ಕರ್ತಾರ್‌ಪುರ ಕಾರಿಡಾರ್ ಚಾಲನೆಗೆ ಸುಷ್ಮಾ ಗೈರು

Update: 2018-11-25 04:03 GMT

ಇಸ್ಲಾಮಾಬಾದ್, ನ.25: ಕರ್ತಾರ್‌ಪುರ ಕಾರಿಡಾರ್ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಗೈರುಹಾಜರಾಗಲಿದ್ದಾರೆ. ಆದರೆ ಕೇಂದ್ರ ಸಚಿವರಾದ ಹರ್‌ಸಿಮ್ರತ್ ಕೌರ್ ಹಾಗೂ ಹರದೀಪ್ ಪುರಿ ಪಾಕಿಸ್ತಾನದಲ್ಲಿ ನಡೆಯುವ ಈ ಸಮಾರಂಭದಲ್ಲಿ ಭಾಗವಹಿಸುವರು.

"ಪೂರ್ವನಿಗದಿತ ಕಾರ್ಯಕ್ರಮದ ಕಾರಣದಿಂದ ಪಾಕಿಸ್ತಾನದ ಸಮಾರಂಭಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ" ಎಂದು ಸುಷ್ಮಾ ಸ್ಪಷ್ಟಪಡಿಸಿದ್ದಾರೆ. ನವೆಂಬರ್ 28ರಂದು ನಡೆಯುವ ಸಮಾರಂಭಕ್ಕೆ ಸುಷ್ಮಾ ಸ್ವರಾಜ್, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹಾಗೂ ಅಲ್ಲಿನ ಸಚಿವ ನವಜ್ಯೋತ್ ಸಿಂಗ್ ಸಿಧು ಅವರಿಗೆ ಪಾಕಿಸ್ತಾನ ಆಹ್ವಾನ ಕಳುಹಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಶಿ ಟ್ವಿಟ್ಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ಸೇರಿದಂತೆ ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ವರಾಜ್ ಪ್ರತಿಕ್ರಿಯಿಸಿದ್ದಾರೆ. ಆದರೆ ಭಾರತದ ಸಿಕ್ಖ್ ಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಂಡು ಮತ್ತು ಪವಿತ್ರ ಸ್ಥಳಕ್ಕೆ ತೆರಳಲು ಅವರಿಗೆ ಸೌಲಭ್ಯ ಕಲ್ಪಿಸುವ ಮಹತ್ವದ ಹಿನ್ನೆಲೆಯಲ್ಲಿ ಭಾರತ ಆಹಾರ ಸಂಸ್ಕರಣೆ ಖಾತೆ ಸಚಿವರಾದ ಹರ್‌ಸಿಮ್ರತ್ ಕೌರ್ ಹಾಗೂ ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವ ಹರದೀಪ್ ಪುರಿ ಅವರನ್ನು ಕಳುಹಿಸಿಕೊಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾರಿಡಾರ್ ಕಾಮಗಾರಿಯನ್ನು ತ್ವರಿತವಾಗಿ ಪಾಕಿಸ್ತಾನ ಪೂರ್ಣಗೊಳಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News