ಕೊಡಗನ್ನು ಮರುಕಟ್ಟುವುದೆಂದರೆ ಹೇಗೆ ಸ್ವಾಮಿ?
ಮಳೆ ಸ್ವಲ್ಪ ಕಡಿಮೆಯಾಗಿದೆ. ಕೊಡಗಿನಲ್ಲಿ ಮತ್ತೆ ‘ಮರುಕಟ್ಟುವ ಪ್ರಕ್ರಿಯೆ’ ಆರಂಭಗೊಂಡಿದೆ ಎಂಬ ಸುದ್ದಿ ಬರುತ್ತಿದೆ. ಕೊಡಗನ್ನು ಮರು ಕಟ್ಟುವವರು ಮನುಷ್ಯರು! ಕಟ್ಟಲು ಬಳಸುವ ಯಂತ್ರಗಳು ಅದೇ ಜೆಸಿಬಿಗಳು. ಅನ್ನ, ಬಟ್ಟೆ, ಕುಡಿಯುವ ನೀರು ಹೀಗೆ ಸಂತ್ರಸ್ತರ ನೆರವಿಗೆ ಧಾವಿಸಿದ ದಾನಿಗಳ ಪಟ್ಟಿಯಲ್ಲಿ ಈ ಬಾರಿ ಕೊಡಗಿಗೆ ಉಚಿತವಾಗಿ ಜೆಸಿಬಿ ಕಳುಹಿಸಿಕೊಟ್ಟವರು ತುಂಬಾ ಮಂದಿ. ಅವೆಲ್ಲಾ ಗುಡ್ಡ ಜಾರಿ ರಸ್ತೆ ಮನುಷ್ಯ ನೆಲೆಗಳಿಗೆ ಬಿದ್ದ ಮಣ್ಣು, ಬಂಡೆ, ಮರಗಳನ್ನು ಬದಿಗೆ ಸರಿಸುತ್ತಿವೆ.
ಕೊಡಗಿನಲ್ಲಿ ಈ ಹಿಂದೆಯೂ ಆದದ್ದು ಕಟ್ಟುವ ಪ್ರಕ್ರಿಯೆಯೇ. ಮೊದಲು ಹಳ್ಳಿಯಲ್ಲಿ ನಿಬಿಡ ಸಹಜ ಕಾಡನ್ನು ಕಳೆದು ಕಟ್ಟುವ ಕೆಲಸ ಆರಂಭವಾಯಿತು. ಎಲ್ಲೆಲ್ಲಿ ಮನುಷ್ಯ ಬದುಕಲು, ಕೃಷಿ ಮಾಡಿ ಮನೆ ಕಟ್ಟಿ, ನೆಲೆಯೂರಲು ಸಾಧ್ಯವೋ ಅಲ್ಲೆಲ್ಲಾ ಊರುಗಳು ಸೃಷ್ಟಿಯಾದವು. ಈ ಎಲ್ಲಾ ಊರುಗಳಿಂದ ಕೇಂದ್ರಸ್ಥಾನ ಮಡಿಕೇರಿಗೆ ರಸ್ತೆಗಳಾದವು. ಕಾಫಿ ತೋಟದ ನಿಬಿಡ ಮರಗಳನ್ನು ಕಡಿದು ಮಾರಲಾಯಿತು. ಲಾಭದ ಉದ್ದೇಶದಿಂದ ಹೋಂ ಸ್ಟೇಗಳು ಬಂದವು. ಈ ಎಲ್ಲವೂ ಕಟ್ಟುವ ಮಾದರಿಗಳೇ.
‘‘ಮಗನೇ, ಸಾಕು ನಿಲ್ಲಿಸು, ಇನ್ನು ಸಾಕು’’ ಎಂದು ಮೊನ್ನೆ ಒಂದೇ ಬಾರಿ ನಿಸರ್ಗ ಮನುಷ್ಯನ ಕಟ್ಟುವ ಕ್ರಿಯೆಯನ್ನು ಒಡೆದು ಎಸೆಯಿತು. ಒಮ್ಮೆ ಮನುಷ್ಯ ಕಟ್ಟಿದ್ದನ್ನು ಬಿಚ್ಚಿ ಎಚ್ಚರಿಸಿತು. ಈಗ ಮತ್ತೆ ಅದೇ ಕಟ್ಟುವ ಕ್ರಿಯೆ!. ಪದೇ ಪದೇ ಈ ಕಟ್ಟುವ ಮತ್ತು ಬಿಚ್ಚುವ ಕ್ರಿಯೆ ಕೊಡಗಿನಲ್ಲಿ ಆಗುತ್ತಾ ಹೋದರೆ ಕೊಡಗಿಗೆ ಉಳಿಗಾಲವಿಲ್ಲ. ಕೊಡಗಿಗೆ ಅರ್ಥಾತ್ ಭೂಮಿಗೆ ಈಗ ಬೇಕಾಗಿರುವುದು ಅದು ಇರುವ ಹಾಗೆಯೇ ಅದನ್ನು ಬಿಟ್ಟು ಬಿಡುವುದು. ಕಟ್ಟುವ ಎಲ್ಲ ಕ್ರಿಯೆಗಳನ್ನು ಸದ್ಯಕ್ಕೆ ಕೈ ಬಿಟ್ಟು ಹೊರಬರುವುದು .
ಬಯಲುಸೀಮೆ ಅಥವಾ ಘಾಟಿಯಿಂದ ಕರಾವಳಿಗೆ ಬರುವ ಯಾವುದೇ ರಸ್ತೆಯನ್ನೊಮ್ಮೆ ಗಮನಿಸಿ. ಅವುಗಳ ನಿರ್ಮಾಣ ವಿನ್ಯಾಸವನ್ನು ಗಮನಿಸಿ. ಭೂಮಿಯನ್ನು ನೇರವಾಗಿ ಅಡ್ಡ ಕತ್ತರಿಸಿ ಕಾಡು ಬೆಟ್ಟಗಳ ಇಳಿಜಾರುಗಳಲ್ಲಿ ರಸ್ತೆ ಮಾಡಲಾಗಿದೆ. ಬಹುಪಾಲು ಇಂಥ ಯಾವ ರಸ್ತೆಯೂ ಈಗ ಉಳಿದಿಲ್ಲ. ಮತ್ತೆ ನಾವು ಅದೇ ರಸ್ತೆಯನ್ನು ಅಲ್ಲೇ ಮರು ಕಟ್ಟಬೇಕು. ನೀರು ಜಾರಿ ಪ್ರಪಾತ-ಕಂದಕಗಳಾದ ಜಾಗಗಳನ್ನು ತುಂಬಿಸಬೇಕು. ಮಣ್ಣು ಎಲ್ಲಿಂದ ತರುವುದು? ಮತ್ತು ಅದೇ ಗುಡ್ಡ ಕಾಡನ್ನು ಲಂಬವಾಗಿ ಬಗೆದು ಜಾಡಿಸುವುದು. ಕಟ್ಟುವುದೆಂದರೆ ಇದೇ. ಮತ್ತೆ ಏರುಗುಡ್ಡ, ಬೆಟ್ಟಗಳ ಬುಡ ಸಡಿಲವಾಗುತ್ತದೆ. ಬಲಹೀನವಾಗುತ್ತದೆ. ಮುಂದೆ ಮಳೆ ಇಷ್ಟೊಂದು ಬೇಕಾಗಿರುವುದಿಲ್ಲ, ಬೆಟ್ಟ ಜಾರಲು, ಗುಡ್ಡಕಾಡು ಕುಸಿಯಲು. ಘಾಟಿಯ ಯಾವುದೇ ರಸ್ತೆಯನ್ನಾದರೂ ಗಮನಿಸಿ. ಅಲ್ಲಿ ರಸ್ತೆ ಕುಸಿಯದಂತಹ ತಡೆಗೋಡೆಗಳು, ಕಲ್ಲಿನ ಕಟ್ಟೆಗಳು ಸಿಗುತ್ತವೆ. ಆದರೆ ರಸ್ತೆಯ ಮೇಲಿನ ಗುಡ್ಡ ಕುಸಿಯದಂತೆ ಕಟ್ಟಿದ ಗೋಡೆಗಳು ತುಂಬಾ ಕಮ್ಮಿ. ಇದ್ದರೂ ಆಗುಂಬೆ ರಸ್ತೆಯಲ್ಲಿ ಅಂತಹ ಪ್ರಯೋಗ ಕನಿಷ್ಠ ಪ್ರಮಾಣದಲ್ಲಿವೆ. ಆ ಕಾರಣಕ್ಕೆ ತೀರಾ ಕಡಿದಾದ ತಿರುವುಗಳಿದ್ದರೂ ಆ ರಸ್ತೆ ಈಗಲೂ ಸುರಕ್ಷಿತವಾಗಿವೆ. ಮಳೆಗಾಲದಲ್ಲಿ ರಸ್ತೆ ಕುಸಿದಾಗ ಅಲ್ಲಿ ಮೊದಲುಹೋಗಿ ಮಾಡುವ ಕೆಲಸ ಆ ಕುಸಿದ ಕಡೆಯಿಂದ ಬಗೆದು ಬಗೆದು ಇಳಿಜಾರು ಭಾಗಗಳಿಗೆ ಸುರಿಯುವುದು. ಈ ಪ್ರಯೋಗದಿಂದ ಉಳಿದ ಭಾಗ ಸಡಿಲವಾಗುತ್ತದೆ. ತುಂಬಿದ ಭಾಗ ಭಾರಗೊಳ್ಳುತ್ತದೆ ಎಂಬ ಕನಿಷ್ಠ ಅರಿವು ನಮಗಿರುವುದಿಲ್ಲ.
ಮರ ಕಡಿದು ಮಾಡುವ ಯಾವುದೇ ಕೃಷಿ ಭೂಮಿಯೊಳಗಡೆ ನೀರು ಹೆಚ್ಚು ತುಂಬುತ್ತದೆ. ನಿಬಿಡ ಕಾಡಿದ್ದ ಕೊಡಗಿನಲ್ಲಿ ಮನುಷ್ಯನ ಈ ಕೃಷಿ ಪ್ರಯತ್ನ ಜೀವನ ದಾರಿಯನ್ನು ಭೂಮಿ ಸಹಿಸಿಕೊಂಡಿತು. ಈ ಹಿಂದೆಯೇ ಇಷ್ಟಲ್ಲದಿದ್ದರೂ ಇದರ ಹತ್ತಿರ ಹತ್ತಿರ ಅಲ್ಲಿ ತುಂಬು ಮಳೆಗಳಾಗಿವೆ. ಯಾವಾಗ ಕೊಡಗಿನ ಕಾಡೊಳಗಡೆಯ ಭೀಮ ಮರಗಳನ್ನು ಸಾರಾ ಸಗಟಾಗಿ ಕಡಿದು ಮಾರಲಾಯಿತೋ ಆ ಪ್ರತೀ ಮರದ ಬುಡ ಕುಂಬಾಗಿ ಅಷ್ಟೂ ನೀರು ಒಳಗಡೆ ಸೇರಲು ದಾರಿಯಾಯಿತು. ಹಾಗೆ ಸೇರಿದ ನೀರು ಒಳಗಡೆಯ ಪಾತ್ರೆಯಲ್ಲಿ ಸೇರಿ ಒತ್ತಡಕ್ಕೆ ಭೂಮಿ ಸಿಗಿಯಲೇ ಬೇಕಾಯಿತು. ಜೂನ್‌ನಲ್ಲಿ ಕೊಡಗಿನಲ್ಲಾದ ಲಘು ಭೂಕಂಪದ ಪ್ರಭಾವ ಭೂಕುಸಿತಕ್ಕೆ ಮತ್ತಷ್ಟು ವೇಗ ಕೊಟ್ಟಿರಲೂಬಹುದು.
ಕಾಡುಮರಗಳನ್ನು ಉಳಿಸಿಕೊಂಡೇ ಅದರ ನೆರಳಲ್ಲಿ ಕಾಫಿ, ಏಲಕ್ಕಿ, ಕಿತ್ತಳೆಯಂಥ ಸಾಂಪ್ರದಾಯಿಕ ಕೃಷಿಯನ್ನೇ ಮಾಡುತ್ತಿದ್ದರೆ ಕೊಡಗಿಗೆ ಇಂಥ ಸ್ಥಿತಿ ಬರುತ್ತಿರಲಿಲ್ಲ. ಇರಲಿ ಈಗ ಭೂಮಿ ಮೇಲೆ ಹಸಿರು ಪೊರೆಯನ್ನು ಕಳಚಿಕೊಂಡ, ಕೆಂಪು ಮಣ್ಣು ರಾಶಿಬಿದ್ದ ಭಾಗವನ್ನು ಪುನರ್ ರೂಪಿಸುವುದು ಹೇಗೆ? ಮತ್ತೆ ಅಲ್ಲಿ ಹಸಿರು ಹೆಚ್ಚುವುದು ಹೇಗೆ? ಎಂಬುದು ಗಂಭೀರ ಪ್ರಶ್ನೆ. ಅಲ್ಲೇ ಮನೆಕಟ್ಟಿ ಕೃಷಿ ಮಾಡುತ್ತಿದ್ದ ರೈತರು ಮತ್ತೆ ಅಲ್ಲಿಗೆ ಹೋಗುತ್ತಾರಾ? ಹೋಗಿ ಅವರೇನು ಮಾಡುತ್ತಾರೆ? ಅವರನ್ನು ವಾಪಸ್ ಅಲ್ಲಿಗೆ ಸರಕಾರ ಕಳಿಸಬೇಕಾ? ಇತ್ಯಾದಿ ಪ್ರಶ್ನೆಗಳು ಮೂಡುತ್ತವೆ. ಕೊಡಗಿನಲ್ಲಿ ಯಾವತ್ತೂ ಸೃಷ್ಟಿಯಾಗದ ಆ ‘ಕೆಂಪು ಜಾಗ’ವನ್ನು ಮರುಸೃಷ್ಟಿಸುವ ಬಗ್ಗೆ ಮತ್ತೆ ಅದನ್ನು ‘ಹಸಿರು ಜಾಗ’ವನ್ನಾಗಿ ಪರಿವರ್ತಿಸುವ ಜ್ಞಾನ, ಕ್ರಮ ಅತ್ಯಂತ ಸೂಕ್ಷ್ಮವಾದುದು. ಸಂತ್ರಸ್ತರಿಗೆ ಪನರ್‌ವಸತಿ ಬದುಕು ರೂಪಿಸುವುದು ಸರಕಾರಕ್ಕೆ ಎಷ್ಟೋ ಸವಾಲು, ಅದಕ್ಕಿಂತ ಹೆಚ್ಚು ಜವಾಬ್ದಾರಿಯ ಕೆಲಸ ಕೆಂಪನ್ನು ಹಸಿರಾಗಿ ಬದಲಾಯಿಸುವಂತಹದು. ಕಾರಣ, ಇಡೀ ಕೊಡಗಿನ ಭವಿಷ್ಯ ಸರಕಾರದ ಆ ನಿರ್ಧಾರದ ಮೇಲೆ ಈಗ ನಿಂತಿದೆ.
ಕೊಡಗಿನ ಆ ಕೆಂಪು ಜಾಗಗಳಲ್ಲಿ ಮತ್ತೆ ಜೆಸಿಬಿಗಳೇ ಓಡಾಡಿದರೆ ಖಂಡಿತಾ ಅಲ್ಲಿ ಹಸಿರು ತುಂಬಿಕೊಳ್ಳಲಾರದು. ಅರಣ್ಯ ಇಲಾಖೆ ಅಲ್ಲೆಲ್ಲಾ ತುಂಬಾ ಬೇಗ ಹಬ್ಬುವ, ಆಳಕ್ಕೆ ಬೇರು ಬಿಡುವ ಗಿಡಗಳನ್ನು ಸವಕಳಿ ತಡೆಯುವ ಬಳ್ಳಿಗಳನ್ನು ತಕ್ಷಣ ಬಿತ್ತುವ, ಬೆಳೆಯುವ ಕೆಲಸ ಮಾಡಬೇಕು. ರಬ್ಬರ್ ತೋಟದೊಳಗೆ ವೇಗವಾಗಿ ಹಬ್ಬುವ ಒಂದು ಬಳ್ಳಿಯಿದೆ. ‘ಜವ್ವನಿಗ’ ಇಂತಹದ್ದನ್ನು ಮೊದಲು ಅಲ್ಲಿ ಎರಚಬೇಕು. ಹಸಿರು ಹಚ್ಚಬೇಕು.
ನಮ್ಮ ಅಭಿವೃದ್ಧಿಯ ಆಧುನಿಕ ಭಾಷೆಯನ್ನೊಮ್ಮೆ ಗಮನಿಸಿ. ಈಗ ನಾವು ನಷ್ಟದ ಲೆಕ್ಕ ಕೊಡುವುದು ಮನುಷ್ಯ ಸಂಬಂಧದ ಮೇಲೆಯೇ. ಹಾಳಾದ ರಸ್ತೆಗಳು, ಬಿದ್ದ ಸೇತುವೆಗಳು, ಉರುಳಿ ಬಿದ್ದ ಕರೆಂಟು ಕಂಬಗಳು, ಖಾಸಗಿ-ಸರಕಾರಿ ಕಟ್ಟಡಗಳು ಇವೆಲ್ಲವನ್ನು ಮತ್ತೆ ಎತ್ತಿ ಕಟ್ಟುವುದರಿಂದ ಕೊಡಗಿನ ಜನರು ಬದುಕುವುದು ಸುಲಭ. ಆದರೆ ಕೊಡಗು ಬದುಕಬೇಕಾದರೆ ಅಲ್ಲಿಂದ ಕರಗಿ ಜಾರಿ ಹೋದ ಮಣ್ಣಿನ ಲೆಕ್ಕ ಹಾಕಬೇಕು. ಬಿದ್ದು ಹೋದ ಮರಗಳ ಲೆಕ್ಕ ಹಾಕಬೇಕು. ಪ್ರಾಣಿ-ಪಕ್ಷಿ ಜೀವ ಜಂತುಗಳ ಲೆಕ್ಕ ಹಾಕಬೇಕು. ಮನುಷ್ಯನೊಂದಿಗೆ ಈ ಮೇಲಿನ ಎಲ್ಲವೂ ಸೇರಿಕೊಂಡಾಗ ಮಾತ್ರ ಕೊಡಗು ಉಳಿಯಬಲ್ಲದು. ಅದು ಬಿಟ್ಟು ಕೊಡಗಿನಲ್ಲಿ ‘ನಾನು’ ಮಾತ್ರ ಉಳಿಯಬೇಕೆಂದರೆ ಭವಿಷ್ಯದಲ್ಲಿ ಮತ್ತೆ ಅಪಾಯ ಬರುವುದು ನಿಶ್ಚಿತ.