ಏನಿದು ಕರ್ತಾರಪುರ ಕಾರಿಡಾರ್ ಯೋಜನೆ....?

Update: 2018-11-27 14:25 GMT

ಹೊಸದಿಲ್ಲಿ,ನ.27: ಭಾರತ ಮತ್ತು ಪಾಕಿಸ್ತಾನ್ ನಡುವೆ ಕರ್ತಾರಪುರ ಕಾರಿಡಾರ್ ಯೋಜನೆಯು ಸೋಮವಾರ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಯೋಜನೆಯ ಹೆಗ್ಗಳಿಕೆಗಾಗಿ ಎನ್‌ಡಿಎ ಅಂಗಪಕ್ಷ ಅಕಾಲಿ ದಳ ಮತ್ತು ಪಂಜಾಬ್‌ನ ಆಡಳಿತಾರೂಢ ಕಾಂಗ್ರೆಸ್ ನಡುವಿನ ವಾಗ್ಯುದ್ಧ ಇದಕ್ಕೆ ಕಾರಣವಾಗಿತ್ತು.

ಉದ್ದೇಶಿತ ಕಾರಿಡಾರ್ ಯೋಜನೆಯು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಅವರ ಸಂಪುಟ ಸಹೋದ್ಯೋಗಿ ನವಜೋತ್ ಸಿಂಗ್ ಸಿಧು ಅವರ ನಡುವೆ ಸಂಘರ್ಷವನ್ನೂ ಹುಟ್ಟುಹಾಕಿದೆ. ಪಾಕ್ ಪ್ರಧಾನಿಯಾಗಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆ ದೇಶಕ್ಕೆ ಭೇಟಿ ನೀಡಿದ ಬಳಿಕ ಸಿಧು ಅವರು ಯೋಜನೆಗೆ ನಿರಂತರವಾಗಿ ಒತ್ತು ನೀಡುತ್ತಿದ್ದಾರೆ.

ಯೋಜನೆಯ ವಿವರಗಳು

ಪಾಕಿಸ್ತಾನದಲ್ಲಿರುವ ಪ್ರಸಿದ್ಧ ಕರ್ತಾರಪುರ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲು ಸಿಖ್ ಯಾತ್ರಿಕರಿಗೆ ರಸ್ತೆ ಸಂಪರ್ಕವನ್ನು ಕಲ್ಪಿಸುವುದು ಕರ್ತಾರಪುರ ಕಾರಿಡಾರ್ ಯೋಜನೆಯ ಉದ್ದೇಶವಾಗಿದೆ. ಅಂತರರಾಷ್ಟ್ರೀಯ ಗಡಿಯವರೆಗಿನ ಈ ಕಾರಿಡಾರ್ 3-4 ಕಿ.ಮೀ. ಉದ್ದವಿರಲಿದೆ.

ಸಿಖ್ಖರ ಪರಮೋಚ್ಚ ಗುರು ನಾನಕ್ ದೇವ್ ಅವರು ತನ್ನ ಜೀವನದ ಕೊನೆಯ 18 ವರ್ಷಗಳನ್ನು ಕಳೆದಿದ್ದ, ರಾವಿ ನದಿ ದಂಡೆಯಲ್ಲಿರುವ 16ನೇ ಶತಮಾನದ ಗುರುದ್ವಾರಾ ದರ್ಬಾರ್ ಸಾಹಿಬ್ ಕರ್ತಾರಪುರ ಸಿಖ್ಖರಿಗೆ ತುಂಬ ಮಹತ್ವಪೂರ್ಣವಾಗಿದೆ. ಗುರು ನಾನಕ್ ಅವರು 1522ರಲ್ಲಿ ಈ ಗುರುದ್ವಾರಾವನ್ನು ಸ್ಥಾಪಿಸಿದ್ದರು. ಪಂಜಾಬಿನ ಗುರುದಾಸಪುರ ಜಿಲ್ಲೆಯ ದೇರಾ ಬಾಬಾ ನಾನಕ್‌ನಿಂದ ಈ ಗುರುದ್ವಾರಾಕ್ಕೆ ಸಂಪರ್ಕ ಕಲ್ಪಿಸುವ ಕಾರಿಡಾರ್‌ನ ಜಂಟಿ ನಿರ್ಮಾಣಕ್ಕಾಗಿ ಸಿಖ್ ಭಕ್ತರು ದಶಕಗಳಿಂದಲೂ ಭಾರತ ಮತ್ತು ಪಾಕ್ ಸರಕಾರಗಳನ್ನು ಆಗ್ರಹಿಸುತ್ತಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 1999ರಲ್ಲಿ ಲಾಹೋರ್ ಬಸ್ ಯಾತ್ರೆಯನ್ನು ಕೈಗೊಂಡಿದ್ದ ಸಂದರ್ಭದಲ್ಲಿ ಕಾರಿಡಾರ್ ನಿರ್ಮಾಣದ ಬಗ್ಗೆ ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು.

ನ.22ರಂದು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಂಪುಟ ಸಭೆಯು ಕಾರಿಡಾರ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು.

 ಗಡಿಗೆ ಸಮೀಪವಿರುವ ಮಾನ್ ಗ್ರಾಮದಲ್ಲಿ ನಡೆದ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಅಮರಿಂದರ್ ಸಿಂಗ್ ಪಾಲ್ಗೊಂಡಿದ್ದರು. ಪಾಕಿಸ್ತಾನವು ಬುಧವಾರ ತನ್ನ ಭಾಗದ ಯೋಜನೆಗೆ ಚಾಲನೆ ನೀಡಲಿದ್ದು,ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಆಹ್ವಾನವನ್ನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಇಬ್ಬರು ಕೇಂದ್ರ ಸಚಿವರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಪಾಕಿಸ್ತಾನವು ಭಾರತದ ವಿರುದ್ಧ ಹಿಂಸಾಚಾರವನ್ನು ನಿಲ್ಲಿಸುವವರೆಗೆ ತಾನು ಆ ದೇಶಕ್ಕೆ ಭೇಟಿ ನೀಡುವುದಿಲ್ಲ ಎಂದು ಹೇಳುವ ಮೂಲಕ ಅಮರಿಂದರ್ ಸಿಂಗ್ ಅವರೂ ಆಹ್ವಾನವನ್ನು ನಿರಾಕರಿಸಿದ್ದರೆ,ಸಿಧು ಅವರು ಪಾಕ್ ಪ್ರಯಾಣಕ್ಕೆ ಕೇಂದ್ರದ ಅನುಮತಿಯನ್ನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News