ಕೇಂದ್ರದಿಂದ ಮಾಹಿತಿ ಆಯೋಗಕ್ಕೆ ಬೆದರಿಕೆ: ಮಾಜಿ ಮಾಹಿತಿ ಆಯುಕ್ತರ ಆರೋಪ

Update: 2018-12-04 15:32 GMT

ಹೊಸದಿಲ್ಲಿ, ಡಿ.4: ಕೇಂದ್ರ ಮಾಹಿತಿ ಆಯೋಗವು ಕೇಂದ್ರದಿಂದ (ಸಿಐಸಿ) ಕಾನೂನಾತ್ಮಕ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಮಾಜಿ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯುಲು ಮಂಗಳವಾರ ಆರೋಪಿಸಿದ್ದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹಸ್ತಕ್ಷೇಪಕ್ಕೆ ಮನವಿ ಮಾಡಿದ್ದಾರೆ.

 ಸಾರ್ವಜನಿಕ ಸಂಸ್ಥೆಗಳ ವಿರುದ್ಧ ದೂರುಗಳನ್ನು ದಾಖಲಿಸುವ ಜಾಗತಿಕ ವಿದ್ಯಾಮಾನದ ಮೇಲೆ ಬೆಳಕು ಚೆಲ್ಲಿ ರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ ಆಚಾರ್ಯುಲು ಅವರು, ಇದೊಂದು ರೀತಿಯ ಬೆದರಿಕೆಯ ತಂತ್ರವಾಗಿದ್ದು ಗೆಲ್ಲಬೇಕೆಂಬ ಆಶಯದಿಂದಲ್ಲ, ಬದಲಿಗೆ ಗುರಿಯು ಓರ್ವ ವ್ಯಕ್ತಿ ಅಥವಾ ಸಂಘಟನೆ ವಿರುದ್ಧ ಹೇಳಿಕೆಗಳನ್ನು ನೀಡದಂತೆ ಬೆದರಿಸುವ ಉದ್ದೇಶದಿಂದ ದೂರು ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇಲ್ಲಿ ಗುರಿ ಸಿಐಸಿ ಮತ್ತು ಪ್ರಜೆಗಳಾಗಿದ್ದಾರೆ. ದುರಾದೃಷ್ಟವಶಾತ್, ಸರಕಾರವು ಸಿಐಸಿ ಮತ್ತು ಮಾಹಿತಿ ಕಾಯ್ದೆಯಡಿ ಮಾಹಿತಿ ಪಡೆಯಲು ಬಯಸುವ ಪ್ರಜೆಗಳ ವಿರುದ್ಧ ಎಲ್ಲ ದಿಕ್ಕುಗಳಿಂದಲೂ ನ್ಯಾಯಾಲಯದಲ್ಲಿ ದೂರುಗಳನ್ನು ದಾಖಲಿಸುತ್ತಿದೆ ಎಂದು ಆಚಾರ್ಯುಲು ಆರೋಪಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಉದ್ದೇಶಪೂರ್ವಕ ಸಾಲಬಾಕಿದಾರರ ಹೆಸರುಗಳನ್ನು ಬಹಿರಂಗಪಡಿಸಿ ಎಂದು ಆರ್‌ಬಿಐಗೆ ನಿರ್ದೇಶನ ನೀಡುವುದು ಸೇರಿದಂತೆ ಅನೇಕ ಮಹತ್ವದ ಆದೇಶಗಳನ್ನು ನೀಡಿರುವ ಆಚಾರ್ಯುಲು ಸದ್ಯ ರಾಷ್ಟ್ರಪತಿ ರಾಮನಾಥ ಕೋವಿಂದ್ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.

“ನನ್ನ ಪ್ರಶ್ನೆಯೆಂದರೆ, ಸಿಐಸಿಯಾಗಿ ನಾನು ಕೇಂದ್ರ ಸರಕಾರದ ಭಾಗವಾಗಿದ್ದೇನೆ ಮತ್ತು ಅದೇ ಕೇಂದ್ರ ಸರಕಾರ ನನ್ನ ಆದೇಶದ ವಿರುದ್ಧ ಹೋರಾಡಿದರೆ ನನ್ನ ಪರ ನಿಲ್ಲುವವರು ಯಾರು?” ಎಂದು ಆಚಾರ್ಯುಲು ಪ್ರಶ್ನಿಸಿದ್ದಾರೆ. “ನನಗನಿಸುವ ಪ್ರಕಾರ, ಆಯುಕ್ತರೇ ನೀವು ಮಾಹಿತಿಯನ್ನು ಬಹಿರಂಗಪಡಿಸಲು ಆದೇಶ ನೀಡಬೇಡಿ. ನಿಮ್ಮ ಒಂದು ಆದೇಶಕ್ಕೆ ನಿಮ್ಮ ಮೇಲೆ ಮೂರು ದೂರುಗಳನ್ನು ದಾಖಲಿಸಲಾಗುವುದು” ಎಂದು ಸರಕಾರ ಸೂಚಿಸುವಂತಿದೆ ಎಂದು ಮಾಜಿ ಆಯುಕ್ತರು ತಿಳಿಸಿದ್ದಾರೆ. ಈಗಾಗಲೇ 1,700 ಮೇಲ್ಮನವಿಗಳನ್ನು ದಾಖಲಿಸಲಾಗಿದೆ. ಆಶ್ಚರ್ಯ ಮತ್ತು ಖೇದಕರವೆಂದರೆ ಇವುಗಳಲ್ಲಿ ಬಹುತೇಕವನ್ನು ಸರಕಾರ ಮತ್ತು ಆರ್‌ಬಿಐಯಂಥ ಅದರ ಅಂಗ ಸಂಸ್ಥೆಗಳೇ ದಾಖಲಿಸಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News