ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ವಿರೋಧ: ಅಸ್ಸಾಂನಲ್ಲಿ 70 ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

Update: 2018-11-16 18:02 GMT

ಗುವಾಹಟಿ,ನ.16: 2016ರ ಪೌರತ್ವ ತಿದ್ದುಪಡಿ ವಿಧೇಯಕವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ, ಕೃಷಕ್ ಮುಕ್ತಿ ಸಂಗ್ರಾಮ ಸಮಿತಿ (ಕೆಎಂ ಎಸ್‌ಎಸ್) ನೇತೃತ್ವದ ಸುಮಾರು 70 ಸಂಘಟನೆಗಳು ಗುವಾಹತಿಯಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದವು.

ಒಂದು ವೇಳೆ ಪ್ರಸ್ತಾವಿತ ವಿಧೇಯಕವು ಅಂಗೀಕಾರಗೊಂಡಲ್ಲಿ, ಅಸ್ಸಾಮಿನ ಜನತೆ ತಮ್ಮದೇ ರಾಜ್ಯದಲ್ಲಿ ಅಲ್ಪಸಂಖ್ಯಾಕರಾಗಲಿದ್ದಾರೆಂದು ಕೆಎಂಎಸ್‌ಎಸ್ ನಾಯಕ ಅಖಿಲ್ ಗೊಗೊಯಿ ಆತಂಕ ವ್ಯಕ್ತಪಡಿಸಿದ್ದಾರೆ. ‘‘ನಾವು ವಿಧೇಯಕವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಸರಕಾರವು ವಿಧೇಯಕವನ್ನು ರದ್ದುಡಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಇಲ್ಲದೆ ಇದ್ದಲ್ಲಿ ನಾವು ತೀವ್ರವಾದ ಕ್ರಮಗಳನ್ನು ಕೈಗೊಳ್ಳಲಿದ್ದೇವೆ’’ ಎಂದವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ದೇಶದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಾವು ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. 2016ರ ಪೌರತ್ವ (ತಿದ್ದುಪಡಿ) ವಿಧೇಯಕವನ್ನು ಜಾರಿಗೊಳಿಸಲು ಯತ್ನಿಸುವ ಮೂಲಕ ಬಿಜೆಪಿ ಹಾಗೂ ಆರೆಸ್ಸೆಸ್ ‘‘ಹಿಂದೂ ರಾಷ್ಟ್ರವನ್ನು ಸೃಷ್ಟಿಸಲು ಯತ್ನಿಸುತ್ತಿದೆ’’ ಎಂದು ಗೊಗೊಯಿ ಆರೋಪಿಸಿದರು.

‘‘ ವಿಧೇಯಕದ ಜಾರಿಯ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಲೇ ಇದ್ದರೂ, ಸರಕಾರ ನಮ್ಮ ಬೇಡಿಕೆಗೆ ಕಿವಿಗೊಡುತ್ತಿಲ್ಲ. ಇಂತಹ ವಿಧೇಯಕ ವನ್ನು ನಾವು ಒಪ್ಪುವುದಿಲ್ಲ.ನಮ್ಮ ಹೋರಾಟವನ್ನು ಮುಂದುವರಿಸಲಿದ್ದೇವೆ ಹಾಗೂ ಅಂತಿಮವಾಗಿ ಜಯ ನಮ್ಮದಾಗಲಿದೆ’’ ಎಂದು ಗೊಗೊಯಿ ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಅಸ್ಸಾಂನ ವಿವಿಧೆಡೆ ಪೌರತ್ವ ವಿರೋಧಿ ವಿಧೇಯಕದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.

ಧಾರ್ಮಿಕ ದೌರ್ಜನ್ಯಕ್ಕೆ ಹೆದರಿ ಬಾಂಗ್ಲಾದೇಶ, ಪಾಕಿಸ್ತಾನ, ಹಾಗೂ ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್ 31ರ ಮೊದಲು ಭಾರತಕ್ಕೆ ಪಲಾಯನಗೈದ ಹಿಂದೂಗಳು, ಸಿಖ್ಖರು, ಬೌದ್ಧರು,ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಭಾರತೀಯ ಪೌರತ್ವವನ್ನು ನೀಡಲು 1955ರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಲೋಕಸಭೆಯಲ್ಲಿ ಇತ್ತೀಚೆಗೆ ಮಂಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News