ಇಂದೋರ್‌: ಭಾರಿ ಪ್ರಮಾಣದ ಮಾರಕ ರಾಸಾಯನಿಕ ವಶ

Update: 2018-09-30 03:21 GMT

ಹೊಸದಿಲ್ಲಿ, ಸೆ. 30: ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಡಿಆರ್‌ಡಿಇ ವಿಜ್ಞಾನಿಗಳ ತಂಡ ನಡೆಸಿದ ಸುಧೀರ್ಘ ಕಾರ್ಯಾಚರಣೆಯಲ್ಲಿ ಇಂದೋರ್‌ನಲ್ಲಿ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಯೋಗಾಲಯದ ಮೇಲೆ ದಾಳಿ ನಡೆಸಿ 9 ಕೆಜಿ ಮಾರಕ ಕೃತಕ ಒಪಿಯಾಡ್ ಮತ್ತು ಫೆಂಟನೈಲ್ ಎಂಬ ರಾಸಾಯನಿಕ ವಶಪಡಿಸಿಕೊಂಡಿದ್ದಾರೆ.

ಇದು ಸುಮಾರು 40 ರಿಂದ 50 ಲಕ್ಷ ಮಂದಿಯನ್ನು ಕೊಲ್ಲುವ ಸಾಮರ್ಥ್ಯ ಹೊಂದಿದ್ದ ರಾಸಾಯನಿಕಗಳು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಸ್ಥಳೀಯ ವ್ಯಾಪಾರಿ ಹಾಗೂ ಅಮೆರಿಕವನ್ನು ದ್ವೇಷಿಸುವ ಪಿಎಚ್‌ಡಿ ಪದವೀಧರ ಕೆಮಿಸ್ಟ್ ಒಬ್ಬರು ಈ ಪ್ರಯೋಗಾಲಯ ನಡೆಸುತ್ತಿದ್ದರು ಎನ್ನಲಾಗಿದೆ. ಭಾರತದಲ್ಲಿ ಫೆಂಟನೈಲ್ ವಶಪಡಿಸಿಕೊಂಡಿರುವುದು ಇದೇ ಮೊದಲು. ಈ ರಾಸಾಯನಿಕವನ್ನು ರಾಸಾಯನಿಕ ಯುದ್ಧದಲ್ಲಿ ಬಳಸಿದರೆ ದೊಡ್ಡ ಪ್ರಮಾಣದ ಸಾವು ಸೋವಿಗೆ ಇದು ಕಾರಣವಾಗುವುದರಿಂದ ಇಂಥ ಪ್ರಯೋಗಾಲಯ ಕಾರ್ಯ ನಿರ್ವಹಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಮೆಕ್ಸಿಕೊ ಪ್ರಜೆಯೊಬ್ಬನನ್ನೂ ಬಂಧಿಸಲಾಗಿದೆ.

"ಫೆಂಟನೈಲ್ ರಾಸಾಯನಿಕವು ಹೆರಾಯಿನ್‌ಗಿಂತ 50 ಪಟ್ಟು ಶಕ್ತಿಶಾಲಿಯಾಗಿದ್ದು, ಇದರ ಕಣಗಳನ್ನು ಆಘ್ರಾಣಿಸುವುದು ಕೂಡಾ ಮಾರಕವಾಗುತ್ತದೆ. ದೇಶದಲ್ಲಿ ಕಾನೂನು ಜಾರಿ ಸಂಸ್ಥೆ ಈ ರಾಸಾಯನಿಕವನ್ನು ಇಷ್ಟು ಬೃಹತ್ ಪ್ರಮಾಣದಲ್ಲಿ ವಶಪಡಿಸಿಕೊಳ್ಳುತ್ತಿರುವುದು ಇದೇ ಮೊದಲು. ಜೀವಹಾನಿಕಾರಕ ರಾಸಾಯನಿಕ ಉತ್ಪಾದನಾ ಘಟಕದ ಮೇಲೆ ನಡೆದಿರುವ ಈ ದಾಳಿ ಡಿಆರ್‌ಐ ಇತಿಹಾಸದಲ್ಲೇ ವಿಶಿಷ್ಟ ಹಾಗೂ ಐತಿಹಾಸಿಕ" ಎಂದು ಡಿಆರ್‌ಐ ಮಹಾನಿರ್ದೇಶಕ ಡಿ.ಪಿ.ಡ್ಯಾಶ್ ಹೇಳಿದ್ದಾರೆ.

ಈ ರಾಸಾಯನಿಕ ಉತ್ಪಾದನೆಗೆ ಪರಿಣತಿ ಬೇಕಾಗಿದ್ದು, ತರಬೇತಿ ಪಡೆದ ವಿಜ್ಞಾನಿಗಳು ಅತ್ಯುನ್ನತ ದರ್ಜೆಯ ಪ್ರಯೋಗಾಲಯಗಳಲ್ಲಿ ಮಾತ್ರ ಇದನ್ನು ಉತ್ಪಾದಿಸಲು ಸಾಧ್ಯ. ಇದು ನಿಯಂತ್ರಿತ ರಾಸಾಯನಿಕವಾಗಿದ್ದು, ಅನಸ್ತೇಶಿಯಾ ಮತ್ತು ನೋವು ನಿವಾರಕ ಔಷಧಿಗಳಲ್ಲಿ ಅಲ್ಪಪ್ರಮಾಣದಲ್ಲಿ ಬಳಕೆಯಾಗುತ್ತದೆ ಎಂದು ವಿವರಿಸಿದ್ದಾರೆ.

ಇದು ಸುಲಭವಾಗಿ ಹರಡುತ್ತದೆ ಹಾಗೂ ಚರ್ಮದ ಮೂಲಕ ಕೂಡಾ ಇದು ದೇಹಕ್ಕೆ ಹೀರಿಕೊಳ್ಳಲ್ಪಡುತ್ತದೆ. ಆಕಸ್ಮಿಕವಾಗಿ ಉಸಿರಾಟದ ಮೂಲಕ ಸೇವಿಸಲು ಕೂಡಾ ಸಾಧ್ಯತೆ ಇದ್ದು, 2 ಮಿಲಿಗ್ರಾಂನಷ್ಟು ಫೆಂಟನೈಲ್ ರಾಸಾಯನಿಕ ಒಬ್ಬ ವ್ಯಕ್ತಿಯನ್ನು ಕೊಲ್ಲಬಲ್ಲದು. ಈ ದಾಳಿಗೆ ಡಿಆರ್‌ಡಿಇ ಪ್ರಯೋಗಾಲಯದ ಪರಿಣತ ವಿಜ್ಞಾನಿಗಳ ನೆರವು ಬಳಸಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News