ಮೊಬೈಲ್ ತಂತ್ರಜ್ಞಾನ, ಇಮ್ಮೊಬೈಲ್ ಜೀವನ
ಇತ್ತೀಚಿನ ದಿನಗಳಲ್ಲಿ ಜನರ ದೈಹಿಕ ಚಟುವಟಿಕೆಗಳ ಕೊರತೆಗೆ ವಿದ್ಯುನ್ಮಾನ ಮಾಧ್ಯಮದ ಕೊಡುಗೆಗಳಾದ ಟಿವಿ, ಇಂಟರ್‌ನೆಟ್, ಮೊಬೈಲ್ ಫೋನ್, ಸ್ಮಾರ್ಟ್ ಫೋನ್‌ಗಳಲ್ಲಿ ಲಭ್ಯವಾಗುವ ವಾಟ್ಸ್ ಆ್ಯಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ವಿಚ್ಯಾಟ್ ಇತ್ಯಾದಿ ಸಂಪರ್ಕ ಸಾಧನಗಳು ಕಾರಣವಾಗಿ, ವಿಶ್ವದಾದ್ಯಂತ ಕೋಟಿಗಟ್ಟಲೆ ಜನರ ಬದುಕಿನಲ್ಲಿ ಚಲನೆಯನ್ನೇ ಅಥವಾ ಮೊಬಿಲಿಟಿಯನ್ನೇ ಕಣ್ಮರೆಯಾಗಿಸಿವೆ.
‘‘ತಂತ್ರಜ್ಞಾನ ಮತ್ತು ಗುಲಾಮಗಿರಿಯ ನಡುವೆ ಇರುವ ವ್ಯತ್ಯಾಸವೆಂದರೆ ಗುಲಾಮಗಿರಿಗೆ ತಾವು ಸ್ವತಂತ್ರರಲ್ಲ ಎಂದು ಸಂಪೂರ್ಣವಾಗಿ ತಿಳಿದಿರುತ್ತದೆ’’.
*ಲೆಬಾನೀಸ್-ಅಮೆರಿಕನ್ ಲೇಖಕ ನಾಸಿಮ್ ನಿಕೋಲಸ್ ತಾಲೆಬ್
ಮಾನವನ ಇತಿಹಾಸ ಮತ್ತು ವಿಕಾಸದೊಂದಿಗೆ ತಳಕು ಹಾಕಿಕೊಂಡಿರುವ ತಂತ್ರಜ್ಞಾನ ಮನುಷ್ಯನಿಗೆ ಹೊಸ ಹೊಸ ಸಲಕರಣೆಗಳನ್ನು, ಸವಲತ್ತುಗಳನ್ನು ಸೃಷ್ಟಿಸಲು ನೆರವಾಗುತ್ತಾ ಅವನ ಬದುಕನ್ನು ಬದಲಿಸುತ್ತ ಅವನ ನಾಗರಿಕತೆಗೆ ಹೊಸ ಹೊಸ ಆಯಾಮಗಳನ್ನು ನೀಡುತ್ತ ಬಂದಿದೆ. 15 ಲಕ್ಷ ವರ್ಷಗಳ ಹಿಂದೆ ಬೆಂಕಿಯನ್ನು ತಾನೇ ತಾನಾಗಿ ಸೃಷ್ಟಿಸುವ ಮೊತ್ತ ಮೊದಲ ತಂತ್ರಜ್ಞಾನದಿಂದ ಆರಂಭಿಸಿ, ಇದೀಗ ನಮ್ಮ ನಮ್ಮ ಮನೆಗಳಲ್ಲಿ ನಾವು ಆಡುವ ಮಾತುಗಳನ್ನು, ನೋಡುವ ಟಿವಿ ಕಾರ್ಯಕ್ರಮಗಳನ್ನು ಗುಪ್ತವಾಗಿ ದಾಖಲಿಸಿ ಸರಕಾರದ ದಾಖಲೆ ಕೇಂದ್ರವೊಂದಕ್ಕೆ ರವಾನಿಸಿ, ನಮ್ಮ ಮೇಲೆ ಸದಾ ಕಣ್ಣಿಟ್ಟಿರುವ ‘ಬಿಗ್ ಬ್ರದರ್’ಗೆ ಬೇಕಾದ ಹಾಗೆ ನಮ್ಮ ಕುರಿತಾದ ಎಲ್ಲ ಮಾಹಿತಿಗಳನ್ನು ಬಳಸಿಕೊಳ್ಳುವ ಅತ್ಯಾಧುನಿಕ ತಂತ್ರಜ್ಞಾನದವರೆಗೆ ತಂತ್ರಜ್ಞಾನ ಬೆಳೆದುಬಂದಿದೆ. ಈ ಬೆಳವಣಿಗೆಯ ಇತ್ತೀಚಿನ, ಕಳೆದ ಎರಡು ದಶಕಗಳ ಗತಿ ಗಾಬರಿ ಹುಟ್ಟಿಸುವುದರ ಜೊತೆಗೆ ನಮ್ಮ ಸಾಮಾನ್ಯ ಜೀವನದ ಲಯಗಳನ್ನೇ ನಾವು ಕಳೆದುಕೊಳ್ಳುವಂತೆ ಮಾಡಿ ಅನೂಹ್ಯ ಸಮಸ್ಯೆಗಳನ್ನು ಸಂಕೀರ್ಣ ಸಂಕಟಗಳನ್ನು ತಂದೊಡ್ಡುತ್ತಿವೆ; ಜೀವನ ಸಹಜವಾದ ಕೂಟ, ಆಟ, ಓಡಾಟಗಳನ್ನೇ ಅಸಾಧ್ಯವಾಗಿಸುತ್ತಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಭಾರತದ ಶೇ.54.4ರಷ್ಟು ಮಂದಿಯಲ್ಲಿ ದೈಹಿಕ ಚಟುವಟಿಕೆಯ ಕೊರತೆ ತೀರಾ ಸಾಮಾನ್ಯ. ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುವಂತೆ ಐದು ಮಂದಿ ವಯಸ್ಕರಲ್ಲಿ ಓರ್ವ ಮತ್ತು ಐದು ಮಂದಿ ಹದಿಹರೆಯ (11-17 ವರ್ಷಗಳು)ದವರಲ್ಲಿ ನಾಲ್ಕು ಮಂದಿ ಜಾಗತಿಕವಾಗಿ ದೈಹಿಕ ಚಟುವಟಿಕೆ ಇಲ್ಲದವರು. ಈ ದೈಹಿಕ ಚಟುವಟಿಕೆಯ ಕೊರತೆ ಆರೋಗ್ಯ ಸಂಬಂಧಿಯಾದ 54 ಬಿಲಿಯ ಡಾಲರ್ ವೆಚ್ಚಕ್ಕೆ ಕಾರಣವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಜನರ ದೈಹಿಕ ಚಟುವಟಿಕೆಗಳ ಕೊರತೆಗೆ ವಿದ್ಯುನ್ಮಾನ ಮಾಧ್ಯಮದ ಕೊಡುಗೆಗಳಾದ ಟಿವಿ, ಇಂಟರ್‌ನೆಟ್, ಮೊಬೈಲ್ ಫೋನ್, ಸ್ಮಾರ್ಟ್ ಫೋನ್‌ಗಳಲ್ಲಿ ಲಭ್ಯವಾಗುವ ವಾಟ್ಸ್ ಆ್ಯಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ವಿಚ್ಯಾಟ್ ಇತ್ಯಾದಿ ಸಂಪರ್ಕ ಸಾಧನಗಳು ಕಾರಣವಾಗಿ, ವಿಶ್ವದಾದ್ಯಂತ ಕೋಟಿಗಟ್ಟಲೆ ಜನರ ಬದುಕಿನಲ್ಲಿ ಚಲನೆಯನ್ನೇ ಅಥವಾ ಮೊಬಿಲಿಟಿಯನ್ನೇ ಕಣ್ಮರೆಯಾಗಿಸಿವೆ.
15ನೇ ಶತಮಾನದಲ್ಲಿ ಮೊದಲ ಬಾರಿಗೆ ಬಳಕೆಯಾದ ‘ಮೊಬೈಲ್’ ಎಂಬ ಶಬ್ದದ ಅರ್ಥವೇ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸುವ, ಸಂಚಾರ ಮಾಡುವ ಸಾಮರ್ಥ್ಯ ಉಳ್ಳದ್ದು ಎಂದು. ಆದರೆ ಈಗ ಬಂದಿರುವ ಮೊಬೈಲ್ ತಂತ್ರಜ್ಞಾನ ನಮ್ಮ ಜೀವನವನ್ನೇ ಇಮ್ಮೊಬೈಲ್ ಮಾಡಿದೆ; ಚಲನೆ ರಹಿತವಾಗಿಸಿದೆ. ಇದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ ನಮ್ಮ ತಂತ್ರಜ್ಞಾನ ವ್ಯಸನ ಮನುಷ್ಯ ಸಂಬಂಧಗಳ ಕುದುರುವಿಕೆಯನ್ನೇ ಮೊಟಕುಗೊಳಿಸುತ್ತಿದೆ. ತುಂಬ ಚಿಕ್ಕ ವಯಸ್ಸಿನಲ್ಲೇ ಜನರಿಗೆ ಮೊಬೈಲ್ ತಂತ್ರಜ್ಞಾನದ ಪರಿಚಯವಾಗುತ್ತಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ. ಮನೋ ವಿಜ್ಞಾನಿಗಳ ಪ್ರಕಾರ ಜನರು ತಮ್ಮ ಮೊಬೈಲ್ ಫೋನ್‌ಗಳಿಗೆ ಎಷ್ಟೊಂದು ಅಂಟಿಕೊಂಡಿದ್ದಾರೆಂದರೆ ಅದೊಂದು ವ್ಯಸನವಾಗಿ, ದೈಹಿಕ ದುರ್ಬಲರು ಊರುಗೋಲನ್ನು ಅವಲಂಬಿಸುವಂತೆ, ಅವರು ಫೋನುಗಳನ್ನು ಅವಲಂಬಿಸಿದ್ದಾರೆ.
ಈ ಅವಲಂಬನೆಯ ಹೊರತಾಗಿ ಬದುಕು ಅಸಾಧ್ಯ ಎಂಬ ಹಂತವನ್ನು ಅವರು ತಲುಪಿದ್ದಾರೆ. ಆದರೆ ನಮ್ಮ ಕಣ್ಣುಗಳಿಗೆ ಮತ್ತು ಇದಕ್ಕಿಂತ ಹೆಚ್ಚಾಗಿ ನಮ್ಮ ಮನಸ್ಸುಗಳಿಗೆ ಆರಾಮವೆನ್ನಿಸಲು, ರಿಲ್ಯಾಕ್ಸ್ ಮಾಡಲು ಕಾಲಾವಕಾಶ ಬೇಕಾಗುವುದರಿಂದ, ಸತತವಾಗಿ ಒಂದು (ಮೊಬೈಲ್ ಅಥವಾ ಟಿವಿ) ಪರದೆಯನ್ನು ದಿಟ್ಟಿಸಿ ನೋಡುತ್ತಲೇ ಇರುವಂತೆ ನಮ್ಮ ದೇಹಗಳು ವಿನ್ಯಾಸಗೊಂಡಿಲ್ಲ ಮತ್ತು ಅವುಗಳು ಇರುವುದು ಹೀಗೆ ದಿಟ್ಟಿಸಿ ನೋಡುತ್ತಲೇ ಇರುವುದಕ್ಕಾಗಿಯೂ ಅಲ್ಲ. ಮನೋವಿಜ್ಞಾನಿ ನ್ಯಾನ್ಸಿ ಕೊಲಿಯರ್ ಹೇಳುತ್ತಾರೆ: ‘‘ತೆರೆದ ಜಾಗಗಳ ಹಾಗೂ ವಿಶ್ರಾಂತಿಗಳ ಹೊರತಾಗಿ, ನಮ್ಮ ನರಮಂಡಲ ವ್ಯವಸ್ಥೆ ಎಂದೂ ವಿರಮಿಸುವುದಿಲ್ಲ. ಅದು ಯಾವಾಗಲೂ ಫೈಟ್ ಅಥವಾ ಫ್ಲೈಟ್ ಮೋಡ್‌ನಲ್ಲೇ ಇರುತ್ತದೆ. ನಾವು ಯಾವಾಗಲೂ, ಅವಿರತವಾಗಿ ವಯರ್ಡ್ ಮತ್ತು ಟಯರ್ಡ್.
ಕಂಪ್ಯೂಟರ್‌ಗಳು ಕೂಡ ರೀಬೂಟ್ ಮಾಡಿಕೊಳ್ಳುತ್ತವೆ. ಆದರೆ ನಾವು ರೀಬೂಟ್ ಮಾಡಿಕೊಳ್ಳುವುದಿಲ್ಲ (ವಿರಮಿಸಿ ಮತ್ತೆ ಮೊಬೈಲ್ ಕ್ಲಿಕ್ಕಿಸುವುದಿಲ್ಲ)’’.
ಮಕ್ಕಳು ತೆರೆದ ಬಯಲಲ್ಲಿ ಆಡುವುದಿಲ್ಲ. ಅವರ ಕಲ್ಪನೆ ಬೆಳೆಯಲು ಬೇಕಾದ ಅವಕಾಶವನ್ನೇ ಪಡೆಯುವುದಿಲ್ಲ. ಯಾಕೆಂದರೆ ಅವರು ಯಾವಾಗಲೂ ವೀಡಿಯೊ ಗೇಮ್ಸ್ ಆಡುತ್ತಿರುತ್ತಾರೆ. ಮೊಬೈಲ್‌ನಲ್ಲಿ ಚ್ಯಾಟ್ ಮಾಡುತ್ತಾರೆ. ಇದು ಎಷ್ಟೊಂದು ವ್ಯಾಪಕ ಮತ್ತು ಸಾಂಕ್ರಾಮಿಕವಾಗಿದೆಯೆಂದರೆ ವಿಶ್ವ ಆರೋಗ್ಯ ಸಂಸ್ಥೆ ವೀಡಿಯೊ ಗೇಮ್ಸ್ ವ್ಯಸನವನ್ನು ಒಂದು ಮಾನಸಿಕ ಕಾಯಿಲೆ ಎಂದು ಘೋಷಿಸಿದೆ.
ಮನೋರಂಜನೆಗಾಗಿ, ಸಂತೋಷಕ್ಕಾಗಿ ನಾವು ಟಿವಿ/ಮೊಬೈಲ್ ಪರದೆಗಳ ಮುಂದೆ ಕಾಲ ಕಳೆಯುತ್ತೇವೆ ಎಂದು ನಾವು ತಿಳಿದಿದ್ದೇವೆ. ಆದರೆ ಪರದೆಗಳ ಮುಂದೆ, ಅವುಗಳಿಗಾಗಿ ನಾವು ವ್ಯಯಿಸುವ ಅವಧಿಗೂ ನಮ್ಮ ಸಂತೋಷದ ಮಟ್ಟಗಳಿಗೂ ನಡುವೆ ಒಂದು ತಾಳೆ ಇದೆ ಎನ್ನುತ್ತದೆ ಅಧ್ಯಯನಗಳು. ಅಮೆರಿಕದಲ್ಲಿ ನಡೆಸಿದ ರಾಷ್ಟ್ರೀಯವಾಗಿ ಪ್ರಾತಿನಿಧಿಕವಾದ ‘ಮಾನಿಟರಿಂಗ್ ದಿ ಫ್ಯೂಚರ್ ಸರ್ವೇ’ ಎಂಬ ಒಂದು ಸಮೀಕ್ಷೆಯ ಪ್ರಕಾರ ‘‘ಪರದೆ ಚಟುವಟಿಕೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಸಮಯ ಕಳೆಯುವ ಹದಿಹರೆಯದವರು ಸಂತೋಷವಾಗಿಲ್ಲದಿರುವ ಸಾಧ್ಯತೆಗಳು ಇತರರಿಗಿಂತ ಹೆಚ್ಚು ಮತ್ತು ಪರದೆಯೇತರ (ನಾನ್ ಸ್ಕ್ರೀನ್) ಚಟುವಟಿಕೆಗಳಲ್ಲಿ ಹೆಚ್ಚು ಸಮಯ ವಿನಿಯೋಗಿಸುವವರು ಸಂತೋಷವಾಗಿರುವ ಸಾಧ್ಯತೆ ಹೆಚ್ಚು’’.
ಮೊಬೈಲ್ ವ್ಯಸನ ಹದಿಹರೆಯದವರನ್ನು ಮಾತ್ರ ಕಾಡುವ ವ್ಯಸನ ಎಂದು ಬಹಳ ಮಂದಿ ಪೋಷಕರು ತಿಳಿಯುತ್ತಾರೆ. ಆದರೆ ಈ ವ್ಯಸನ ಈ ಎಲ್ಲಾ ವಯೋಮಾನದವರನ್ನು ಕಾಡುವ ಪೀಡೆಯಾಗಿ, ಅವರಿಗೆ ತಿಳಿಯದಂತೆಯೇ ಅವರ ಸಾಮಾಜಿಕ ಹಾಗೂ ಮಾನಸಿಕ ಜೀವನವನ್ನೇ ಹಾಳುಗೆಡವುತ್ತಿದೆ. ಮನೋವೈದ್ಯೆ ಲೀಸಾ ಮೆರ್ಲೊ ತನ್ನಲ್ಲಿಗೆ ಬರುವ ‘‘ಕೆಲವು ರೋಗಿಗಳು ಪಾರ್ಟಿಯೊಂದರಲ್ಲಿ, ಸಾರ್ವಜಿನಿಕ ಸಮಾರಂಭಗಳಲ್ಲಿ ಕಣ್ಣಿನ ಸಂಪರ್ಕ (ಐ ಕಾಂಟಾಕ್ಟ್) ತಪ್ಪಿಸಲು, ತಮ್ಮ ಎದುರು ಇರುವವರ ಮುಖವನ್ನು ನೋಡದೆ ಇರಲು ತಾವು ಫೋನಿನಲ್ಲಿ ಮಾತಾಡುತ್ತಿರುವಂತೆ ನಟಿಸುತ್ತಾರೆ ಅಥವಾ ಆ್ಯಪ್‌ಗಳೊಂದಿಗೆ ಬೆರಳಾಡಿಸುತ್ತಾರೆ’’ ಎಂದಿದ್ದಾರೆ.
ಸಮೀಕ್ಷೆಯೊಂದರ ಪ್ರಕಾರ, ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.25ಕ್ಕಿಂತಲೂ ಹೆಚ್ಚು ಮಂದಿ ತಾವು ಊಟ, ಭೋಜನ ಕೂಟ ಅಥವಾ ಪಾರ್ಟಿಯಂತಹ ಒಂದು ಸಾಮಾಜಿಕ ಸನ್ನಿವೇಶದಲ್ಲಿರುವಾಗ, ಹೆಚ್ಚು ಕಡಿಮೆ ಯಾವಾಗಲೂ ಸ್ಮಾರ್ಟ್ ಫೋನ್ ಬಳಸುತ್ತಿರುತ್ತೇವೆ ಎಂದು ಹೇಳಿದ್ದಾರೆ. ಹಾಗಾದರೆ ನಾವು ಎಷ್ಟೊಂದು ಬಾರಿ ಮೊಬೈಲ್ ಫೋನನ್ನು ‘ಚೆಕ್’ ಮಾಡುತ್ತೇವೆ?
ಮೊಬೈಲ್ ತಂತ್ರಜ್ಞಾನವನ್ನು ಬಳಸುವವರಲ್ಲಿ ಶೇ.75ರಷ್ಟು ಮಂದಿ ತಾವು ಬೆಳಗ್ಗೆ ಎದ್ದು ಒಂದು ಗಂಟೆಯೊಳಗಾಗಿ ತಮ್ಮ ಫೋನ್ ಚೆಕ್ ಮಾಡಿದರೆ, ಶೇ.56ರಷ್ಟು ಮಂದಿ ರಾತ್ರಿ ಮಲಗುವ ಮೊದಲು, ಶೇ.48ರಷ್ಟು ಮಂದಿ ವಾರಾಂತ್ಯದಲ್ಲಿ, ಶೇ.51ರಷ್ಟು ಮಂದಿ ರಜಾ ದಿನಗಳಲ್ಲಿ ಪ್ರವಾಸ ಹೋದಾಗ ತಮ್ಮ ಫೋನ್ ಚೆಕ್ ಮಾಡುತ್ತಾರೆ. ತಾವು ಒಂದು ವಾರದೊಳಗಾಗಿ ತಮ್ಮ ಫೋನ್ ಚೆಕ್ ಮಾಡದೇ ಇದ್ದಲ್ಲಿ ತಾವು ತುಂಬ ಆತಂಕಿತರಾಗುತ್ತೇವೆ ಮತ್ತು ಮನಸ್ಸಿಗೆ ತುಂಬ ಕಿರಿಕಿರಿಯಾಗುತ್ತದೆ (ಎಲ್ಲದರ/ಎಲ್ಲವರ ಬಗ್ಗೆ ಸಿಟ್ಟು ಬರುತ್ತದೆ) ಎಂದಿದ್ದಾರೆ ಅವರು.
ಒಟ್ಟಿನಲ್ಲಿ ಮುಖಾಮುಖಿಯಾಗಿ ನಡೆಸುವ ಮಾತುಕತೆ, ಸಂಭಾಷಣೆ ಈಗ ಮೊಬೈಲ್ ‘ಟೆಕ್ಸ್‌ಟಿಂಗ್’ ಮೂಲಕ ನಡೆಯುತ್ತದೆ. ಇದರ ಹಾನಿಕಾರಕ ಪರಿಣಾಮಗಳನ್ನೂ ಮನಃಶಾಸ್ತ್ರಜ್ಞರು ಗುರುತಿಸಿದ್ದಾರೆ. ಜನರ ಸಾಮಾಜಿಕ ವರ್ತನೆಯಲ್ಲೇ ಬದಲಾವಣೆಗಳು ಕಾಣಿಸಿಕೊಂಡು ಪತ್ನಿ ಯಾವಾಗಲೂ ವಾಟ್ಸ್ ಆ್ಯಪ್‌ನಲ್ಲಿ ‘ಚ್ಯಾಟ್’ ಮಾಡುತ್ತಿರುತ್ತಾಳೆಂದು ಪತಿ ದೂರುವುದು, ಜಗಳವಾಡುವುದು, ಇಬ್ಬರಲ್ಲೊಬ್ಬರು ಅಥವಾ ಇಬ್ಬರೂ ಜೊತೆಯಾಗಿ ಅಥವಾ ಬೇರೆ ಬೇರೆಯಾಗಿ ಒಂದೇ ಮನೆಯ ಎರಡು ಕೋಣೆಗಳಲ್ಲಿ ನೇಣು ಹಾಕಿಕೊಂಡು ಸಾಯುವುದು, ಮನೆಯ ಮೂರನೆಯ ಕೋಣೆಯಲ್ಲಿರುವ ಮೂರು ವರ್ಷದ ಮಗುವನ್ನು ಅನಾಥವಾಗಿಸುವುದು, ದೂರದ ಅಮೆರಿಕದಲ್ಲಲ್ಲ, ಕೆಂಪೇಗೌಡರ ಬೆಂಗಳೂರಿನಲ್ಲೇ ನಡೆಯಲಾರಂಭಿಸಿದೆ.
ಇಬ್ಬರು ಆತ್ಮೀಯವಾಗಿ ಪರಸ್ಪರ ಮಾತಾಡಿಕೊಳ್ಳುವಾಗ, ಮಲಗುವಾಗ ಅಲ್ಲಿ ಮೂರನೆಯ ಒಂದು ವ್ಯಕ್ತಿ ಇದ್ದರೆ ಏನಾಗುತ್ತದೆ? ಈಗ ಆ ಮೂರನೆಯ ವ್ಯಕ್ತಿ ಅಥವಾ ಇಬ್ಬರ ಹೊರತಾದ ಮೂರನೆಯ ಒಂದು ‘‘ಪ್ರೆಸೆನ್ಸ್’’ ಮೊಬೈಲ್ ತಂತ್ರಜ್ಞಾನವಾಗಿದೆ. ಮನೋವಿಜ್ಞಾನಿ ಶೇರಿ ಟರ್ಕೆಲ್ ಇದನ್ನು ‘ಕೊ-ಪ್ರೆಸೆನ್ಸ್’ (ಸಹ ಅಸ್ತಿತ್ವ) ಎಂದು ಕರೆದಿದ್ದಾರೆ. ಅಂದರೆ ಮೊಬೈಲ್ ಮೂಲಕ ಸಾಧ್ಯವಾಗುವ ಡಿಜಿಟಲ್ ಸಂವಹನವು ಒಂದೇ ಜಾಗ ಮತ್ತು ಒಂದೇ ವೇಳೆಯಲ್ಲಿ, ಎರಡು ಅಥವಾ ಎರಡಕ್ಕಿಂತ ಹೆಚ್ಚು ವಾಸ್ತವಗಳು ಇರುವುದಕ್ಕೆ, ಸಂಭವಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಪತಿ ತನ್ನ ಪತ್ನಿಯ ಜೊತೆ ಏಕಾಂತದಲ್ಲಿರುವಾಗ ಆತ ‘ಇಲ್ಲಿ ನಾವಿಬ್ಬರೇ’ ಎಂದು ತಿಳಿದಿರುತ್ತಾನೆ. ಆದರೆ ಪತ್ನಿ ಅದೇ ವೇಳೆ ತನ್ನ ಮೊಬೈಲ್‌ನಲ್ಲಿ ತನ್ನ ಗೆಳತಿಯೊಂದಿಗೋ ಇನ್ಯಾರೊಂದಿಗೋ ಮಾತಾಡುತ್ತಾ, ‘ಚ್ಯಾಟ್’ ಮಾಡುತ್ತಾ, ನಗುನಗುತ್ತಾ ಸಂತೋಷವಾಗಿರುವಾಗ, ಆತನಿಗೆ ಇಲ್ಲಿ ನಮ್ಮಿಬ್ಬರ ‘ಪ್ರಸೆನ್ಸ್’ ಅಥವಾ ಅಸ್ತಿತ್ವ (ಹಾಜರಿ) ಅಲ್ಲದೆ, ಇನ್ಯಾರೋ ಒಬ್ಬರ ‘ಪ್ರೆಸೆನ್ಸ್’ ಇದೆ.
‘‘ನನಗೆ ಈಕೆ ಭಾಗಶಃ (ಪಾರ್ಶಿಯಲ್) ಗಮನ ನೀಡುತ್ತಿದ್ದಾಳೆ’’ ಅನ್ನಿಸುತ್ತದೆ. ತನ್ನ ಎದುರಿಗೆ ತನ್ನಾಕೆಯನ್ನು ಅಥವಾ ತನ್ನವನನ್ನು ಇನ್ಯಾರೋ ರಮಿಸುತ್ತಿದ್ದಾರೆ ಎಂಬ ಭಾವನೆ ತೀವ್ರಗೊಂಡಾಗ ಈ ‘ಕೊ-ಪ್ರೆಸೆನ್ಸ್’ ಗೃಹ ಹಿಂಸೆಗೋ, ಆತ್ಮಹತ್ಯೆಗೋ, ಕೊಲೆಗೋ ಕಾರಣವಾಗಬಹುದು. ಕೌಟುಂಬಿಕ ಸಂಬಂಧಗಳಲ್ಲಿ ಹೀಗಾಗುವ ಸಾಧ್ಯತೆಗಳು, ಮೊಬೈಲ್ ತಂತ್ರಜ್ಞಾನ ಬಳಕೆ ಹೆಚ್ಚಿದಂತೆ, ಹೆಚ್ಚುತ್ತಾ ಹೋಗುವುದು ಸಹಜ.
ಚಲನಶೀಲವಾಗಿರಬೇಕಾದ ನಮ್ಮ ಬದುಕು ಚಲನೆರಹಿತವಾದ ಏಗುವಿಕೆಯಾದಾಗ, ಮೊಬೈಲ್ ತಂತ್ರಜ್ಞಾನವಿರಲಿ, ಯಾವುದೇ ತಂತ್ರಜ್ಞಾನವಿರಲಿ, ಅದನ್ನು ಎಷ್ಟು ಬಳಸಬೇಕು ಎಂಬ ತಂತ್ರಜ್ಞಾನದೊಂದಿಗೆ, ಅದನ್ನು ಹೇಗೆ ಸರಿಯಾಗಿ ಬಳಸಬೇಕೆಂಬ ತಿಳುವಳಿಕೆ ಇಲ್ಲವಾದಲ್ಲಿ ನಾವು ಹೆಮ್ಮೆ ಪಡುವ ತಂತ್ರಜ್ಞಾನಗಳೆಲ್ಲ ನಮ್ಮನ್ನು ವಿನಾಶದ ಕಡೆಗೆ ತಳ್ಳುವ ತಂತ್ರಜ್ಞಾನಗಳಾದರೆ ಆಶ್ಚರ್ಯವಿಲ್ಲ.