ಸಿದ್ದರಾಮಯ್ಯ ಸೋಲಿಸಲು ಜೆಡಿಎಸ್-ಬಿಜೆಪಿ ಮೈತ್ರಿ ?

Update: 2018-04-06 05:04 GMT

ಮೈಸೂರು, ಎ.5: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿರುವ ಹಿನ್ನೆಲೆಯಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಸಿದ್ದರಾಮಯ್ಯ ಈಗಾಗಲೇ ನಾಲ್ಕೈದು ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಮೂಲಕ ಚುನಾವಣಾ ಕುರುಕ್ಷೇತ್ರಕ್ಕೆ ಎದುರಾಳಿ ಪಕ್ಷಗಳಿಗೆ ರಣವೀಳ್ಯ ನೀಡಿದ್ದಾರೆ.

ಸಿದ್ದರಾಮಯ್ಯನವರ ಕ್ಷೇತ್ರ ಪ್ರಚಾರದ ಸಂದರ್ಭದಲ್ಲಿ ದೊರೆತ ಭರ್ಜರಿ ಬೆಂಬಲದಿಂದ ನಿದ್ದೆಗೆಡಿಸಿಕೊಂಡಿರುವ ಜೆಡಿಎಸ್ ಮತ್ತು ಬಿಜೆಪಿ ಪ್ರತಿತಂತ್ರ ಹೆಣೆಯಲು ರಾಜಕೀಯ ಲೆಕ್ಕಾಚಾರಗಳಲ್ಲಿ ನಿರತವಾಗಿವೆ. ಅವರನ್ನು ಪರಾಭವಗೊಳಿಸುವ ಏಕೈಕ ಉದ್ದೇಶದಿಂದ ಉಭಯ ಪಕ್ಷಗಳೂ ಮೈತ್ರಿಯಾಗುವ ಲಕ್ಷಣಗಳು ಗೋಚರಿಸಿವೆ.

ಇತ್ತೀಚೆಗೆ ವಿಶ್ರಾಂತಿಗಾಗಿ ಬಂಡೀಪುರ ರೆಸಾರ್ಟ್ ನಲ್ಲಿ ತಂಗಿದ್ದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಅನೇಕ ಒಕ್ಕಲಿಗ ಸಮುದಾಯದ ಮುಖಂಡರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಅವರು ವಿರೋಧ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ವಿವಿಧ ಜನಾಂಗಗಳ ಪ್ರಮುಖ ಮುಖಂಡರ ಜೊತೆ ಗುಪ್ತ ಸಭೆಗಳನ್ನು ನಡೆಸಿದ್ದಾರೆ ಎನ್ನಲಾಗುತ್ತಿದೆ.

ಜೊತೆಗೆ ಬಿಜೆಪಿ ತನ್ನ ಅಭ್ಯರ್ಥಿ ಆಯ್ಕೆ ಕುರಿತು ಇನ್ನೂ ಗೊಂದಲದಲ್ಲೇ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಚಿವ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ. ಶ್ರೀನಿವಾಸಪ್ರಸಾದ್ ಇತ್ತೀಚಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಮುಖ್ಯವಲ್ಲ ಸಿದ್ದರಾಮಯ್ಯ ಸೋಲಿಸುವುದೇ ನಮ್ಮ ಗುರಿ. ಜೊತೆಗೆ ಸಿದ್ದು ಸೋಲಿಸಲು ತಂತ್ರ ರೂಪಿಸುತ್ತಿದ್ದು ಆ ಗುಟ್ಟು ಬಿಡುಕೊಡಲು ಸಾಧ್ಯವಿಲ್ಲ ಎಂಬ ಮಾತನ್ನು ಹೇಳಿರುವುದು ನೋಡಿದರೆ ಜೆಡಿಎಸ್ ಬಿಜೆಪಿ ಮೈತ್ರಿಯಾಗುವ ಸಾಧ್ಯತೆ ಇದೆ ಎಂಬುದು ಗೊತ್ತಾಗುತ್ತಿದೆ.

ರಾಜಕೀಯ ಹಣಾ ಹಣಿಗೆ ಹೆಸರುವಾಸಿಯಾದ ಚಾಮುಂಡೇಶ್ವರಿ ಕ್ಷೇತ್ರ ಮತ್ತೊಮ್ಮೆ ರಾಷ್ಟ್ರದಲ್ಲಿ ಸದ್ದು ಮಾಡುತ್ತಿದೆ. 2006ರಲ್ಲಿ ನಡೆದ ಉಪಚುನಾವಣೆಯಲ್ಲಿ ಇದೇ ಸಿದ್ದರಾಮಯ್ಯನವರನ್ನು ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಕೆಲಸ ಮಾಡಿದ್ದವು. ಅದೇ ಪರಿಸ್ಥಿತಿ ಮತ್ತೊಮ್ಮೆ ಉದ್ಭವವಾಗುವ ಲಕ್ಷಣಗಳು ಕಾಣುತ್ತಿವೆ. ಅಂದು ಸಿದ್ದರಾಮಯ್ಯ, ಇವರು ಹಣೆದ ಪಂಜರವನ್ನು ಬೇದಿಸಿ ಹೊರಬಂದು ವಿಜಯಿಯಾದರು. ಈಗ ಮತ್ತೊಮ್ಮೆ ಅಂತಹದೇ ಕಠಿಣ ಪರಿಸ್ಥಿತಿಯನ್ನು ಎದುರಿಸಲು ನಿರಾತಂಕವಾಗಿ ಸಿದ್ಧರಾದಂತೆ ಸಿದ್ದರಾಮಯ್ಯ ಕಾಣುತ್ತಿದ್ದಾರೆ.

ಅಂದು ನಡೆದ ಚುನಾವಣೆ ಕಂಡು ಬೆಚ್ಚಿದ್ದ ಸಿದ್ದರಾಮಯ್ಯ, ಇಂದು ಬಲಿಷ್ಟಗೊಂಡಿದ್ದಾರೆ. ಏಕೆಂದರೆ 2006ರಲ್ಲಿ ನಡೆದ ಉಪಚುನಾವಣೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಬಿಟ್ಟರೆ ಬೇರೆ ಏನು ಇರಲಿಲ್ಲ, ಆದರೆ ಇಡೀ ಅಹಿಂದ ವರ್ಗವೇ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿತ್ತು. ಇಂದು ಅಹಿಂದ ವರ್ಗ ಅಷ್ಟು ಪ್ರಬಲವಾಗಿ ಇದ್ದಂತೆ ಕಾಣುತ್ತಿಲ್ಲ. ಆದರೆ ಮುಖ್ಯಮಂತ್ರಿಯಾಗಿ ಐದು ವರ್ಷದ ಆಡಳಿತದಲ್ಲಿ ಇವರೇ ಜಾರಿಗೆ ತಂದ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಮೈತ್ರಿ, ಉಚಿತ ಗ್ಯಾಸ್ ವಿತರಣೆ ಸೇರಿದಂತೆ ಹಲವಾರು ಜನಪ್ರಿಯ ಯೋಜನೆಗಳು ಸೇರಿದಂತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿರುವುದೇ ಇವರ ಮಾನದಂಡವಾಗಿದೆ.

ಮಾಜಿ ಸಚಿವ ಹಾಲಿ ಶಾಸಕ ಜಿ.ಟಿ.ದೇವೇಗೌಡ ಮತ್ತೊಮ್ಮೆ ಜೆಡಿಎಸ್ ಪಕ್ಷದಿಂದ ಕಣಕ್ಕೆ ಇಳಿದಿದ್ದು, ಸಿದ್ದರಾಮಯ್ಯ ಅವರಿಗೆ ಪ್ರಮುಖ ಎದುರಾಳಿಯಾಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯವನ್ನು ಹೊಂದಿರುವ ಇವರು ಕ್ಷೇತ್ರದ ಎಲ್ಲಾ ಸಮುದಾಯಗಳ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿ.ಟಿ.ದೇವೇಗೌಡ ಬೆಂಬಲಕ್ಕೆ ಮಾಜಿ ಸಚಿವರುಗಳಾದ ವಿ.ಶ್ರೀನಿವಾಸಪ್ರಸಾದ್, ಎಚ್.ವಿಶ್ವನಾಥ್ ಬಲವಾಗಿ ನಿಂತಿದ್ದಾರೆ. ಸಿದ್ದರಾಮಯ್ಯನವರನ್ನು ಸೋಲಿಸಲು ದೇವೇಗೌಡ, ಕುಮಾರಸ್ವಾಮಿ, ಅಮಿತ್ ಶಾ, ಯಡಿಯೂರಪ್ಪ ಸೇರಿದಂತೆ ಹಲವಾರು ನಾಯಕರು ಗುಟ್ಟಾಗಿ ಕೆಲಸ ಮಾಡುತ್ತಿರುವುದು ಬಹಿರಂಗಗೊಂಡಿದೆ.

ತಮ್ಮ ಕ್ಷೇತ್ರವ್ಯಾಪಿ ನಾಲ್ಕು ದಿನಗಳವರೆಗೆ ಸಿದ್ದರಾಮಯ್ಯ ಕ್ಯಾಂಪೇನ್ ಮಾಡಿದ್ದು, ಹಲವು ಗ್ರಾಮಗಳಿಗೆ ಭೇಟಿ ನೀಡಿ ಮತ ಮತ ಭೇಟೆ ಶುರುಮಾಡಿದ್ದಾರೆ. ಜಾತಿ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು ತಮ್ಮ ಬೆಂಬಲಿಗರ ಮೂಲಕ ಮತಗಳನ್ನು ಕ್ರೋಢೀಕರಿಸುವ ಕಾರ್ಯಕೂಡ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಿದ್ದರಾಮಯ್ಯನವರ ಆಪ್ತ ಮಾವಿನಹಳ್ಳಿ ಸಿದ್ದೇಗೌಡ, ಮಾಜಿ ಶಾಸಕ ಎಂ.ಸತ್ಯನಾರಾಯಣ ಸೇರಿದಂತೆ ಹಲವು ಒಕ್ಕಲಿಗ ಮುಖಂಡರು ಸಿದ್ಧು ಬೆಂಬಲಕ್ಕೆ ನಿಂತಿದ್ದಾರೆ.

ಪ್ರಸ್ತುತ ದಿನಗಳವರೆಗೂ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ದಲ್ಲಿ ತನ್ನ ಅಭ್ಯರ್ಥಿ ಯಾರು ಎಂಬದನ್ನು ಬಿಂಬಿಸದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಒಂದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇ ಆದಲ್ಲಿ ಜೆಡಿಎಸ್‌ಗೆ ಅನುಕೂಲವಾಗುಂತಹ ವ್ಯಕ್ತಿಯನ್ನೇ ಸ್ಪರ್ಧೆಗೆ ನಿಲ್ಲಸಲಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ಅಖಾಡ ಸಿದ್ಧವಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟರ ಮಟ್ಟಿಗೆ ತಮ್ಮ ಪ್ರಭಾವವನ್ನು ಬಳಸುತ್ತಾರೆ ಎಂಬುದು ಪ್ರುಮುಖವಾಗಿದೆ. ಜೆಡಿಎಸ್-ಬಿಜೆಪಿ ಹಾಗೂ ಸಿದ್ದರಾಮಯ್ಯನವರ ನಡುವೆ ನಡೆಯುವ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿದ್ದು ಕೊನೆಗಳಿಗೆವರೆಗೂ ಯಾರು ಮತದಾರರನ್ನು ಒಲಿಸಿಕೊಳ್ಳಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಚಾಮುಂಡಿ ಮಡಿಲಲ್ಲಿ ಅಖಾಡಕ್ಕಿಳಿದ ಯಾರಿಗೆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಸಿಗಲಿದೆ ಎಂಬುದು ಕಾದು ನೋಡಬೇಕಿದೆ.

Writer - ನೇರಳೆ ಸತೀಶ್‌ಕುಮಾರ್

contributor

Editor - ನೇರಳೆ ಸತೀಶ್‌ಕುಮಾರ್

contributor

Similar News