ತೆಲಂಗಾಣ: ಮುಸ್ಲಿಂ ಮೀಸಲಾತಿ ಪ್ರಸ್ತಾವಕ್ಕೆ ಅಮಿತ್ ಶಾ ವಿರೋಧ

Update: 2018-11-25 17:39 GMT

ಹೈದರಾಬಾದ್, ನ.25: ತೆಲಂಗಾಣದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರಿಗೆ ಶೇ.12ರಷ್ಟು ಮೀಸಲಾತಿಯನ್ನು ನೀಡಲು ನಿರ್ಧರಿಸಿರುವುದಕ್ಕಾಗಿ ತೆಲಂಗಾಣ ರಾಷ್ಟ್ರೀಯ ಸಮಿತಿ ವರಿಷ್ಠ ಹಾಗೂ ರಾಜ್ಯದ ಮುಖ್ಯಮಂತ್ರಿ ಕೆ.ಸಿ.ಆರ್.ವಿರುದ್ಧ , ಬಿಜೆಪಿ ಅಧ್ಯಕ್ಷ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಡಿಸೆಂಬರ್ 7ರಂದು ವಿಧಾನಸಭಾ ಚುನಾವಣೆ ನಡೆಯಲಿರುವ ಪಾರ್ಕಲ್ ಹಾಗೂ ನಿರ್ಮಲ್‌ನಲ್ಲಿ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ರ್ಯಾಲಿಗಳನ್ನು ಪಾಲ್ಗೊಂಡು ಭಾಷಣ ಮಾಡಿದ ಅಮಿತ್ ಶಾ ಅವರು ಮುಸ್ಲಿಮರಿಗೆ ಶೇ.12 ಮೀಸಲಾತಿ ನೀಡುವ ತೆಲಂಗಾಣ ಸರಕಾರದ ಪ್ರಸ್ತಾವವು ಅಸಂವಿಧಾನಿಕವಾಗಿದೆಯೆಂದರು.

‘‘ ಒಟ್ಟು ಮೀಸಲಾತಿಗೆ ಸುಪ್ರೀಂಕೋರ್ಟ್ ಶೇ. 50ರ ಮಿತಿಯನ್ನು ವಿಧಿಸಿದೆಯೆಂದು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರಿಗೆ ನಾನು ಹೇಳಬಯಸುತ್ತೇನೆ. ಒಂದು ವೇಳೆ ನೀವು ಶೇ.12 ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವುದಾದರೆ, ದಲಿತರಿಗೆ, ಬುಡಕಟ್ಟು ಹಾಗೂ ಒಬಿಸಿ ಇವರಲ್ಲಿ ಯಾರ ಖೋಟಾವನ್ನು ನೀವು ಕಸಿಯುತ್ತೀರಿ’’ ಎಂದು ಶಾ ಪ್ರಶ್ನಿಸಿದರು.

 ಬಿಜೆಪಿಯು ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರಕ್ಷಿಸಲು ಬಿಜೆಪಿಯು ದೃಢವಾಗಿ ನಿಲ್ಲಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News