9 ಗಂಟೆಗಳ ಕಾಲ ನಡೆದ ಆರ್‌ಬಿಐನ ಮ್ಯಾರಥಾನ್ ಸಭೆ

Update: 2018-11-19 17:40 GMT

ಹೊಸದಿಲ್ಲಿ,ನ.19:ಕೇಂದ್ರ ಮತ್ತು ಆರ್‌ಬಿಐನ ಹಗ್ಗಜಗ್ಗಾಟದ ನಡುವೆಯೇ ಸೋಮವಾರ ಬೆಳಿಗ್ಗೆ ಆರಂಭಗೊಂಡಿದ್ದ ಬಹುನಿರೀಕ್ಷಿತ ಆರ್‌ಬಿಐ ಆಡಳಿತ ಮಂಡಳಿಯ ಸಭೆ ಸುದೀರ್ಘ ಒಂಭತ್ತು ಗಂಟೆಗಳ ಚರ್ಚೆಯ ಬಳಿಕ ರಾತ್ರಿ ಅಂತ್ಯಗೊಂಡಿದೆ. ಹೆಚ್ಚಿನ ವಿವಾದಾತ್ಮಕ ವಿಷಯಗಳ ಬಗ್ಗೆ ನಿರ್ಧಾರ ಮೂಡಿಬಂದಿಲ್ಲವಾದರೂ ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್‌ಎಂಇ) ಗಳಿಗಾಗಿ ನೂತನ ಯೋಜನೆಯನ್ನು ರೂಪಿಸಲು ಮತ್ತು ಅವುಗಳಿಗೆ 25 ಕೋ.ರೂ.ವರೆಗೆ ಸಾಲನೀಡಿಕೆಗೆ ಸಭೆಯು ಒಪ್ಪಿಕೊಂಡಿದೆ.

ಹಣಕಾಸು ಕ್ಷೇತ್ರಕ್ಕೆ ಹೆಚ್ಚಿನ ನಗದು ಪೂರೈಕೆಗೆ ಮಂಡಳಿಯು ಒಪ್ಪಿಕೊಂಡಿದೆಯಾದರೂ, ನಿರ್ಧಾರವನ್ನು ಸಮರ್ಥಿಸಲು ದೃಢವಾದ ದತ್ತಾಂಶಗಳು ಲಭ್ಯವಿರದ ಹಿನ್ನೆಲೆಯಲ್ಲಿ ಈ ವಿಷಯವು ಡಿ.14ರಂದು ನಡೆಯಲಿರುವ ಆರ್‌ಬಿಐ ಸಭೆಯಲ್ಲಿ ಮತ್ತೊಮ್ಮೆ ಚರ್ಚೆಗೆ ಬರಲಿದೆ.

ತನ್ನ ಮೀಸಲು ನಿಧಿಗಳು ಮತ್ತು ಸರಕಾರಕ್ಕೆ ಅದರ ವರ್ಗಾವಣೆ ವಿಷಯವನ್ನು ಪುನರ್‌ಪರಿಶೀಲಿಸಲು ಪ್ರತ್ಯೇಕ ಸಮಿತಿಯೊಂದನ್ನೂ ಆರ್‌ಬಿಐ ರಚಿಸಲಿದೆ. ಸಮಿತಿ ರಚನೆಯ ಕುರಿತು ಅಂತಿಮ ನಿರ್ಧಾರವನ್ನು ವಿತ್ತಸಚಿವ ಅರುಣ್ ಜೇಟ್ಲಿ ಮತ್ತು ಆರ್‌ಬಿಐ ಸಮಾಲೋಚನೆಯ ಬಳಿಕ ತೆಗೆದುಕೊಳ್ಳಲಾಗುವುದು. ತನ್ಮಧ್ಯೆ ಹಾಲಿ ಇರುವ ಸಮಿತಿಯು ತ್ವರಿತ ಸುಧಾರಣಾತ್ಮಕ ಕ್ರಮ(ಪಿಸಿಎ)ಗಳಿಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲಿದೆ ಎಂದು ಆಡಳಿತ ಮಂಡಳಿಯ ಸದಸ್ಯರೋರ್ವರು ತಿಳಿಸಿದರು.

 ಸಣ್ಣ ಉದ್ಯಮಗಳಿಗೆ ಸಾಲನೀಡಿಕೆಯನ್ನು ತ್ವರಿತಗೊಳಿಸಲು ಬ್ಯಾಂಕುಗಳಿಗೆ ಬಂಡವಾಳ ಅನುಪಾತಗಳನ್ನು ತಗ್ಗಿಸುವಂತೆ ಸರಕಾರವು ಆರ್‌ಬಿಐ ಮೇಲೆ ಒತ್ತಡ ಹೇರುತ್ತಿದೆ.

ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ಸಭೆಯು ನಡೆಯಿತು,ಹೆಚ್ಚಿನ ವಿಷಯಗಳು ಸೌಹಾರ್ದಪೂರ್ಣವಾಗಿ ಬಗೆಹರಿದಿವೆ ಎಂದು ಅವರು ತಿಳಿಸಿದರು.

ಸಭೆಗೆ ಪೂರ್ವಭಾವಿಯಾಗಿ ಆರ್‌ಬಿಐ ಮತ್ತು ಕೇಂದ್ರದ ನಡುವಿನ ವಾಗ್ಯುದ್ಧ ಆರ್‌ಬಿಐನ ಸ್ವಾಯತ್ತತೆಯನ್ನು ಕಾಯ್ದುಕೊಳ್ಳುವುದಾಗಿ ಸರಕಾರವು ಭರವಸೆ ನೀಡಿದ ಬಳಿಕ ಅಂತ್ಯಗೊಂಡಿತ್ತು. ಮಂಡಳಿಯ 18 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದು,ಈ ಪೈಕಿ ಗವರ್ನರ್ ಸೇರಿದಂತೆ ಐವರು ಆರ್‌ಬಿಐ ಅಧಿಕಾರಿಗಳಾಗಿದ್ದರೆ ಇತರ 13 ಸದಸ್ಯರು ಸರಕಾರದಿಂದ ನಾಮಕರಣಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News