70 ವರ್ಷಗಳ ನಂತರ ಮುಸ್ಲಿಂ ಸೋದರಿಯರನ್ನು ಭೇಟಿಯಾದ ಸಿಖ್ ಸೋದರ

Update: 2018-11-27 07:24 GMT

ಇಸ್ಲಾಮಾಬಾದ್, ನ.27: ಇಬ್ಬರು ಪಾಕಿಸ್ತಾನಿ ಮುಸ್ಲಿಂ ಸೋದರಿಯರು ತಮ್ಮ ಸಿಖ್ ಸೋದರನನ್ನು 7 ದಶಕಗಳ ನಂತರ ಇಲ್ಲಿನ  ನಾನ್ಕನಾ ಸಾಹಿಬ್‍ನ ಗುರುದ್ವಾರ ಜನಮ್ ಆಸ್ಥಾನ್‍ನಲ್ಲಿ ಭೇಟಿಯಾದಾಗ ಮೂವರ ಕಣ್ಣುಗಳೂ ಸಂತೋಷದಿಂದ ತುಂಬಿ ಬಂದಿದ್ದವು.

ಸೋದರಿಯರಾದ ಉಲ್ಫತ್ ಬೀಬಿ ಹಾಗೂ ಮೈರಾಜ್ ಬೀಬಿ ಸೋದರ ಬಿಯಾಂತ್ ಸಿಂಗ್ ಏಳು ದಶಕಗಳ ನಂತರ ತಮ್ಮನ್ನು ಭೇಟಿಯಾಗಲು ಬಂದಾಗ ಅವರನ್ನು ಆಲಂಗಿಸಿ ಭಾವಪರವಶರಾದರು. ಮೂಲತಃ ಡೇರಾ ಬಾಬಾ ನಾನಕ್ ಸಮೀಪದ ಪರಚ ಗ್ರಾಮದ ಈ ಕುಟುಂಬ ದೇಶ ವಿಭಜನೆಯ ಸಂದರ್ಭ ಪಾಕಿಸ್ತಾನಕ್ಕೆ ವಲಸೆ ಹೋಗುತ್ತಿರುವ ಸಂದರ್ಭ ತನ್ನ ಪುತ್ರ ಹಾಗೂ ಪುತ್ರಿಯನ್ನು  ಕಳೆದುಕೊಂಡಿತ್ತು.

ಅವರ ತಾಯಿ ಅಲ್ಲಾಹ್ ರಕ್ಕಿ ನಂತರ ಹಿಂದಿನ ನೆರೆಮನೆಯವರನ್ನು ಸಂಪರ್ಕಿಸಿ ಪುತ್ರ ಬಿಯಾಂತ್ ಎಲ್ಲಿದ್ದಾನೆಂದು ತಿಳಿದುಕೊಂಡಿದ್ದಳು. ಅಂದಿನಿಂದ ಬಿಯಾಂತ್ ತನ್ನ ಸೋದರಿಯರ ಜತೆ ಫೋನ್ ಕರೆ ಮತ್ತು ಪತ್ರಗಳ ಮೂಲಕ ಸಂಪರ್ಕದಲ್ಲಿದ್ದರು. ಆದರೆ ಈ ವರ್ಷ  ಭಾರತದಿಂದ ಆಗಮಿಸಿದ ಸಿಖ್ ಜಾಥಾ ತಂಡದಲ್ಲಿದ್ದುದರಿಂದ ಅವರು ತಮ್ಮ ಸೋದರಿಯರನ್ನು ಭೇಟಿಯಾಗಲು ಸಾಧ್ಯವಾಗಿತ್ತು.

ಭಾರತಕ್ಕೆ ತೆರಳಿ ತನ್ನ ನಾದಿನಿ, ಸೋದರ ಸೊಸೆ ಹಾಗೂ ಅಳಿಯಂದಿರನ್ನು ಭೇಟಿಯಾಗಲು ಆವಕಾಶ ಒದಗಿಸಬೇಕೆಂದು ಉಲ್ಫತ್ ಬೀಬಿ ಪಾಕಿಸ್ತಾನ ಪ್ರಧಾನಿಯನ್ನು ಕೋರಿದ್ದಾರೆ. ತಮ್ಮ ಸೋದರನ ವೀಸಾ ಅವಧಿಯನ್ನು ವಿಸ್ತರಿಸುವಂತೆಯೂ ಇಬ್ಬರು ಸೋದರಿಯರು ಕೋರಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News