ಭೀಮಾ-ಕೋರೆಗಾಂವ್ ವಾರ್ಷಿಕ ದಿನಾಚರಣೆ: ಭೀಮ್ ಆರ್ಮಿ ಸ್ಥಾಪಕ ಚಂದ್ರಶೇಖರ ಆಝಾದ್ ರಿಂದ ಭಾಷಣ

Update: 2018-11-22 15:13 GMT

ಪುಣೆ,ನ.22: ಜ.1ರ ಭೀಮಾ-ಕೋರೆಗಾಂವ್ ಯುದ್ಧದ ವಾರ್ಷಿಕ ದಿನಾಚರಣೆಗೆ ಮುನ್ನ ಡಿ.30ರಂದು ದಲಿತ ಸಂಘಟನೆ ಭೀಮ್ ಆರ್ಮಿಯ ಸ್ಥಾಪಕ ಚಂದ್ರಶೇಖರ ಆಝಾದ್ ಅಲಿಯಾಸ್ ರಾವಣ ಅವರು ಪುಣೆಯಲ್ಲಿ ಬಹಿರಂಗ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.

30,000ಕ್ಕೂ ಅಧಿಕ ಜನರು ಭೀಮಾ-ಕೋರೆಗಾಂವ್ ಸಂಘರ್ಷ ಮಹಾಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಎಸ್‌ಎಸ್‌ಪಿಎಂಎಸ್ ಮೈದಾನದಲ್ಲಿ ರ್ಯಾಲಿಯು ನಡೆಯಲಿದ್ದು,ಆಝಾದ್ ಮತ್ತು ಸಂಘಟನೆಯ ಇತರ ಹಲವಾರು ನಾಯಕರು ಉಪಸ್ಥಿತರಿರುತ್ತಾರೆ ಎಂದು ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷ ದತ್ತಾ ಪೋಳ್ ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮೂರು ದಿನಗಳ ಕಾರ್ಯಕ್ರಮದಲ್ಲಿ ಡಿ.30ರಂದು ಆಝಾದ್ ಅವರು ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಮರುದಿನ ಸಾವಿತ್ರಿಬಾಯಿ ಫುಲೆ ಪುಣೆ ವಿವಿಯ ಕೆಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.

ಆಝಾದ್ ಜ.1ರಂದು ಭೀಮಾ-ಕೋರೆಗಾಂವ್ ಸ್ಮಾರಕಕ್ಕೂ ಭೇಟಿ ನೀಡಲಿದ್ದಾರೆ ಮತ್ತು ಹೆಲಿಕಾಪ್ಟರ್ ಮೂಲಕ ಸ್ಮಾರಕಕ್ಕೆ ಪುಷ್ಪವೃಷ್ಟಿಗೈಯಲಿದ್ದಾರೆ ಎಂದ ಅವರು,ಕಾರ್ಯಕ್ರಮಕ್ಕಾಗಿ ಪೊಲೀಸ್ ಅನುಮತಿಯನ್ನು ಕೋರಲಾಗಿದೆ ಮತ್ತು ಅನುಮತಿ ನಿರಾಕರಿಸಲು ಯಾವುದೇ ಕಾರಣಗಳಿಲ್ಲ ಎಂದರು.

ಕಳೆದ ವರ್ಷದ ಡಿ.31ರಂದು ಭೀಮಾ-ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಗಾಗಿ ದಲಿತ ಸಂಘಟನೆಗಳು ಪುಣೆಯ ಶನಿವಾರವಾಡಾದಲ್ಲಿ ಎಲ್ಗಾರ್ ಪರಿಷದ್‌ನ್ನು ಆಯೋಜಿಸಿದ್ದು,ಗುಜರಾತ್ ಶಾಸಕ ಹಾಗೂ ದಲಿತ ನಾಯಕ ಜಿಗ್ನೇಶ್ ಮೇವಾನಿ,ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್,ಭಾರಿಪ್ ಬಹುಜನ ಮಹಾಸಂಘದ ನಾಯಕ ಪ್ರಕಾಶ ಅಂಬೇಡ್ಕರ್ ಮತ್ತು ಭೀಮ್ ಆರ್ಮಿಯ ವಿನಯ ರತನ್ ಸಿಂಗ್ ಸೇರಿದಂತೆ ಹಲವರು ಭಾಷಣಗಳನ್ನು ಮಾಡಿದ್ದರು.

ಈ ವರ್ಷದ ಜ.1ರಂದು ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಮಾವೇಶದಲ್ಲಿ ಮಾಡಲಾಗಿದ್ದ ಭಾಷಣಗಳು ಪ್ರಚೋದನೆ ನೀಡಿದ್ದವು ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು,ಇತರ ಹಲವರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News