ನಾಲ್ಕು ಗಂಟೆಗಳಲ್ಲಿ ಇನ್ನು ಪಾನ್ ಕಾರ್ಡ್ !

Update: 2018-12-05 03:47 GMT

ಹೊಸದಿಲ್ಲಿ, ಡಿ. 5: ತೆರಿಗೆ ಇಲಾಖೆ ಕ್ರಾಂತಿಕಾರಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದ್ದು, ಅರ್ಜಿ ಸಲ್ಲಿಸಿ ಕೇವಲ ನಾಲ್ಕು ಗಂಟೆಗಳಲ್ಲಿ ಪಾನ್‌ಕಾರ್ಡ್ ವಿತರಿಸುವುದೂ ಇವುಗಳಲ್ಲೊಂದು.

ಮೊದಲೇ ಭರ್ತಿ ಮಾಡಿದ ರಿಟರ್ನ್ಸ್‌ಗಳನ್ನು ತೆರಿಗೆ ಅಧಿಕಾರಿ ಪರಿಶೀಲನೆ ನಡೆಸುವುದು ಹಾಗೂ ರಿಟರ್ನ್ಸ್‌ಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದೂ ಸುಧಾರಣಾ ಕ್ರಮಗಳಲ್ಲಿ ಸೇರಿದೆ ಎಂದು ಇಲಾಖೆಯ ಉನ್ನತ ಅಧಿಕಾರಿ ತಿಳಿಸಿದ್ದಾರೆ.

ಕೈಗಾರಿಕಾ ಸಮ್ಮೇಳನದಲ್ಲಿ ಮಾತನಾಡಿದ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಅಧ್ಯಕ್ಷ ಸುಶೀಲ್‌ ಚಂದ್ರ ಅವರು, "ತೆರಿಗೆ ಇಲಾಖೆ ತಂತ್ರಜ್ಞಾನ ಬಳಸಿಕೊಂಡು ಹಲವು ಕ್ಷೇತ್ರಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆ. ತೆರಿಗೆಗಳ ಪೂರ್ವಪಾವತಿ, ರಿಟರ್ನ್ಸ್ ಸಲ್ಲಿಕೆ, ಮರುಪಾವತಿ, ಪ್ರಕರಣಗಳ ಆಯ್ಕೆ ಮತ್ತು ದೃಢೀಕರಣಕ್ಕೆ ಪ್ರಕರಣಗಳನ್ನು ಅಂತಿಮಪಡಿಸುವಲ್ಲಿ ಹೊಸ ವಿಧಾನಗಳನ್ನು ಅನುಸರಿಸಲಾಗುವುದು. ಒಂದು ವರ್ಷದ ಒಳಗಾಗಿ ಕೇವಲ ನಾಲ್ಕೇ ಗಂಟೆಗಳಲ್ಲಿ ಪಾನ್ ಕಾರ್ಡ್ ವಿತರಿಸುವ ವ್ಯವಸ್ಥೆ ಆರಂಭವಾಗಲಿದೆ" ಎಂದು ವಿವರಿಸಿದರು.

ತೆರಿಗೆ ರಿಟರ್ನ್ಸ್ ನಮೂನೆಗಳನ್ನು ಮತ್ತಷ್ಟು ಸರಳಗೊಳಿಸಲಾಗುವುದು ಹಾಗೂ ಮರುಪಾವತಿ ಪ್ರಕ್ರಿಯೆ ತ್ವರಿತಗೊಳಿಸಿ ವ್ಯವಹಾರ ನಡೆಸಲು ಪೂರಕ ವಾತಾವರಣ ಕಲ್ಪಿಸಿಕೊಡಲಾಗುತ್ತದೆ. ಇನ್ನು ಮುಂದೆ ತೆರಿಗೆ ಮೌಲ್ಯಮಾಪನಕ್ಕೊಳಪಡುವ ಪ್ರಕರಣಗಳನ್ನು ಆಯ್ಕೆ ಮಾಡುವ ವಿಧಾನವನ್ನು ತಂತ್ರಜ್ಞಾನ ಸಹಾಯದಿಂದ ನಿರ್ಧರಿಸಲಾಗುತ್ತದೆ. ಶೇಕಡ 0.5ಕ್ಕಿಂತಲೂ ಕಡಿಮೆ ಪ್ರಕರಣಗಳನ್ನು ಮರುಪರಿಶೀಲನೆಗೆ ಆಯ್ಕೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಶೇಕಡ 50ರಷ್ಟು ಹೆಚ್ಚಿ 6.08 ಕೋಟಿ ತಲುಪಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News