ಹಿಟ್ಲರ್, ನೆಪೋಲಿಯನ್ ಜತೆ ಹೋಲಿಸಿಕೊಂಡ ಪಾಕ್ ಪ್ರಧಾನಿ !

Update: 2018-11-18 05:33 GMT

ಇಸ್ಲಾಮಾಬಾದ್, ನ. 18: ಹಲವು ಪ್ರಮುಖ ನಿರ್ಧಾರಗಳ ವಿಚಾರದಲ್ಲಿ "ಯು ಟರ್ನ್" ತೆಗೆದುಕೊಂಡ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದು, ತಮ್ಮನ್ನು ನಾಝಿ ಮತ್ತು ಫ್ಯಾಸಿಸ್ಟ್ ಮುಖಂಡರಾದ ಹಿಟ್ಲರ್ ಹಾಗೂ ನೆಪೋಲಿಯನ್ ಜತೆ ಹೋಲಿಸಿಕೊಂಡಿದ್ದಾರೆ. "ಆದರೆ ನಾನು ಅವಗಿಂತಲೂ ಸ್ಮಾರ್ಟ್ ನಾಯಕ" ಎಂದು ಮಾಜಿ ಕ್ರಿಕೆಟರ್ ಹೇಳಿಕೊಂಡಿದ್ದಾರೆ.

"ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಆತ ಒಳ್ಳೆಯ ನಾಯಕನಾಗಲಾರ. ಹಿಟ್ಲರ್ ಹಾಗೂ ನೆಪೋಲಿಯನ್ ಕೂಡಾ ತನ್ನ ನಿರ್ಧಾರಗಳಲ್ಲಿ ಯು ಟರ್ನ್ ತೆಗೆದುಕೊಂಡಿದ್ದರೆ ಯುದ್ಧದಲ್ಲಿ ಅಷ್ಟೊಂದು ನಷ್ಟ ಅನುಭವಿಸುತ್ತಿರಲಿಲ್ಲ. ನಾಯಕರು ಸದಾ ಯು ಟರ್ನ್‌ಗೆ ಸಿದ್ಧರಿರಬೇಕು. ದೇಶದ ಹಿತಾಸಕ್ತಿಯ ವಿಚಾರದಲ್ಲಿ ಮತ್ತು ತಮ್ಮ ಕರ್ತವ್ಯದ ವಿಚಾರದಲ್ಲಿ ಪರಿಸ್ಥಿತಿಯ ಅಗತ್ಯತೆಗೆ ಅನುಗುಣವಾಗಿ ನಿರ್ಧಾರ ಬದಲಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಇಮ್ರಾನ್‌ ಖಾನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳ ಬಗ್ಗೆ ತದ್ವಿರುದ್ಧ ನಿಲುವು ಕೈಗೊಂಡ ಪ್ರಧಾನಿ ನಿರ್ಧಾರಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಖಾನ್ ಈ ಸ್ಪಷ್ಟನೆ ನೀಡಿದರು.

ಪಾಕ್ ಪ್ರಧಾನಿ ಹೇಳಿಕೆಗೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಾಯಕ ಸೈಯದ್ ಖುರ್ಷಿದ್ ಶಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಹಿಟ್ಲರ್ ಒಬ್ಬ ಸರ್ವಾಧಿಕಾರಿ. ಆತನ ಉದಾಹರಣೆ ನೀಡುವ ಮೂಲಕ ಖಾನ್ ಕೂಡಾ ತಾನು ಹಿಟ್ಲರ್‌ನಿಂದ ಪ್ರೇರಣೆ ಪಡೆದಿದ್ದನ್ನು ಸಾಬೀತು ಮಾಡಿದ್ದಾರೆ. ಜತೆಗೆ ಆತನಂತೆ ತಾವು ಕೂಡಾ ಸರ್ವಾಧಿಕಾರಿಯಾಗಲು ಬಯಸಿದಂತಿದೆ" ಎಂದು ಲೇವಡಿ ಮಾಡಿದ್ದಾರೆ.

"ಹಿಟ್ಲರ್ ಮತ್ತು ನೆಪೋಲಿಯನ್ ನೆನಪು ಮಾಡಿಕೊಂಡಿರುವ ನೀವು ರಷ್ಯಾ ವಿರುದ್ಧ ದಾಳಿ ನಡೆಸುತ್ತೀರಾ" ಎಂದು ಮುಸ್ಲಿಂ ಲೀಗ್-ನವಾಝ್ ಮುಖಂಡ ಖ್ವಾನಾ ಮುಹಮ್ಮದ್ ಆಸಿಫ್ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News