25 ಮಂದಿ ಅನಿವಾಸಿ ಭಾರತೀಯರು ಪಾಸ್‌ಪೋರ್ಟ್ ಕಳೆದುಕೊಂಡದ್ದು ಏಕೆ ಗೊತ್ತೇ?

Update: 2018-11-20 03:42 GMT

ಹೊಸದಿಲ್ಲಿ, ನ.20: ಅನಿವಾಸಿ ಭಾರತೀಯರಿಂದ ಪರಿತ್ಯಕ್ತರಾದ ಬಹಳಷ್ಟು ಮಹಿಳೆಯರು ಇದೀಗ ದೂರು ನೀಡುತ್ತಿದ್ದು, ಕಳೆದ ಕೆಲ ತಿಂಗಳುಗಳಲ್ಲಿ ಪತ್ನಿಯರನ್ನು ತ್ಯಜಿಸಿದ್ದಕ್ಕಾಗಿ 25 ಅನಿವಾಸಿ ಭಾರತೀಯರ ಪಾಸ್‌ಪೋರ್ಟ್ ರದ್ದುಪಡಿಸಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕ್ರಮ ಕೈಗೊಂಡಿದೆ. ಇವರ ವಿರುದ್ಧ ಲುಕ್‌ಔಟ್ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಇದರ ಪರಿಣಾಮವಾಗಿ, ವಿದೇಶಗಳಲ್ಲಿ ವಾಸಿಸುವ ಅರ್ಹತೆಯನ್ನು ಅವರು ಕಳೆದುಕೊಳ್ಳಲಿದ್ದು, ಭಾರತಕ್ಕೆ ಗಡೀಪಾರು ಆಗಲಿದ್ದಾರೆ.

ಜನವರಿಯಿಂದೀಚೆಗೆ ಪೊಲೀಸರು 33 ಲುಕ್ ಔಟ್ ನೋಟಿಸ್ ನೀಡಿದ್ದಾರೆ. ಈ ಪೈಕಿ 8 ನೋಟಿಸ್‌ಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಸಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯಗಳನ್ನೊಳಗೊಂಡ ಸಮಗ್ರ ನೋಡಲ್ ಏಜೆನ್ಸಿ ನೀಡಿದೆ.

ಅನಿವಾಸಿ ಭಾರತೀಯರನ್ನು ಒಳಗೊಂಡ ಅಪರಾಧಗಳಲ್ಲಿ, ನ್ಯಾಯಾಲಯಗಳು ಜಾಮೀನು ರಹಿತ ವಾರೆಂಟ್ ನೀಡಿದರೂ, ನ್ಯಾಯಾಲಯಕ್ಕೆ ಹಾಜರಾಗದೆ ಬಂಧನದಿಂದ ತಪ್ಪಿಸಿಕೊಳ್ಳುವವರ ವಿರುದ್ಧ ತನಿಖಾ ಸಂಸ್ಥೆಗಳು ಲುಕ್ ಔಟ್ ನೋಟಿಸ್ ಹೊರಡಿಸುತ್ತವೆ.

ಹಲವು ಅನಿವಾಸಿ ಭಾರತೀಯರನ್ನೊಳಗೊಂಡ ವೈವಾಹಿಕ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಇದು ಮಹಿಳೆಯರು ಮತ್ತು ಮಕ್ಕಳ ಭವಿಷ್ಯಕ್ಕೆ ಮುಳುವಾಗಿದೆ. ಇದನ್ನು ಬಗೆಹರಿಸುವ ಸಲುವಾಗಿ ಸಮಗ್ರ ನೋಡಲ್ ಏಜೆನ್ಸಿಯನ್ನು ರಚಿಸಲಾಗಿತ್ತು. ಇದು ನಿಯತವಾಗಿ ಸಭೆ ಸೇರಿ ಪ್ರಕರಣಗಳ ಪರಾಮರ್ಶೆ ನಡೆಸುತ್ತಿದೆ. ಈ ವರ್ಷ ಇದುವರೆಗೆ ಎನ್‌ಆರ್‌ಐ ಪತಿಗಳಿಂದ ಪರಿತ್ಯಕ್ತರಾದ 578 ಮಹಿಳೆಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಸಂಪರ್ಕಿಸಿ ನೆರವು ಕೋರಿದ್ದಾರೆ. 2009ರಿಂದೀಚೆಗೆ ಒಟ್ಟು 4 ಸಾವಿರ ದೂರುಗಳನ್ನು ಸ್ವೀಕರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News