ಬುಲಂದ್ ಶಹರ್ ನಲ್ಲಿ ಗಲಭೆ, ಕಲ್ಲುತೂರಾಟ: ಪೊಲೀಸ್ ಅಧಿಕಾರಿ ಸೇರಿ ಇಬ್ಬರು ಮೃತ್ಯು

Update: 2018-12-03 13:42 GMT

ಬುಲಂದ್ ಶಹರ್, ಡಿ.3: ಗೋವುಗಳ ಅಸ್ಥಿಪಂಜರ ಪತ್ತೆಯಾದ ನಂತರ ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದ ಗಲಭೆಯಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಆಗಮಿಸಿದ ಪೊಲೀಸರ ಮೇಲೂ ಗಲಭೆಕೋರರು ಕಲ್ಲೆಸೆದಿದ್ದು, ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಮೃತಪಟ್ಟಿದ್ದಾರೆ. ಸ್ಥಳೀಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಕಾನ್ ಸ್ಟೇಬಲ್ ಒಬ್ಬರು ಗಾಯಗೊಂಡಿದ್ದಾರೆ.

ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗೆ ಗಲಭೆಕೋರರು ಕಲ್ಲೆಸೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಪರಿಶೀಲಿಸಿ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಗೋಹತ್ಯೆ ಹಾಗು ಗುಂಪು ಘರ್ಷಣೆ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಗ್ರಾಮದ ಹೊರಭಾಗದ ಅರಣ್ಯವೊಂದರಲ್ಲಿ ದನಗಳ ಅಸ್ಥಿಪಂಜರ ಪತ್ತೆಯಾದ ನಂತರ ಗಲಭೆ ಆರಂಭವಾಗಿತ್ತು. ಕೂಡಲೇ ಸಂಘಪರಿವಾರದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು, ಮತ್ತೊಂದು ಸಮುದಾಯ ಗೋಹತ್ಯೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದರು.

ಕೂಡಲೇ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರೆ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ದಾಳಿ ನಡೆಸಿದ್ದರು. ಕೆಲವರು ಪ್ರಾಣಿಗಳ ಅಸ್ಥಿಪಂಜರಗಳ ತೆಗೆದು ರಸ್ತೆ ತಡೆ ನಿರ್ಮಿಸಿದರು. ರಸ್ತೆ ತಡೆ ತೆಗೆಯಲು ಮುಂದಾದ ಪೊಲೀಸರ ಮೇಲೆ ದಾಳಿ ನಡೆಸಲಾಯಿತು” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅನೂಜ್ ಕುಮಾರ್ ಝಾ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News