​ಚುನಾವಣೆ ಹಿನ್ನೆಲೆ: ಹೆಜ್ಜೆ ಹೆಜ್ಜೆಗೂ ಪೆಟ್ರೋಲ್ ಪಂಪ್

Update: 2018-11-25 04:12 GMT

ಹೊಸದಿಲ್ಲಿ, ನ.25: 2019ರ ಸಾರ್ವತ್ರಿಕ ಚುನಾವಣೆಗೆ ಪೂರ್ವಭಾವಿಯಾಗಿ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದ ವಿಸ್ತರಣೆಗೆ ಮುಂದಾಗಿವೆ. ವಿಧಾನಸಭಾ ಚುನಾವಣೆ ನಡೆಯುತ್ತಿರುವ ನಾಲ್ಕು ರಾಜ್ಯಗಳನ್ನು ಹೊರತುಪಡಿಸಿ, ದೇಶದ ವಿವಿಧೆಡೆ 65 ಸಾವಿರ ಹೊಸ ಪೆಟ್ರೋಲ್‌ ಪಂಪ್‌ಗಳನ್ನು ತೆರೆಯುವ ಮೂಲಕ ಚಿಲ್ಲರೆ ಮಾರಾಟ ಜಾಲವನ್ನು ವಿಸ್ತರಿಸಲು ಕಂಪೆನಿಗಳು ಮುಂದಾಗಿವೆ.
ರವಿವಾರದ ಈ ನಿರ್ಧಾರದಿಂದ ಕಂಪೆನಿಗಳು ಸ್ಥಾಪಿಸಲು ಉದ್ದೇಶಿಸಿರುವ ಶೇಕಡ 75-80ರಷ್ಟು ಪ್ರದೇಶಗಳಲ್ಲಿ ಪೆಟ್ರೋಲ್‌ ಪಂಪ್‌ಗಳು ಸ್ಥಾಪನೆಯಾಗಲಿವೆ. ನೀತಿಸಂಹಿತೆ ಜಾರಿಯಲ್ಲಿರುವ ರಾಜ್ಯಗಳಲ್ಲಿ ಚುನಾವಣೆ ಬಳಿಕ ಡೀಲರ್‌ಶಿಪ್ ಅರ್ಜಿ ಆಹ್ವಾನಿಸಲಾಗುವುದು ಎಂದು ಮೂಲಗಳು ಹೇಳಿವೆ.

ಮುಂದಿನ ಮೂರು ವರ್ಷಗಳಲ್ಲಿ ಈ ಪಂಪ್‌ಗಳು ಕಾರ್ಯಾರಂಭ ಮಾಡಲಿದ್ದರೂ, ಒಂದೇ ಬಾರಿಗೆ ಅರ್ಜಿ ಕರೆಯುವ ಮೂಲಕ ತೈಲ ಸಚಿವಾಲಯ ಸರ್ಕಾರಿ ಸ್ವಾಮ್ಯದ ಇಂಧನ ಮಾರಾಟಗಾರರಿಗೆ ಸಂದೇಶ ರವಾನಿಸಿದ್ದು, ಚುನಾವಣಾ ಪೂರ್ವದಲ್ಲಿ ನೀಡುತ್ತಿರುವ ದೊಡ್ಡ ಕೊಡುಗೆ ಎಂದು ಪರಿಗಣಿಸಲಾಗುತ್ತಿದೆ.

ಒಂದೇ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ವಿಸ್ತರಣೆ ಕಾರ್ಯಸಾಧುವೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಈ ಹಿಂದಿನ ಅನುಭವಗಳ ಪ್ರಕಾರ, ಪ್ರಕಟಿತ ಎಲ್ಲ ಪಂಪ್‌ಗಳು ಕೂಡಾ ಕಾರ್ಯಾರಂಭವಾಗಿಲ್ಲ. ಡೀಲರ್‌ಶಿಪ್ ನೀಡಿಕೆಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಭೂಮಿ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿವೆ. ಆದ್ದರಿಂದ 65 ಸಾವಿರದ ಪೈಕಿ 15-20 ಸಾವಿರ ಪೆಟ್ರೋಲ್‌ ಪಂಪ್‌ಗಳು ಮಾತ್ರ ಸದ್ಯಕ್ಕೆ ಆರಂಭವಾಗಲಿವೆ ಎಂದು ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಇಷ್ಟಾಗಿಯೂ ಇದು ಹಲವು ಸಾವಿರ ಉದ್ಯೋಗ ಸೃಷ್ಟಿಗೆ, ಇಂಧನ ಮಾರಾಟ ಕ್ಷೇತ್ರದ ಹೂಡಿಕೆಗೆ ಕಾರಣವಾಗಲಿವೆ. ಸಾಧನಗಳ ಪೂರೈಕೆದಾರರು, ಸಾಗಣೆದಾರರು ಮತ್ತು ಟ್ಯಾಂಕರ್ ಉತ್ಪಾದಕರಿಗೆ ಇದು ವರದಾನವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News