ಬ್ರಾಹ್ಮಣ ಟೀಕೆ: ಕಾಂಗ್ರೆಸ್ ನಾಯಕ ಸಿ.ಪಿ. ಜೋಷಿಗೆ ಇ.ಸಿ. ನೋಟಿಸ್

Update: 2018-11-24 18:28 GMT

ನಥ್‌ದ್ವಾರ, ನ. 24: ‘ಬ್ರಾಹ್ಮಣ’ ಟೀಕೆ ಕುರಿತು ರವಿವಾರ 11 ಗಂಟೆ ಒಳಗಡೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ನಥ್‌ ದ್ವಾರದ ಚುನಾವಣಾ ಅಧಿಕಾರಿ ನಿಸಾ ರಾಜಸ್ಥಾನದ ಕಾಂಗ್ರೆಸ್ ನಾಯಕ ಡಾ. ಸಿ.ಪಿ. ಜೋಷಿ ಅವರಿಗೆ ನೋಟಿಸು ರವಾನಿಸಿದ್ದಾರೆ.

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸಲಿರುವ ನಥ್‌ದ್ವಾರದಲ್ಲಿ ನವೆಂಬರ್ 21ರಂದು ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಅವರು, ಹಿಂದುತ್ವದ ಬಗ್ಗೆ ಬ್ರಾಹ್ಮಣರು ಮಾತ್ರ ಮಾತನಾಡಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಉಮಾ ಭಾರತಿ ಅವರು ಬ್ರಾಹ್ಮಣರು ಅಥವಾ ಪಂಡಿತರು ಅಲ್ಲದೇ ಇರುವಾಗ ಹಿಂದೂ ಧರ್ಮದ ಬಗ್ಗೆ ಮಾತನಾಡುವುದು ಹೇಗೆ ಎಂದು ಪ್ರಶ್ನಿಸಿದ್ದರು.

ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಅದರ ಕಾರ್ಯಕರ್ತರ ಹಿನ್ನೆಲೆಯಲ್ಲಿ ತಾನು ನೀಡಿದ ಹೇಳಿಕೆಯಿಂದ ಸಮಾಜದ ಯಾವುದಾದರೂ ಒಂದು ವರ್ಗದ ಮನಸ್ಸಿಗೆ ನೋವು ಉಂಟಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಿ.ಪಿ. ಜೋಷಿ ಕ್ಷಮೆ ಕೋರಿ ಟ್ವೀಟ್ ಮಾಡಿದ್ದಾರೆ.

‘ಬ್ರಾಹ್ಮಣ’ ಕುರಿತು ಜೋಷಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಸಿ.ಪಿ. ಜೋಷಿ ಹೇಳಿಕೆ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದುದು. ಸಮಾಜದ ಯಾವುದೇ ವರ್ಗದ ಭಾವನೆಗಳಿಗೆ ಘಾಸಿಯಾಗುವಂತಹ ಹೇಳಿಕೆಯನ್ನು ಪಕ್ಷದ ನಾಯಕರು ನೀಡಬಾರದು ಎಂದು ಎಚ್ಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News