ರಾಜಸ್ಥಾನ: 11 ಬಂಡಾಯ ನಾಯಕರ ಉಚ್ಛಾಟಿಸಿದ ಬಿಜೆಪಿ

Update: 2018-11-23 14:23 GMT

ಜೈಪುರ, ನ. 23: ಬಿಜೆಪಿ ತನ್ನ 11 ಮಂದಿ ಬಂಡಾಯ ನಾಯಕರನ್ನು ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟಿಸಿದೆ. ಮುಂಬರುವ ರಾಜಸ್ತಾನ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸುತ್ತಿರುವ ನಾಯಕರ ವಿರುದ್ಧ ಈ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ.

ರಾಜ್ಯದ ಚುರು, ಜೈಪುರ ಹಾಗೂ ಪಾಲಿ ಜಿಲ್ಲೆಗಳಿಂದ ತಲಾ ಇಬ್ಬರು ನಾಯಕರನ್ನು ಉಚ್ಛಾಟಿಸಲಾಗಿದೆ. ಶ್ರೀ ಗಂಗಾನಗರ್, ಆಲ್ವಾರ್, ಬಿಕೇನಾರ್, ಬನ್ಸ್ವಾರಾ ಹಾಗೂ ದುಂಗಾರ್‌ಪುರದಿಂದ ತಲಾ ಓರ್ವ ನಾಯಕನನ್ನು ಉಚ್ಛಾಟಿಸಲಾಗಿದೆ. ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಬಳಿಕ ಬಿಜೆಪಿಯ ಹಲವು ನಾಯಕರು ತಮ್ಮ ಬಣ ಬದಲಾಯಿಸಿದ್ದರು. ನವೆಂಬರ್ 18ರಂದು ರಾಮಗಢ ಕ್ಷೇತ್ರದ ಬಿಜೆಪಿಯ ಹಾಲಿ ಶಾಸಕ ಜ್ಞಾನ್‌ದೇವ್ ಅಹುಜಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

 ಪಕ್ಷ ಟಿಕೆಟ್ ನೀಡಲು ನಿರಾಕರಿಸಿದ ಬಳಿಕ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಫರ್ದಿಸುವುದಾಗಿ ಘೋಷಿಸಿದರು. ಕಳೆದ ಬುಧವಾರ ಬಿಜೆಪಿಯ ಮಾಜಿ ಶಾಸಕ ಹಬಿಬುರ್ ರೆಹಮಾನ್ ಅಶ್ರಾಫಿ ಲಾಂಬಾ ಕಾಂಗ್ರೆಸ್ ಸೇರಿದ್ದರು. ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹೆಸರು ಇಲ್ಲದೇ ಇರುವುದು ತಿಳಿದ ಬಳಿಕ ರೆಹಮಾನ್ ನವೆಂಬರ್ 12ರಂದು ಬಿಜೆಪಿ ವರಿಷ್ಠ ಮದನ್ ಲಾಲ್ ಸೈನಿ ಅವರಲ್ಲಿ ರಾಜೀನಾಮೆ ಸಲ್ಲಿಸಿದ್ದರು. ರಾಜಸ್ಥಾನದಲ್ಲಿ ಡಿಸೆಂಬರ್ 7ರಂದು ಚುನಾವಣೆ ನಡೆಯಲಿದೆ ಹಾಗೂ ಡಿಸೆಂಬರ್ 11ರಂದು ಫಲಿತಾಂಶ ಘೋಷಣೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News