ಲಯನ್ ಏರ್ ವಿಮಾನದ ಶೋಧ ಕಾರ್ಯ ಸ್ಥಗಿತ: ಇಂಡೋನೇಶ್ಯ ಘೋಷಣೆ

Update: 2018-11-12 14:22 GMT

ಜಕಾರ್ತ, ನ. 12: ಇತ್ತೀಚೆಗೆ ಸಮುದ್ರದಲ್ಲಿ ಪತನಗೊಂಡ ಲಯನ್ ಏರ್ 610 ವಿಮಾನದಲ್ಲಿದ್ದವರ ಶೋಧಕ್ಕಾಗಿ ನಡೆಸಲಾಗುತ್ತಿದ್ದ ಕಾರ್ಯಾಚರಣೆಯನ್ನು ನಿಲ್ಲಿಸಿರುವುದಾಗಿ ಇಂಡೋನೇಶ್ಯದ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಆದಾಗ್ಯೂ, ವಿಮಾನದ ಎರಡನೇ ಬ್ಲಾಕ್ ಬಾಕ್ಸ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ಗಾಗಿ ನಡೆಸಲಾಗುತ್ತಿರುವ ಶೋಧವನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

‘‘ನಿನ್ನೆ ಮಧ್ಯಾಹ್ನದಿಂದ ಇಂದಿನವರೆಗೆ ನಾವು ಯಾವುದೇ ಸಂತ್ರಸ್ತ ಪ್ರಯಾಣಿಕರನ್ನು ಕಂಡಿಲ್ಲ. ಹಾಗಾಗಿ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಿರುವುದಾಗಿ ನಾನು ಘೋಷಿಸುತ್ತೇನೆ’’ ಎಂದು ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಮುಹಮ್ಮದ್ ಸಯವುಗಿ ರವಿವಾರ ಹೇಳಿದರು.

‘‘ಶೋಧ ಕಾರ್ಯಾಚರಣೆಯ ವೇಳೆ, ಎಲ್ಲರ ಮನಸ್ಸನ್ನು ತೃಪ್ತಿಪಡಿಸಲು ನಮಗೆ ಸಾಧ್ಯವಾಗದಿರಬಹುದು. ಅದಕ್ಕಾಗಿ ನಾವು ಸಾರ್ವಜನಿಕರ, ಅದರಲ್ಲೂ ಮುಖ್ಯವಾಗಿ ಸಂತ್ರಸ್ತ ಕುಟುಂಬಗಳ ಕ್ಷಮೆ ಕೋರುತ್ತೇವೆ’’ ಎಂದರು.

ಅಕ್ಟೋಬರ್ 29ರಂದು 189 ಮಂದಿಯನ್ನು ಹೊತ್ತು ಜಕಾರ್ತದಿಂದ ಇಂಡೋನೇಶ್ಯದ ದ್ವೀಪವೊಂದಕ್ಕೆ ಹಾರುತ್ತಿದ್ದ ಲಯನ್ ಏರ್ 610 ವಿಮಾನವು, ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳ ಬಳಿಕ ಜಾವಾ ಸಮುದ್ರಕ್ಕೆ ಅಪ್ಪಳಿಸಿತ್ತು.

ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿರುವುದಾಗಿ ಬಳಿಕ ಘೋಷಿಸಲಾಯಿತು.

ಪತನಗೊಂಡ ವಿಮಾನದ ಬ್ಲಾಕ್‌ಬಾಕ್ಸ್‌ನ ಮೊದಲ ಭಾಗವನ್ನು ನವೆಂಬರ್ 1ರಂದು ಪತ್ತೆಹಚ್ಚಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News