ಶಿವಮೊಗ್ಗ ಲೋಕಸಭೆ ಉಪಚುನಾವಣೆ: ಅಭ್ಯರ್ಥಿ ಆಯ್ಕೆಗಾಗಿ ಕಾಂಗ್ರೆಸ್- ಜೆಡಿಎಸ್ ನಡುವೆ ಪೈಪೋಟಿ
ಶಿವಮೊಗ್ಗ, ಅ.10: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ, ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ದಿನದಿಂದ ದಿನಕ್ಕೆ ವಿಭಿನ್ನ ತಿರುವು ಪಡೆದುಕೊಳ್ಳಲಾರಂಭಿಸಿದೆ. ಬಿಜೆಪಿ ಎದುರು ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಿರುವ ಪಕ್ಷದ ವರಿಷ್ಠರು, 'ಸಮರ್ಥ' ಹುರಿಯಾಳುವಿಗಾಗಿ ತೀವ್ರ ಶೋಧ ನಡೆಸಲಾರಂಭಿಸಿದ್ದಾರೆ.
ಶತಾಯಗತಾಯ ಮಾಜಿ ಸಚಿವ ಕಾಗೋಡು ತಿಮ್ಮಪ್ಪರನ್ನೇ ಕಣಕ್ಕಿಳಿಸಲು ಆ ಪಕ್ಷದ ವರಿಷ್ಠರ ಇರಾದೆಯಾಗಿದೆ. ಅವರ ಮನವೊಲಿಕೆಗೆ ಕಸರತ್ತು ನಡೆಸಲಾರಂಭಿಸಿದ್ದಾರೆ. ಕಾಗೋಡು ಕಣಕ್ಕಿಳಿದರೆ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಬಲವಾಗಿರುವ ಈಡಿಗ ಮತಗಳಿಕೆಗೆ ಸಹಕಾರಿಯಾಗಲಿದೆ. ಜೊತೆಗೆ ಜೆಡಿಎಸ್ ಬೆಂಬಲ ಪಡೆಯುವುದು ಸುಲಭವಾಗಲಿದೆ. ಜೊತೆಗೆ ಪ್ರಬಲ ಬಿಜೆಪಿ ಎದುರು ಮತಗಳಿಕೆಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಆ ಪಕ್ಷದ ವರಿಷ್ಠರದ್ದಾಗಿದೆ. ಮತ್ತೊಂದೆಡೆ ಅನಾರೋಗ್ಯ, ವಯಸ್ಸು ಮತ್ತಿತರ ಕಾರಣಗಳಿಂದ ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂದು ಕಾಗೋಡುರವರು ಪಕ್ಷದ ವರಿಷ್ಠರಿಗೆ ತಮ್ಮ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಕಾಗೋಡುರವರ ನಿರಾಕರಣೆ ಹಿನ್ನೆಲೆಯಲ್ಲಿ, ಕಾಂಗ್ರೆಸ್ ವರಿಷ್ಠರು ಇತರೆ ಸ್ಪರ್ಧಾಕಾಂಕ್ಷಿಗಳತ್ತ ಚಿತ್ತ ಹರಿಸಿದ್ದಾರೆ.
ಮತ್ತೊಂದೆಡೆ ಕಾಗೋಡು ಕಣಕ್ಕಿಳಿಯದಿರುವ ವಿಷಯ ಖಚಿತವಾಗುತ್ತಿದ್ದಂತೆ, ಇತರೆ ಸ್ಪರ್ಧಾಕಾಂಕ್ಷಿಗಳು ಟಿಕೆಟ್ ಲಾಬಿ ತೀವ್ರಗೊಳಿಸಿದ್ದಾರೆ. ನಾನಾ ಕಡೆಯಿಂದ ವರಿಷ್ಠರ ಮೇಲೆ ಒತ್ತಡ ತರುವ ಕೆಲಸ ನಡೆಸುತ್ತಿದ್ದಾರೆ. ಇನ್ನೊಂದೆಡೆ ಜಾತಿ ಆಧಾರಿತ ಲೆಕ್ಕಾಚಾರ, ಕ್ಷೇತ್ರ ವ್ಯಾಪ್ತಿಯಲ್ಲಿನ ಜನಪ್ರಿಯತೆ, ಮತಗಳಿಕೆಯ ಸಾಮರ್ಥ್ಯ ಮತ್ತಿತರ ಅಂಶಗಳ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆಯತ್ತ ವರಿಷ್ಠರು ಚಿತ್ತ ಹರಿಸಿದ್ದಾರೆ.
ಆದರೆ ಎಲ್ಲ ದೃಷ್ಟಿಯಿಂದಲೂ ಬಿಜೆಪಿಗೆ ಪ್ರಬಲ ಸ್ಪರ್ಧೆಯೊಡ್ಡಬಲ್ಲ ಅಭ್ಯರ್ಥಿಗಳು ಗೋಚರವಾಗದಿರುವುದು, ಆಯ್ಕೆ ಪ್ರಕ್ರಿಯೆ ವಿಳಂಬವಾಗುವಂತೆ ಮಾಡಿದೆ. ಜೊತೆಗೆ ವರಿಷ್ಠರಿಗೂ ತಲೆನೋವಾಗಿ ಪರಿಣಮಿಸುವಂತೆ ಮಾಡಿದೆ. ಈ ಕಾರಣದಿಂದ ಸಭೆಗಳ ಮೇಲೆ ಸಭೆ ನಡೆಸಿ, ಸಮರ್ಥ ಅಭ್ಯರ್ಥಿಯ ಶೋಧವನ್ನು ಕಾಂಗ್ರೆಸ್ ವರಿಷ್ಠರು ನಡೆಸಲಾರಂಭಿಸಿದ್ದಾರೆ.
ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಈಡಿಗ, ಮುಸ್ಲಿಂ, ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ, ಹಿಂದುಳಿದ ವರ್ಗಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಕಾರಣದಿಂದ ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಕೆಲ ಸ್ಪರ್ಧಾಕಾಂಕ್ಷಿಗಳು ಟಿಕೆಟ್ ಕ್ಲೈಮ್ ಮಾಡಲಾರಂಭಿಸಿದ್ದಾರೆ. ಒಕ್ಕಲಿಗ, ಲಿಂಗಾಯತ, ಈಡಿಗ, ಇತರೆ ಹಿಂದುಳಿದ ವರ್ಗದ ಕೋಟಾದಡಿ ಕೆಲವರು ಟಿಕೆಟ್ ಗೆ ಲಾಬಿ ನಡೆಸುತ್ತಿದ್ದಾರೆ.
ಒಕ್ಕಲಿಗ ಕೋಟಾದಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮುಖಂಡ ಹೆಚ್.ಎಸ್.ಸುಂದರೇಶ್, ಹಿಂದುಳಿದ ವರ್ಗಗಳ ಕೋಟಾದಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್, ವೀರಶೈವ-ಲಿಂಗಾಯತ ಕೋಟಾದಡಿ ಹೆಚ್.ಸಿ.ಯೋಗೇಶ್, ಸಾಗರ ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಸೇವಾದಳದ ಪ್ರಮುಖ ವೈ.ಹೆಚ್.ನಾಗರಾಜ್ ರವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎಂದು ಆ ಪಕ್ಷದ ಮೂಲಗಳು ಹೇಳುತ್ತಿವೆ.
ಫೈನಲ್: ಗುರುವಾರ ಅಥವಾ ಶುಕ್ರವಾರ ಪಕ್ಷದಿಂದ ಕಣಕ್ಕಿಳಿಯುವ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆಯಾದರೂ, ಇದು ಖಚಿತವಾಗುತ್ತಿಲ್ಲ. ಇದರಿಂದ ಯಾರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂಬುವುದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
ರಾಮನಗರ ರಾಜಕಾರಣ: ಶಿವಮೊಗ್ಗದಲ್ಲಿ ದೇವೇಗೌಡರ ದಾಳ
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಣಕ್ಕಿಳಿಸುವ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ವ್ಯಕ್ತಪಡಿಸಲಿದೆ ಎಂಬ ಮಾತುಗಳು ಕಳೆದ ಕೆಲ ದಿನಗಳಿಂದ ಎರಡೂ ಪಕ್ಷಗಳ ಪಡಸಾಲೆಯಲ್ಲಿ ಕೇಳಿಬರುತ್ತಿತ್ತು. ಆದರೆ ಬುಧವಾರ ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರವರು, ಮಧು ಬಂಗಾರಪ್ಪ ಕಣಕ್ಕಿಳಿಯುವುದಾದರೆ ಪಕ್ಷದಿಂದ ಸ್ಪರ್ಧೆಗೆ ಅವಕಾಶ ನೀಡಲಾಗುವುದು ಎಂದು ಹೇಳುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ.
ಹೆಚ್.ಡಿ.ದೇವೇಗೌಡರ ಈ ಹೇಳಿಕೆಯ ಹಿಂದೆ, ರಾಜಕೀಯ ತಂತ್ರಗಾರಿಕೆ ಅಡಗಿದೆ. ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಿಂದ ಕಣಕ್ಕಿಳಿಯುತ್ತಿರುವ ಅನಿತಾ ಕುಮಾರಸ್ವಾಮಿಯವರಿಗೆ ಬೆಂಬಲಿಸುವ ಕುರಿತಂತೆ ಕಾಂಗ್ರೆಸ್ ನಿಂದ ಸ್ಪಷ್ಟ ಅಭಿಪ್ರಾಯ ವ್ಯಕ್ತವಾಗುತ್ತಿಲ್ಲ. ಈ ಕಾರಣದಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಹೆಸರು ತೇಲಿ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಗೂಢವಾದ ಮಧು ಬಂಗಾರಪ್ಪ ನಡೆ
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರವರು ಮಧು ಬಂಗಾರಪ್ಪ ಕಣಕ್ಕಿಳಿಯುವುದಾದರೆ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದಾರೆ. ಮತ್ತೊಂದೆಡೆ ಕುಟುಂಬ ಸದಸ್ಯರ ಜೊತೆ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ಹೇಳಲಾಗುತ್ತಿರುವ ಮಧು ಬಂಗಾರಪ್ಪರವರ ನಡೆ ನಿಗೂಢವಾಗಿದೆ. ಅವರ ಆಪ್ತ ಮೂಲಗಳು ಹೇಳುವ ಪ್ರಕಾರ, ಮಧು ಬಂಗಾರಪ್ಪರವರು ಉಪ ಚುನಾವಣಾ ಸ್ಪರ್ಧಾಕಾಂಕ್ಷಿಯಲ್ಲ. ಪಕ್ಷದ ವರಿಷ್ಠರು ಸೂಚಿಸಿದರೂ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಬಹುತೇಕ ಕಡಿಮೆ ಎಂದು ಹೇಳುತ್ತವೆ.
ರಾಘವೇಂದ್ರರಿಂದ 'ಟೆಂಪಲ್ ರನ್!'
ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರರವರು ದೇವಾಲಯಗಳಿಗೆ ಭೇಟಿ ನೀಡುವುದರಲ್ಲಿ ಸಂಪೂರ್ಣ ಮಗ್ನರಾಗಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಅವರು ವಿವಿಧ ಧಾರ್ಮಿಕ ಸ್ಥಳಗಳಿಗೆ ಕುಟುಂಬ ಸದಸ್ಯರ ಸಮೇತ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಬಿ.ವೈ.ರಾಘವೇಂದ್ರರ 'ಟೆಂಪಲ್ ರನ್', ಸ್ಥಳೀಯ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೂ ಕಾರಣವಾಗಿದೆ.