750 ಕೆಜಿ ಈರುಳ್ಳಿಗೆ ಸಿಕ್ಕಿದ್ದು ಕೇವಲ 1,064 ರೂ.: ಮನನೊಂದು ಹಣವನ್ನು ಪ್ರಧಾನಿಗೆ ಕಳುಹಿಸಿದ ರೈತ

Update: 2018-12-03 08:30 GMT

ಮುಂಬೈ, ಡಿ.3: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಡ್ ತೆಹ್ಸಿಲ್‍ನ ರೈತ ಸಂಜಯ್ ಸಾಠೆ ಈ ಬಾರಿ ನಾಲ್ಕು ತಿಂಗಳ ಶ್ರಮದಿಂದ ಬೆಳೆಸಿದ 750 ಕೆಜಿ ಈರುಳ್ಳಿಗೆ ಕೆಜಿಗೆ ಕೇವಲ ರೂ 1.40 ಲಭಿಸಿದೆ. 750 ಕೆಜಿ ಈರುಳ್ಳಿಯನ್ನು ಮಾರಿ ಅವರು ಗಳಿಸಿದ್ದು ಕೇವಲ 1,064 ರೂ. ಹೀಗಾಗಿ ಈರುಳ್ಳಿ ಬೆಲೆ ಪಾತಾಳಕ್ಕಿಳಿದಿರುವುದನ್ನು ವಿರೋಧಿಸಿ ಅವರು ತಾವು ಗಳಿಸಿದ 1,064 ರೂ.ಗಳನ್ನು ಪ್ರಧಾನಿಗೆ ಕಳುಹಿಸಿದ್ದಾರೆ.

``ನಿಫಡ್ ಗ್ರಾಮದ ರಖಂ ಮಾರುಕಟ್ಟೆಯಲ್ಲಿ ಕಳೆದ ವಾರ ನಾನು ಬೆಳೆದ ಈರುಳ್ಳಿಗೆ ಕೆಜಿಗೆ ರೂ 1ರಂತೆ ಬೆಲೆ ನಿಗದಿ ಪಡಿಸಲಾಯಿತಾದರೂ ಬಹಳಷ್ಟು ಚರ್ಚೆಯ ಬಳಿಕ ಅಂತಿಮವಾಗಿ ರೂ 1.40 ಬೆಲೆ ನಿಗದಿ ಪಡಿಸಲಾಗಿ ನನಗೆ 750 ಕೆಜಿಗೆ ಕೇವಲ ರೂ 1,064 ದೊರೆಯಿತು,'' ಎಂದು ರೈತ ಸಂಜಯ್ ಸಾಠೆ ಹೇಳಿಕೊಂಡಿದ್ದಾರೆ.

ಇದರಿಂದ ತೀವ್ರ ನೊಂದು ಈ ಹಣವನ್ನು ಪ್ರತಿಭಟನೆಯ ರೂಪದಲ್ಲಿ ಪ್ರಧಾನಿಯ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದೇನೆ. ಮನಿ ಆರ್ಡರ್ ಮೂಲಕ ಕಳುಹಿಸಿದ ಶುಲ್ಕವಾಗಿ ಹೆಚ್ಚುವರಿ ರೂ 54 ಪಾವತಿಸಬೇಕಾಯಿತು,'' ಎಂದು  ಅವರು ಹೇಳಿದರು. ಸರಕಾರ ನಮ್ಮ ಸಮಸ್ಯೆಗಳ ಬಗ್ಗೆ ತಾಳಿರುವ ನಿರ್ಲಕ್ಷ್ಯದ ಧೋರಣೆಯಿಂದ ನಾವು ನೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಬೆಳೆಯಲಾಗುವ ಈರುಳ್ಳಿ ಪೈಕಿ ಶೇ 50ರಷ್ಟು ಈರುಳ್ಳಿ ನಾಸಿಕ್ ಜಿಲ್ಲೆಯಲ್ಲಿ ಬೆಳೆಸಲಾಗುತ್ತಿದೆ.

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 2010ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಅವರ ಜತೆ ಮಾತನಾಡಲು ಕೃಷಿ ಸಚಿವಾಲಯ ಆರಿಸಿದ ಕೆಲವು ರೈತರಲ್ಲಿ ಸಂಜಯ್ ಕೂಡ ಸೇರಿದ್ದರು.

``ಮುಂಬೈಯ ಸಂತ ಕ್ಸೇವಿಯರ್ಸ್ ಕಾಲೇಜಿನಲ್ಲಿ ಸ್ಟಾಲ್ ಇರಿಸಲು ನನ್ನನ್ನು ಸಚಿವಾಲಯ ಆರಿಸಿತ್ತು. ಈ ಸಂದರ್ಭ ಒಬಾಮ ಅಲ್ಲಿಗೆ ಭೇಟಿ ನೀಡಿದಾಗ ಅವರು ನನ್ನ ಜತೆ ಒಂದೆರಡು ನಿಮಿಷಗಳ ಕಾಲ  ಅನುವಾದಕರ ಸಹಾಯದಿಂದ  ಮಾತನಾಡಿದರು,'' ಎಂದು ಸಂಜಯ್ ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News