ಜಮ್ಮು-ಕಾಶ್ಮೀರ ಎನ್‌ಕೌಂಟರ್ 6 ಉಗ್ರರು ಹತ, ಓರ್ವ ಯೋಧ ಹುತಾತ್ಮ

Update: 2018-11-25 17:22 GMT

ಶ್ರೀನಗರ, ನ. 25: ದಕ್ಷಿಣ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ರವಿವಾರ ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ 6 ಮಂದಿ ಉಗ್ರರು ಹತರಾಗಿದ್ದಾರೆ ಹಾಗೂ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಕಾರ್ಯಾಚರಣೆ ಸಂದರ್ಭ ಭದ್ರತಾ ಪಡೆ ಹಾಗೂ ಪ್ರತಿಭಟನಕಾರರ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ನಾಗರಿಕ ಕೂಡ ಹತನಾಗಿದ್ದಾನೆ.

ಕಣಿವೆಯಲ್ಲಿ ನಾಗರಿಕರ ಹತ್ಯೆಯಲ್ಲಿ ಎನ್‌ಕೌಂಟರ್‌ನಲ್ಲಿ ಹತರಾದ ಉಗ್ರರು ಭಾಗಿಯಾಗಿದ್ದಾರೆ. ಇತ್ತೀಚೆಗೆ ಹದಿಹರೆಯದ ಯುವಕನೋರ್ವನನ್ನು ಹತ್ಯೆಗೈದ ಪಾಕಿಸ್ತಾನದ ಉಗ್ರನೋರ್ವ ಕೂಡ ಈ ಘಟನೆಯಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರೀ ಶಸ್ತ್ರಾಸ್ತ್ರ ಹೊಂದಿರುವ ಉಗ್ರರು ಮನೆಯೊಂದರ ಒಳಗೆ ಅಡಗಿರುವ ಬಗ್ಗೆ ಭದ್ರತಾ ಪಡೆ ಖಚಿತ ಮಾಹಿತಿ ಸ್ವೀಕರಿಸಿದ ಬಳಿಕ ಶೋಪಿಯಾನ ಜಿಲ್ಲೆಯ ಬಾಟ್‌ಗಂಡ್ ಗ್ರಾಮದಲ್ಲಿ ಮಧ್ಯರಾತ್ರಿ ಶೋಧ ಕಾರ್ಯಾಚರಣೆ ಆರಂಭಿಸಿತು. ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಯೋಧ ಕುಲ್ಗಾವ್ ಜಿಲ್ಲೆಯ ನಿವಾಸಿ. ಸೇನೆ, ಕೇಂದ್ರ ಮೀಸಲು ಪಡೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಸಂಯುಕ್ತ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭ ಉಗ್ರರು ಗುಂಡು ಹಾರಿಸಿದರು. ಇದಕ್ಕೆ ಯೋಧರು ಪ್ರತಿ ದಾಳಿ ನಡೆಸಿದರು. ಕಾವಲು ಬೇಲಿ ಬೇಧಿಸಲು ಪ್ರಯತ್ನಿಸಿದ ನಾಲ್ವರು ಉಗ್ರರನ್ನು ಯೋಧರು ಹೊಡೆದುರುಳಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮನೆಯ ಒಳಗಿಂದ ಇತರ ಇಬ್ಬರು ಉಗ್ರರು ಗುಂಡು ಹಾರಿಸುವುದನ್ನು ಮುಂದುವರಿಸಿದ್ದರು. ಮೂರು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಆ ಇಬ್ಬರು ಉಗ್ರರು ಹತರಾದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News