ಲಾಕಪ್ ಡೆತ್: ಆಗ್ರಾದ ಇಡೀ ಪೊಲೀಸ್ ಸ್ಟೇಶನ್ ಮೇಲೆ ಹತ್ಯೆ ಪ್ರಕರಣ ದಾಖಲು

Update: 2018-11-24 05:19 GMT

ಆಗ್ರಾ, ನ.24: ಅತ್ಯಂತ ಆಘಾತಕಾರಿ ಘಟನೆಯೊಂದರಲ್ಲಿ 32ರ ಹರೆಯದ ಯುವಕನನ್ನು ಆತನ ತಾಯಿಯೇ ಎದುರೇ ಪೊಲೀಸ್ ಠಾಣೆಯ ಲಾಕಪ್‌ನಲ್ಲಿ ಹೊಡೆದು ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಆಗ್ರಾದ ಇಡೀ ಪೊಲೀಸ್ ಠಾಣೆಯ ಮೇಲೆ ಹತ್ಯೆ ಕೇಸ್ ದಾಖಲಿಸಲಾಗಿದೆ.

  ಘಟನೆ ನಡೆದ ಸಿಕಂದರಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಹಾಗೂ ಇಬ್ಬರು ಸಬ್- ಇನ್ಸ್‌ಪೆಕ್ಟರ್‌ಗಳನ್ನು ಅಮಾನತುಗೊಳಿಸಲಾಗಿದೆ. ಕಸ್ಟಡಿ ಸಾವು ಸಂಭವಿಸಿದ್ದ ಪೊಲೀಸ್ ಠಾಣೆ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಅಮಿತ್ ಪಾಠಕ್ ಎಂದು ಆಂಗ್ಲ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ನೆರೆಮನೆಯವರು ರಾಜು ಎಂಬ ಯುವಕನ ಮೇಲೆ 7 ಲಕ್ಷ ರೂ. ಆಭರಣ ಕಳವು ಮಾಡಿದ ಆರೋಪ ಹೊರಿಸಿದ ಬಳಿಕ ಬುಧವಾರ ಪೊಲೀಸರು ಯುವಕನನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದರು. ಆದರೆ, ರಾಜೂ ಅವರ ತಾಯಿ ರೇಣು ಕುಮಾರಿ ಈ ಆರೋಪವನ್ನು ನಿರಾಕರಿಸಿದ್ದಾರೆ.

ತನ್ನ ಮಗ ಮಾನಸಿಕವಾಗಿ ದುರ್ಬಲನಾಗಿದ್ದು, ಕೆಮಿಕಲ್ ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎಂದು ರೇಣುಕುಮಾರಿ ಹೇಳಿದ್ದಾರೆ. ಕುಮಾರಿ ದಿಲ್ಲಿಯಲ್ಲಿ ತನ್ನ ಇಬ್ಬರು ಪುತ್ರಿಯರು ಹಾಗೂ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಪೊಲೀಸರು ರಾಜೂವನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡ ಬಳಿಕ ಹಿಗ್ಗಾಮುಗ್ಲಾ ಥಳಿಸಿದ್ದು, ತಾಯಿಯ ಎದುರೇ ಲಾಕಪ್‌ನಲ್ಲಿ ಲಾಠಿ ಏಟು ನೀಡಿದ್ದಾರೆ. ತಾಯಿ ಎಷ್ಟೇ ಬೇಡಿಕೊಂಡರೂ ಪೊಲೀಸರು ಹೊಡೆಯುವುದನ್ನು ನಿಲ್ಲಿಸಿರಲಿಲ್ಲ.

‘‘ನನ್ನನ್ನು ಸುಮಾರು 6 ಗಂಟೆ ಸುಮಾರಿಗೆ ಪೊಲೀಸರು ಮನೆಗೆ ಬಿಟ್ಟುಹೋಗಿದ್ದರು. ಆದರೆ, ನನ್ನ ಮಗನನ್ನು ಲಾಕಪ್‌ನಲ್ಲೇ ಇಟ್ಟುಕೊಂಡಿದ್ದರು. 9 ಗಂಟೆ ಸುಮಾರಿಗೆ ನನ್ನ ಮಗ ಸತ್ತಿರುವುದಾಗಿ ಪೊಲೀಸರು ತಿಳಿಸಿದ್ದರು’’ ಎಂದು ಕುಮಾರಿ ಹೇಳಿದ್ದಾರೆ.

ಶುಕ್ರವಾರ ರಾಜು ಮೃತದೇಹದ ಪೋಸ್ಟ್‌ಮಾರ್ಟಂ ನಡೆಸಲಾಗಿದ್ದು, ಇದನ್ನು ಪೊಲೀಸರು ವಿಡಿಯೋ ಮಾಡಿದ್ದರು. ಶವ ಪರೀಕ್ಷೆ ವರದಿಯಲ್ಲಿ ರಾಜೂ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿದೆ. ಭುಜ, ಕೈಗಳು ಹಾಗೂ ಕಾಲುಗಳಿಗೆ ಸ್ವಲ್ಪ ಗಾಯವಾಗಿದೆ ಎಂದು ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News