ಸಾಹಿತ್ಯ ಸಮ್ಮೇಳನದಲ್ಲಿ ವಿಪ್ರ ಸಮ್ಮಾನ ಬೇಕೇ?

Update: 2018-03-01 18:48 GMT

ಮಾನ್ಯರೇ,

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ವೈದಿಕ ಸಮ್ಮೇಳನಗಳಾಗಿ ಮಾರ್ಪಾಟಾಗಿ ಹಲವು ವರ್ಷಗಳೇ ಸಂದವು. ಅದರ ವಿರುದ್ಧದ ನಮ್ಮ (ಬೆರಳೆಣಿಕೆಯ ಮಂದಿಯ)ಧ್ವನಿ ಇದೀಗ ಅರಣ್ಯರೋದನವಾಗುತ್ತಿದೆ. ಈ ನಿಟ್ಟಿನಲ್ಲಿ ಹಿರಿಯರಾದ ದಿವಂಗತ ಕೃಷ್ಣ ಶಾಸ್ತ್ರಿ ಬಾಳಿಲ, ಸುರೇಶ್ ಭಟ್ ಬಾಕ್ರಬೈಲ್, ಶ್ರೀನಿವಾಸ್ ಕಾರ್ಕಳ, ಐವನ್ ಡಿಸಿಲ್ವ ಮತ್ತು ಯುವ ತಲೆಮಾರಿನ ನಾನು ಮತ್ತು ಮಹೇಶ್ ನಾಯಕ್ ನಿರಂತರವಾಗಿ ಪ್ರತಿರೋಧದ ಧ್ವನಿಯೆತ್ತುತ್ತಾ ಬಂದೆವು. ಪತ್ರಿಕೆಗಳ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರ ಗಮನಕ್ಕೆ ಈ ವಿಚಾರಗಳನ್ನು ಹಲವು ಬಾರಿ ತಂದೆವು. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದು ಪ್ರಗತಿಪರ ಮನು ಬಳಿಗಾರ್ ಅಧ್ಯಕ್ಷರಾದ ಬಳಿಕ ‘ವಾರ್ಷಿಕ ಮಹಾಸಭೆ’ಯನ್ನು ಆರೆಸ್ಸೆಸ್‌ನ ಶಾರದಾ ವಿದ್ಯಾಲಯದಲ್ಲೇ ನಡೆಸುವಷ್ಟರ ಮಟ್ಟಿಗೆ ಮುಂದುವರಿಯಿತು. ನಮ್ಮ ಪ್ರತಿರೋಧ ಮುಂದುವರಿಯುತ್ತದೆ.

ಮಾರ್ಚ್ 5ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ಎಂದಿನಂತೆಯೇ ದೇವಸ್ಥಾನದಲ್ಲಿ ನಿಗದಿಯಾಗಿದೆ. ನಮ್ಮಂತಹವರ ಪ್ರತಿರೋಧದ ಧ್ವನಿಗೆ ಆಳುವ ವರ್ಗ ಕಿವಿಗೊಡುವುದಿಲ್ಲ ಎಂಬ ಖಚಿತತೆಯಿರುವುದರಿಂದ ಪುನಃ ಈ ಬಾರಿಯೂ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಹಿತ್ಯ ಸಮ್ಮೇಳನ ನಿಗದಿಯಾಗಿದೆ.

ಈ ಬಾರಿ ಮತ್ತೊಮ್ಮೆ ‘ವಿದ್ವತ್ ಸಮ್ಮಾನ’ವೆಂಬ ಪಂಕ್ತಿ ಭೇದ ಕಾರ್ಯಕ್ರಮವೂ ನಡೆಯಲಿದೆ. ಎರಡು ವರ್ಷಗಳ ಹಿಂದೆ ಇಂತಹ ಪಂಕ್ತಿಭೇದ ಸಮ್ಮಾನ ನಿಗದಿಯಾದಾಗ ಅದರ ವಿರುದ್ಧ ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಹಿರಿಯ ಸಾಹಿತಿ, ಶಿಕ್ಷಣ ತಜ್ಞ ಕೃಷ್ಣ ಶಾಸ್ತ್ರಿ ಬಾಳಿಲ ಅದನ್ನು ಬಲವಾಗಿ ವಿರೋಧಿಸಿದ್ದರು. ಆದಾಗ್ಯೂ ಕಸಾಪ ಅದನ್ನು ಲೆಕ್ಕಿಸದೇ ವಿದ್ವತ್ ಸಮ್ಮಾನವೆಂಬ ಪಂಕ್ತಿಭೇದ ಮತ್ತು ಸಾದಾ ಸಮ್ಮಾನ ಎಂಬ ಎರಡು ವಿಧದ ಸಮ್ಮಾನ ನಡೆಸಿಯೇ ಬಿಟ್ಟಿತು. ಇದನ್ನು ಪಂಕ್ತಿಭೇದ ಸಮ್ಮ್ಮಾನವೆನ್ನಲು ಮುಖ್ಯ ಕಾರಣ ‘ವಿದ್ವತ್ ಸಮ್ಮಾನ’ದ ಪಟ್ಟಿಯಲ್ಲಿ ಇರುವ ಒಬ್ಬರ ಹೊರತಾಗಿ ಉಳಿದ ಏಳು ಮಂದಿ ಬ್ರಾಹ್ಮಣರು. ಇನ್ನು ಸಾದಾ ಸಮ್ಮಾನದಲ್ಲಿ ಅರ್ಧದಷ್ಟು ಬ್ರಾಹ್ಮಣರು ಮತ್ತು ಇನ್ನರ್ಧ ಇತರರ ಹೆಸರಿದೆ.

ವಿದ್ವತ್ ಎಂದರೇನು?ಅದರ ಮಾನದಂಡವೇನು?ವಿದ್ವತ್ ಕೇವಲ ಒಂದು ಜಾತಿಗೆ ಮಾತ್ರ ಸೀಮಿತವೇ?ಒಂದು ನಿರ್ದಿಷ್ಟ ಜಾತಿಯ ಹೊರತಾಗಿ ಇತರ ಜಾತಿಗಳಲ್ಲಿ ವಿದ್ವತ್ ಇರುವವರಿಲ್ಲವೇ?

ವಿದ್ವತ್ ಸಮ್ಮಾನಕ್ಕೆ ಆಯ್ಕೆಯಾದವರ ವಿದ್ವತ್ ಏನೆಂದು ನೋಡಹೋದರೆ ಅಲ್ಲೂ ವೈದಿಕಶಾಹಿತ್ವದ ಪಾರಮ್ಯವೇ ಕಾಣಸಿಗುತ್ತದೆ. ಆಗಮ ಪಾಂಡಿತ್ಯ, ವಾಸ್ತು ಪಾಂಡಿತ್ಯ ಇವೆಲ್ಲಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಸಮ್ಮಾನಿಸಿ ಪುರಸ್ಕರಿಸಲಾಗುತ್ತದೆ. ಇವಕ್ಕೂ ಕನ್ನಡ ಸಾಹಿತ್ಯಕ್ಕೂ ಎತ್ತಣಿಂದೆತ್ತ ಸಂಬಂಧ? ಅಥವಾ ಇವುಗಳಿಂದ ಕನ್ನಡ ನಾಡು ನುಡಿ ನೆಲ ಜಲ ಇತ್ಯಾದಿಗಳಿಗೆ ಏನಾದರೂ ಲಾಭವಿದೆಯೇ? ಇವೆಲ್ಲವನ್ನು ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ವಿದ್ವತ್ತು ಎಂದು ಪರಿಗಣಿಸಿ ಸಮ್ಮಾನಿಸಬಹುದಾದರೆ ಕುರ್‌ಆನ್, ಬೈಬಲ್‌ಗಳಲ್ಲಿ ವಿದ್ವತ್ತಿರುವವರನ್ನೂ ವಿದ್ವತ್ ಸಮ್ಮಾನಕ್ಕೆ ಆಯ್ಕೆ ಮಾಡಬಾರದೇಕೆ? ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಪ್ರಿಯವಾದ ವಿಷಯ ತಜ್ಞರನ್ನೆಲ್ಲಾ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಸಮ್ಮಾನಿಸಲು ಸಾಹಿತ್ಯ ಪರಿಷತ್ ಇವರ ಪಿತ್ರಾರ್ಜಿತ ಸ್ವತ್ತೇ?

ಜಿಲ್ಲಾ ಕಸಾಪದ ಅಧ್ಯಕ್ಷರ ಕನ್ನಡ ಪ್ರೇಮ ಇತ್ತೀಚೆಗೆ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಜಗಜ್ಜಾಹೀರಾಗಿದೆ ‘‘ಸಾಹಿತಿಗಳು ಜನರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಬೇಕೆಂದು ತಮ್ಮ ಭಾಷಣದಲ್ಲಿ ಹೇಳಬಾರದು’’ ಎಂದು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲೇ ಬಹಿರಂಗವಾಗಿ ಘೋಷಿಸಿ ಅಧ್ಯಕ್ಷರು ತಮ್ಮ ಕನ್ನಡ ಪ್ರೇಮವನ್ನು ಸಾಬೀತುಪಡಿಸಿದ್ದಾರೆ. ಈ ವಿವಾದಾತ್ಮಕ ಮತ್ತು ಕನ್ನಡ ದ್ರೋಹದ ಹೇಳಿಕೆಯನ್ನು ಖಂಡಿಸಿ ಪುರುಷೋತ್ತಮ ಬಿಳಿಮಲೆ, ಸುಬ್ರಾಯ ಚೊಕ್ಕಾಡಿ, ಅರವಿಂದ ಚೊಕ್ಕಾಡಿಯವರಂತಹ ಸುಳ್ಯ ಭಾಗದ ಪ್ರಸಿದ್ಧ ಸಾಹಿತಿಗಳು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದರು.

ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ವೈದಿಕಶಾಹಿಯ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು,ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಡಿಯಿಡುವುದೇ..?

Writer - ಇಸ್ಮತ್ ಪಜೀರ್, ಮಂಗಳೂರು

contributor

Editor - ಇಸ್ಮತ್ ಪಜೀರ್, ಮಂಗಳೂರು

contributor

Similar News