ಬಿಹಾರದ ಎಲ್ಲ ಆಶ್ರಯಧಾಮಗಳ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂ ಆದೇಶ

Update: 2018-11-28 08:01 GMT

 ಹೊಸದಿಲ್ಲಿ, ನ,.28: ಆಶ್ರಯಧಾಮಗಳಲ್ಲಿರುವ ಮಕ್ಕಳಿಗೆ ಚಿತ್ರಹಿಂಸೆ ಹಾಗೂ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಬುಧವಾರ ಬಿಹಾರದಲ್ಲಿರುವ ಎಲ್ಲ ಆಶ್ರಯಧಾಮಗಳು ಹಾಗೂ ಅದರ ಮಾಲಕರ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ನಿರ್ದೇಶನ ನೀಡಿದೆ.

ಕೇಂದ್ರ ತನಿಖಾ ಸಂಸ್ಥೆಯ(ಸಿಬಿಐ)ತನಿಖಾ ತಂಡಕ್ಕೆ ಎಲ್ಲ ರೀತಿಯ ವಸತಿ ವ್ಯವಸ್ಥೆ ಹಾಗೂ ನೆರವು ನೀಡಬೇಕೆಂದು ಉಚ್ಚ ನ್ಯಾಯಾಲಯ ಬಿಹಾರ ಸರಕಾರಕ್ಕೆ ಆದೇಶ ನೀಡಿದೆ.

ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆಯು ತನ್ನ ಸಾಮಾಜಿಕ ಆಯವ್ಯಯ ವರದಿಯಲ್ಲಿ ಮಾಡಿರುವ ಎಲ್ಲ ಆರೋಪಗಳನ್ನು ಸಿಬಿಐ ತನಿಖೆ ನಡೆಸಲಿದೆ ಎಂದು ನ್ಯಾಯಾಲಯ ತಿಳಿಸಿದೆ.

ಬಿಹಾರದಲ್ಲಿ 17 ಆಶ್ರಯಧಾಮಗಳಿವೆ ಹಾಗೂ ಸಿಬಿಐ ಈಗಾಗಲೇ ಮುಝಾಫ್ಪರ್‌ಪುರ ಆಶ್ರಯಧಾಮ ಪ್ರಕರಣದ ತನಿಖೆ ನಡೆಸುತ್ತಿದೆ. ಮುಝಾಫ್ಪರ್‌ಪುರ ಆಶ್ರಯಧಾಮ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಆರೋಪಪಟ್ಟಿಯನ್ನು ಡಿ.7ಕ್ಕೆ ನ್ಯಾಯಾಲಯದಲ್ಲಿ ಸಲ್ಲಿಸಲಾಗುವುದು ಎಂದು ನ್ಯಾಯಾಲಯಕ್ಕೆ ಸಿಬಿಐ ತಿಳಿಸಿದೆ.

ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರಕಾರ ರಾಜ್ಯದಲ್ಲಿ ನಡೆದಿರುವ ಆಶ್ರಮಧಾಮದಲ್ಲಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದನ್ನು ವಿರೋಧಿಸುತ್ತಾ ಬಂದಿದೆ. ಅಪರಾಧಿಯನ್ನು ಸೆರೆ ಹಿಡಿಯಲು ತನಗೊಂದು ಅವಕಾಶವನ್ನು ನೀಡುವಂತೆ ಕೋರ್ಟಿಗೆ ಮನವಿ ಮಾಡಿತ್ತು. ಸ್ಥಾಯಿ ವರದಿ ಸಲ್ಲಿಕೆಗೆ 10 ದಿನಗಳ ಕಾಲಾವಕಾಶ ಕೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News