ಬಿಜೆಪಿ ನಾಯಕ ಸುರೇಂದ್ರನ್‌ 2 ತಿಂಗಳು ಶಬರಿಮಲೆ ಪ್ರವೇಶಿಸುವಂತಿಲ್ಲ: ಕೇರಳ ಹೈಕೋರ್ಟ್

Update: 2018-12-07 17:19 GMT

ತಿರುವನಂತಪುರ,ಡಿ.7: ಶಬರಿಮಲೆ ದೇವಸ್ಥಾನದಲ್ಲಿ 52ರ ಹರೆಯದ ಮಹಿಳೆಯ ಮೇಲೆ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಅವರಿಗೆ ಕೇರಳ ಉಚ್ಚ ನ್ಯಾಯಾಲಯವು ಶುಕ್ರವಾರ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದೆ.

ತನ್ನ ಪಾಸ್‌ಪೋರ್ಟ್‌ನ್ನು ಒಪ್ಪಿಸುವಂತೆ ಸುರೇಂದ್ರನ್‌ಗೆ ಸೂಚಿಸಿದ ನ್ಯಾ.ವಿ.ರಾಜಾ ವಿಜಯರಾಘವನ್ ಅವರು ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗುವವರೆಗೆ ಶಬರಿಮಲೆ ಕ್ಷೇತ್ರವಿರುವ ಪಟ್ಟಣಂತಿಟ್ಟ ಜಿಲ್ಲೆಯನ್ನು ಪ್ರವೇಶಿಸದಂತೆ ಮತ್ತು ಎರಡು ಲಕ್ಷ ರೂ.ಗಳ ಜಾಮೀನು ಭದ್ರತೆಯನ್ನೊದಗಿಸುವಂತೆ ಆದೇಶಿಸಿದರು.

ನವೆಂಬರ್ 6ರಂದು ವಿಶೇಷ ಪೂಜೆಯ ಸಂದರ್ಭದಲ್ಲಿ ತನ್ನ ಮೊಮ್ಮಗುವಿನ ಅನ್ನಪ್ರಾಶನ ಕಾರ್ಯಕ್ರಮಕ್ಕಾಗಿ ಸನ್ನಿಧಾನಕ್ಕೆ ಆಗಮಿಸಿದ್ದ ಮಹಿಳೆಯನ್ನು ಆಕೆ ನಿಷೇಧಿತ ವಯೋಗುಂಪಿಗೆ ಸೇರಿದವರು ಎಂದು ಶಂಕಿಸಿದ್ದ ಪ್ರತಿಭಟನಕಾರರು ಆಕೆಗೆ ತಡೆಯೊಡ್ಡಿ ದಾಳಿ ನಡೆಸಿದ್ದರು. ಇದು ಸುರೇಂದ್ರನ್ ಜಾಮೀನು ಪಡೆದಿರುವ ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿದ ಎರಡನೇ ಪ್ರಕರಣವಾಗಿದೆ. ನ.17ರಂದು ನೀಲಕ್ಕಲ್‌ನಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದ ಆರೋಪದಲ್ಲಿ ಅವರನ್ನು ಮೊದಲ ಬಾರಿಗೆ ಬಂಧಿಸಲಾಗಿತ್ತು. ನ.21ರಂದು ಪಟ್ಟಣಂತಿಟ್ಟ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತಾದರೂ ಮಹಿಳಾ ಯಾತ್ರಿಯ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣವಿತ್ತಾದ್ದರಿಂದ ಬಂಧನದಲ್ಲಿಯೇ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News