ಕಾಶ್ಮೀರ: ಪತ್ರಕರ್ತ ಬುಖಾರಿ ಹಂತಕನ ಹತ್ಯೆ

Update: 2018-11-28 07:06 GMT

ಶ್ರೀನಗರ, ನ.28: ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಆರೋಪಿ ನವೀದ್ ಜಾಟ್ ಸಹಿತ ಇಬ್ಬರು ಉಗ್ರಗಾಮಿಗಳು ಭದ್ರತಾ ಸಿಬ್ಬಂದಿಗಳೊಂದಿಗೆ ಬುಧವಾರ ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ.

ಪಾಕ್ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರ್-ಇ-ತೊಯ್ಬಕ್ಕೆ ಸೇರಿರುವ ನವೀದ್ ಈ ವರ್ಷದ ಫೆಬ್ರವರಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಶ್ರೀನಗರದ ಶ್ರೀಹರಿ ಮಹಾರಾಜ್ ಹರಿ ಸಿಂಗ್ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಜೂ.14 ರಂದು ಇತರ ಇಬ್ಬರು ಉಗ್ರರ ಜೊತೆಗೂಡಿ ಪತ್ರಕರ್ತ ಬುಖಾರಿ ಅವರನ್ನು ಹತ್ಯೆಗೈದಿದ್ದ.

ಮುಲ್ತಾನ್‌ನ ಟ್ರಕ್ ಚಾಲಕನ ಮಗನಾಗಿರುವ ನವೀದ್ ದಕ್ಷಿಣ ಕಾಶ್ಮೀರದ ಅನಂತನಾಗ್, ಪುಲ್ವಾಮಾ ಹಾಗೂ ಸೊಫಿಯಾನ್ ಜಿಲ್ಲೆಗಳಲ್ಲಿ ಉಗ್ರಗಾಮಿ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ. ಆಸ್ಪತ್ರೆಯಿಂದ ಪರಾರಿಯಾಗುವ ಮೊದಲು 2013-14ರಲ್ಲಿ ಹಲವು ಬಾರಿ ದಾಳಿ ನಡೆಸಿದ್ದ.

 ಆಂಗ್ಲ ದಿನಪತ್ರಿಕೆ ‘ರೈಸಿಂಗ್ ಕಾಶ್ಮೀರ’ದ ಪ್ರಧಾನ  ಸಂಪಾದಕರಾಗಿದ್ದ ಬುಖಾರಿ ತನ್ನ ಕಚೇರಿಯಿಂದ ಹೊರ ಬಂದು ಕಾರನ್ನು ಏರುತ್ತಿದ್ದ ವೇಳೆ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಘಟನೆಯಲ್ಲಿ ಬುಖಾರಿ ಅವರ ಇಬ್ಬರು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News