ರಫೇಲ್: ಫ್ರಾನ್ಸ್ ಎನ್‌ಜಿಒ ಕಾನೂನು ಸಮರಕ್ಕೆ ಮುಂದಾಗಿದ್ದೇಕೆ ?

Update: 2018-11-24 04:01 GMT

ಹೊಸದಿಲ್ಲಿ, ನ. 24: ದೇಶದ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ರಫೇಲ್ ಒಪ್ಪಂದ ಇದೀಗ ಮಹತ್ವದ ತಿರುವು ಪಡೆದುಕೊಂಡಿದ್ದು, ಒಪ್ಪಂದದ ಷರತ್ತುಗಳನ್ನು ಮತ್ತು ಅನಿಲ್ ಅಂಬಾನಿಯರವ ರಿಲಯನ್ಸ್ ಡಿಫೆನ್ಸ್ ಆಯ್ಕೆ ಮಾಡಿಕೊಂಡ ಹಿನ್ನೆಲೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಫ್ರಾನ್ಸ್‌ನ ಸರ್ಕಾರೇತರ ಸಂಸ್ಥೆಯೊಂದು ಕಾನೂನು ಸಮರಕ್ಕೆ ಮುಂದಾಗಿದೆ.

ಆರ್ಥಿಕ ಅಪರಾಧಗಳ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಶೆರ್ಪಾ ಎಂಬ ಸ್ವಯಂಸೇವಾ ಸಂಸ್ಥೆ ಅಲ್ಲಿನ ಫೈನಾನ್ಶಿಯಲ್ ಪ್ರಾಸಿಕ್ಯೂಟರ್ಸ್‌ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ, ಯಾವ ಷರತ್ತುಗಳ ಮೇಲೆ ಭಾರತಕ್ಕೆ 36 ರಫೇಲ್ ಯುದ್ಧ ವಿಮಾನಗಳನ್ನು ಪೂರೈಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ಬಯಸಿದೆ. ಅಂತೆಯೇ ಯುದ್ಧ ವಿಮಾನ ತಯಾರಿಕೆಗೆ ಅನಿಲ್ ಅಂಬಾನಿಯವರ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಆಯ್ಕೆ ಮಾಡಿ ಕೊಂಡಿರುವ ಬಗ್ಗೆಯೂ ಸ್ಪಷ್ಟನೆ ಕೋರಿದೆ.

ಮಾಜಿ ಕೇಂದ್ರ ಸಚಿವರೊಬ್ಬರು ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಸಿಬಿಐಗೆ ದೂರು ನೀಡಿ, ರಫೇಲ್ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಕೆಲವರಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂದು ಆಪಾದಿಸಿದ ಹಿನ್ನೆಲೆಯಲ್ಲಿ ಮತ್ತು ಮಾಧ್ಯಮಗಳ ವರದಿಯನ್ನು ಆಧರಿಸಿ ಸಂಸ್ಥೆ ಕೈಗೊಂಡ ಸ್ವತಂತ್ರ ತನಿಖೆ ಆಧಾರದಲ್ಲಿ ದೂರು ನೀಡಲಾಗಿದೆ ಎಂದು ಶೆರ್ಪಾ ಹೇಳಿದೆ.

"ಫ್ರಾನ್ಸ್‌ನ ರಾಷ್ಟ್ರೀಯ ಸರ್ಕಾರಿ ಅಭಿಯೋಜಕ ಕಚೇರಿ ಈ ಪ್ರಕರಣದ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ನಡೆಸಿ, ಆರೋಪಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಇದರಲ್ಲಿ ನಡೆದಿರಬಹುದಾದ ಭ್ರಷ್ಟಾಚಾರ, ದುರ್ಲಾಭ ಮಾಡಿಕೊಟ್ಟಿರುವುದು, ಪ್ರಭಾವ ಬೀರಿ ವಹಿವಾಟು ನಡೆದಿರುವುದು, ಈ ಪ್ರಕರಣದ ಸಂಕೀರ್ಣತೆ ಮತ್ತಿತರ ವಿಚಾರಗಳ ಬಗ್ಗೆ ತನಿಖೆ ನಡೆಸುವಂತೆ ಕೋರಲಾಗಿದೆ" ಎಂದು ಶೆರ್ಪಾ ಪ್ರಕಟಣೆ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News