‘ಯು ಟರ್ನ್’ಗಳಿರದ ಕತೆಯಲ್ಲಿ ಬರೀ ‘ಇಂಟರ್ನ್’ ಮಾತ್ರ!
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ದಾಸರ ವಾಣಿಯ ಸಾಲುಗಳನ್ನು ಚಿತ್ರಕ್ಕೆ ಹೆಸರಾಗಿ ಇರಿಸಲಾಗಿದೆ. ಆದರೆ ಚಿತ್ರದ ಆಳಕ್ಕೆ ಹೋದಂತೆ ಈ ಹೊಟ್ಟೆ ಪದದಲ್ಲಿ ದ್ವಯಾರ್ಥ ಇದೆ ಎನ್ನುವುದು ಸಾಬೀತಾಗುತ್ತದೆ. ಯಾಕೆಂದರೆ ಇದು ಲಿವಿಂಗ್ ಟುಗೆದರ್ ಬದುಕು ನಡೆಸುವ ಹುಡುಗಿಯೊಬ್ಬಳು ಗರ್ಭಿಣಿಯಾದಾಗಿನ ಕತೆ.
ಲಿವಿಂಗ್ ಟುಗೆದರ್ ಕುರಿತಾದ ಕತೆ ಎಂದಕೂಡಲೇ ಇದೊಂದು ಗಂಭೀರ ವಿಚಾರದ ಕುರಿತಾದ ಚರ್ಚೆಯಂತಿರಬಹುದು ಎಂದುಕೊಳ್ಳುವುದು ಸಹಜ. ಆದರೆ ಚಿತ್ರವು ಗಂಭೀರತೆ, ಸೆಂಟಿಮೆಂಟ್ ಅಥವಾ ಹಾಸ್ಯ.. ಹೀಗೆ ಯಾವುದೇ ಭಾಗವನ್ನು ಕೂಡ ಸ್ಪರ್ಷಿಸದೇ ಸಾಗುತ್ತದೆ.
ಚಿತ್ರದಲ್ಲಿ ಅನಂತನಾಗ್ ನಿರ್ವಹಿಸಿರುವ ಪಾತ್ರದ ಹೆಸರು ಶ್ಯಾಮ್ ಪ್ರಸಾದ್. ಆತ ನಿವೃತ್ತ ಉದ್ಯೋಗಿಯಾಗಿದ್ದರೂ ವರಮಾನದ ದೃಷ್ಟಿಯಿಂದ ಒಂದು ಫ್ಯಾಶನ್ ಉಡುಪುಗಳ ಸಂಸ್ಥೆಯಲ್ಲಿ ಇಂಟರ್ನಿಯಾಗಿ ಸೇರುತ್ತಾರೆ. ಸಂಸ್ಥೆಯ ಬಾಸ್ ಶ್ರಾವ್ಯ ಜೊತೆಗೆ ಶ್ಯಾಮ್‌ಗೆ ಆತ್ಮೀಯತೆ ಬೆಳೆಯುತ್ತದೆ. ಶ್ರಾವ್ಯಳ ಮನೆಗೆ ಹೋದ ಸಂದರ್ಭದಲ್ಲಿ ಆಕೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿರುವ ಸತ್ಯ ಆತನಿಗೆ ತಿಳಿದು ಬರುತ್ತದೆ. ಆದರೆ ಆಕೆಯ ಪತಿಯಾದವನು ಮತ್ತೊಂದು ಹುಡುಗಿಯ ಜೊತೆಗೂ ಸಂಬಂಧ ಇರಿಸಿರುವ ವಿಚಾರ ಶ್ಯಾಮ್‌ಗೆ ತಿಳಿಯುತ್ತದೆ. ಆದರೆ ಅದಾಗಲೇ ಗರ್ಭಿಣಿಯಾಗಿರುವ ಶ್ರಾವ್ಯ ತನ್ನ ಗಂಡನಿಗೆ ಬೇರೆ ಸಂಬಂಧಗಳಿರುವುದು ಗೊತ್ತು ಎಂದು ಶ್ಯಾಮ್ ಗೆ ಹೇಳುತ್ತಾಳೆ! ಮುಂದೆ ಅವರ ಬದುಕು ಏನಾಗುತ್ತದೆ ಎನ್ನುವುದೇ ಚಿತ್ರದ ಸಾರಾಂಶ.
ಈ ಕತೆಯಲ್ಲೇನೋ ಹೊಸತನ ಇದೆ ಎಂದು ನಿಮಗೆ ಅನಿಸಿದರೆ ಅದು ಸುಳ್ಳು. ಯಾಕೆಂದರೆ 2015ರಲ್ಲಿ ತೆರೆಕಂಡ ‘ದಿ ಇಂಟರ್ನ್’ ಎಂಬ ಹಾಲಿವುಡ್ ಚಿತ್ರದ ಭಟ್ಟಿ ಇಳಿಸುವಿಕೆಯೇ ಈ ಚಿತ್ರ. ಚಿತ್ರದ ಸನ್ನಿವೇಶಗಳಿಂದ ಹಿಡಿದು ಕಲಾವಿದರ ಉಡುಗೆಯ ಶೈಲಿಯ ತನಕ ಇದು ಕದ್ದಮಾಲು ಎಂದೇ ಹೇಳಬಹುದು. ಬಹುಶಃ ಅದೇ ಕಾರಣದಿಂದಲೇ ಹೆಚ್ಚು ಭಾವನಾತ್ಮಕವಲ್ಲದ ಹಾಲಿವುಡ್ ದೃಶ್ಯಗಳು ಇಲ್ಲಿಯೂ ಮನಸ್ಸು ತಟ್ಟದಂತೆ ಸಾಗುತ್ತವೆ.
ಪಾತ್ರವಾಗಿ ಅನಂತನಾಗ್ ಎಂದಿನಂತೆ ತಲ್ಲೀನತೆಯ ಅಭಿನಯ ನೀಡಿ ಮನಗೆಲ್ಲುತ್ತಾರೆ. ಶ್ರಾವ್ಯ ಪಾತ್ರ ನಿರ್ವಹಿಸಿರುವ ರಾಧಿಕಾ ಚೇತನ್ ಕೂಡ ಆ ಪಾತ್ರಕ್ಕೆ ತಾವಷ್ಟೇ ನ್ಯಾಯ ನೀಡಬಲ್ಲವರು ಎಂಬಂತೆ ಕಾಣಿಸಿಕೊಂಡಿದ್ದಾರೆ. ರಂಗಿತರಂಗದ ಬಳಿಕ ಮತ್ತೊಮ್ಮೆ ಗರ್ಭಿಣಿಯಾಗಿ ನಟಿಸಿರುವ ರಾಧಿಕಾರಲ್ಲಿ ಅದರ ಪಕ್ವತೆಯನ್ನು ಕಾಣಬಹುದಾಗಿದೆ! ರಾಧಿಕಾ ಜೋಡಿಯಾಗಿ ನಟಿಸುವ ಮೂಲಕ ನಿರ್ದೇಶನ ರಂಗದಿಂದ ನಟನೆಗೆ ಬಂದಿರುವ ನವನಟನ ಅಭಿನಯವೂ ಆಕರ್ಷಕವೆನಿಸುತ್ತದೆ. ರಾಮಚಂದ್ರ ಹಡಪದ್ ಸಂಗೀತ ಸೆಳೆಯುವುದಿಲ್ಲ. ಆದರೆ ಪಿಕೆ ಎಚ್ ದಾಸ್ ಛಾಯಾಗ್ರಹಣ ದೃಶ್ಯವನ್ನು ಆಕರ್ಷಕಗೊಳಿಸುವಲ್ಲಿ ಸಫಲವಾಗಿದೆ. ಆದರೆ ನಿರ್ದೇಶಕ ನರೇಂದ್ರ ಬಾಬು ಪೂರ್ತಿಯಾಗಿ ಸೋತಿದ್ದಾರೆ ಎಂದು ಹೇಳಬಹುದು. ನೀರಸ ದೃಶ್ಯಗಳು, ವಾಚ್ಯದಂತೆನಿಸುವ ಸಪ್ಪೆ ಸಂಭಾಷಣೆಗಳು ಕೂಡ ಅದಕ್ಕೆ ಪ್ರಮುಖ ಕಾರಣ.
ಅನಂತನಾಗ್ ನಟಿಸಿದ್ದಾರೆ ಎಂದರೆ ಆ ಚಿತ್ರದಲ್ಲಿ ಹೊಸದೇನೋ ಇರುವುದು ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇರುತ್ತದೆ. ಆದರೆ ಕಾದಂಬರಿ ಆಧಾರಿತ ಚಿತ್ರಗಳಿಂದ ಗಮನ ಸೆಳೆಯುತ್ತಿದ್ದ ಅನಂತನಾಗ್ ಇತ್ತೀಚೆಗೆ ರಿಮೇಕ್ ಮತ್ತು ಕದ್ದ ಕತೆಗಳ ಸಪ್ಪೆ ಪಾತ್ರ ಗಳಿಗೆ ಸೀಮಿತವಾಗುತ್ತಿರುವುದು ದುರಂತ.
ಚಿತ್ರ: ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ತಾರಾಗಣ: ಅನಂತನಾಗ್, ರಾಧಿಕಾ ಚೇತನ್
ನಿರ್ದೇಶಕ: ನರೇಂದ್ರ ಬಾಬು
ನಿರ್ಮಾಣ: ಹರೀಶ್ ಶೇರಿಗಾರ್