ಕಾಶ್ಮೀರ: ಪೆಲೆಟ್ ಗನ್ ದಾಳಿಗೊಳಗಾದ 20 ತಿಂಗಳ ಹೆಣ್ಣು ಮಗು

Update: 2018-11-26 07:31 GMT

ಶ್ರೀನಗರ, ನ.26: ರವಿವಾರದಂದು ಶೋಪಿಯನ್ ಜಿಲ್ಲೆಯ ಕಪ್ರಿನ್-ಬಟ್ಗುಂಡ್ ಪ್ರದೇಶದಲ್ಲಿನ ತನ್ನ ಮನೆಯೊಳಗಿದ್ದ 20 ತಿಂಗಳ ಮಗು ಹಿಬಾಳ ಕಣ್ಣಿಗೆ ಪೆಲೆಟ್ ಗುಂಡು ತಾಗಿದ ಘಟನೆ ನಡೆದಿದೆ. ಕೂಡಲೇ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶಸ್ತ್ರಕ್ರಿಯೆ ನಡೆಸಲಾಗಿದೆಯಾದರೂ ಆಕೆ ತನ್ನ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.

ರವಿವಾರ ಬೆಳಿಗ್ಗೆ ಶೋಪಿಯನ್‍ನಲ್ಲಿ ನಡೆದ ಎನ್‍ಕೌಂಟರ್ ನಂತರ ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಸಂಘರ್ಷದ ಸಂದರ್ಭ ಮನೆಯೊಳಗಿದ್ದ ಮಗುವಿಗೆ ಪೆಲೆಟ್ ಗುಂಡು ತಾಗಿದೆ. ಈ  ಸಂಘರ್ಷದಲ್ಲಿ  ಒಬ್ಬ ವ್ಯಕ್ತಿ ಸಾವಿಗೀಡಾಗಿ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಘಟನೆ ನಡೆದಾಗ ತಾನು ತನ್ನಿಬ್ಬರು ಮಕ್ಕಳೊಂದಿಗೆ ಮನೆಯೊಳಗಿದ್ದುದಾಗಿ ಹಿಬಾಳ ತಾಯಿ ಮರ್ಸಾಲ ಜನ್ ಹೇಳುತ್ತಾರೆ. “ಆಗ ಹೊರಗೆ ಅಶ್ರುವಾಯು ಪ್ರಯೋಗಿಸಲಾಗುತ್ತಿತ್ತು. ಆಗ ನನ್ನ ಐದು ವರ್ಷದ ಪುತ್ರ ಉಸಿರಾಟ ನಡೆಸಲು ಕಷ್ಟವಾಗುತ್ತಿರುವುದಾಗಿ ತಿಳಿಸಿದಾಗ ಮಕ್ಕಳನ್ನು ಹೊರಕ್ಕೆ ಕರೆದುಕೊಂಡು ಹೋಗಲು ನಿರ್ಧರಿಸಿ ಬಾಗಿಲು ತೆರೆಯುವಷ್ಟರಲ್ಲಿ ಭದ್ರತಾ ಪಡೆ ಸಿಬ್ಬಂದಿಯೊಬ್ಬರು ನೇರವಾಗಿ ನಮ್ಮತ್ತಲೇ ಪೆಲ್ಲೆಟ್ ಗುಂಡು ಹಾರಿಸಿದರು. ಆಗ ನಾನು ಆಕೆಯ ಮುಖವನ್ನು ನನ್ನ ಕೈಗಳಿಂದ ಮುಚ್ಚಿದೆ. ಇಲ್ಲದೇ ಹೋದರೆ ಆಕೆಯ ಮುಖವೇ ವಿರೂಪಗೊಳ್ಳುತ್ತಿತ್ತು, ಇನ್ನೊಬ್ಬ ಮಗನನ್ನು ಆಚೆ ದೂಡಿ ಬಿಟ್ಟೆ. ಆಕೆಯ ತಪ್ಪಾದರೂ ಏನು ?,  ಆಕೆಯ ಈ ಸ್ಥಿತಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯನ್ನು ದೇವರು ವಿಧಿಸಬೇಕು'' ಎಂದು ಮರ್ಸಾಲ ಹೇಳಿದ್ದಾರೆ.

ಆರಂಭದಲ್ಲಿ ಹಿಬಾಳನ್ನು ಶೋಪಿಯನ್‍ನಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಲಾಯಿತಾದರೂ ಅಲ್ಲಿನ ವೈದ್ಯರು ಶ್ರೀನಗರದ ಆಸ್ಪತ್ರೆಗ ಕರೆದುಕೊಂಡು ಹೋಗುವಂತೆ ಶಿಫರಸು ಮಾಡಿದ್ದರು.

ಆಕೆಯ ಸ್ಥಿತಿ ಉತ್ತಮವಾಗಿಲ್ಲ, ಆಕೆ ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಾಳೆಂದು ಕಾದು ನೋಡಬೇಕು ಎಂದು ವೈದ್ಯರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News