ಚೆನ್ನೈಯ ರೈಲು ನಿಲ್ದಾಣದಲ್ಲಿ ವಶಪಡಿಸಲಾದ ಕೆಜಿಗಟ್ಟಲೆ ಮಾಂಸ ನಾಯಿಯದ್ದೇ?

Update: 2018-11-23 08:53 GMT

ಚೆನ್ನೈ, ನ.23: ನಗರದ ಎಗ್ಮೋರ್ ರೈಲು ನಿಲ್ದಾಣದಲ್ಲಿ ನವೆಂಬರ್ 17ರಂದು ಪತ್ತೆಯಾದ  2,190 ಕೆಜಿಯಷ್ಟು ಕೊಳೆತ ಮಾಂಸ ನಾಯಿಗಳದ್ದು ಎಂಬ ಸುದ್ದಿ ಸಾರ್ವಜನಿಕರಲ್ಲಿ ಸಾಕಷ್ಟು ಆತಂಕ ಮೂಡಿಸಿರುವಂತೆಯೇ ಇವುಗಳು ನಾಯಿಗಳ ಮಾಂಸವಲ್ಲ,  ಬದಲಾಗಿ ಕುರಿ ಅಥವಾ ಆಡಿನ ಮಾಂಸವಾಗಿದೆ ಎಂದು  ಪ್ರಯೋಗಾಲಯ ಪರೀಕ್ಷೆ ತಿಳಿಸಿದೆ.

ಮಾಂಸವು ಜೋಧಪುರದಿಂದ ಚೆನ್ನೈಗೆ ಸರಿಯಾದ ಮಾರ್ಗಸೂಚಿಗಳನ್ನು ಅನುಸರಿಸದೆ ರೈಲಿನಲ್ಲಿ ಸಾಗಿಸಲಾಗಿತ್ತೆಂದು ದೂರಲಾಗಿದೆ. ಕೊಳೆತ ಪ್ರಾಣಿಯ ದೇಹಗಳಲ್ಲಿ ಉದ್ದನೆಯ ಬಾಲವಿದ್ದುದರಿಂದ ಅವುಗಳು ನಾಯಿಯ ದೇಹಗಳಾಗಿರಬೇಕೆಂಬ ಸಂಶಯ ಮೂಡಿತ್ತು.

ತಮಿಳುನಾಡು ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಒಂದು ಪ್ರಾಣಿಯ ಮೃತದೇಹ ನೀಡಿ ಅದು ಯಾವ ಪ್ರಾಣಿಯದ್ದೆಂದು ಪತ್ತೆ ಹಚ್ಚಲು ತಿಳಿಸಲಾಗಿತ್ತು. ಮಾಲಿಕ್ಯುಲರ್ ತಂತ್ರಜ್ಞಾನದ ಮೂಲಕ ಪರಿಶೀಲಿಸಿದಾಗ ಅದು ಆಡು ಅಥವಾ ಕುರಿಯ ದೇಹವಾಗಿರಬೇಕೆಂದು ತಿಳಿದು ಬಂದಿದೆ.

ಮಾಂಸ ಇನ್ನೊಂದು ರಾಜ್ಯದಿಂದ ಎಗ್ಮೋರ್ ನಿಲ್ದಾಣಕ್ಕೆ ಆಗಮಿಸಿದಾಗ ಅವುಗಳನ್ನು ಶೀತಲೀಕೃತ ಪೆಟ್ಟಿಗೆಯಲ್ಲಿರಿಸಲಾಗಿರಲಿಲ್ಲ.  ಮೇಲಾಗಿ ಪ್ರಾಣಿಗಳನ್ನು ಯಾವ  ಕಸಾಯಿಖಾನೆಯಲ್ಲಿ ವಧೆಗೊಳಿಸಲಾಗಿದೆ ಎಂಬುದನ್ನು ಆ ಪೆಟ್ಟಿಗೆಗಳಲ್ಲಿ ನಮೂದಿಸಲಾಗಿಲ್ಲದೇ ಇರುವುದರಿಂದ ಈ ಪ್ರಾಣಿಗಳನ್ನು ಅಕ್ರಮವಾಗಿ ಹತ್ಯೆಗೈದಿರಬೇಕೆಂಬ ಸಂಶಯ ಮೂಡಿದೆ. ಪಶುವೈದ್ಯಕೀಯ ಅಧಿಕಾರಿಯ ಪ್ರಮಾಣಪತ್ರವೂ ಇರಲಿಲ್ಲ, ಕೆಲವೊಂದು ಪೆಟ್ಟಿಗೆಗಳಲ್ಲಿ ಮೀನು ಎಂದೂ ನಮೂದಿಸಲಾಗಿತ್ತು, ಎಂದು ಆಹಾರ ಸುರಕ್ಷತಾ ವಿಭಾಗದ ಡಾ ಆರ್ ಕಥಿರವನ್ ಹೇಳಿದ್ದಾರೆ.

ಈ ಕೊಳೆತ ಮಾಂಸ ಎಲ್ಲಿಂದ ಬಂದಿದೆ ಎಂದು ತಿಳಿಯಲು ಎಸ್ಸೈ ಒಬ್ಬರ ನೇತೃತ್ವದಲ್ಲಿ ರೈಲ್ವೆ ಪೊಲಿಸರ ತಂಡ ಜೋಧಪುರಕ್ಕೆ ಗುರುವಾರ ಪ್ರಯಾಣ ಬೆಳೆಸಿದೆ. ತಂಡ ಮರಳಿ ಬರಲು ಕನಿಷ್ಠ ಒಂದು ವಾರವಾಗಬಹುದು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News