ನಿರ್ಲಕ್ಷಿತ ಹಣ್ಣು ಹಲಸಿಗೆ ರಾಜ ಮರ್ಯಾದೆ

Update: 2018-07-07 09:45 GMT

ಪುತ್ತೂರು, ಜು.6: ಹಲಸು ನಿರ್ಲಕ್ಷಿತ ಹಣ್ಣು ಎಂದೇ ಪ್ರಚಲಿತ. ಗ್ರಾಮೀಣ ಪ್ರದೇಶಗಳಲ್ಲಿ ಹಲಸಿನ ಬೆಳೆ ಸಾಕಷ್ಟಿದ್ದರೂ ಬಳಕೆ ಮಾತ್ರ ಅಲ್ಪ ಸ್ವಲ್ಪ. ಹಲಸು ಏಕಕಾಲದಲ್ಲಿ ಹಣ್ಣಾಗುವ ಕಾರಣ ಕೆಲವನ್ನು ತಿನ್ನಲು ಬಳಸಿದರೆ ಉಳಿದವುಗಳನ್ನು ದನಗಳಿಗೆ ಹಾಕುವುದು ಅಥವಾ ಎಸೆಯುವವರೇ ಹೆಚ್ಚು. ಹಲಸನ್ನು ನಿರ್ಲಕ್ಷಿತ ಹಣ್ಣು ಎಂಬ ಹೆಸರಿಂದ ಮುಕ್ತಿಗೊಳಿಸಿ ರಾಜಮರ್ಯಾದೆ ನೀಡಲು ಪುತ್ತೂರಿನಲ್ಲಿ ಇದೀಗ ಮೊದಲ ಪ್ರಯತ್ನ ನಡೆಯುತ್ತಿದೆ. ಜುಲೈ 8ರಂದು ಪುತ್ತೂರು ಶ್ರೀ ಮಹಾ ಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ‘ಹಲಸಿನ ಹಬ್ಬ’ ನಡೆಯಲಿದೆ. ದಿನಪೂರ್ತಿ ಹಲಸಿನ ಪರಿಮಳ, ಹಲಸು ಖಾದ್ಯಗಳ ಸವಿರುಚಿ ಹಾಗೂ ಹಲಸು ವೌಲ್ಯವರ್ಧಿತ ಉತ್ಪನ್ನಗಳ ವೈವಿಧ್ಯತೆ ಅನಾವರಣಗೊಳ್ಳಲಿದೆ. ಹಬ್ಬದಲ್ಲಿ ವಿವಿಧ ಹಲಸಿನ ತಳಿ ಹಾಗೂ ಗಿಡಗಳ ಪ್ರದರ್ಶನ, ಮಾರಾಟ, ಖಾದ್ಯ ವೈವಿಧ್ಯಗಳ ಪ್ರದರ್ಶನ, ಮಾರಾಟ, ವೌಲ್ಯವರ್ಧಿತ ಉತ್ಪನ್ನಗಳ ಸಮ್ಮಿಲನ, ವಿಶೇಷ ತಳಿಗಳ ಶೋಧ, ಹಣ್ಣು ತಿನ್ನುವ ಸ್ಪರ್ಧೆ, ಮನೆ ತಯಾರಿ ಹಲಸಿನ ಖಾದ್ಯಗಳ ಪ್ರದರ್ಶನ ಸೇರಿದಂತೆ ಸಿರಿಧಾನ್ಯ, ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಬ್ಬದ ವಿಶೇಷತೆಯಾಗಿದೆ. ಹಲಸು ಪ್ರಿಯ ಮನಸ್ಸುಗಳು ಹಬ್ಬವನ್ನು ಸಂಘಟಿಸಿದ್ದಾರೆ. ಪುತ್ತೂರಿನ ನವಚೇತನ ಸ್ನೇಹ ಸಂಗಮದ ನೇತೃತ್ವದಲ್ಲಿ ನಡೆಯುವ ಈ ಹಲಸಿನ ಹಬ್ಬಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅಡಿಕೆ ಪತ್ರಿಕೆ ಪುತ್ತೂರು ಕೈಜೋಡಿಸಿದೆ.

ಜಿಲ್ಲೆಯ ಕೇಂದ್ರ ಸ್ಥಾನವಾದ ಮಂಗಳೂರು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಹಲಸಿನ ಹಬ್ಬ ನಡೆಯುತ್ತಿದೆ. ಆದರೆ ಪುತ್ತೂರಿನ ಹಲಸು ಪ್ರಿಯ ಜನತೆಗೆ ಇದು ಮೊದಲ ಅವಕಾಶವಾಗಿದೆ. ಹಲಸು ಹಬ್ಬಕ್ಕೆಂದು ಮೈಸೂರಿನಿಂದ ಈಗಾಗಲೇ ನೂರಕ್ಕೂ ಅಧಿಕ ವಿವಿಧ ತಳಿಯ ಹಲಸಿನ ಹಣ್ಣುಗಳು ಪುತ್ತೂರಿಗೆ ಬಂದಿಳಿದಿವೆ. 30ಕ್ಕೂ ಅಧಿಕ ಮಳಿಗೆಗಳಲ್ಲಿ ಹಲಸಿನ ಖಾದ್ಯಗಳನ್ನು ಖರೀದಿಸಿ ಸವಿಯುವ ಅವಕಾಶ ಮಾಡಲಾಗಿದೆ. ಹಲಸಿನ ಹಣ್ಣಿನ ಮತ್ತು ಬೀಜದ ಹೋಳಿಗೆ, ಹಲಸಿನ ಬೀಜದ ಜಾಮೂನು, ಗುಜ್ಜೆ ಮಂಚೂರಿ, ಹಲಸಿನ ಐಸ್‌ಕ್ರೀಂ, ಹಲಸಿನ ಬೀಜದ ಬರ್ಫಿ, ಹಲಸಿನ ಹಣ್ಣಿನ ಬನ್ಸ್, ಗುಜ್ಜೆ ಕಬಾಬ್, ಪೋಡಿ, ಅಂಬಡೆ, ಗಾರಿಗೆ, ಗಟ್ಟಿ, ಹಲ್ವ, ಚಿಪ್ಸ್‌ಗಳನ್ನು ಮಳಿಗೆಗಳಲ್ಲಿ ಖರೀದಿಸಿ ಸವಿಯುವ ಅವಕಾಶ ಇಲ್ಲಿದೆ. ಹಲಸಿನ ಹಬ್ಬ ಪುತ್ತೂರಿನ ಜನತೆಗೆ ಹಲಸಿನ ವಿವಿಧ ಬಗೆಯ ರುಚಿಗಳನ್ನು ನೀಡುವ ಜೊತೆಗೆ ವಿವಿಧ ತಳಿಗಳ ಖರೀದಿ ಮತ್ತು ಮಾಹಿತಿ ಪಡೆಯಲು ಅವಕಾಶ ಒದಗಿಸಲಿದೆ.

ಔಷಧೀಯ ಗುಣಗಳು

ಹಲಸಿನಲ್ಲಿ ವಿಟಮಿನ್ ಸಿ ಮೊದಲಾದ ಅಂಶಗಳೊಂದಿಗೆ ಅನೇಕ ಔಷಧೀಯ ಗುಣಗಳಿವೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಮಧುಮೇಹ ಸೇರಿದಂತೆ ಹಲವು ರೋಗಗಳನ್ನು ತಡೆಗಟ್ಟುವ ಔಷಧಿಯ ಗುಣಗಳು ಹಲಸಿನಲ್ಲಿದೆ. ಹಲಸು ಜೀರ್ಣಕ್ರೀಯೆಯನ್ನು ಸುಧಾರಿಸುತ್ತದೆ. ಅಕಾಲಿಕ ವೃದ್ಧಾಪ್ಯವನ್ನು ತಡೆಯಲು ಹಲಸು ಸಹಾಯಕ ಎಂದು ತಜ್ಞರ ಅಭಿಪ್ರಾಯಪಡುತ್ತಾರೆ.

ಕೇರಳದಲ್ಲಿ 100 ಎಕರೆ ಹಲಸು ತೋಟದ ಕೃಷಿಕ

ಕೇರಳದ ಕೊಟ್ಟಾಯಂ ಜಿಲ್ಲೆಯ ಮೀನಾಚಿಲ್ ಮತ್ತು ಕಹೀರಪ್ಪಲ್ಲಿ ಎಂಬ ತಾಲೂಕುಗಳಲ್ಲಿ ಮೂರು ವರ್ಷಗಳಿಂದ ಕೃಷಿಕ ರೊನಿ ಮ್ಯಾಥ್ಯೂ ಎಂಬವರು ಸುಮಾರು 100 ಎಕರೆ ಪ್ರದೇಶಗಳಲ್ಲಿ ಪ್ರಧಾನ ಬೆಳೆಯಾಗಿ ಹಲಸನ್ನು ಬೆಳೆಯುತ್ತಿದ್ದಾರೆ. ಕೇರಳದಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಹಲಸನ್ನು ಮುಖ್ಯ ಆಹಾರ ಪದಾರ್ಥವಾಗಿ ಬಳಸುತ್ತಿರುವುದರಿಂದ ಹಲಸು ಬೆಳೆ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ.

80ಕ್ಕೂ ಅಧಿಕ ತಳಿಗಳ ಅಭಿವೃದ್ಧಿ

ಹಲಸಿನ ಹಣ್ಣಿನಲ್ಲಿ ಎರಡು ವಿಧ. ಸ್ಥಳೀಯ ಭಾಷೆಯಲ್ಲಿ ಹೇಳುವುದಾದರೆ ಬಕ್ಕೆ ಹಾಗೂ ಬೊಳುವ. ವಾದಾ, ಶ್ರೀವರ, ಸಿಂಧೂರ, ಕಳ್ಳಾಜೆ ರುದ್ರಾಕ್ಷಿ, ನಗರಚಂದ್ರ, ಸರಸ, ಪೆರ್ಡೂರು ಬಿಳಿ ಬಕಗಕೆ, ತುಷಾರ, ಅನನ್ಯ, ಕುದ್ದುಪದವು ಮಧುರಾ, ರಾಜ ರುದ್ರಾಕ್ಷಿ, ಮುದ್ರಾಕ್ಷಿ, ನಿರಂತರ, ಅನಂತ, ನಂದನ, ಶ್ರಾವಣ, ಪ್ರಶಾಂತಿ ಮೊದಲಾಗಿ ಸುಮಾರು ಎಂಬತ್ತಕ್ಕೂ ಅಧಿಕ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯುತ್ತಿದೆ.

ಚಿಪ್ಸಿನಿಂದ ಪಾಯಸದವರೆಗೆ ದೋಸೆಯಿಂದ ಬಿರಿಯಾನಿವರೆಗೆ ಹಲಸಿನಿಂದ ಮಾಡಬಹುದಾದಷ್ಟು ಆಹಾರ ವೈವಿಧ್ಯ ಮಾಡಬಲ್ಲ ಬೆಳೆ ಜಗತ್ತಿನಲ್ಲಿ ಬೇರೆ ಇಲ್ಲ. ಹೀಗೊಮ್ಮೆ ಚಿಂತಿಸೋಣ. ನಮ್ಮ ಜಮೀನಿನಲ್ಲಿ ಕೊಳೆತು ಹೋಗುವ ಹಲಸು ಎಷ್ಟು ಕಿಲೋ? ನಾವು ಬಳಸುವುದೆಷ್ಟು?

ಶ್ರೀ ಪಡ್ರೆ, ಪತ್ರಕರ್ತ

Writer - ಸಂಶುದ್ದೀನ್ ಸಂಪ್ಯ

contributor

Editor - ಸಂಶುದ್ದೀನ್ ಸಂಪ್ಯ

contributor

Similar News