ಪ್ರಜಾಪ್ರಭುತ್ವದಲ್ಲಿ ಪ್ಲೇಟೋ ಪ್ರಸಂಗ

Update: 2018-05-28 18:50 GMT

ಅಲ್ಲಿಯ ಚಿನ್ನ, ಬೆಳ್ಳಿ, ಹಿತ್ತಾಳೆ, ಕಬ್ಬಿಣ ಇಲ್ಲಿ ಸವರ್ಣೀಯ, ಮೇಲ್ಜಾತಿ, ಮಧ್ಯಮ ಜಾತಿ, ಮುಂದುವರಿದ ಜಾತಿ, ಹಿಂದುಳಿದ ಜಾತಿ, ಸ್ಪೃಶ್ಯ ಜಾತಿ, ಅಸ್ಪೃಶ್ಯ ಜಾತಿ, ಮಡಿ ಜಾತಿ, ಮೈಲಿಗೆ ಜಾತಿಯಾಗಿ ನಮ್ಮ ರಾಜಕೀಯ ಸಾಮಾಜಿಕ ಸೌಹಾರ್ದ ಪರದೆಯನ್ನು ಹರಿದು ಚಿಂದಿ ಚೂರಾಗಿಸಿದೆ. ಇದರ ಜೊತೆಗೆ ನಮ್ಮ ಶಾಸನ ಸಭೆಗಳಲ್ಲಿ, ಸಂಸತ್‌ನಲ್ಲಿ ಗಂಡು ಜಾತಿಗೆ ಎಷ್ಟು ಸ್ಥಾನ? ಎಷ್ಟು ಅಧಿಕಾರ? ಹೆಣ್ಣು ಜಾತಿಗೆ ಎಷ್ಟು ಅಧಿಕಾರ? ಎಂಬ ಚರ್ಚೆ ಇನ್ನೂ ನಡೆಯುತ್ತಲೇ ಇದೆ.


ಒಂದು ತೀರಾ ಚಿಕ್ಕ ಗುಂಪು ಭಾರೀ ದೊಡ್ಡದಾದ ಒಂದು ಗುಂಪನ್ನು ಆಳುವ ಪ್ರಕ್ರಿಯೆ ತುಂಬಾ ಆಸಕ್ತಿದಾಯಕ ಮತ್ತು ಕುತೂಹಲಕಾರಿ.

ಕೋಟಿಗಟ್ಟಲೆ ಮತದಾರರನ್ನು ಕೆಲವೇ ಕೆಲವು ಮಂದಿ ಜನಪ್ರತಿನಿಧಿಗಳು ಆಳುವ ಪ್ರಜಾಪ್ರಭುತ್ವ ಎಂಬ ಒಂದು ಸರಕಾರದ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ಯಾವುದೇ ಒಂದು ಜನಸಮುದಾಯವನ್ನು ಆಳಬೇಕಾದರೆ, ಅದರ ಮೇಲೆ ಪ್ರಾಬಲ್ಯ ಸ್ಥಾಪಿಸಬೇಕಾದರೆ, ಹೀಗೆ ಪ್ರಾಬಲ್ಯ ಸ್ಥಾಪಿಸುವ, ಹೆಜಮನಿ ನಡೆಸುವ ಗುಂಪಿಗೆ ಅಧಿಕಾರ ಮತ್ತು ಆ ಅಧಿಕಾರದ ಬಲದಲ್ಲಿ ನೀಡುವ ಆಜ್ಞೆಗಳನ್ನು ಜನರು ಪಾಲಿಸುವಂತೆ ಮಾಡಲು ಪೊಲೀಸ್/ ಸೇನಾಪಡೆ ಬೇಕು. ಯಾವುದೇ ದೇಶದ/ ಸರಕಾರದ ರಾಜಕೀಯ ನೀತಿ ಸಿದ್ಧಾಂತಗಳ ಅಂತಿಮ ಪರೀಕ್ಷೆ ನಡೆಯುವುದು ಕೋವಿಯ ಬಲದ ಮೂಲಕ. ವಿಶ್ವದ ‘ದೊಡ್ಡಣ್ಣ’ ಎಂದು ಕರೆಸಿಕೊಳ್ಳುವ ದೇಶ ಇತರ ಎಲ್ಲ ದೇಶಗಳಿಗಿಂತ ಶಸ್ತ್ರಾಸ್ತ್ರ ಬಲದಲ್ಲಿ ‘ಬಿಗ್’, ಬಲಾಢ್ಯ ಆಗಿರುತ್ತದೆ.

ಇಂತಹ ಅಗಾಧವಾದ, ಕ್ರೂರವೂ ಆಗಬಹುದಾದ ಅಧಿಕಾರವನ್ನು ಹೇಗೆ ಪಡೆಯುವುದು? ರಾಜಪ್ರಭುತ್ವದಲ್ಲಿ ರಾಜನಾದವ ಅಧಿಕಾರಕ್ಕಾಗಿ ಜನರ ಬಳಿ ಹೋಗಬೇಕಿಲ್ಲ; ಅವರಿಂದ ಏನನ್ನೂ ಯಾಚಿಸಬೇಕಾಗಿಲ್ಲ. ಅವನಿಗೆ ಅಧಿಕಾರ ವಂಶ ಪಾರಂಪರ್ಯವಾಗಿ, ವಂಶಾಡಳಿತದ ಭಾಗವಾಗಿ ತಾನಾಗಿಯೇ ಬರುತ್ತದೆ. ಇದಕ್ಕಾಗಿ ಆತ ಪೂರೈಸಬೇಕಾದ ಏಕೈಕ ಷರತ್ತು ಎಂದರೆ, ಆತ ರಾಜನೊಬ್ಬನ ಮಗನಾಗಿ ಹುಟ್ಟಬೇಕು. ಆತ ಅರ್ಹನೋ -ಅನರ್ಹನೋ, ಒಳ್ಳೆಯವನೋ- ಕೆಡುಕನೋ-ಕುಡುಕನೋ ಇನ್ನೇನೋ ಆಗಿದ್ದರೂ, ಆತ ಆಡಳಿತ ಸೂತ್ರ ಹಿಡಿದ ರಾಜನಾಗುತ್ತಾನೆ. ಆತನನ್ನು, ಆತನ ರೀತಿ ರಿವಾಜನ್ನು, ಆಡಳಿತ ಕ್ರಮವನ್ನು ಪ್ರಶ್ನಿಸುವ ಹಕ್ಕು ಯಾವ ಪ್ರಜೆಗೂ ಇರುವುದಿಲ್ಲ. ಪ್ರಶ್ನಿಸಿದ ಆತನಿಗೆ ಛಡಿಯೇಟುಗಳ ದಂಡನೆಯೋ, ಆನೆಯ ಕಾಲ್ತುಳಿತಕ್ಕೆ ಗುರಿಯಾಗಿ ಸಾಯುವ ಸೌಭಾಗ್ಯವೋ ಕಾದಿರುತ್ತದೆ.

ಆದರೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರನ್ನು ಆಳಲು, ಹಾಗೆ ಆಳುತ್ತಾ ತಮ್ಮ ಸಕಲ ಆಸೆಗಳನ್ನು ಈಡೇರಿಸಿಕೊಳ್ಳಲು ಬಯಸುವವರು ಜನರ/ಮತದಾರರ ಬಳಿ ಹೋಗಿ ‘‘ನಮಗೆ ಆಡಳಿತ ನಡೆಸುವ ಅಧಿಕಾರ ದಯಪಾಲಿಸಿ; ನಮಗೆ, ನಮ್ಮ ಪಕ್ಷಕ್ಕೆ ಮತ ನೀಡಿ’’ ಎಂದು ವಿನಂತಿಸಿಕೊಳ್ಳಬೇಕಾಗುತ್ತದೆ; ಅಂಗಲಾಚಬೇಕಾಗುತ್ತದೆ. ಮತಬೇಟೆಯಲ್ಲಿ ಯಶಸ್ವಿಯಾಗಲು ಮತದಾರರಿಗೆ ಹೊಸ ಕನಸುಗಳನ್ನು ಜೊತೆಗೆ ನಗದು, ಮದ್ಯ, ಖಾದ್ಯ, ಸೀರೆ, ಪಂಚೆ ಇತ್ಯಾದಿಗಳನ್ನು ಹಂಚಬೇಕಾಗುತ್ತದೆ; ಹೊಸ ಹೊಸ ಆಶ್ವಾಸನೆಗಳನ್ನು ನೀಡಬೇಕಾಗುತ್ತದೆ; ಆಮಿಷಗಳನ್ನು ಒಡ್ಡಬೇಕಾಗುತ್ತದೆ; ಸುಳ್ಳುಗಳನ್ನು (ಜನರು ನಂಬುವಂತೆ) ಹೇಳಬೇಕಾಗುತ್ತದೆ. ಜನರ ಜ್ಞಾಪಕ ಶಕ್ತಿ ಅಲ್ಪಕಾಲಿಕವಾದ್ದರಿಂದ ಒಂದೋ ಅವರು ಆ ಸುಳ್ಳುಗಳನ್ನು ಮರೆಯುತ್ತಾರೆ ಅಥವಾ ಅವರು ಮರೆಯುವಂತೆ, ಮರೆಯದಿದ್ದರೂ ಸಾರ್ವಜನಿಕವಾಗಿ ಆ ಸುಳ್ಳುಗಳನ್ನು ಇತರರಿಗೆ ವ್ಯಾಪಿಸದಂತೆ ಅವರನ್ನು ಸರಕಾರದ ವಿವಿಧ ಏಜೆನ್ಸಿಗಳ ಮೂಲಕ ಬೆದರಿಸಲಾಗುತ್ತಿದೆ. ಕೇಂದ್ರೀಯ ತನಿಖಾ ದಳ, ಆದಾಯ ತೆರಿಗೆ ದಾಳಿ, ಪೊಲೀಸ್ ದಾಳಿಯಂತಹ ಅಸ್ತ್ರಗಳನ್ನು ಬಳಸಿ ಅಂಥವರ ಬಾಯಿಗೆ ಬೀಗ ಜಡಿಯಲಾಗುತ್ತದೆ. ಆಗ ರಾಜನ ನಿರಂಕುಶ ಪ್ರಭುತ್ವಕ್ಕೂ ಪ್ರಜಾಪ್ರಭುತ್ವಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ.

ಇದು ಇಂದು ನಿನ್ನೆಯದಲ್ಲ. ವಿಶ್ವದ ಇತಿಹಾಸದಲ್ಲಿ ಸುಳ್ಳುಗಳ ಉತ್ಪಾದನೆ ಮತ್ತು ಪ್ರಸರಣದ ಕಥೆ ತುಂಬಾ ಹಳೆಯದು. ಜಗತ್ತಿಗೆ ಆಧುನಿಕ ಪ್ರಜಾಪ್ರಭುತ್ವದ ಮೂಲ ಪರಿಕಲ್ಪನೆಗಳನ್ನು ನೀಡಿದ್ದ ಪ್ರಾಚೀನ ಗ್ರೀಸ್ ದೇಶದಲ್ಲಿ ಪ್ಲೇಟೋ (ಕ್ರಿಸ್ತಪೂರ್ವ ನಾಲ್ಕನೇ ಶತಮಾನ)ನಂತಹ ರಾಜಕೀಯ ಚಿಂತಕ ತತ್ತ್ವಜ್ಞಾನಿ ಜನರನ್ನು ಆಳಲು, ಹದ್ದುಬಸ್ತಿನಲ್ಲಿಡಲು ‘ಭವ್ಯವಾದ’ ಸುಳ್ಳುಗಳನ್ನು, ಸರಕಾರಿ ಅಧಿಕೃತ ಮಿತ್‌ಗಳನ್ನು ಹೇಗೆ ಸೃಷ್ಟಿಸಬೇಕೆಂದು ವಿವರಿಸಿದ್ದ. ಆತ ಹೇಳುತ್ತಾನೆ:

‘‘ಜನರನ್ನು ಆಳಲು ನಾವು ಜನರಿಗೆ ಒಂದು ಕಥೆ ಹೇಳಬೇಕು. ಯಾವ ಕಥೆ?
 ನೀವೆಲ್ಲಾ ದೇವರು ಸೃಷ್ಟಿಸಿದ ಸಹೋದರ ಸಹೋದರಿಯರು. ಆದರೆ ನೀವು ಭೂಮಿ ತಾಯಿಯ ಗರ್ಭದಲ್ಲಿದ್ದೀರಿ. ನಿಮ್ಮನ್ನು ಕತ್ತಲ ಗರ್ಭದಿಂದ ಬಿಡುಗಡೆಗೊಳಿಸುವಾಗ ದೇವರು ಕೆಲವರ ಜತೆ ಚಿನ್ನ ಬೆರೆಸಿದ. ಅವರು ಆಳುವವರು. ಇವರಿಗೆ ನೆರವಾಗುವ ರಕ್ಷಕರನ್ನು (ಸೈನಿಕರನ್ನು/ಗಾರ್ಡಿಯನ್)ರನ್ನು ಸೃಷ್ಟಿಸುವಾಗ ಬೆಳ್ಳಿ ಬೆರೆಸಿದ. ಇವರು ‘ಆಕ್ಸಿಲಿಯರೀಸ್’. ಉಳಿದವರು ಕುಶಲಕರ್ಮಿಗಳು, ಕೆಲಸಗಾರರು (ಗುಲಾಮರು). ಇವರನ್ನು ಸೃಷ್ಟಿಸುವಾಗ ಹಿತ್ತಾಳೆ ಮತ್ತು ಕಬ್ಬಿಣ ಬೆರೆಸಿದ. ಇವರೆಲ್ಲ ತಮ್ಮ ತಮ್ಮ ವರ್ಗಕ್ಕೆ ಹೇಳಲಾದ ಕೆಲಸಗಳನ್ನು ಮಾಡುತ್ತಿರಬೇಕು.ಆಡಳಿತವು ಹಿತ್ತಾಳೆ ಮತ್ತು ಕಬ್ಬಿಣ ಮಿಶ್ರಣದವರ ಕೈಗೆ ಹೋದರೆ ದೇಶ ಅಂತ್ಯಗೊಳ್ಳುತ್ತದೆ ಎಂದು ದೇವವಾಣಿಯಾಗಿದೆ.’’

ಆದರೆ ಈ ಕಥೆಯನ್ನು ನಾಗರಿಕರು ನಂಬುತ್ತಾರೆಯೇ? ಈ ಪ್ರಶ್ನೆಗೆ ಉತ್ತರ: ‘‘ಇಂದಿನ ತಲೆಮಾರು ನಂಬದಿರಬಹುದು. ಮುಂದಿನ ತಲೆಮಾರು ನಂಬುತ್ತದೆ’’ ಈ ಕತೆಯಲ್ಲಿರುವ ರೂಪಕಕ್ಕೆ ಸಾರ್ವಕಾಲಿಕ ಮೌಲ್ಯವಿದೆ. ಇಂದಿಗೂ ಪ್ಲೇಟೋ ಹೇಳುವ ಭವ್ಯವಾದ ಸುಳ್ಳು ನಮ್ಮ ದೇಶದಲ್ಲಿ ವಿಜೃಂಭಿಸುತ್ತಾ ತಾನೇ ತಾನಾಗಿ ಸರ್ವಭೌಮವಾಗಿ ಮೆರೆಯುತ್ತಿದೆ. ‘‘ನಾವು ಅಧಿಕಾರಕ್ಕೆ ಬಂದರೆ, ವಿದೇಶದಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ಬಿಳಿ ಹಣ ಜಮಾ ಮಾಡುತ್ತೇವೆ’’; ‘‘ಪ್ರತೀ ವರ್ಷ ನಾವು ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ’’ ಎಂದು ಆಶ್ವಾಸನೆ ನೀಡಿದವರ ಆಶ್ವಾಸನೆ ಸುಳ್ಳಾಯಿತು.

‘‘ನನ್ನ ಖಾತೆಗೆ ಹದಿನೈದು ರೂಪಾಯಿ ಕೂಡಾ ಬಂದು ಬೀಳಲಿಲ್ಲವಲ್ಲ’’ ಎಂದು ಕೇಳುವವನಿದ್ದರೆ ಅವನ ಮೇಲೆ ಮುಗಿಬೀಳಲು ವಿವಿಧ ಪಡೆಗಳೇ ಸಿದ್ಧವಾಗಿವೆ. ‘‘ನೀವು ಹೇಳಿದ್ದು ಸುಳ್ಳೇ, ಹಾಗಾದರೆ?’’ ಎಂದು ಕೇಳಲಾಗದ ಮಟ್ಟಕ್ಕೆ ಸುಳ್ಳುಗಳನ್ನು ಹೇಳಲಾಗಿದೆ. ಜೈಲಿನಲ್ಲಿದ್ದ ಹುತಾತ್ಮ ಭಗತ್ ಸಿಂಗ್‌ರನ್ನು ಜವಾಹರ ಲಾಲ್ ನೆಹರೂ ಅವರು ಭೇಟಿಯಾಗಿದ್ದಕ್ಕೆ ಪ್ರಬಲವಾದ ಪುರಾವೆಗಳಿದ್ದರೂ ಅವರು ಭಗತ್‌ಸಿಂಗ್‌ರನ್ನು ಭೇಟಿಯಾಗಲೇ ಇಲ್ಲ ಎಂದು ಹೇಳಲಾಯಿತು. ‘‘ಪುರಾವೆ ಇದೆ, ನೋಡಿ’’ ಎಂದರೆ ಯಾರೂ ಕೇಳಿಸಿಕೊಳ್ಳುವುದಿಲ್ಲ. ಹೀಗೆ ಹತ್ತಾರು ಸುಳ್ಳುಗಳು ಸರಕಾರಿ ಕೃಪಾಪೋಷಿತ ಸುಳ್ಳುಗಳಾಗಿ ಮೆರೆದಾಡುವಾಗ, ಸುಳ್ಳುಗಳನ್ನು ಹೇಳಿದವರು ಇನ್ನೊಂದು ಸುಳ್ಳಿನ ಹುಡುಕಾಟದಲ್ಲಿರುತ್ತಾರೆ.

 ‘‘ಸತ್ಯಂ ಭ್ರೂಯಾತ್ ನಭ್ರೂಯಾತ್ ಸತ್ಯಮಪ್ರಿಯಂ’’ (ಸತ್ಯವನ್ನೇ ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಕೂಡದು) ಎಂಬ ನಮ್ಮ ಪ್ರಾಚೀನ ಪರಂಪರೆಯ ಮಹಾನ್‌ಭಕ್ತರಾಗಿರುವ ನಾವೆಲ್ಲಾ ಆಗಾಗ ಕೋಟ್ ಮಾಡುವ ಮಾತು ಪ್ಲೇಟೋನ ‘ಭವ್ಯ ಸುಳ್ಳಿನ’ ವೇಷ ಬದಲಿಸುವ ‘ಸತ್ಯ’ವಾಗಿದೆ. ನಮ್ಮಲ್ಲಿ ಅಪ್ರಿಯ ಸತ್ಯವನ್ನು ಹೇಳುವುದು (‘‘ನನ್ನ ಖಾತೆಗೆ ಹಣ ಬಂದಿಲ್ಲ’’ ಎನ್ನುವುದು) ‘‘ನೀವು ಹೇಳಿದ್ದು ಸುಳ್ಳೇ ಹಾಗಾದರೆ?’’ ಎಂದು ಕೇಳುವುದಕ್ಕೆ ಸಮನಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನಮ್ಮನ್ನು ಆಳುವ ಪ್ರಭುಗಳು ಸುಳ್ಳು ಹೇಳಬಹುದು. ಏಕೆಂದರೆ ಅವರ ಬಳಿ ಕೋವಿ ಇದೆ. ನಾಗರಿಕರು ಅಪ್ರಿಯ ಸತ್ಯವನ್ನು ಕೂಡ ಹೇಳಲಾಗದು. ಏಕೆಂದರೆ ಅವರ ಬಳಿ ಇರುವುದು ಮತಪತ್ರ ಮಾತ್ರ. ಪ್ಲೇಟೋನ ‘ರಿಪಬ್ಲಿಕ್’ನಲ್ಲಿ ಚಿನ್ನ, ಬೆಳ್ಳಿ, ಹಿತ್ತಾಳೆ ಮತ್ತು ಕಬ್ಬಿಣದ ಮಿಶ್ರಣವಾಗದಂತೆ ನೋಡಿಕೊಳ್ಳಬೇಕೆಂದು ದೇವವಾಣಿಯಾಗಿದ್ದರೆ, ನಮ್ಮ ಪ್ರಜಾಪ್ರಭುತ್ವದಲ್ಲಿ ಇಂತಹ ಮಿಶ್ರಣವಾಗದಂತೆ ನಮ್ಮ ಜಾತಿ ವ್ಯವಸ್ಥೆ ನೋಡಿಕೊಂಡಿದೆ. ಅಲ್ಲಿಯ ಚಿನ್ನ, ಬೆಳ್ಳಿ, ಹಿತ್ತಾಳೆ, ಕಬ್ಬಿಣ ಇಲ್ಲಿ ಸವರ್ಣೀಯ, ಮೇಲ್ಜಾತಿ, ಮಧ್ಯಮ ಜಾತಿ, ಮುಂದುವರಿದ ಜಾತಿ, ಹಿಂದುಳಿದ ಜಾತಿ, ಸ್ಪೃಶ್ಯ ಜಾತಿ, ಅಸ್ಪೃಶ್ಯ ಜಾತಿ, ಮಡಿ ಜಾತಿ, ಮೈಲಿಗೆ ಜಾತಿಯಾಗಿ ನಮ್ಮ ರಾಜಕೀಯ ಸಾಮಾಜಿಕ ಸೌಹಾರ್ದ ಪರದೆಯನ್ನು ಹರಿದು ಚಿಂದಿ ಚೂರಾಗಿಸಿದೆ.

ಇದರ ಜೊತೆಗೆ ನಮ್ಮ ಶಾಸನ ಸಭೆಗಳಲ್ಲಿ, ಸಂಸತ್‌ನಲ್ಲಿ ಗಂಡು ಜಾತಿಗೆ ಎಷ್ಟು ಸ್ಥಾನ? ಎಷ್ಟು ಅಧಿಕಾರ? ಹೆಣ್ಣು ಜಾತಿಗೆ ಎಷ್ಟು ಅಧಿಕಾರ? ಎಂಬ ಚರ್ಚೆ ಇನ್ನೂ ನಡೆಯುತ್ತಲೇ ಇದೆ. ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯಾಗುವ ಚಿನ್ನ, ಬೆಳ್ಳಿ ಸಮುದಾಯಗಳು ಮತ್ತು ಹಿತ್ತಾಳೆ, ಕಬ್ಬಿಣ ಸಮುದಾಯಗಳು ಯಾವಾಗಲೂ ತಮ್ಮ ತಮ್ಮ ಪಾಲಿಗೆ ಬರಬೇಕಾದ ಸಿಂಹಪಾಲಿಗಾಗಿ ಪಕ್ಷ ಭೇದ ಮರೆತು ಹೋರಾಡಿವೆ. ಇಷ್ಟೇ ಸಾಲದು ಎಂಬಂತೆ ಇತ್ತೀಚಿನ ದಶಕಗಳಲ್ಲಿ ಧರ್ಮ ಮತ್ತು ರಾಜಕಾರಣದ ಮಿಶ್ರಣವೂ ಇಲ್ಲಿ ಉಲ್ಲೇಖಿಸಿರುವ ಲೋಹಗಳ ಮಿಶ್ರಣಕ್ಕಿಂತಲೂ ಹೆಚ್ಚು ಭಯಾನಕವಾದ ವಾದಗಳಿಗೆ, ವಿತಂಡ ವಾದಗಳಿಗೆ, ಸುಳ್ಳುಗಳ ಉತ್ಪನ್ನಕ್ಕೆ, ಪುರಾಣ ಮತ್ತು ಇತಿಹಾಸಗಳ ಡೆಡ್ಲಿ ಮಿಶ್ರಣಕ್ಕೆ ಕಾರಣವಾಗಿ ದ್ವೇಷ ವ್ಯಾಪಾರಿಗಳು ಸೃಷ್ಟಿಸುವ ಹೊಸ ನಮೂನೆಯ ಸುಳ್ಳುಗಳಿಗೆ ಸಹಾಯಕವಾಗಿದೆ. ‘ಸತ್ಯವಂತರಿಗಿದು ಕಾಲವಲ್ಲ’ ಎಂದು ಸುಲಭವಾಗಿ ಹೇಳಿ ಆರಾಮ ಕುರ್ಚಿಯಲ್ಲಿ ಕಾಫಿ ಟೀ ಹೀರುತ್ತಾ ನಾವು ನಮ್ಮ ಎಂದಿನ ಸೀರಿಯಲ್ಗಳನ್ನು ನೋಡುತ್ತಾ ಕುಳಿತುಕೊಳ್ಳಬಹುದಾದರೂ, ಪ್ರಜಾಪ್ರಭುತ್ವದಲ್ಲಿ ಸುಳ್ಳುಗಳ ಸಾರ್ವಭೌಮತ್ವದ ಸುನಾಮಿಯನ್ನು ಎದುರಿಸುವುದು ಹೇಗೆ? ಎಂದು ಎಲ್ಲರೂ ಯೋಚಿಸಬೇಕಾದ ಕಾಲ ಬಂದಿದೆ.

Writer - ಡಾ. ಬಿ. ಭಾಸ್ಕರ್ ರಾವ್

contributor

Editor - ಡಾ. ಬಿ. ಭಾಸ್ಕರ್ ರಾವ್

contributor

Similar News