ಒಬ್ಬ ಫಾರೂಖಿಯ ಕಥೆ

Update: 2018-09-10 18:38 GMT

2008ರ ಸೆ.19ರಂದು ದಿಲ್ಲಿಯಲ್ಲಿ ಮುಸ್ಲಿಂ ಬಾಹುಳ್ಯವಿರುವ ಜಾಮಿಯಾನಗರ್‌ನ ಬಾಟ್ಲಾಹೌಸ್ ಕಟ್ಟಡದಲ್ಲಿ ಒಂದು ಎನ್‌ಕೌಂಟರ್ ನಡೆಯಿತು. ಇದೇ ಬಹುಚರ್ಚಿತ (!) ‘ಬಾಟ್ಲಾಹೌಸ್ ಎನ್‌ಕೌಂಟರ್’. ದಿಲ್ಲಿ ಪೊಲೀಸರು ಟೆರರಿಸ್ಟ್‌ಗಳೆಂದು ಅನುಮಾನಿಸಲ್ಪಟ್ಟ ಇಬ್ಬರನ್ನು ಹೊಡೆದು ಬೀಳಿಸಿದರು. ಕೆಲವು ಸಾಮಾಜಿಕ ಕಾರ್ಯಕರ್ತರು ಪೊಲೀಸರ ಹೇಳಿಕೆಯಲ್ಲಿರುವ ಲೋಪಗಳತ್ತ ಬೆರಳು ಮಾಡಿದರು. ಈ ಎನ್‌ಕೌಂಟರ್ ಒಂದು ನಿರ್ಮಿತ ಪ್ರಹಸನ ಎಂಬುದು ಅವರ ಆರೋಪವಾಗಿತ್ತು.

ಆಗ ನಯಾಝ್ ಫಾರೂಖಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಯಾಗಿದ್ದು, ಬಾಟ್ಲಾಹೌಸ್‌ಗೆ ಹತ್ತಿರದಲ್ಲೇ ವಾಸ ಇದ್ದನು. ಹಾಗಾಗಿ ಮುಸ್ಲಿಮನಾಗಿ ಭಾರತದಲ್ಲಿ ಆತನ ಬೆಳವಣಿಗೆಗೆ ಈ ದುರ್ಘಟನೆಯ ನೆನಪು ಅಂಟಿಕೊಂಡಿದೆ. ಆತನ ಕೃತಿ An ordinary man's guide to radicalismಗೆ ಈ ಎನ್‌ಕೌಂಟರ್‌ನಿಂದಾಗಿ ಆತನಲ್ಲಿ ಎದ್ದು ಕುಳಿತ ಮುಸ್ಲಿಂ ಐಡೆಂಟಿಟಿ ನೇಪಥ್ಯ ಒದಗಿಸಿದೆ.

ಮುಸ್ಲಿಮರ ಬದುಕು ಇಂದು ಇಂಡಿಯಾದಲ್ಲಿ ಸುಗಮವಾಗಿಲ್ಲ ಎಂಬುದನ್ನು ಹೇಳಲೇಬೇಕು. ಮುಸ್ಲಿಂ ವಿರೋಧೀ ಧೋರಣೆ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿದ್ದು, ತನ್ನನ್ನು ತಾನು ವಿವಿಧ ಮಾರ್ಗಗಳಲ್ಲಿ ವ್ಯಕ್ತೀಕರಣಗೊಳಿಸಿಕೊಳ್ಳುತ್ತದೆ. ಈ ಮಾರ್ಗಗಳಲ್ಲಿ ಅತ್ಯಂತ ಮೃದುವಾದುದು ಎಂದರೆ ‘ಪಾಕಿಸ್ತಾನಿ’ ಎಂಬ ಸಂಬೋಧನೆ. ಬಹಳಷ್ಟು ಸಂದರ್ಭಗಳಲ್ಲಿ ಮುಸ್ಲಿಂ ವ್ಯಕ್ತಿಯನ್ನು ನೀರವಗೊಳಿಸುತ್ತದೆ ಈ ನೆರೆದೇಶದೊಂದಿಗಿನ ಕಲ್ಪಿತ ಅಕ್ರಮ ಸಂಬಂಧ. ಅತಿಕ್ರೂರ ಮಾರ್ಗ ಎಂದರೆ ಕೋಮುಗಲಭೆಗಳಲ್ಲಿ ಮುಸ್ಲಿಮರ ಮೇಲಾಗುವ- ಅದೂ ನಿರ್ದಿಷ್ಟ ಆಡಳಿತದ ಸಹಕಾರದಿಂದ- ದೌರ್ಜನ್ಯಗಳು, ಹಿಂಸೆ, ಹತ್ಯೆಗಳು ಈ ಎರಡರ ಮಧ್ಯೆ ಮುಸ್ಲಿಮರನ್ನು ಭೀತಗೊಳಿಸುವ, ನಿಷ್ಕ್ರಿಯಗೊಳಿಸುವ ಹಲವು ದೈನಂದಿನ ವರ್ತನೆಗಳೂ ಇವೆ.

ಪೂರ್ವದ ಹಿಂದುತ್ವದ ಕಲ್ಪನೆಯಲ್ಲಿ ಮುಸ್ಲಿಮರು ಎಂದೂ ನೈಜ ಭಾರತೀಯರು ಆಗಲಾರದ ಕೊಳಕು ವಸಾಹತುಶಾಹಿಗಳು. ಈ ಕಲ್ಪನೆಯ ಪ್ರಕಾರ ಭಾರತದಲ್ಲಾದ ವಿವಿಧ ದುರಂತಗಳಿಗೆ ಮುಸ್ಲಿಮರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. 2018ರಲ್ಲಿ ಓರ್ವ ಬೆಂಗಳೂರಿನ ಮುಸಲ್ಮಾನ ಜಿನ್ನಾರ ಪಾಕಿಸ್ತಾನದ ಬೇಡಿಕೆಗೆ, 1947ರ ವಿಭಜನೆಗೆ ಮಧ್ಯಯುಗದ ಆಡಳಿತಗಾರರ ದುರ್ವರ್ತನೆಗಳಿಗೆ ಜವಾಬುದಾರ ಆಗಿಸಲ್ಪಡುತ್ತಾನೆ.

ಅಷ್ಟೇ ಅಲ್ಲಾ, ಜಗತ್ತಿನ ಯಾವುದೋ ಭಾಗದಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳಿಗೆಲ್ಲಾ ಭಾರತೀಯ ಮುಸ್ಲಿಮನೇ ಹೊಣೆಗಾರ ಎಂಬ ಆಲಸೀ ಧೋರಣೆ ಹೆಚ್ಚುತ್ತಿದೆ. 2014ರಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಬಂದ ಮೇಲಂತೂ ಮುಸ್ಲಿಂ ವಿರೋಧೀ ಧೋರಣೆ ದೇಶಾದ್ಯಂತ ಸ್ಫೋಟಿಸಿ, ದೊಡ್ಡ ಮಟ್ಟದಲ್ಲಿ ಸಂಸ್ಥಾಗತಗೊಂಡು, ಪೂರ್ವಗ್ರಹ ಪೀಡಿತ ಭಾವನೆಗಳು ಸರ್ವವ್ಯಾಪಿಯಾಗಿವೆ. ಒಂದು ದ್ವೇಷಪೂರಿತ ಹೇಳಿಕೆ (ಉದಾ: ಬಿಜೆಪಿ ಮುಖಂಡನ ಇಸ್ಲಾಂ ಧರ್ಮ ಜಗತ್ತಿನಿಂದಲೇ ಅಳಿಸಲ್ಪಡಬೇಕೆಂಬ...) ಹಿಂದಿನ ದಿನಗಳಲ್ಲಿ ಗಟ್ಟಿದನಿಯಲ್ಲಿ ವಿರೋಧ

ಎದುರಿಸುತ್ತಿತ್ತಾದರೆ ಇಂದು ಕೇವಲ ಗೊಣಗಾಟವಷ್ಟೇ ಕೇಳಿ ಬರುತ್ತದೆ. ಆಶ್ಚರ್ಯ ಎಂದರೆ ಭಾರತೀಯ ಮುಸ್ಲಿಮರು ಈ ಕುರಿತು ಹೆಚ್ಚು ಸಾಹಿತ್ಯ ರಚಿಸಿಲ್ಲ... ಅದು ತಮ್ಮ ಅಸ್ತಿತ್ವವನ್ನು ಭವ್ಯವಾಗಿ ನಿರ್ವಹಿಸುತ್ತದೆ ಎಂಬುದು ಗೊತ್ತಿದ್ದೂ. ಇನ್ನೊಂದಡೆ ದಮನಿತ ವರ್ಗವೇ ಆಗಿರುವ ದಲಿತರು ತಮ್ಮ ಮೇಲಾದ ಶೋಷಣೆ, ದೌರ್ಜನ್ಯಗಳ ಕುರಿತಾದ ವಿಪುಲ ಸಾಹಿತ್ಯ ರಚನೆಯ ಸಂಪದ ಹೊಂದಿದ್ದಾರೆ.

ಹಾಗಿದ್ದಲ್ಲಿ ಪತ್ರಕರ್ತರು, ಬರಹಗಾರರ ಜವಾಬ್ದಾರಿಗಳೇನು? ಭಾರತದ ಅತಿ ದೊಡ್ಡ ಮೈನಾರಿಟಿ ಕಮ್ಯುನಿಟಿಯಾಗಿರುವ ( 2011ರ ಗಣತಿ ಪ್ರಕಾರ 170 ಮಿಲಿಯನ್ ) ಮುಸ್ಲಿಮರ ಅನುಭವ ಕುರಿತಾದ ಸಾಹಿತ್ಯ ಬರಹಗಳು ಮೂಡಿಬರಬೇಕು.

 ಭಾರತೀಯ ಮುಸ್ಲಿಮರಿಗೆ ತಮ್ಮ ಸಂಕಟಗಳ ಅಭಿವ್ಯಕ್ತಿಗೆ ವೇದಿಕೆಗಳಿಲ್ಲದಿರುವಾಗ ಫಾರೂಖಿಯವರ ಈ ಸ್ಮರಣಿಕೆ ಅತ್ಯಂತ ಸ್ಪಷ್ಟ ಅಭಿವ್ಯಕ್ತಿಯಿಂದ ಮಹತ್ವ ಪಡೆದುಕೊಂಡಿದೆ. ಕೃತಿಯಲ್ಲಿ ಎರಡು ಅವಳಿ ನಿರೂಪಣೆಗಳಿವೆ. ಒಂದು ಬಿಹಾರದ ಹಳ್ಳಿಯೊಂದರಲ್ಲಿ ಕಳೆದ ಫಾರೂಖಿಯ ಜೀವನದ ಬಾಲ್ಯಕಾಲ ಮತ್ತು ದಿಲ್ಲಿಯಲ್ಲಿ ನೆಲೆಸಿದ ಬಳಿಕ ಬಾಟ್ಲಾಹೌಸ್ ಎನ್ ಕೌಂಟರ್ ಉತ್ತರೋತ್ತರ ಜೀವನ.

ಫಾರೂಖಿ ಎಳವೆಯಲ್ಲಿ ದಿಲ್ಲಿಗೆ ಬಂದು ಒಂದು ಶಾಲೆಗೆ ದಾಖಲಾದರು. ಜಾಮಿಯಾ ನಗರ್‌ನಲ್ಲಿ ಹೆತ್ತವರಿಂದ ದೂರ ಉಳಿದುಕೊಂಡು ಮುಸ್ಲಿಮರ ಸಮುದಾಯದಲ್ಲಿ ತನ್ನ ಪಾದಗಳನ್ನು ಗಟ್ಟಿಯಾಗಿ ಊರಿದರು. ಅವರ ಹೆತ್ತವರು ಫಾರೂಖಿ ಭಾರತ ಆಡಳಿತ ಸೇವೆಯಲ್ಲಿ ಅಧಿಕಾರಿಯಾಗಲಿ ಎಂದಾಶಿಸಿದ್ದರು. ಅವನೋರ್ವ ಪತ್ರಕರ್ತನಾದರು. ತನ್ನ ತಾತನೊಂದಿಗಿನ ಅನುಬಂಧ ಮತ್ತು ಅವರ ಜಾತ್ಯತೀತ ಲೌಕಿಕ ದೃಷ್ಟಿ ಈ ಕೃತಿಯಲ್ಲಿ ಹೃದಯಸ್ಪರ್ಶಿಯಾಗಿ ಚಿತ್ರಿತಗೊಂಡಿದೆ.

ಬಾಟ್ಲಾ ಎನ್‌ಕೌಂಟರ್ ಬಳಿಕ ಫಾರೂಖಿಯ ಆತಂಕ, ಅವನ ಬದುಕು ಹೇಗೆ ಬದಲಾಯ್ತು? ಮುಸ್ಲಿಂ ಐಡೆಂಟಿಟಿ ಕಾರಣಕ್ಕೆ ತನಿಖಾಸಂಸ್ಥೆ ಕೊಡುವ ಕಿರುಕುಳಗಳು ಓದುಗರನ್ನು ಸಂಕಟಕ್ಕೀಡು ಮಾಡುತ್ತವೆ. ತನಿಖೆಯಲ್ಲಿನ ಧೂರ್ತತನ, ಸಾರ್ವಜನಿಕ ಅಪ್ರತಿಷ್ಠೆ ಮತ್ತು ಮಾಧ್ಯಮಗಳ ಆತುರದ ತೀರ್ಪುಗಳ ಕುರಿತೂ ಪುಸ್ತಕದಲ್ಲಿ ಕೆಲವಿವರಗಳಿವೆ.

 ಒಂದು ಕಡೆ ಫಾರೂಖಿ ಬರೆಯುತ್ತಾನೆ; ( ಭಾವ) ಜಾಮಿಯಾ ನಗರ್ ಹೆಸರುಗಳು, ಗುರುತುಗಳು ಹಾಗೂ ಸ್ಮರಣೆಗಳ ಒಂದು ಗುಂಪನ್ನೇ ಸೃಷ್ಟಿಸುತ್ತದೆ. ಆ ನೆನಪು ನಿಮ್ಮವು ಇರಬಹುದು... ಅಥವಾ ಇನ್ನಾರದಾದರೂ... ಬಹುಶಃ ಸಾಮಾನ್ಯ ಪ್ರಜೆಯ ವೇಷದಲ್ಲಿರುವ ಶಂಕಿತ ಭಯೋತ್ಪಾದಕನದು. ನೆನಪು ಹೇಗೆ ವರ್ತಿಸುತ್ತೋ ನಮಗೆ ಅರ್ಥವಾಗುವುದಿಲ್ಲ. ಅದೊಂದು ಎಚ್ಚರಿಕೆ ಗಂಟೆಯಾಗಿದ್ದು ಎಲ್ಲರನ್ನೂ ಅವಿಶ್ವಾಸಿಗಳೆಂಬಂತೆ ತೋರಿಸುತ್ತದೆ. ಸ್ನೇಹಿತರು ಆಪ್ತರು, ಪರಿಚಿತರು, ಅಪರಿಚಿತರು, ಎಲ್ಲರನ್ನೂ...

ಫಾರೂಖಿ ಕೇವಲ ಟ್ರಾವೆಲ್ ಬ್ಯಾಗ್‌ನಂಥ ವಸ್ತುಗಳು ತನ್ನನ್ನು ತೀವ್ರ ಮುಜುಗರಕ್ಕೆ ಒಳಪಡಿಸಿದ್ದು ಹೇಗೆಂಬುದನ್ನೂ ಹೇಳುತ್ತಾನೆ. ‘ವರದಿಗಳ ಪ್ರಕಾರ ಈ ಭಯೋತ್ಪಾದಕರು ತಮ್ಮ ಫ್ಲಾಟ್‌ಗಳಲ್ಲಿ ಹತ್ತು ಹಲವು ಟ್ರಾವೆಲ್ ಬ್ಯಾಗ್‌ಗಳನ್ನು ಇಟ್ಟುಕೊಂಡಿದ್ದರು ಮತ್ತು ತಮ್ಮವರನ್ನು ಭಾರತದ ವಿವಿಧ ಭಾಗಗಳಲ್ಲಿ ಬಾಂಬ್ ಪ್ಲಾಂಟ್‌ಗಳನ್ನು ಮಾಡಲು ಕಳುಹಿಸುತ್ತಿದ್ದರು ಎಂದು ಅನುಮಾನಿಸಲಾಗಿತ್ತು. ಈ ವರದಿಗಾರರು ಯಾರೂ ಮಿಡಲ್ ಕ್ಲಾಸ್ ವಿದ್ಯಾರ್ಥಿಯೊಬ್ಬನ ಬದುಕನ್ನು ಕಂಡೇ ಇಲ್ಲವೇನೋ ಎಂಬಂತೆ... ನನ್ನ ಖಾಸಾಬ್ಯಾಗ್ ಅಲಮಾರಿನ ಹಾಗೆ ಬಳಕೆಯಾಗುತ್ತಿತ್ತು. ನನ್ನ ಗೆಳೆಯರು, ಬಂಧುಗಳು, ಪರಿಚಿತರು ಬಂದಾಗ ಇತರೇ ಬ್ಯಾಗ್‌ಗಳೂ ನನ್ನ ಸ್ಥಳದಲ್ಲಿ ಹರಡಿಕೊಂಡಿರುತ್ತಿದ್ದವು. ಒಂದು ಸ್ವಚ್ಛಂದ ಧರ್ಮಶಾಲೆಯಂತೆ?

ಈ ಕೃತಿಯು ಮುಂದುವರಿದಂತೆ ಮತ್ತಷ್ಟು ಹಿಂಸಾತ್ಮಕವಾದುದು, ಘೋರವಾದುದು ನಿರೂಪಣೆಯಲ್ಲಿ ಸ್ಫೋಟಿಸಲಿದೆ ಎಂದು ಓದುಗರಿಗೆ ಅನಿಸುತ್ತದೆ. 1992-93ರ ಮುಂಬೈ ಬಾಂಬ್ ಬ್ಲಾಸ್ಟ್ ನಲ್ಲಿ ಕ್ರೂರವಾಗಿ ಕೊಲ್ಲಲ್ಪಟ್ಟ ಅಂಕಲ್ ಒಬ್ಬರ ಬಗ್ಗೆ ಫಾರೂಖಿ ಉಲ್ಲೇಖಿಸುತ್ತಾನೆ. ಆದರೆ, ಫಾರೂಖಿಯ ಕಥೆ ದೈಹಿಕ ಹಿಂಸೆಗಿಂತ ಮಾನಸಿಕವಾಗಿ ಅನುಭವಿಸುವ ಹಿಂಸೆಗೆ ಒತ್ತುಕೊಟ್ಟಿದೆ.

ಓರ್ವ ಮುಸ್ಲಿಮನ ಅನುಭವ ಮತ್ತು ನಿರಂತರ ಅಭದ್ರತೆಯ ಭಾವನೆಯೇ ಈ ಸ್ಮರಣಿಕೆಯ ಸಾರ. ಅಲ್ಲಲ್ಲಿ ತುಸು ಕೃತ್ರಿಮತೆ ಕಂಡು ಬಂದರೂ ಅದನ್ನು ಕಥೆಗಾರನ ಕೌಶಲ್ಯ ಎಂದುಕೊಳ್ಳಬಹುದು. ಹೇರಳ ಮಾಹಿತಿಗಳು ಇರುವುದರಿಂದ ಫಾರೂಖಿ ಇದನ್ನು ಕಥೆಯಾಗಿ ಅಲ್ಲದೇ ಪ್ರಬಂಧ ರೂಪದಲ್ಲಿ ಹೇಳಬಹುದಿತ್ತು. ಅವೇನಿದ್ದರೂ ಫಾರೂಖಿ ಒಂದು ಮುಖ್ಯ ವಿಷಯದ ಬಗ್ಗೆ ಬರೆದಿದ್ದಾರೆ. ಭಾರತೀಯ ಮುಸ್ಲಿಮರ ನೆನಪುಗಳನ್ನು ಕುರಿತಾದ ಇನ್ನಷ್ಟು ಸಮೃದ್ಧ ಸಾಹಿತ್ಯ ಹೊರಬರುತ್ತದೆ ಎಂದು ಭರವಸೆ ಇಡೋಣ.

ಕನ್ನಡಕ್ಕೆ: ಕಸ್ತೂರಿ ಶಿವಮೊಗ್ಗ

ಕೃಪೆ: frontline.in

Writer - ವಿಖಾರ್ ಅಹ್ಮದ್ ಸಯೀದ್

contributor

Editor - ವಿಖಾರ್ ಅಹ್ಮದ್ ಸಯೀದ್

contributor

Similar News