ಅಕ್ರಮ ವಲಸೆ: ಅಮೆರಿಕ ಜೈಲುಗಳಲ್ಲಿರುವ ಭಾರತೀಯರೆಷ್ಟು ಗೊತ್ತೇ ?
ವಾಷಿಂಗ್ಟನ್, ನ. 13: ದೇಶದಲ್ಲಿ ಆಶ್ರಯ ಬಯಸಿ ಅಮೆರಿಕದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಶಿಕ್ಷೆಗೊಳಗಾಗಿರುವ 2,400 ಮಂದಿ ಭಾರತೀಯರು ಅಮೆರಿಕದ ಜೈಲುಗಳಲ್ಲಿದ್ದಾರೆ.
ಭಾರತದಲ್ಲಿ ಹಿಂಸೆ ಮತ್ತು ದೌರ್ಜನ್ಯಕ್ಕೆ ಒಳಗಾಗಿದ್ದೇವೆ ಎಂದು ಆಪಾದಿಸಿ ಆಶ್ರಯ ಬಯಸಿ ಅಮೆರಿಕ ಗಡಿಯೊಳಗೆ ನುಸುಳಿ ಶಿಕ್ಷೆಗೊಳಗಾದವರಲ್ಲಿ ಪಂಜಾಬಿಗಳೇ ಅಧಿಕ.
ಅಮೆರಿಕದ 86 ಜೈಲುಗಳಲ್ಲಿ 2382 ಮಂದಿ ಭಾರತೀಯ ಕೈದಿಗಳಿದ್ದಾರೆ ಎಂದು ಉತ್ತರ ಅಮೆರಿಕ ಪಂಜಾಬಿ ಅಸೋಸಿಯೇಶನ್, ಮಾಹಿತಿ ಸ್ವಾತಂತ್ರ್ಯದ ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಉತ್ತರ ಲಭಿಸಿದೆ.
ಅಕ್ಟೋಬರ್ 10ರವರೆಗೆ ಒಟ್ಟು 377 ಮಂದಿ ಭಾರತೀಯರನ್ನು ಕ್ಯಾಲಿಫೋರ್ನಿಯಾದ ಅಡೆಲಂಟೊ ಇಮಿಗ್ರೇಶನ್ ಆ್ಯಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ ಪ್ರೊಸೆಸಿಂಗ್ ಸೆಂಟರ್‌ನಲ್ಲಿ ಬಂಧಿಸಲಾಗಿದೆ. ಅಂತೆಯೇ 269 ಮಂದಿಯನ್ನು ಇಂಪೀರಿಯಲ್ ರೀಜನಲ್ ಅಡಲ್ಟ್ ಡಿಟೆನ್ಷನ್ ಫೆಸಿಲಿಟಿಯಲ್ಲಿ, 245 ಮಂದಿಯನ್ನು ವಿಟ್ರೊವಿಲ್ ಫೆಡರಲ್ ಕರೆಕ್ಷನನ್ ಇನ್‌ಸ್ಟಿಟ್ಯೂಷನ್‌ನಲ್ಲಿ ಹಾಗೂ 115 ಮಂದಿಯನ್ನು ವಾಷಿಂಗ್ಟನ್‌ನ ಟೊಕೊಮಾ ಐಸಿಇ ಪ್ರೊಸೆಸಿಂಗ್ ಸೆಂಟರ್‌ನಲ್ಲಿ ಬಂಧಿಸಲಾಗಿದೆ ಎಂಬ ಅಧಿಕೃತ ಮಾಹಿತಿ ದೊರಕಿದೆ ಎಂದು ಎನ್‌ಎಪಿಎ ಅಧ್ಯಕ್ಷ ಸತ್ನಂ ಎಸ್.ಚಹಾಲ್ ಹೇಳಿದ್ದಾರೆ.
ಸಾವಿರಾರು ಭಾರತೀಯರು, ಅದರಲ್ಲೂ ಮುಖ್ಯವಾಗಿ ಪಂಜಾಬಿಗಳು ಅಮೆರಿಕ ಜೈಲಿನಲ್ಲಿ ಕೊಳೆಯುತ್ತಿರುವುದು ಕಳವಳಕಾರಿ ಎಂದು ಅವರು ಹೇಳಿದ್ದಾರೆ.