ಗುಂಡು ಹಾರಿಸಿ ಸುಬೋಧ್ ಸಿಂಗ್ ಹತ್ಯೆ: ಮರಣೋತ್ತರ ಪರೀಕ್ಷೆ ವರದಿ

Update: 2018-12-04 16:31 GMT

ಬುಲಂದ್‌ಶಹರ್, ಡಿ. 4: ಗೋವುಗಳ ಕಳೇಬರ ಪತ್ತೆಯಾದ ವದಂತಿ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಸೋಮವಾರ ಸಂಭವಿಸಿದ ಹಿಂಸಾಚಾರದ ಸಂದರ್ಭ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಗುಂಡು ತಗುಲಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ.

ಗುಂಡು ಎಡ ಹುಬ್ಬಿನ ಭಾಗದಿಂದ ಹಾದು ಬುರುಡೆಯ ಒಳಗೆ ಹೊಕ್ಕಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಗುಂಡಿನ ಸದ್ದು ಕೇಳುವ ಮುನ್ನ ಸುಬೋಧ್ ಕುಮಾರ್ ಸಿಂಗ್ ಅವರನ್ನು ಗುಂಪು ಸುತ್ತುವರಿದಿರುವುದು ವೈರಲ್ ಆದ ವೀಡಿಯೊದಲ್ಲಿ ದಾಖಲಾಗಿದೆ. ಬುಲಂದ್‌ಶಹರ್‌ನಲ್ಲಿ ಸೋಮವಾರ ನಡೆದ ಹಿಂಸಾಚಾರದ ಸಂದರ್ಭ ಗಂಭೀರ ಗಾಯಗೊಂಡಿದ್ದ ಇನ್ಸ್‌ಪೆಕ್ಟರ್ ಸುಬೋಧ್ ಸಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಎಡಿಜಿ ಇಂಟಲಿಜೆನ್ಸ್ ಹಾಗೂ ನ್ಯಾಯಾಂಗ ತನಿಖೆ ಅಲ್ಲದೆ ಸಿಟ್ ತನಿಖೆಗೂ ಉತ್ತರಪ್ರದೇಶ ಸರಕಾರ ಆದೇಶಿಸಿದೆ ಎಂದು ಕಾನೂನು ಹಾಗೂ ಸುವ್ಯವಸ್ಥೆಯ ಎಡಿಜಿ ಆನಂದ್ ಕುಮಾರ್ ತಿಳಿಸಿದ್ದಾರೆ.

ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರು ಮುಹಮ್ಮದ್ ಅಖ್ಲಾಕ್ ಥಳಿಸಿ ಹತ್ಯೆ ಪ್ರಕರಣದ ತನಿಖಾಧಿಕಾರಿ. ಈ ಪ್ರಕರಣದಲ್ಲಿ ಮಾಂಸದ ಮಾದರಿಗಳನ್ನು ಕ್ಲಪ್ತ ಸಮಯದಲ್ಲಿ ತಲುಪಿಸುವಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ತನಿಖೆಯ ಮಧ್ಯದಲ್ಲಿ ಸುಬೋಧ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸಿಂಗ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಸಿಂಗ್ ಅವರನ್ನು ವಾಡಿಕೆಯಂತೆ ವರ್ಗಾವಣೆ ಮಾಡಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ಸಮಜಾಯಿಷಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News