ಮನವರಿಕೆ ಮಾಡಲು ವಿಫಲವಾದರೆ ತೆರೇಸಾ ಸರಕಾರದ ವಿರುದ್ಧ ನಿರ್ಣಯ: ಬ್ರಿಟನ್ ಪ್ರತಿಪಕ್ಷ ಎಚ್ಚರಿಕೆ
ಲಂಡನ್, ಡಿ. 3: ಪ್ರಧಾನಿ ತೆರೇಸಾ ಮೇ ತನ್ನ ‘ಬ್ರೆಕ್ಸಿಟ್’ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಪ್ರಕ್ರಿಯೆ) ಒಪ್ಪಂದಕ್ಕಾಗಿ ಪಡೆದುಕೊಂಡಿರುವ ಸಂಪೂರ್ಣ ಕಾನೂನು ಸಲಹೆಯನ್ನು ಮಂಡಿಸಲು ವಿಫಲರಾದರೆ ಅವರ ಸರಕಾರದ ವಿರುದ್ಧ ನಿಂದನಾ ನಿರ್ಣಯವನ್ನು ಮಂಡಿಸುವುದಾಗಿ ಬ್ರಿಟನ್‌ನ ಪ್ರಧಾನ ಪ್ರತಿಪಕ್ಷ ಲೇಬರ್ ಪಾರ್ಟಿ ರವಿವಾರ ಹೇಳಿದೆ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದಕ್ಕೆ ಸಂಬಂಧಿಸಿ ತೆರೇಸಾ ಮೇ ಒಕ್ಕೂಟದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಡಿಸೆಂಬರ್ 11ರಂದು ಸಂಸತ್ತಿನಲ್ಲಿ ಮತದಾನ ನಡೆಯಲಿದೆ. ಅದಕ್ಕೂ ಮುನ್ನ ತೆರೇಸಾ ಇತ್ಯರ್ಥಪಡಿಸಬೇಕಿರುವ ಅಡೆತಡೆಗಳಲ್ಲಿ ಇದೂ ಒಂದಾಗಿದೆ.
ಪರಿಸ್ಥಿತಿ ತನ್ನ ವಿರುದ್ಧವಾಗಿರುವುದನ್ನು ಮನಗಂಡಿರುವ ತೆರೇಸಾ, ತನ್ನ ಟೀಕಾಕಾರರ ಮನವೊಲಿಸುವುದಕ್ಕಾಗಿ ದೇಶಾದ್ಯಂತ ಪ್ರಯಾಣ ಮಾಡುತ್ತಿದ್ದಾರೆ ಹಾಗೂ ಮಾಧ್ಯಮ ಸ್ಟುಡಿಯೋಗಳಿಗೆ ಭೇಟಿ ನೀಡುತ್ತಿದ್ದಾರೆ.
ತಾನು ಮಾಡಿರುವ ಒಪ್ಪಂದವು ಬ್ರಿಟನ್‌ನ ಉದ್ಯೋಗಗಳನ್ನು ರಕ್ಷಿಸುತ್ತದೆ ಹಾಗೂ ಮುಕ್ತ ಸಂಚಾರವನ್ನು ಕೊನೆಗೊಳಿಸುತ್ತದೆ ಎಂಬುದಾಗಿ ಮೇ ಹೇಳುತ್ತಾರೆ.
ತನ್ನದು ಐರೋಪ್ಯ ಒಕ್ಕೂಟದೊಂದಿಗೆ ಮಾಡಿಕೊಳ್ಳಬಹುದಾದ ಏಕೈಕ ಸಂಭಾವ್ಯ ಒಪ್ಪಂದವಾಗಿತ್ತು ಹಾಗೂ ಅದನ್ನು ತಿರಸ್ಕರಿಸಿದರೆ ಯಾವುದೇ ಒಪ್ಪಂದವಿಲ್ಲದೆ ಒಕ್ಕೂಟದಿಂದ ಹೊರಬಂದಂತೆ ಆಗುತ್ತದೆ ಅಥವಾ ಒಕ್ಕೂಟದಿಂದ ಹೊರಬರಲೇ ಇಲ್ಲ ಎಂದಾಗುತ್ತದೆ ಎಂದು ಹೇಳುವ ಮೂಲಕ ಜನರ ಮನಸ್ಸು ಗೆಲ್ಲಲು ಅವರು ಪ್ರಯತ್ನಿಸುತ್ತಿದ್ದಾರೆ.