸಿದೆ. ಹೌದು ನನ್ನಿಂದಾಗಿ ನನಗೆ ಉಪಕಾರ ಮಾಡಿದವರಿಗೆ ತೊಂದರೆಯಾಗಬಾರದಲ್ಲವೇ? ಆದ್ದರಿಂದ ಈಗ ಈ ವಿಚಾರವನ್ನು ನಮ್ಮ ಕಂಟ್ರಾಕ್ಟರ್‌ರಲ್ಲಿ ತಿಳಿಸಿದಾಗ ಅವರು ಕೂಡಾ 'ಕವರ್' ನೀಡಿ ಸುಮ್ಮನಿರಿ ಎಂದೇ ಹೇಳಿದರು. ನಾವು ಬಿಲ್‌ಗಳನ್ನು ತೋರಿಸುತ್ತೇವೆ. ''ಬೇಡ ಬೇಡ. ಆಗ ನನ್ನನ್ನೂ ಸೆಳೆಯುತ್ತಾರೆ. ನನಗೂ ತೊಂದರೆಯಾಗಬಹುದು'' ಎಂದು ಬಿಟ್ಟರು. ಇವರಲ್ಲಿ ಬೇರೆ ಬೇರೆ ಲೆಕ್ಕ ಇದ್ದಿರಬಹುದು. ನಮ್ಮಲ್ಲಿರುವುದು ಒಂದೇ ಲೆಕ್ಕ ಅಲ್ಲವೇ? ಹಾಗೆಯೇ ಮಾತನಾಡುತ್ತಾ ಕಂಟ್ರಾಕ್ಟರರು ನಿಮಗೆ ತುಂಬಾ ಜನರ ಪರಿಚಯವಿದೆಯಲ್ಲಾ?

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News