1 ಲಕ್ಷಕ್ಕೂ ಅಧಿಕ ರೈತರು ದಿಲ್ಲಿಗೆ: ನ. 30ರಂದು ಬೃಹತ್ ಪ್ರತಿಭಟನೆ

Update: 2018-11-29 17:52 GMT

 ಹೊಸದಿಲ್ಲಿ, ನ. 29: ಕೃಷಿಕರ ಸಂಕಷ್ಟ ಚರ್ಚಿಸಲು ಸಂಸತ್ತಿನಲ್ಲಿ 21 ದಿನಗಳ ವಿಶೇಷ ಅಧಿವೇಶನ ನಡೆಸುವಂತೆ, ಕೃಷಿ ಸಾಲ ಮನ್ನಾ ಕುರಿತು ಸಂಸತ್ ಸದಸ್ಯರ ಎರಡು ಖಾಸಗಿ ಮಸೂದೆ ಅಂಗೀಕರಿಸುವಂತೆ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯ ಭರವಸೆ ನೀಡುವಂತೆ ಆಗ್ರಹಿಸಿ ಹೊಸದಿಲ್ಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ದೇಶಾದ್ಯಂತ ರೈತರು ಇಲ್ಲಿಗೆ ಆಗಮಿಸುತ್ತಿದ್ದಾರೆ.

 200ಕ್ಕೂ ಅಧಿಕ ಸಂಘಟನೆಗಳನ್ನು ಒಳಗೊಂಡ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಬೆಂಬಲದಲ್ಲಿ ಸಿಪಿಎಂ-ಅಖಿಲ ಭಾರತ ಕಿಸಾನ್ ಸಭಾ ಎರಡು ದಿನಗಳ ಪ್ರತಿಭಟನಾ ರ್ಯಾಲಿ ಆಯೋಜಿಸಿದೆ.

1ಲಕ್ಷಕ್ಕೂ ಅಧಿಕ ರೈತರು ಈ ಎರಡು ದಿನಗಳ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದು, ದಿಲ್ಲಿಯಲ್ಲಿ ನಡೆಯುವ ರೈತರ ಅತಿ ದೊಡ್ಡ ಸಮಾವೇಶದಲ್ಲಿ ಇದು ಒಂದಾಗಲಿದೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹೇಳಿದೆ.

ಗುರುವಾರ ರ್ಯಾಲಿ ನಡೆದು ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಸಮಾರೋಪಗೊಂಡಿದೆ. ಶುಕ್ರವಾರ ನಡೆಯಲಿರುವ ರ್ಯಾಲಿ ಸಂಸತ್ ಬೀದಿಯಲ್ಲಿ ಅಂತ್ಯಗೊಳ್ಳಲಿದೆ. ಆಂಧ್ರಪ್ರದೇಶ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮಬಂಗಾಳ ಹಾಗೂ ಉತ್ತರಪ್ರದೇಶದ ಸಹಿತ ವಿವಿಧ ರಾಜ್ಯಗಳಿಂದ ರೈತರು ಇಲ್ಲಿಗೆ ಆಗಮಿಸಿದ್ದಾರೆ.

 ರೈತರು ಗುರುವಾರ ನಾಲ್ಕು ವಿಭಿನ್ನ ರಸ್ತೆಗಳಾದ ಆನಂದ್ ವಿಹಾರ್, ನಿಝಾಮುದ್ದೀನ್, ಬಿಜ್ವಾಸನ್ ರೈಲ್ವೆ ನಿಲ್ದಾಣ ಹಾಗೂ ಸಾಬ್ಜಿ ಮಂಡಿಗಳಿಂದ ನಗರದ ಹೃದಯ ಭಾಗದಲ್ಲಿರುವ ರಾಮಲೀಲಾ ಮೈದಾನಕ್ಕೆ ರ್ಯಾಲಿ ನಡೆಸಿದ ಸಂದರ್ಭ ನಗರದ ಹಲವು ಭಾಗಗಳಲ್ಲಿ ಸಂಚಾರಕ್ಕೆ ಅಡ್ಡಿ ಉಂಟಾಯಿತು. ರೈತರು ರೈಲು, ಬಸ್ಸು ಹಾಗೂ ಇತರ ಸಾರಿಗೆ ಮೂಲಕ ಹೊಸದಿಲ್ಲಿಗೆ ಆಗಮಿಸಿದ್ದಾರೆ. ಶುಕ್ರವಾರ ಸಂಸತ್ ಬೀದಿಗೆ ರೈತರು ರ್ಯಾಲಿ ನಡೆಸಲಿದ್ದಾರೆ. ಈ ರ್ಯಾಲಿ ಪೂರ್ವಾಹ್ನ 11.30ಕ್ಕೆ ಆರಂಭವಾಗಲಿದೆ.

ರಾಮಲೀಲಾ ಮೈದಾನದಿಂದ ಸಂಸತ್ ಬೀದಿಗೆ ರೈತರು ಶುಕ್ರವಾರ ರ್ಯಾಲಿ ನಡೆಸಲಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News