ರಾಮಮಂದಿರ ವಿಷಯದಲ್ಲಿ ಆರೆಸ್ಸೆಸ್ ನಿಂದ ಕೇವಲ ನಾಟಕ: ಪ್ರವೀಣ್ ತೊಗಾಡಿಯಾ

Update: 2018-11-28 14:05 GMT

ಹೊಸದಿಲ್ಲಿ, ನ.28: ಲೋಕಸಭಾ ಚುನಾವಣೆಗೂ ಮುನ್ನ ರಾಮ ಮಂದಿರದ ವಿಷಯವನ್ನೆತ್ತಿ ಆರೆಸ್ಸೆಸ್ ಕೇವಲ ನಾಟಕ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ನ ಮಾಜಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ  ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

thehindubusinessline.com ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಗೆ ವಿಭಿನ್ನ ಅಭಿಪ್ರಾಯಗಳಿದ್ದರೂ ರಾಮ ಮಂದಿರ ವಿಚಾರವನ್ನು ಆರೆಸ್ಸೆಸ್ ನಲ್ಲಿ ಸದ್ಯ ಪ್ರಬಲವಾಗಿರುವ ಮೋದಿ ಪರ ಗುಂಪು ಲಾಭಕ್ಕಾಗಿ ಬಳಸುತ್ತಿದೆ. ಅದು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟು ವಾತಾವರಣವೊಂದನ್ನು ಸೃಷ್ಟಿಸುತ್ತಿದೆಯೇ ವಿನಃ ರಾಮ ಮಂದಿರ ನಿರ್ಮಾಣಕ್ಕಲ್ಲ ಎಂದು ಹೇಳಿದರು.

ಅಧಿಕಾರದಲ್ಲಿದ್ದರೂ ಬಿಜೆಪಿ, ಆರೆಸ್ಸೆಸ್ ಇಷ್ಟರವರೆಗೆ ರಾಮ ಮಂದಿರವನ್ನೇಕೆ ನಿರ್ಮಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನನ್ನ ಪ್ರಶ್ನೆಯೂ ಇದೇ ಆಗಿದೆ. ಪ್ರಧಾನಿ ಮೋದಿಯಂತಹ ಸ್ವಯಂಸೇವಕರಿದ್ದೂ, ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ ರಾಮ ಮಂದಿರ ನಿರ್ಮಿಸಿಲ್ಲ. 3 ತಿಂಗಳುಗಳಿಗೊಮ್ಮೆ ಬಿಜೆಪಿ-ಆರೆಸ್ಸೆಸ್ ಸಭೆ ನಡೆಯುತ್ತದೆ. 2014ರಲ್ಲೇ ಅವರು ಈ ಬಗ್ಗೆ ಕಾನೂನು ಜಾರಿಗೆ ನಿರ್ಧರಿಸಬಹುದಿತ್ತು ಎಂದರು.

ರಾಮ ಮಂದಿರ ನಿರ್ಮಾಣದ ಬಗ್ಗೆ ಆರೆಸ್ಸೆಸ್ ನಾಯಕತ್ವ ಗಂಭೀರವಾಗಿಲ್ಲ ಬದಲಾಗಿ ಹಾಗೆ ಬಿಂಬಿಸುತ್ತಿದೆ ಎಂದು ನಿಮಗನಿಸುತ್ತಿದೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ತೊಗಾಡಿಯಾ, “ದುರದೃಷ್ಟವಶಾತ್ ಹೌದು, ಅವರು ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಮತ್ತು ಇತರರನ್ನು ‘ಹಿಂದೂ ವಿರೋಧಿ’ ಎಂದು ಕರೆಯುವುದಾದರೆ, ತನ್ನನ್ನು ತಾನು ಹೇಗೆ ನೋಡಿಕೊಳ್ಳುತ್ತಾರೆ. ಆರೆಸ್ಸೆಸ್ ವ್ಯಕ್ತಿಯೊಬ್ಬ ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾರೆ ಮತ್ತು ಆರೆಸ್ಸೆಸ್ ಜನರೇ ಅವರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ!, ಅವರು ಅಧಿಕಾರದಲ್ಲೂ ವಿರೋಧ ಪಕ್ಷದಲ್ಲೂ ಇದ್ದಾರೆ. ಈ ಎರಡೂ ಕಡೆಯ ನಾಟಕದಲ್ಲಿ ಸೋಲುವುದು ಆರೆಸ್ಸೆಸ್” ಎಂದರು.

“ನಾನು ರಾಮ ಮಂದಿರ ವಿಚಾರವನ್ನು ಅನಾಥವಾಗಲು ಬಿಡುವುದಿಲ್ಲ. ನಾವು ತಾರ್ಕಿಕ ತೀರ್ಮಾನವನ್ನು ಕಂಡುಕೊಳ್ಳುತ್ತೇವೆ ಹಾಗು ರಾಮ ಮಂದಿರ ನಿರ್ಮಿಸುತ್ತೇವೆ” ಎಂದು ತೊಗಾಡಿಯಾ ಇದೇ ಸಂದರ್ಭ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News