ಜಮ್ಮು ಕಾಶ್ಮೀರ ರಾಜ್ಯಪಾಲರಿಗೆ `ವರ್ಗಾವಣೆಯ ಬೆದರಿಕೆ'

Update: 2018-11-28 07:10 GMT

ಜಮ್ಮು, ನ.28: ಸಜ್ಜಾದ್ ಲೋನ್ ಅವರನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯನ್ನಾಗಿಸಬೇಕೆಂದು ಕೇಂದ್ರ ಸರಕಾರ ಬಯಸಿತ್ತೆಂಬ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿಕೆ ವಿವಾದಕ್ಕೀಡಾಗಿರುವಂತೆಯೇ ತಮಗೀಗ ``ವರ್ಗಾವಣೆಯ ಬೆದರಿಕೆ' ಇರುವ ಬಗ್ಗೆ ಅವರು ಸುಳಿವು ನೀಡಿದ್ದಾರೆ.

ಮಂಗಳವಾರ ಜಮ್ಮುವಿನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಮಲಿಕ್, ತಾವು ತಮ್ಮ ಹುದ್ದೆ ಕಳೆದುಕೊಳ್ಳದೇ ಇದ್ದರೂ  ಯಾವಾಗ ತಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡಬಹುದೆಂಬ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದರು.

``ನಾನಿಲ್ಲಿರುವ ತನಕ, ಇದು ನನ್ನ ಕೈಯ್ಯಲ್ಲಿಲ್ಲ, ಯಾವಾಗ ಇಲ್ಲಿಂದ ವರ್ಗಾವಣೆಯಾಗಬಹುದೆಂದು ತಿಳಿದಿಲ್ಲ. ನನ್ನ ಕೆಲಸ ಕಳೆದುಕೊಳ್ಳುವುದಿಲ್ಲ ಆದರೆ ವರ್ಗಾವಣೆಯ ಬೆದರಿಕೆ ಇದ್ದೇ ಇದೆ. ಆದರೆ ನಾನಿಲ್ಲಿರುವ ತನಕ ನೀವು ಕರೆದಾಗಲೆಲ್ಲಾ  ನಾನು ನನ್ನ ಗೌರವ ಸಲ್ಲಿಸಲು ಇಲ್ಲಿಗೆ ಬರುತ್ತೇನೆ'' ಎಂದು  ಖ್ಯಾತ ಕಾಂಗ್ರೆಸ್ ನಾಯಕ ಗಿರ್ಧಾರಿ ಲಾಲ್ ಡೋಗ್ರ ಅವರ ಪುಣ್ಯ ತಿಥಿಯ ಸಂದರ್ಭ ಆಯೋಜಿಸಲಾದ ಸಮಾರಂಭದಲ್ಲಿ ಅವರು ಹೇಳಿದರು.

ಜಮ್ಮು ಕಾಶ್ಮೀರ ವಿಧಾನಸಭೆ ವಿಸರ್ಜಿಸಿದ ತಮ್ಮ ಕ್ರಮವನ್ನು ಈಗಾಗಲೇ ಸಮರ್ಥಿಸಿರುವ ಮಲಿಕ್, ``ನಾನು ದಿಲ್ಲಿಯತ್ತ ನೋಡಿದ್ದರೆ,  ಸಜ್ಜಾದ್ ಲೋನ್ ಅವರನ್ನೇ ಸರಕಾರ ರಚಿಸಲು ಆಹ್ವಾನಿಸಬೇಕಿತ್ತು'' ಎಂದಿದ್ದರು.

ರಾಜ್ಯಪಾಲರು ತಮ್ಮ ಹೆಸರನ್ನು ಉಲ್ಲೇಖಿಸಿರುವ ಕುರಿತಂತೆ ಸಜ್ಜಾದ್ ಲೋನ್ ತಮ್ಮ ತೀವ್ರ ಆಕ್ಷೇಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News