ಬಣ್ಣ ಬದುಕನ್ನು ಕಸಿಯದಿರಲಿ

Update: 2018-02-28 18:44 GMT

ಉತ್ತರ ಭಾರತದಲ್ಲಿ ಸಂಭ್ರಮಿಸುವ ಈ ಬಣ್ಣಗಳ ಹಬ್ಬ ಇತ್ತೀಚೆಗೆ ದಕ್ಷಿಣ ಭಾರತಕ್ಕೂ ಹಬ್ಬುತ್ತಿವೆ. ಹಾಡುತ್ತಾ ಕುಣಿಯುತ್ತಾ ಬಣ್ಣ ಹಚ್ಚಿ ಓಕುಳಿಯಿಂದ ಮಿಂದೇಳುವ ಈ ಹಬ್ಬದಲ್ಲಿ ಹಿಂದಿನ ಕಾಲದಲ್ಲಿ ನೈಸರ್ಗಿಕವಾದ ಬಣ್ಣವನ್ನು ಬಳಸುತ್ತಿದ್ದರು. ಬಹಳ ಹಿಂದೆ ಅರಸಿನ ಪುಡಿ ಮತ್ತು ಅಕ್ಕಿಹಿಟ್ಟು ಬೆರೆಸಿದ ಗುಲಾಲು ಬಳಸುತ್ತಿದ್ದರು. ನಂತರದ ದಿನಗಳಲ್ಲಿ ಒಣಗಿದ ಹೂವುಗಳು ಮತ್ತು ನೈಸರ್ಗಿಕವಾದ ಔಷಧಿಯುಕ್ತ ಎಲೆಗಳು ಮತ್ತು ಔಷಧಿ ಸಸ್ಯಗಳಿಂದ ತಯಾರಿಸಿದ ಬಣ್ಣವನ್ನು ಉಪಯೋಗಿಸುತ್ತಿದ್ದರು. ಇದರಿಂದ ದೇಹಕ್ಕೆ ಮತ್ತು ಚರ್ಮಕ್ಕೆ ಯಾವುದೇ ತೊಂದರೆ ಉಂಟಾಗುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಕೃತಕವಾದ ರಾಸಾಯನಿಕಯುಕ್ತ ಗಾಢವಾದ ಬಣ್ಣಗಳನ್ನು ಬಳಸುವುದರಿಂದಾಗಿ ಚರ್ಮದಲ್ಲಿ ಗುಳ್ಳೆಗಳು, ತುರಿಕೆಗಳು, ಕಣ್ಣಿನಲ್ಲಿ ಅಲರ್ಜಿ ಮತ್ತು ಕೂದಲಿನ ಬಣ್ಣ ಬದಲಾಗುವುದು ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಹೆಚ್ಚು ಹೆಚ್ಚು ಕಾಣಿಸುತ್ತಿವೆ. ಬಣ್ಣವಿಲ್ಲದೆ ಬದುಕಿಲ್ಲ. ಬದುಕೇ ಬಣ್ಣಗಳಂತೆ ರಂಜನೀಯವಾಗಿರಬೇಕು ಎಂದು ಬಯಸುವುದು ಮನುಷ್ಯನ ಸಹಜ ಧರ್ಮ. ಆದರೆ ಮಿತಿಮೀರಿ ಅತಿಯಾಗಿ ಕೃತಕ ಬಣ್ಣ ಬಳಸಿದಲ್ಲಿ ಬಣ್ಣ ಬದುಕನ್ನೇ ಕಸಿದೀತು ಎಂಬ ಕಟುಸತ್ಯವನ್ನು ಅರಿತು ಯುವ ಜನರು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಿದಲ್ಲಿ ಮಾತ್ರ ಬಣ್ಣಗಳ ಹಬ್ಬದ ಆಚರಣೆ ಹೆಚ್ಚು ಅರ್ಥಪೂರ್ಣವಾದೀತು.

ಮುಂಜಾಗರೂಕತೆಯೇನು?

* ನಮ್ಮ ಚರ್ಮ ನಮ್ಮ ದೇಹದ ಅತೀ ದೊಡ್ಡ ಅಂಗವಾಗಿದ್ದು ದೇಹವನ್ನು ಬಾಹ್ಯ ವಸ್ತುಗಳಿಂದ ರಕ್ಷಿಸುತ್ತದೆ. ಕೃತಕ ಬಣ್ಣಗಳಲ್ಲಿರುವ ರಾಸಾಯನಿಕಗಳಿಂದ ರಕ್ಷಿಸುವ ಹೊಣೆಗಾರಿಕೆ ಈ ಚರ್ಮಕ್ಕಿದೆ. ಹೋಳಿಯಾಟ ಆಡುವಾಗ ಸಂಪೂರ್ಣವಾಗಿ ಮೈ ಮುಚ್ಚುವ ಕಾಟನ್ ಬಟ್ಟೆ ಧರಿಸಬೇಕು. ಕಪ್ಪುಬಣ್ಣದಲ್ಲಿರುವ ಸೀಸದ ಅಂಶ (ಲೆಡ್ ಆಕ್ಸೈಡ್) ಕೆಂಪು ಬಣ್ಣದಲ್ಲಿರುವ ಪಾದರಸದ ಅಂಶ (ಮರ್ಕುರಿ ಸಲೈಡ್), ಬೆಳ್ಳಿಯ ಬಣ್ಣದಲ್ಲಿರುವ ಅಲ್ಯೂಮಿನಿಯಂ ಬ್ರೊಮೈಡ್, ಹಸಿರು ಬಣ್ಣದಲ್ಲಿರುವ ತಾಮ್ರದ ಅಂಶ (ಕಾಪರ್ ಸಲ್ಫೇಟ್) ಇವೆಲ್ಲವೂ ಬಹಳ ಸುಲಭವಾಗಿ ಚರ್ಮವನ್ನು ದಾಟಿ ದೇಹಕ್ಕೆ ಸೇರಿಕೊಳ್ಳಬಹುದು. ಸಂಪೂರ್ಣ ಮೈ ಮುಚ್ಚುವ ಬಟ್ಟೆ ಧರಿಸಿದಲ್ಲಿ ಈ ವಿಷಕಾರಕ ರಾಸಾಯನಿಕಗಳು ದೇಹದ ಒಳಗೆ ಪ್ರವೇಶಿಸಲು ಕಷ್ಟವಾಗಬಹುದು. ಅತಿಯಾದ ಗಾಢವಾದ ಬಣ್ಣಗಳಾದ ಹಸಿರು ನೇರಳೆ, ಹಳದಿ ಮತ್ತು ಆರೆಂಜ್ ಬಣ್ಣಗಳಲ್ಲಿ ಹೆಚ್ಚು ಹಾನಿಕಾರಕ ವಿಷಕಾರಕ ವಸ್ತುವಿರುವುದರಿಂದ ಈ ಬಣ್ಣಗಳನ್ನು ಕಡಿಮೆ ಬಳಸಬೇಕು.

 * ಮನೆಯಲ್ಲಿಯೇ ನೈಸರ್ಗಿಕವಾಗಿ ತಯಾರಾದ ಬಣ್ಣಗಳನ್ನು ಹೆಚ್ಚು ಬಳಸಿ, ಒಣ ಹೂವಿನ ಪುಡಿ, ಅರಿಶಿನ ಹುಡಿ, ಹರ್ಬಲ್ ಔಷಧಿ ಸಸ್ಯಗಳ ಪುಡಿಗಳನ್ನು ಹೆಚ್ಚು ಬಳಸಬೇಕು. ನಸುಗೆಂಪು ಅಥವಾ ನಸು ಗುಲಾಬಿ ಬಣ್ಣಗಳನ್ನು ಹೆಚ್ಚು ಬಳಸಿದಲ್ಲಿ ಉತ್ತಮ. ಯಾಕೆಂದರೆ ಈ ಬಣ್ಣಗಳನ್ನು ಸುಲಭವಾಗಿ ತೆಗೆಯಬಹುದು, ನೋಡಲು ಹಿತವಾಗಿರುತ್ತದೆ ಮತ್ತು ಕಡಿಮೆ ಹಾನಿಕಾರಕವಾಗಿರುತ್ತದೆ.

 * ಬಣ್ಣದೋಕುಳಿ ಆಟದ ಮೊದಲು ಚರ್ಮದ ತೇವಾಂಶ ಉಳಿಸಿಕೊಳ್ಳಲು ತೇವಾಂಶ ಹಿಡಿದಿಡುವ ಲೋಶನ್‌ಗಳನ್ನು ಹೆಚ್ಚು ಬಳಸಿ, ನಿಮ್ಮ ಹೊರಜಗತ್ತಿಗೆ ಹೆಚ್ಚು ಕಾಣಿಸುವ ಅಂಗಗಳಾದ ಮುಖ, ಕೈಕಾಲು ಮತ್ತು ತಲೆಯ ಬಾಗಕ್ಕೆ ಹೆಚ್ಚು ಈ ಲೋಶನ್ ಬಳಸಬೇಕು. ನೀರು ಹೀರಿಕೊಳ್ಳದ ಸನ್‌ಕ್ರೀಮ್ (ಸೂರ್ಯನ ಶಾಖವನ್ನು ತಡೆಯುವ) ಲೋಷನ್ ಬಳಸಿದಲ್ಲಿ ಚರ್ಮದಲ್ಲಿ ನೀರಿನಾಂಶ ಕಳೆದುಹೋಗದಂತೆ ತಡೆಯಬಹುದು. ಗಾಢ ರಾಸಾಯನಿಕಯುಕ್ತ ಬಣ್ಣ ತಗಲಿದ ಬಳಿಕ ತಲೆಗೂದಲು ಮತ್ತಷ್ಟು ಒಣಗುತ್ತದೆ ಮತ್ತು ಹೆಚ್ಚು ಘಾಸಿಗೊಳ್ಳುತ್ತದೆ. ಈ ಕಾರಣದಿಂದಲೇ ಬಣ್ಣದೋಕುಳಿ ಆಟದಲ್ಲಿ ಪಾಲ್ಗೊಳ್ಳುವವರು ತಲೆಗೂದಲಿಗೆ ತೆಂಗಿನೆಣ್ಣೆ ಬಳಸಬಹುದು. ಕೂದಲಿನ ಬಣ್ಣ ಮತ್ತು ಸಾಂದ್ರತೆ ಉಳಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೇರ್‌ಕ್ರೀಮ್‌ಗಳನ್ನು ಬಳಸಬಹುದು. ಸಾಧ್ಯವಾದಲ್ಲಿ ಹೋಳಿಯಲ್ಲಿ ಪಾಲ್ಗೊಳ್ಳುವವರು ಟೋಪಿ ಅಥವಾ ತಲೆಗೂದಲು ಮುಚ್ಚುವ ತಲೆಗವಚ ಧರಿಸಿದಲ್ಲಿ ತಲೆಗೂದಲಿಗೆ ಘಾಸಿಯಾಗುವುದನ್ನು ತಡೆಗಟ್ಟಬಹುದು.

 * ನಮ್ಮ ಕಣ್ಣುಗಳು ಬಣ್ಣದೊಳಗಿನ ರಾಸಾಯನಿಕಗಳಿಗೆ ಬಹಳ ಬೇಗನೆ ಸ್ಪಂದಿಸುವುದರಿಂದ ಸಾಧ್ಯವಾದಷ್ಟು ಹೋಲಿ ಬಣ್ಣದಾಟದಲ್ಲಿ ಪಾಲ್ಗೊಳ್ಳುವವರು ಕಪ್ಪು ತಂಪು ಕನ್ನಡಕಗಳನ್ನು ಬಳಸಬೇಕು. ಕಾಂಟಾಕ್ಟ್ ಲೆನ್ಸ್ ಇರುವವರು ಹೋಲಿ ಆಟದ ಮೊದಲು ಕಾಂಟಾಕ್ಟ್ ಲೆನ್ಸ್ ತೆಗೆಯಬೇಕು. ಒಂದು ವೇಳೆ ಬಣ್ಣ ಕಣ್ಣಿನೊಳಗೆ ಸೇರಿಕೊಂಡಲ್ಲಿ ತಕ್ಷಣವೇ ತಂಪಾದ ಸ್ವಚ್ಛ ನೀರಿನಲ್ಲಿ ತೊಳೆಯಬೇಕು.

* ಹೋಲಿಯಾಟದ ಬಳಿಕ ಬಣ್ಣ ತೆಗೆಯಲು ಜಾಸ್ತಿ ಗಾಢವಾದ ಸೋಪ್ ದ್ರಾವಣ ಮತ್ತು ಶಾಂಪೂ ಬಳಸಬೇಡಿ. ಸಾಕಷ್ಟು ನೀರು ಬಳಸಿ ಬಣ್ಣ ತೆಗೆಯಬೇಕು. ತಲೆಗೂದಲಿನ ಬಣ್ಣ ತೆಗೆಯಲು ಬೇಬಿ ಶಾಂಪೂ ಬಳಸಬೇಕು. ಅದೇ ರೀತಿ ಹೇರ್ ಕಂಡೀಷನರ್ ದ್ರಾವಣ ಬಳಸಿ, ಕೂದಲಿನ ಬಣ್ಣ ತೆಗೆಯಬೇಕು. ಚರ್ಮದ ಬಣ್ಣ ತೆಗೆಯಲು ಸೀಮೆಎಣ್ಣೆ, ಪೆಟ್ರೋಲ್, ಡೀಸೆಲ್ ಅಥವಾ ಸ್ಪಿರಿಟ್ ದ್ರಾವಣ ಬಳಸಲೇಬಾರದು ಇವು ಚರ್ಮವನ್ನು ಮತ್ತಷ್ಟು ಒಣಗಿಸಿ ನಿರ್ಜಲೀಕರಣವಾಗಿಸಿ, ಚರ್ಮಕ್ಕೆ ಘಾಸಿಮಾಡಬಹುದು.

* ದೇಹದ ಯಾವುದೇ ಭಾಗದಲ್ಲಿ ತುರಿಕೆ ಅಥವಾ ಗುಳ್ಳೆ ಕಂಡುಬಂದಲ್ಲಿ ತಕ್ಷಣವೇ ನೀರಿನಿಂದ ಶುಭ್ರವಾಗಿ ತೊಳೆಯಿರಿ, ನೀರಿನಿಂದ ತೊಳೆದ ಬಳಿಕ ಕಾಲಮೈನ್ ಲೋಷನ್ ಅಥವಾ ವಿಟಮಿನ್ ಇ ಕ್ರೀಮ್ ಬಳಸಬಹುದು. ಸೂರ್ಯನ ಪ್ರಖರ ಕಿರಣಗಳಿಗೆ ಒಂದೆರಡು ದಿನ ಮೈಯೊಡ್ಡಲೇಬಾರದು.

* ನೀವು ಅಸ್ತಮಾ ರೋಗಿಯಾಗಿದ್ದಲ್ಲಿ ಮತ್ತು ಡಸ್ಟ್ ಅಲರ್ಜಿ ಹೊಂದಿದಲ್ಲಿ ಯಾವುದೇ ಕಾರಣಕ್ಕೂ ಒಣ ಪೌಡರ್ ಬಣ್ಣಗಳಲ್ಲಿ ಹೋಲಿ ಆಟವಾಡಬೇಡಿ.

* ನೈಸರ್ಗಿಕ ಸಂಪನ್ಮೂಲಗಳಾದ ನೀರನ್ನು ಹಿತಮಿತವಾಗಿ ಬಳಸಿ, ಅನವಶ್ಯಕ ಪೋಲು ಮಾಡಬೇಡಿ. ಬಹಳ ಹತ್ತಿರದಿಂದ ನೀರಿನ ಬುಗ್ಗೆ ಅಥವಾ ಪಿಚಕಾರಿ ಬಳಸುವಾಗ ಜಾಗ್ರತೆಯಿರಲಿ.

* ಹೋಲಿಯಾಟ ಆಡುವಾಗ ಜೀವ ಜಗತ್ತಿನ ಎಲ್ಲಾ ಜೀವ ಸಂಕುಲಗಳಿಗೂ ಗೌರವ ನೀಡಿ. ನಮಗೆ ಬದುಕುವ ಹಕ್ಕಿರುವಷ್ಟೇ ಹಕ್ಕು ಆ ಪ್ರಾಣಿ ಸಂಕುಲಗಳಿಗೂ ಇದೆ. ಬೀದಿ ನಾಯಿಗಳಿಗೆ, ದನಕರುಗಳಿಗೆ, ಸಾಕು ಪ್ರಾಣಿಗಳಿಗೆ ಬಣ್ಣ ಹಚ್ಚಿ ವಿಕೃತ ಆನಂದ ಪಡೆಯುವುದು ಬಹಳ ಅಪಾಯಕಾರಿ ಮತ್ತು ಮನುಕುಲಕ್ಕೆ ನಾಚಿಗೆ ಗೇಡಿನ ಸಂಗತಿ.

ಹೋಲಿ ಆಟದ ನಡುವೆ ಕೈ ಬಣ್ಣದಿಂದ ಆವೃತ್ತವಾಗಿರುವಾಗ ಆಹಾರ ಸೇವನೆ ಮಾಡುವುದು ತಪ್ಪಿಸಿ. ಯಾಕೆಂದರೆ ನಿಮ್ಮ ಆಹಾರದ ಜೊತೆಗೆ ರಾಸಾಯನಿಕಯುಕ್ತ ಬಣ್ಣ ನಿಮ್ಮ ದೇಹಕ್ಕೆ ಸೇರಿ ಮತ್ತಷ್ಟು ಹಾನಿಗಳಿಗೆ ನಾಂದಿ ಹಾಡಬಹುದು.

* ಹೋಳಿಯಾಟದ ಮೊದಲು ಉಗುರುಗಳನ್ನು ರಕ್ಷಿಸಲು, ಉಗುರುಗಳಿಗೆ ಪಾರದರ್ಶಕವಾದ ವಾರ್ನಿಶ್ ಹಚ್ಚಿಕೊಳ್ಳಿ. ಅಥವಾ ಎರಡೆರಡು ಪದರಗಳಿರುವ ಉಗುರಿನ ಬಣ್ಣವನ್ನು ಹಚ್ಚಿದಲ್ಲಿ ಉಗುರಿಗಾಗುವ ಹಾನಿ ತಡೆಯಬಹುದು.

* ಹೋಳಿ ಹಬ್ಬದ ಅಂತಿಮ ಹಂತದಲ್ಲಿ ಕಾಮ ದಹನ ಮಾಡುವ ಸಂದರ್ಭದಲ್ಲಿ ಸಾಕಷ್ಟು ಬೆಂಕಿ ಅನಾಹುತಗಳಾದ ಪ್ರಮೇಯವಿದೆ. ಮಕ್ಕಳನ್ನು ಬೆಂಕಿಯಿಂದ ದೂರವಿಡಿ ಮತ್ತು ನೈಲಾನ್ ಬಟ್ಟೆ ಧರಿಸಿ ಬೆಂಕಿಯಾಟ ಆಡುವುದು ಸೂಕ್ತವಲ್ಲ.

Writer - ಡಾ. ಮುರಲೀ ಮೋಹನ್, ಚೂಂತಾರು

contributor

Editor - ಡಾ. ಮುರಲೀ ಮೋಹನ್, ಚೂಂತಾರು

contributor

Similar News