ರಾಜರಥ: ಈ ರಾಜರಥ ಸಾಗುವ ರೂಟೇ ಬೇರೆ

Update: 2018-03-25 07:55 GMT
Editor : ಶಶಿಕರ

 ‘‘ಟಿಕೆಟ್ ಎಲ್ಲ ಸೋಲ್ಡೌಟಾಗಿ ಹೌಸ್‌ಫುಲ್ ಬೋರ್ಡ್ ಬಿದ್ದು, ಸೀಟಲ್ಲಿ ಕಾಯ್ಕೌಂಡಿದ್ದ ಜನ ಎದ್ನಿಂತ್ಕೊಂಡು ಸಿಳ್ಳೆ ಹೊಡೆದ್ರೇನೇ ಹೀರೋ ಎಂಟ್ರಿಗೆ ಬೆಲೆ..’’ ಎಂದು ನಿರ್ದೇಶಕರು ಬರೆದಿದ್ದಾರೆ. ಅದೇನೋ ನಿಜ. ಆದ್ರೆ ಹೀರೋ ಎಂಟ್ರಿಗೆ ಕಾಯೋ ಥರ ಕತೆ ಇರಬೇಕು. ಒಂದು ವೇಳೆ ಹೀರೋ ಎಂಟ್ರಿ ಆದ ಬಳಿಕವೂ ಕತೆ ಬರ್ಲಿಲ್ಲ ಅಂದ್ರೆ..? ಬಹುಶಃ ಆ ಕಷ್ಟ ಹೇಗಿರುತ್ತೆ ಎನ್ನೋದು ‘ರಾಜರಥ’ ವೀಕ್ಷಿಸಿದ ಪ್ರೇಕ್ಷಕರಿಗೆ ಅರ್ಥವಾಗಿರುತ್ತದೆ.

  ಸಿನೆಮಾ ಮಧ್ಯಂತರ ತಲುಪಿದರೂ ಕೂಡ, ಸಿನೆಮಾದ ಕತೆ ಶುರುವಾಗಿರುವುದಿಲ್ಲ. ಅದರಲ್ಲೊಂದು ಬಸ್ಸು, ಅದರೊಳಗೆ ನಾಯಕ ಮತ್ತು ನಾಯಕಿ ಅವರ ಕತೆಯೇನು ಎಂಬುದನ್ನು ಮುಂದುವರಿಸದಂತೆ ಕಾಡುವ ಪ್ರಯಾಣಿಕರ ಪರಿಚಯ ಇವೆಲ್ಲವೂ ಬಸ್ಸು ಪ್ರಯಾಣವೇ ಶುರು ಮಾಡಿಲ್ಲವೇನೋ ಎಂಬಂತೆ ಕಾಡುತ್ತದೆ. ಆದರೆ ಅದೇ ಕತೆ ಯಾಕಾಗಬಾರದು ಎಂಬ ನಿಲುವು ನಿರ್ದೇಶಕರದ್ದು. ಮೊದಲ ಚಿತ್ರದಲ್ಲೇ ಇಡೀ ಚಿತ್ರರಂಗ ತನ್ನತ್ತ ತಿರುಗಿ ನೋಡುವಂಥ ಚಿತ್ರ ನೀಡಿದ ಅನೂಪ್ ಭಂಡಾರಿ ಹೀಗೇಕೆ ಮಾಡಿದ್ದಾರೆ ಎಂಬ ಸಂದೇಹ ಮೂಡು ವುದು ಸಹಜ. ಆದರೆ ಮಧ್ಯಂತರದ ಬಳಿಕ ಎಲ್ಲಕ್ಕೂ ಉತ್ತರ ದೊರಕುತ್ತಾ ಹೋಗುತ್ತದೆ. ನಿರ್ದೇಶಕರು ಮೊದಲೇ ಹೇಳಿರುವಂತೆ ಇದು ರಂಗಿತರಂಗದ ಶೈಲಿಯ ಚಿತ್ರವಲ್ಲ. ಅಲ್ಲಿ ಅದೊಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿತ್ತು. ಆದರೆ ಇಲ್ಲಿ ಚಿತ್ರದ ಮೂಲಕ ಒಂದು ಪ್ರಮುಖ ಸಾಮಾಜಿಕ ಸಂದೇಶ ನೀಡುವ ಪ್ರಯತ್ನ ಮಾಡಲಾಗಿದೆ. ಪಕ್ಷವೊಂದು ಯುವಕರನ್ನು ಹೇಗೆಲ್ಲ ಬಳಸಿಕೊಳ್ಳುತ್ತದೆ ಮತ್ತು ಅದರಿಂದ ಏನೆಲ್ಲ ಅನಾಹುತಗಳಾಗುತ್ತವೆ ಎನ್ನುವುದನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಮೆಲು ಮಾತಿನ ಕಠಿಣ ಹೃದಯದ ರಾಜಕಾರಣಿಗಳು, ಕತ್ತಲು ಬೆಳಕಿನಾಟದಲ್ಲಿರುವ ಛಾಯಾಗ್ರಹಣ, ಮಳೆಯಲ್ಲಿ ಕೊಡೆ ಹಿಡಿದು ಸಾಗುವ ಸನ್ನಿವೇಶಗಳು, ಪಕ್ಷಗಳ ನಡುವಿನ ಹೊಡೆದಾಟದ ದೃಶ್ಯ.. ಇವೆಲ್ಲವೂ ಮಣಿರತ್ನಂ ಶೈಲಿಯ ನಿರ್ದೇಶನವನ್ನು ದಟ್ಟವಾಗಿ ನೆನಪಿಸುತ್ತದೆ. ಆರ್ಯ ಸೇರಿದಂತೆ ಖಳಛಾಯೆಯ ಪಾತ್ರಗಳನ್ನು ಅನೂಪ್ ಆಕರ್ಷಕವಾಗಿ ತೋರಿಸುವಲ್ಲಿ ಗೆದ್ದಿದ್ದಾರೆ. ಅನೂಪ್ ಭಂಡಾರಿ ಆರ್ಯನಿಗೆ ಕಂಠದಾನ ನೀಡಿರುವುದು ಮಾತ್ರವಲ್ಲದೆ, ಸಣ್ಣದೊಂದು ದೃಶ್ಯದಲ್ಲಿಯೂ ಬಂದು ಹೋಗಿದ್ದಾರೆ. ನಾಯಕ ಕನ್ನಡದಲ್ಲಿ ಕವಿತೆ ಬರೆಯುವ ಕಾರಣ, ಆತನ ಕನ್ನಡವೇ ತುಂಬಿದ ಹಾಡುಗಳಿಗೆ ಅರ್ಥವಿದೆ ಎನ್ನಬಹುದು. ಕರ್ನಾಟಕದಲ್ಲೇ ಇದ್ದುಕೊಂಡು ಕನ್ನಡ ಕಲಿಯದ ಹಿಂದಿಯ ಯುವಕನಿಂದ ಆತ ಕನ್ನಡ ನುಡಿಸುವುದರಲ್ಲಿ ಹಾಸ್ಯದ ಜೊತೆಗೆ ಕನ್ನಡಾಭಿಮಾನವೂ ಎದ್ದು ಕಾಣುತ್ತದೆ. ಆದರೆ ರವಿಶಂಕರ್ ಪಾತ್ರ ಕನ್ನಡಲ್ಲೇ ಹಾಡುತ್ತಾರೆ ಎಂಬ ದೃಶ್ಯದ ಮೂಲಕ ನಿರ್ದೇಶಕರು ತಮ್ಮ ಕನ್ನಡ ಪ್ರೀತಿಯನ್ನು ಬಲವಂತವಾಗಿ ತುರುಕಿದಂತಿದೆ. ಹಾಸ್ಯ ಸನ್ನಿವೇಶಗಳ ಚಿತ್ರೀಕರಣದಲ್ಲಿ ಆಕರ್ಷಣೆಯಿದೆ. ಆದರೆ ಸೃಷ್ಟಿಸಿರುವ ಪಾತ್ರಗಳಲ್ಲಿ ಯಾವುದೇ ಹೊಸತನವಿಲ್ಲ. ಮಂಗಳೂರು ಕನ್ನಡದ ಮಾತುಗಳು, ಗ್ಯಾಸ್ ಟ್ರಬಲ್ನಿಂದ ಹೂಸು ಹೋಗುವುದು... ಇವೆಲ್ಲ ಹಾಸ್ಯಕ್ಕೆ ವಸ್ತುವಾಗಿರುವುದು ವಿಪರ್ಯಾಸ. ರಾಜರಥದ ಮೂಲಕ ನಿರೂ ಪಣೆ ಮಾಡಿಸಿರುವುದು ಕತೆಯ ನೋಟದ ಓಘಕ್ಕೆ ಕಿರಿಕಿರಿ ಉಂಟುಮಾಡು ವಂತಿದೆ. ಅದರಲ್ಲೂ ಪುನೀತ್ ಕಂಠ ಅವರ ಅಭಿಮಾನಿಗಳಿಗಷ್ಟೇ ಇಷ್ಟವಾದೀತು.

ನಾಯಕನಾಗಿ ನಿರೂಪ್‌ಭಂಡಾರಿ ಮತ್ತೊಮ್ಮೆ ಭರವಸೆಯ ನಟನೆಂದು ನೆನಪಿಸಿದ್ದಾರೆ. ನಾಯಕಿಯಾಗಿ ಅವಂತಿಕಾ ಪಾತ್ರಕ್ಕೆ ತಕ್ಕಂತೆ ಕಾಣಿಸಿಕೊಂಡಿದ್ದಾರೆ.

ವಿನಯ ಪ್ರಸಾದ್, ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಅಚಿಂತ್ಯ ಮೊದಲಾದವರು ನಟಿಸಿದ್ದಾರೆ. ‘ರಂಗಿತರಂಗ’ದಂತೆ ಇಲ್ಲಿ ಕೂಡ ಅದೇ ಮಟ್ಟದಲ್ಲಿ ಮನಸೆಳೆಯುವ ಏಕೈಕ ಅಂಶ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಎಂದು ಹೇಳಲೇಬೇಕು. ಉಳಿದಂತೆ ಅನೂಪ್ ಸಂಗೀತವೂ ಆಕರ್ಷಕ. ಮುಂದೇ ಬನ್ನಿ ಹಾಡಿನ ಮೂಲಕ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ರಾಜಕೀಯ ದೊಂಬಿಗಳಿಂದ ಎಲ್ಲರೂ ದೂರ ವಿರುವಂತೆ ಕರೆ ನೀಡಿರುವ ನಿರ್ದೇಶಕರ ಆಶಯ ಅಭಿನಂದನಾರ್ಹ.

ಒಟ್ಟಿನಲ್ಲಿ ಈ ರಾಜರಥದ ರೂಟೇ ಬೇರೆ. ಕೆಲವೊಮ್ಮೆ ಹೋಗುವ ದಾರಿ ಎಷ್ಟೊಂದು ತಿರುವು, ಎಷ್ಟೊಂದು ದಿಣ್ಣೆ, ಕೊರಕಲು ಎಂದು ಮುಖ ಸಿಂಡರಿಸಿರುತ್ತೇವೆ. ಆದರೆ ಕೊನೆಗೆ ನಾವು ಸೇರಿದಂಥ ನಿಲ್ದಾಣ ಇಷ್ಟವಾದಾಗ ಬಂದ ದಾರಿಯ ಕಷ್ಟಗಳೆಲ್ಲ ಮರೆತು ಹೋಗುತ್ತವೆ. ಮಾತ್ರವಲ್ಲ, ಅಂಥದೊಂದು ನಿಲ್ದಾಣ ತೋರಿಸಿದ್ದಕ್ಕಾಗಿ ಆ ದಾರಿಯನ್ನೂ ಇಷ್ಟಪಡತೊಡಗುತ್ತೇವೆ. ಹಾಗೆಯೇ ಕ್ಲೈಮ್ಯಾಕ್ಸ್ ಇಷ್ಟವಾಗುವುದೆಂಬ ಕಾರಣಕ್ಕೆ ಇಡೀ ಚಿತ್ರವೇ ಆಪ್ತವಾಗುವಂಥ ಸಾಧ್ಯತೆಯನ್ನು ‘ರಾಜರಥ’ ನೀಡುತ್ತದೆ.

ತಾರಾಗಣ: ನಿರೂಪ್ ಭಂಡಾರಿ, ಅವಂತಿಕಾ ಶೆಟ್ಟಿ

ನಿರ್ದೇಶನ: ಅನೂಪ್ ಭಂಡಾರಿ

ನಿರ್ಮಾಣ: ಜಾಲಿ ಹಿಟ್ಸ್ ಪ್ರೊಡಕ್ಷನ್ಸ್

Writer - ಶಶಿಕರ

contributor

Editor - ಶಶಿಕರ

contributor

Similar News

ನಾಸ್ತಿಕ ಮದ