ಜಾಹೀರಾತು ಕ್ಷೇತ್ರದ ಪಿತಾಮಹ, ರಂಗಕರ್ಮಿ ಅಲಿಕ್ ಪದಮ್ಸಿ ನಿಧನ

Update: 2018-11-17 13:01 GMT

ಹೊಸದಿಲ್ಲಿ,ನ.17 : ಖ್ಯಾತ ಜಾಹೀರಾತು ಗುರು ಹಾಗೂ ರಂಗಕರ್ಮಿ ಅಲಿಕ್ ಪದಮ್ಸಿ  ಮುಂಬೈಯಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. 1983ರಲ್ಲಿ ಪ್ರದರ್ಶನಗೊಂಡ ಐತಿಹಾಸಿಕ ನಾಟಕ 'ಗಾಂಧಿ'ಯಲ್ಲಿ ಮುಹಮ್ಮದ್ ಆಲಿ ಜಿನ್ನಾ ಪಾತ್ರ ನಿರ್ವಹಿಸಿ ಅವರು ಖ್ಯಾತಿ ಪಡೆದಿದ್ದರು. ಲಿಂಟಾಸ್ ಇಂಡಿಯಾ ಮುಖ್ಯಸ್ಥರಾಗಿದ್ದ ಅವರು ಲಿಂಟಾಸ್ ಅನ್ನು ದೇಶದ ಅತ್ಯುನ್ನತ ಜಾಹೀರಾತು ಏಜನ್ಸಿಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

‘ಭಾರತೀಯ ಜಾಹೀರಾತಿನ ಬ್ರ್ಯಾಂಡ್ ಪಿತಾಮಹ’ ಎಂದು ಕರೆಯಲ್ಪಡುತ್ತಿದ್ದ ಅವರು ಕೆಲವೊಂದು ಜನಪ್ರಿಯ ಹಾಗೂ ಖ್ಯಾತ ಜಾಹೀರಾತುಗಳಾದ ಸರ್ಫ್ ಲಲಿತಾಜಿ, ಲಿರಿಲ್ ಗರ್ಲ್, ಚೆರ್ರಿ ಬ್ಲಾಸಂ ಶೂ ಪಾಲಿಶ್  ಜಾಹೀರಾತಿನ ಚೆರ್ರಿ ಚಾರ್ಲಿ, ಹಮಾರ ಬಜಾಜ್ ಮುಂತಾದವುಗಳ ಹಿಂದಿನ ರೂವಾರಿಯಾಗಿದ್ದರು.

ಸರಕಾರ ಅವರ ಸಾಧನೆಯನ್ನು ಗುರುತಿಸಿ ಅವರಿಗೆ 2000ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು, ಮುಂಬೈನ ಅಡ್ವರ್ಟೈಸಿಂಗ್ ಕ್ಲಬ್ ಅವರನ್ನು ಅಡ್ವರ್ಟೈಸಿಂಗ್ ಮ್ಯಾನ್ ಆಫ್ ದಿ ಸೆಂಚುರಿ ಎಂದು ಗುರುತಿಸಿತ್ತು. ಅವರು 2012ರಲ್ಲಿ ಸಂಗೀತ್ ನಾಟಕ ಅಕಾಡೆಮಿಯ ಠಾಗೋರ್ ರತ್ನ ಪ್ರಶಸ್ತಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News