ಭಾರತೀಯರು ಮರೆತಿರುವ ಅಪ್ರತಿಮ ದಲಿತೋದ್ಧಾರಕ ಕುದ್ಮುಲ್ ರಂಗರಾಯರು

Update: 2018-06-29 10:09 GMT

ಅಂಬೇಡ್ಕರ್‌ಗೂ ಮೊದಲೇ ಅಸ್ಪಶ್ಯರ ಬಾಳನ್ನು ಬೆಳಗಿ ಸುವ ಕೆಲಸವನ್ನು ತಪಸ್ಸಿನಂತೆ ಮಾಡಿದ, ಸ್ವತಃ ಮಹಾತ್ಮ ಗಾಂಧೀಜಿಯೇ ದಲಿತೋದ್ಧಾರದ ಕಾರ್ಯಗಳಲ್ಲಿ ಗುರು ಎಂದು ಘೋಷಿಸಿದ್ದ ವ್ಯಕ್ತಿ ಕುದ್ಮುಲ್ ರಂಗರಾಯರು. ಇಂದು ಅವರ 159ನೇ ಜನ್ಮದಿನಾಚರಣೆ. ಈ ಸಂದರ್ಭ ಭಾರತೀಯರೆಲ್ಲರೂ ಅವರನ್ನು ನೆನೆಯಲೇಬೇಕು. 1859ರ ಜೂ.29ರಂದು ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡದ ಕಾಸರಗೋಡಿನ ಕುದ್ಮುಲ್ ಎಂಬ ಚಿಕ್ಕ ಗ್ರಾಮ ದಲ್ಲಿ ದೇವಪ್ಪಯ್ಯ ಮತ್ತು ಗೌರಿ ದಂಪತಿಯ ಮಗ ನಾಗಿ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅವರು ಆಗಿನ ಕಾಲದಲ್ಲಿಯೇ ಕರಾವಳಿ ಭಾಗದ ದಲಿತರ ಮನೆಮನಗಳಲ್ಲಿ ಶಿಕ್ಷಣ ಎಂಬ ಆರದ ನಂದಾದೀಪವನ್ನು ಹಚ್ಚಿದವರು. ಇವರು ಇಂದಿಗೂ ಸಾಮಾಜಿಕ ಹೋರಾಟಗಾರರಿಗೆ ಆದರ್ಶ ಹಾಗೂ ಸ್ಪೂರ್ತಿ. ಶೋಷಿತರಿಗೆ ನ್ಯಾಯ ದೊರಕಿಸಿಕೊಡಲು ವಕೀಲಿ ವೃತ್ತಿಯನ್ನು ಆರಂಭಿಸಿದ ಇವರು ಬಡವರ ಹಾಗೂ ದಲಿತರ ವಕೀಲರೆಂದೆ ಪ್ರಸಿದ್ಧರಾದರು. 

ಮೇಲ್ಜಾತಿಯವರಿಂದ ಅತ್ಯಾಚಾರಕ್ಕೊಳಗಾದ ದಲಿತ ಮಹಿಳೆಯೊಬ್ಬಳ ಪರ ನ್ಯಾಯಾಲಯದಲ್ಲಿ ಹೋರಾಡಿ ಆ ಮಹಿಳೆಗೆ ನ್ಯಾಯ ದೊರಕಿಸಿಕೊಟ್ಟರು. ಮಂಗಳೂರಿನ ಜಿಲ್ಲಾ ನ್ಯಾಯಾಲಯವೊಂದರಲ್ಲಿ 4ನೇ ತರಗತಿ ಓದಿದ್ದ ಬೆಂದೂರು ಬಾಬು ಎಂಬ ದಲಿತ ವ್ಯಕ್ತಿಗೆ ಕೆಲಸ ಸಿಕ್ಕಿದಾಗ, ಅದೇ ನ್ಯಾಯಾಲಯದ ಮೇಲ್ಜಾತಿ ನೌಕರರು ವಿರೋಧಿ ಸಿದ್ದರು. ಆಗ ಬ್ರಿಟಿಷ್ ನ್ಯಾಯಾಧೀಶರೊಬ್ಬರು ಕುದ್ಮುಲ್‌ರಂಗರಾಯರನ್ನು ಕರೆದು ‘‘ನೀನೇ ಈ ದಲಿತ ವ್ಯಕ್ತಿಗೆ ಹಾಗೂ ಈ ಸಮಾಜಕ್ಕೆ ರಕ್ಷಕನಾಗಿಯೂ ದಾರಿದೀಪವಾಗಿಯೂ ಕೆಲಸ ಮಾಡಬೇಕು’’ ಎಂದಿದ್ದರು. ಅವರ ಮಾತನ್ನು ಅರ್ಥ ಮಾಡಿಕೊಂಡ ಅವರು ತಮ್ಮ ವಕೀಲಿ ವೃತ್ತಿಯನ್ನು ತೊರೆದು ದಲಿತೋದ್ಧಾರದ ಕೆಲಸವನ್ನು ಆರಂಭಿಸಿ ಅಕ್ಷರಶಃ ಅದನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿದರು. ಅವರು ತಮ್ಮ 30ನೇ ವಯಸ್ಸಿನಲ್ಲಿಯೇ ಕರಾವಳಿಯ ದಲಿತರ ಬದುಕಿನಲ್ಲಿ ಬದಲಾವಣೆ ತಂದು, ಅವರನ್ನು ತಮ್ಮಂತೆಯೇ ಮಾನವರಾಗಿ ಬದುಕಲು ಅವಕಾಶ ಮಾಡಿ ಕೊಡುವ ಭೀಷ್ಮ ಪ್ರತಿಜ್ಞೆಯನ್ನು ಅಸ್ಪಶ್ಯತೆ ಹಾಗೂ ಜಾತೀಯತೆ ಬಹಳ ಆಳವಾಗಿ ಬೇರುಬಿಟ್ಟಿದ್ದ 19ನೇ ಶತಮಾನದಲ್ಲಿಯೇ ಕೈಗೊಂಡಿದ್ದು ಒಂದು ವಿಶೇಷವೇ ಸರಿ. 1887-88 ರಲ್ಲಿ ಆರಂಭಿಸಿದ ಅವರ ಈ ಅಸ್ಪಶ್ಯತೆಯ ವಿರುದ್ಧದ ಸಾಮಾಜಿಕ ಕಾರ್ಯ 1928 ಜ.30 ರಂದು ಅವರು ಮರಣ ಹೊಂದುವವರೆಗೆ ಸುಮಾರು 40 ವರ್ಷಗಳ ಕಾಲ ನಿರಂತರವಾಗಿ ನಡೆದು ಕೊಂಡು ಬಂದಿತು. ಆ ಮೂಲಕ ಕರಾವಳಿಯ ಅಸ್ಪಶ್ಯರ ಸಾಮಾಜಿಕ ಚಿತ್ರಣವನ್ನೇ ಅವರು ಬದಲಿಸಿದ್ದರು. ಇದರಿಂದ ಇಂದು ಇಡೀ ರಾಜ್ಯದಲ್ಲಿ ಈ ಭಾಗದ ಜನತೆ ಅತ್ಯಂತ ಹೆಚ್ಚು ಸಾಕ್ಷರರಾಗಿ ಅಭಿವೃದ್ಧಿ ಹೊಂದಿ ಜೀವನ ಸಾಗಿಸಲು ಸಾಧ್ಯವಾಗಿದೆ.

ಅಸ್ಪಶ್ಯರಿಗೆ ಹಾಗೂ ಕೆಳಜಾತಿಯ ಜನರಿಗೆ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಅವಕಾಶವಿರದ, ನದಿ, ಕೆರೆ, ಬಾವಿ ಹಾಗೂ ಹೊಟೇಲ್‌ಗಳು ಮುಂತಾದ ಸಾರ್ವಜನಿಕ ಪ್ರದೇಶಗಳಲ್ಲಿ ಕೆಳಜಾತಿಯ ಜನರಿಗೆ ನಿಷೇಧವಿದ್ದ ಅಂದಿನ ಕಾಲದಲ್ಲಿಯೇ ಅವರು ಮಾಡಿದ ಕಾರ್ಯಗಳು ಒಂದು ಮಹತ್ತರ ಸಾಧನೆ ಯೆಂದರೆ ಅದು ಉತ್ಪ್ರೇಕ್ಷೆಯಾಗಲಾರದು. ‘ದೀನೋದ್ಧರಣಂ ದೇಶೋದ್ಧರಣಂ’ ಎಂಬ ತತ್ವ ವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಕುದ್ಮುಲ್ ರಂಗರಾಯರು ಪ್ರತಿದಿನ ಕೆಳಜಾತಿಯ ಜನರು ಬದುಕುತ್ತಿದ್ದ ಕಾಲನಿಗಳಿಗೆ ಹೋಗಿ ಅವರನ್ನು ಶಿಕ್ಷಣ ಪಡೆದುಕೊಳ್ಳುವಂತೆ, ಸ್ವಚ್ಛ ಪರಿಸರದಲ್ಲಿ ಸ್ನಾನ ಮಾಡಿ ಶುಚಿಯಾಗಿ ಬದುಕುವಂತೆ ಪ್ರೇರೇಪಿಸುತ್ತಿದ್ದರು. ನೀವು ಶ್ರಮದಿಂದಲೇ ಬದುಕುವಂತಹವರು, ಇತರರ ಕುತಂತ್ರ ದಿಂದ ಗುಲಾಮರಾಗಿದ್ದೀರಿ. ನೀವು ಮದ್ಯಪಾನ ಮುಂತಾದ ದುಶ್ಚಟಗಳಿಂದ ದೂರವಾಗಿರಿ, ಶಿಕ್ಷಣವನ್ನು ಪಡೆದುಕೊಳ್ಳಿರಿ, ಮಕ್ಕಳಿಗೆ ಶಿಕ್ಷಣ ನೀಡಿರಿ, ನಿಮ್ಮಿಂದಲೇ ನಿಮ್ಮ ಪರಿವರ್ತನೆ ಸಾಧ್ಯ ಎಂದು ಅವರಲ್ಲಿ ಅರಿವನ್ನು ಮೂಡಿಸುತ್ತಿದ್ದರು. ಅವರ ಪತ್ನಿ ರುಕ್ಮಿಣಿಯವರೂ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದರು. ಅವರಿಗೆ ದಲಿತರ ಬಗ್ಗೆ ಕಾಳಜಿ ಎಷ್ಟಿತ್ತೆಂದರೆ ಅಸ್ಪಶ್ಯ ಜಾತಿಗಳಲ್ಲಿ ಅತಿ ಹಿಂದುಳಿದಿದ್ದ ತೋಟಿ ಜನಾಂಗದವರಿಗೆ ತಾನೇನೂ ಮಾಡಿಲ್ಲ ಎಂಬ ನೋವು ಅವರಲ್ಲಿತ್ತು. ಹಾಗಾಗಿ ‘‘ತೋಟಿ ಜನಾಂಗದವರು ಮಾತ್ರ ನನ್ನ ಶವ ವನ್ನು ಸ್ಮಶಾನಕ್ಕೆ ಹೊತ್ತೊಯ್ಯಬೇಕು, ಅವರಿಂದಲೇ ನನ್ನ ಶವಸಂಸ್ಕಾರವಾಗಬೇಕು. ಕೊನೆಗೆ ಅವರ ಸ್ಪರ್ಶದಿಂದ ಲಾದರೂ ನನ್ನ ಆತ್ಮಕ್ಕೆ ಚಿರಶಾಂತಿ ದೊರಕು ವಂತಾಗಲಿ’’ ಎಂದು ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದರು. ಅಲ್ಲದೆ ‘‘ನನ್ನ ಶಾಲೆಯಲ್ಲಿ ಕಲಿತ ದಲಿತ ಹುಡುಗ ನೊಬ್ಬ ವಿದ್ಯಾವಂತನಾಗಿ ನೌಕರಿಗೆ ಸೇರಿ ನಮ್ಮೂರ ರಸ್ತೆ ಗಳಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ಆ ರಸ್ತೆಯಲ್ಲಿ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ’’ ಎಂದಿದ್ದರು.

ಕೇವಲ ತೋರಿಕೆಗಾಗಿ ದಲಿತರ ಮನೆಗಳಿಗೆ ಭೇಟಿ ನೀಡಿ ಅವರ ಜೊತೆ ಸಹಪಂಕ್ತಿ ಭೋಜನ ಮಾಡುವ ಇಂದಿನ ರಾಜಕಾರಣಿಗಳಿಗೆ ಕುದ್ಮಲ್ ರಂಗರಾಯರ ಜೀವನದಿಂದ ಕಲಿಯಲು ಬಹಳಷ್ಟಿವೆ. ಆದರೆ ಕಲಿಯಲು ನಿಜವಾದ ಮನಸ್ಸಿರಬೇಕಷ್ಟೇ.

ದಲಿತ ಮಕ್ಕಳಿಗೆ ಹುಲ್ಲು ಮೇಲ್ಛಾವಣಿಯ ಶಾಲೆ

1892ರಲ್ಲಿಯೇ ಮಂಗಳೂರಿನ ಉರ್ವ ಚಿಲಿಂಬಿ ಯಲ್ಲಿ ಹುಲ್ಲಿನ ಮೇಲ್ಛಾವಣಿಯ ಬಾಡಿಗೆ ಮನೆ ಯೊಂದರಲ್ಲಿ ದಲಿತರ ಮಕ್ಕಳಿಗಾಗಿ ಶಾಲೆ ಆರಂಭಿ ಸಿದಾಗ, ಮೇಲ್ಜಾತಿಯವರಿಂದ ಅನೇಕ ರೀತಿಯಲ್ಲಿ ತೊಂದರೆಗಳು ಎದುರಾದವು. ಅದನ್ನೆಲ್ಲಾ ಲೆಕ್ಕಿಸದ ಕುದ್ಮುಲ್ ರಂಗರಾಯರು ಮಂಗಳೂರಿನ ದಡ್ಡಲಕಾಡು, ಶೇಡಿಗುಡ್ಡೆ, ಅತ್ತಾವರ, ಬಾಬುಗುಡ್ಡೆ, ಕಂಕನಾಡಿ, ಮುಲ್ಕಿ, ಉಳ್ಳಾಲ, ಬೋಳೂರು ಮುಂತಾದ ಕಡೆಗಳಲ್ಲಿ ಶಾಲೆಗಳನ್ನು ತೆರೆದು ದಲಿತ ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿದರು. ಶಾಲೆಗೆ ಮಕ್ಕಳು ಬರಲೆಂದು ಅವರಿಗೆ ಪ್ರತಿದಿನ 2ರಿಂದ 6 ಪೈಸೆಗಳವರೆಗೆ ಪ್ರೋತ್ಸಾಹ ಧನ ನೀಡುತ್ತಿದ್ದರು. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದ್ದರು.

‘ಡಿಪ್ರೆಸ್ಡ್ ಕ್ಲಾಸ್ ಮಿಷನ್’ ಸಮಾಜ ಸೇವಾ ಸಂಸ್ಥೆ ಸ್ಥಾಪನೆ

1897ರಲ್ಲಿ‘ಡಿಪ್ರೆಸ್ಡ್ ಕ್ಲಾಸ್ ಮಿಷನ್’(ಡಿಸಿಎಂ) ಎಂಬ ಸಮಾಜ ಸೇವಾ ಸಂಸ್ಥೆಯನ್ನು ನೋಂದಾ ಯಿಸಿ ಅದರ ಸ್ಥಾಪಕ ಕಾರ್ಯದರ್ಶಿಯಾದರು. ಅದರ ಅಧ್ಯಕ್ಷರಾಗಿ ಅವರ ಭಾವ ಮತ್ತು ಬ್ರಹ್ಮ ಸಮಾಜದ ರಘುನಾಥಯ್ಯರವರನ್ನು ನೇಮಿಸಿ ದ್ದರು. ಆ ಸಂಸ್ಥೆಯ ಮೂಲಕ ಮಂಗಳೂರು, ಉಡುಪಿ ಮುಂತಾದೆಡೆಗಳಲ್ಲಿ ವಸತಿ ಶಾಲೆಗಳನ್ನು, ಗ್ರಂಥಾಲಯಗಳನ್ನು ಆರಂಭಿಸಿದ್ದರು. ಇಂದು ನಾವು ಸರಕಾರಿ ಶಾಲೆಗಳಲ್ಲಿ ಕಾಣುವ ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಘೋಷಣೆಯನ್ನು ಕುದ್ಮುಲ್ ರಂಗರಾಯರು 1899ರಲ್ಲಿಯೇ ಹೆಣ್ಣುಮಕ್ಕಳಿಗಾಗಿ ಶೇಡಿಗುಡ್ಡೆಯ ಬಳಿ ವಿದ್ಯಾರ್ಥಿನಿ ನಿಲಯವನ್ನು ತೆರೆದು ‘‘ಹೆಣ್ಣುಮಕ್ಕಳು ಅಕ್ಷರ ಕಲಿತರೆ ಇಡೀ ಕುಟುಂಬ ಜಾಗೃತವಾಗುತ್ತದೆ’’ ಎಂದು ಘೋಷಿಸಿದ್ದರು.

Writer - ಮಜೀದ್ ಎಚ್.ಎನ್.

contributor

Editor - ಮಜೀದ್ ಎಚ್.ಎನ್.

contributor

Similar News